
ಮಂಡ್ಯ (ಮೇ 27): ಬೆಲೆ ಬಾಳುವ ಬಿಎಂಡಬ್ಲ್ಯೂ (BMW) ಕಾರು ನದಿಯಲ್ಲಿ ಮುಳುಗಿರುವ ದೃಶ್ಯ ಕಂಡು ಸ್ಥಳೀಯರು ಆತಂಕಗೊಂಡ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ (Srirangapatna) ನಡೆದಿದೆ. ಕಾವೇರಿ ನದಿಯಲ್ಲಿ ಕಾರು ಮುಳುಗಿರುವುದನ್ನ ಗಮನಿಸಿದ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಅಚ್ಚರಿ ಎದುರಾಗಿದೆ. ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದಿದ್ದ ವ್ಯಕ್ತಿ ಕಾರನ್ನು ನದಿಯಲ್ಲಿ ಮುಳುಗಿಸಿದ್ದ ವಿಚಾರ ಬಯಲಾಗಿದೆ.
ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿ ಕಾರು ಮುಳುಗಿಸಿರುವ ಶಂಕೆ: ನದಿಯಿಂದ ಬಿಎಂಡಬ್ಲ್ಯೂ ಕಾರು ಹೊರತೆಗೆದ ಪೊಲೀಸರು ಸಾಕಷ್ಟು ಗೊಂದಲದಲ್ಲಿದ್ದರು. ಯಾರಾದರೂ ಆತ್ಮಹತ್ಯೆಗೆ ಶರಣಾಗಿದ್ದಾರಾ.? ಕೊಲೆ, ದರೋಡೆ ನಡೆಸಿ ಕಾರನ್ನ ನದಿಗೆ ಬಿಸಾಡಲಾಗಿದ್ಯ.? ಹೀಗೆ ಹಲವು ಅನುಮಾನಗಳು ಶ್ರೀರಂಗಪಟ್ಟಣ ಪೊಲೀಸರನ್ನ ಕಾಡಲಾರಂಭಿಸಿತ್ತು.
ಅನುಮಾನಗಳ ನಡುವೆಯೇ ಪೊಲೀಸರು ಕಾರಿನ ಮಾಲೀಕ ರೂಪೇಶ್ ಎಂಬುವನನ್ನ ಪತ್ತೆ ಹಚ್ಚಿದ್ರು. ರೂಪೇಶ್ ಮೂಲತಃ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ. ಬುಧವಾರ ರಾತ್ರಿ ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಿಎಂಡಬ್ಲ್ಯೂ ಕಾರಿನಲ್ಲಿ ಬಂದಿದ್ದ ರೂಪೇಶ್ ಕಾವೇರಿ ನದಿಯಲ್ಲಿ ಕಾರು ಮುಳುಗಿಸಿ ಹೊರಟು ಹೋಗಿದ್ದರು.
ತಾಯಿ ಸಾವಿನ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ರೂಪೇಶ್?: ದುಬಾರಿ ಕಾರನ್ನು ಹೀಗೆ ಕಾವೇರಿ ನದಿಯಲ್ಲಿ ಮುಳುಗಿಸಿದ್ದ ರೂಪೇಶ್ ಓರ್ವ ಮಾನಸಿಕ ಅಸ್ವಸ್ಥ ಎಂದು ಹೇಳಲಾಗ್ತಿದೆ. ಕುಟುಂಬಸ್ಥರ ಮಾಹಿತಿ ಪ್ರಕಾರ ಕಳೆದ ಒಂದು ತಿಂಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದ ರೂಪೇಶ್ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರಂತೆ.
ಇದನ್ನೂ ಓದಿ: ಮದ್ವೆ ಮನೆಗೆ ಹೊರಟಿದ್ದರವರು ಮಸಣಕ್ಕೆ, ಸಂಭ್ರಮ ತುಂಬಿದ್ದ ಮನೆಯಲ್ಲಿ ಸೂತಕದ ಛಾಯೆ!
ಕೆಲದಿನಗಳಿಂದ ಆತನ ನಡತೆ ಸಾಕಷ್ಟು ಬದಲಾಗಿತ್ತು. ಹಲವು ಬಾರಿ ಕಾರನ್ನ ಡ್ರೈವ್ ಮಾಡಿಕೊಂಡು ಹೋಗಿ ಎಲ್ಲೆಂದರಲ್ಲಿ ಬಿಟ್ಟು ಬಂದಿದ್ದರಂತೆ. ಅದೇ ರೀತಿ ಈಗಲೂ ಕಾರನ್ನ ಶ್ರೀರಂಗಪಟ್ಟಣಕ್ಕೆ ತಂದು ಕಾವೇರಿ ನದಿಯಲ್ಲಿ ಮುಳುಗಿಸರಬಹುದು ಅಂತಾರೆ ರೂಪೇಶ್ ಕುಟುಂಬಸ್ಥರು.
ಮನಬಂದಂತೆ ಹೇಳಿಕೆ ನೀಡಿದ ರೂಪೇಶ್, ಗೊಂದಲಕ್ಕೊಳಗಾದ ಪೊಲೀಸರು: ನದಿಯಿಂದ ಕಾರು ಹೊರ ತೆಗೆದು ಮಾಲೀಕ ರೂಪೇಶ್‌ನನ್ನ ಪತ್ತೆ ಹಚ್ಚಿದ ಪೊಲೀಸರು ಆತನನ್ನು ವಿಚಾರಣೆ ಮಾಡಲು ಆರಂಭಿಸಿದ್ದಾರೆ. ಘಟನೆ ಹೇಗಾಯ್ತು ಎಂಬುದರ ಬಗ್ಗೆ ವಿವರಣೆ ಕೇಳ್ತಿದ್ದ ಪೊಲೀಸರಿಗೆ ರೂಪೇಶ್ ಹೇಳಿಕೆ ಗೊಂದಲ ಮೂಡಿಸುತ್ತಿತ್ತು. ನಿಮಿಷಕ್ಕೊಂದು ಹೇಳಿಕೆ ನೀಡ್ತಿದ್ದ ಆತ. ಮೊದಲು, ನನ್ನ ಯಾರೋ ಕೊಲ್ಲಲು ಬಂದರು ತಪ್ಪಿಸಿಕೊಳ್ಳಲು ನದಿಗೆ ಕಾರು ಇಳಿಸಿದೆ ಎಂದು ಹೇಳಿದ್ದ.
ಆದರೆ ಕೆಲ ನಿಮಿಷಗಳ ಬಳಿಕ ಹೇಳಿಕೆ ಬದಲಾಯಿಸಿದ್ದ ಆತ, ನನಗ ಕಣ್ಣೆಲ್ಲಾ ಮಂಜು ಮಂಜಾಗಿ ಕಾಣುತ್ತಿತ್ತು ಹಾಗಾಗಿ ತಿಳಿಯದೆ ನದಿಗೆ ಕಾರು ಇಳಿಸಿದೆ ಎಂದಿದ್ದ. ಹೀಗೆ ನಿಮಿಷಕ್ಕೊಂದು ಹೇಳಿಕೆ ನೀಡ್ತಿದ್ದ ರೂಪೇಶ್ ಪೊಲೀಸರಿಗೆ ಕೆಲಕಾಲ ಗೊಂದಲ ಮೂಡಿಸಿದ್ದ. ಕಡೆಗೆ ರೂಪೇಶ್ ಕುಟುಂಬಸ್ಥರಿಂದ ಹೇಳಿಕೆ ಪಡೆದ ಕುಟುಂಬಸ್ಥರು ಆತನನ್ನ ಬಿಟ್ಟು ಕಳುಹಿಸಿದ್ದಾರೆ.
ಇದನ್ನೂ ಓದಿ: ಊಟಕ್ಕೆ ಸ್ವಲ್ಪ ಕಾಯಿರಿ ಎಂದ ಪತ್ನಿಯನ್ನು ಥಳಿಸಿ ಬಾವಿಗೆ ತಳ್ಳಿದ ಗಂಡ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ