
ಯಾವುದಾದರೂ ಆಫರ್ ಲಿಂಕ್ ಬಂತೆಂದು ಅದನ್ನು ಓಪನ್ ಮಾಡುವ ಸಾಹಸಕ್ಕೆ ಕೈಹಾಕುವಿರಾ? ಒಂದು ವೇಳೆ ಲಿಂಕ್ ಓಪನ್ ಮಾಡಿದಾಗ ಅದರಲ್ಲಿ ಗಿಫ್ಟ್ ವೋಚರ್ ಸಿಕ್ಕಿತೆಂದು ಹಿರಿಹಿರಿ ಹಿಗ್ಗುವಿರಾ? ಎಚ್ಚರ...ಎಚ್ಚರ... ನಿಮ್ಮ ಖಾತೆಗೆ ಇಷ್ಟು ಬಂದಿದೆ, ಅಷ್ಟು ಬಂದಿದೆ ಎಂದೋ, ನಿಮಗೆ ಆಫರ್ ಬಂದಿದೆ- ಈ ಲಿಂಕ್ ಕ್ಲಿಕ್ ಮಾಡಿ ಎಂದೋ ಇಲ್ಲವೇ ಇದೇ ರೀತಿಯ ಇನ್ನೇನು ಆಮಿಷ ಒಡ್ಡಿಯೋ ಬೇರೆ ಬೇರೆ ಹೆಸರಿನಲ್ಲಿ ಲಿಂಕ್ ಕಳುಹಿಸಿದಾಗ, ಓಪನ್ ಮಾಡುವ ಮುನ್ನ ನೂರು ಬಾರಿ ಯೋಚಿಸಿ. ಅಮೆಜಾನ್ ಹೆಸರಿನಲ್ಲಿ ಬಂದ ಲಿಂಕ್ ಒಂದನ್ನು ಓಪನ್ ಮಾಡಿ ಮಹಿಳೆಯೊಬ್ಬರು 51 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ನಡೆದಿದೆ!
ಉತ್ತಮ ಲಾಭದ ಭರವಸೆ ನೀಡಿ ಷೇರು ವಹಿವಾಟು ಹಗರಣದಲ್ಲಿ ಸಿಲುಕಿದ ಈ ಮಹಿಳೆ ಅಮೇಜಾನ್ ಆಫರ್ ಎಂದು ತಿಳಿದು ಮೋಸ ಹೋಗಿದ್ದಾರೆ. ಮೀನು ರಾಣಿ ಎನ್ನುವವರು ಮೋಸ ಹೋಗಿರುವ ಮಹಿಳೆಯಾಗಿದ್ದು, ಅವರು ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ತನಗೆ 15 ವರ್ಷಗಳ ಅನುಭವವಿದೆ ಎಂದು ಹೇಳಿಕೊಂಡು ಹರಿ ಸಿಂಗ್ ತನಗೆ ವಂಚನೆ ಮಾಡಿದ್ದಾರೆ. ಅವರ ಮಾತು ನಂಬಿ 51.50 ಲಕ್ಷ ಹೂಡಿಕೆ ಮಾಡಿರುವುದಾಗಿ ಅವರು ಹೇಳಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಆಸಕ್ತಿ ಹೊಂದಿರುವ ಕಾರಣ, ಅದರ ಬಗ್ಗೆ ಗೂಗಲ್‌ನಲ್ಲಿ ಇವರು ತಡಕಾಡಿದ್ದಾರೆ. ಇಂಥವರನ್ನೇ ಗಾಳ ಹಾಕಲು ಕಾಯುತ್ತಿದ್ದ ಆಸಾಮಿಯೊಬ್ಬ ಇದರಲ್ಲಿ ತನಗೆ 15 ವರ್ಷಗಳ ಅನುಭವವಿದೆ ಎಂದು ಹೇಳಿಕೊಂಡಿದ್ದಾನೆ. ಮಹಿಳೆ ನಂಬಿದ್ದಾರೆ. ನಂತರ ಷೇರುಮಾರುಕಟ್ಟೆಗೆ ಸಂಬಂಧಿಸಿದ ವಾಟ್ಸಾಪ್ ಗುಂಪಿಗೆ ಸೇರಿಸಲಾಗಿದೆ.
ಒಂದು ತಿಂಗಳಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕಿಂತ ಮೂರರಿಂದ ಐದು ಪಟ್ಟು ಗಳಿಸಬಹುದು ಎಂದು ಹರಿ ಹೇಳಿದ್ದ. ಆದರೆ ಮೀನುಗೆ ಇದರ ಮೇಲೆ ನಂಬಿಕೆ ಬಂದಿರಲಿಲ್ಲ. ಆ ಬಳಿಕ, ರಾಣಿಯನ್ನು ಸೇರಿಸಲಾದ ಗುಂಪಿನ ಸದಸ್ಯೆ ಆರತಿ ಸಿಂಗ್ ಎಂಬಾಕೆ, ತನ್ನ ಹಣವೂ ದುಪ್ಪಟ್ಟು ಆಗಿದೆ ಎಂದಿದ್ದಾಳೆ. ಕೊನೆಗೆ, ಬೇಕಿದ್ದರೆ ಈ ಲಿಂಕ್ ಓಪನ್ ಮಾಡಿದ್ರೆ ಅಮೆಜಾನ್ನಲ್ಲಿ ಗಿಫ್ಟ್ ವೋಚರ್ ಸಿಕ್ಕಿರುತ್ತದೆ ಎಂದು ನೋಡಲು ಹೇಳಿದ್ದಾಳೆ. ಒಂದು ಲಿಂಕ್ ಕಳುಹಿಸಿದ್ದಾರೆ. ಅದನ್ನು ಓಪನ್ ಮಾಡಿದಾಗ, ಅಮೆಜಾನ್ ಓಪನ್ ಆಗಿದ್ದು, ಅಲ್ಲಿ ಉಡುಗೊರೆಯ ಚೀಟಿಯನ್ನು ಕಳುಹಿಸಲಾಗಿದೆ. ಇದಕ್ಕೂ ಮುನ್ನ ಅಮೆಜಾನ್ನಲ್ಲಿ ಲಾಗಿನ್ ಐಡಿ ಕ್ರಿಯೇಟ್ ಮಾಡಲು ಹೇಳಲಾಗಿದೆ. ಹಾಗೆ ಮಾಡಿದ ಬಳಿಕ ಅಮೆಜಾನ್ ಓಪನ್ ಮಾಡಿದಾಗ, ಅವರ ಖಾತೆಗೆ ಒಂದು ಸಾವಿರ ರೂಪಾಯಿ ಜಮಾ ಆಗಿತ್ತು. ಇದನ್ನು ನೋಡಿದ ರಾಣಿ ಅವರಿಗೆ ಅವರ ಮೇಲೆ ನಂಬಿಕೆ ಹೆಚ್ಚಾಗಿ ಬಿಟ್ಟಿದೆ. ಏನೂ ಇಲ್ಲದೇ ಒಂದು ಸಾವಿರ ರೂಪಾಯಿ ಸಿಕ್ಕಿದೆ ಎಂದರೆ ಲಕ್ಷ ಲಕ್ಷ ಹೂಡಿಕೆ ಮಾಡಿದ್ರೆ ಇನ್ನೆಷ್ಟು ಸಿಗಬಹುದು ಎನ್ನಿಸಿದೆ. ಈ ಹಿನ್ನೆಲೆಯಲ್ಲಿ ಹಿಂದೆ ಮುಂದೆ ನೋಡದೇ ₹51.50 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇದಕ್ಕಾಗಿ ಅವರು, ತಮ್ಮ ಪತಿ, ಅತ್ತೆ ಮತ್ತು ಸಂಬಂಧಿಕರಿಂದ ಹಣವನ್ನು ಪಡೆದುಕೊಂಡಿದ್ದಾರೆ.
ಹೀಗೆ ವಂಚಕರು ಆಕೆಯನ್ನು ಮಾತಿನಲ್ಲಿಯೇ ಮರುಳು ಮಾಡುತ್ತಾ ಹೋಗಿದ್ದಾರೆ. ಆರಂಭದಲ್ಲಿ 50 ಸಾವಿರ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಮಹಿಳೆ ಈ ಮೊತ್ತವನ್ನು ವಂಚಕರು ಹೇಳಿದ ಖಾತೆಗೆ ವರ್ಗಾಯಿಸಿದ್ದಾಳೆ. ಹಂತ ಹಂತವಾಗಿ ಹಣವನ್ನು ಕೇಳಿದ್ದಾರೆ. ಈಗ ನಿಮ್ಮ ಮೊತ್ತ ಇಷ್ಟು ದಿನಕ್ಕೆ ಇಷ್ಟಾಗುತ್ತದೆ ಎಂದೆಲ್ಲಾ ಹೇಳುವ ಮೂಲಕ ಆಕೆಯ ಬ್ರೇನ್ವಾಷ್ ಮಾಡಿದ್ದಾರೆ. ಹೆಚ್ಚಿನ ಲಾಭ ಗಳಿಸಲು, ಮೀನು ತನ್ನ ಪತಿ, ಅತ್ತೆ ಮತ್ತು ಸಂಬಂಧಿಕರ ಖಾತೆಗಳಿಂದ ಹಣವನ್ನು ಸಹ ವರ್ಗಾಯಿಸಿದರು. ಎಲ್ಲರ ಹಣ ಖಾಲಿಯಾದಾಗ ಮಹಿಳೆ ಪರಿಚಯಸ್ಥರಿಂದ ಸಾಲ ಕೇಳಿದ್ದಾಳೆ. ಅವರು ಬುದ್ಧಿವಂತರು ಎಂದು ತೋರುತ್ತದೆ. ಇದನ್ನು ನಂಬಬೇಡ, ಎಲ್ಲವೂ ಮೋಸ ಎಂದಾಗ ಆರಂಭದಲ್ಲಿ ಮೀನು ರಾಣಿ ನಂಬದಿದ್ದರೂ ಬಳಿಕ ಆ ನಂಬರ್ಗೆ ಕಾಲ್ ಮಾಡಿದಾಗ ಕಾಲ್ ಕಟ್ ಮಾಡಲಾಗಿದೆ. ಹಣದ ಬಗ್ಗೆ ಕೇಳಿದಾಗ, ಫೋನ್ ಸ್ವಿಚ್ ಆಫ್ ಮಾಡಲಾಗಿದೆ! ಆಗ ತಾನು ಮೋಸ ಹೋಗಿರುವುದು ತಿಳಿದು ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ!
ಖಾಸಗಿ ಫೋಟೋ ಇಟ್ಕೊಂಡು ಆಡಿಸ್ತಿದ್ದ, ಪೊಲೀಸ್ ಠಾಣೆಗೆ ಆಕೆ ಬಂದಾಗ... ಅಂದಿನ ಘಟನೆ ವಿವರಿಸಿದ ಡಿವೈಎಸ್ಪಿ ರಾಜೇಶ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ