* ಮಿಸ್ಡ್ ಕಾಲ್ ಹೋಗಿದ್ದಕ್ಕೆ ನಡೆದೆ ಹೋಯ್ತು ಕೊಲೆ..
* ದಾರುಣ ಘಟನೆಗೆ ಸಾಕ್ಷಿಯಾದ ವಿಜಯಪುರ ಜಿಲ್ಲೆಯ ಮೂಕಿಹಾಳ
* ಹೊಟ್ಟೆಪಾಡಿಗೆ ಇದ್ದಿಲು ತಯಾರಿಸಲು ಬಂದವ ಹೋಗಿದ್ದ ಬಾರದಲೋಕಕ್ಕೆ
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ, (ಮಾ.18): ಮಿಸ್ಡ್ ಕಾಲ್ ನೀಡಿದ್ದಕ್ಕೆ ಭೀಕರ ಹತ್ಯೆಯೊಂದು ನಡೆದಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಕೇವಲ ಮೊಬೈಲ್‌ನಿಂದ ಮಿಸ್ ಆಗಿ ಕರೆ ಹೋಯ್ತು ಅನ್ನೋ ಕಾರಣಕ್ಕೆ ವ್ಯಕ್ತಿಯೊಬ್ಬ ಯುವಕನನ್ನ ದಾರುಣವಾಗಿ ಹತ್ಯೆ ಮಾಡಿದ್ದಾನೆ.
undefined
ಇಂಥಹ ದಾರುಣ ಘಟನೆಗೆ ಸಾಕ್ಷಿಯಾಗಿದ್ದು ತಾಳಿಕೋಟೆ ತಾಲೂಕಿನ ಮೂಕಿಹಾಳ ಗ್ರಾಮ. ಮಹಾರಾಷ್ಟ್ರದ ರಾಯಘಡ ಜಿಲ್ಲೆ ಮಾನಗಾಂವ ತಾಲೂಕಿನ ಪಾವಸುಳವಾಡಿ ಗ್ರಾಮದ ಸೋನು ಲಕ್ಷ್ಮಣ ಹೀಲಮ (35) ಎಂಬಾತ ಕೊಲೆಯಾದ ಯುವಕ. ಗೋಪಾಲ ಮಾಧು ಜಾಧವ ಎಂಬಾತನೇ ಮಿಸ್ಡ್ ಕಾಲ್ ಬಂತು ಅಂತಾ ಕೊಲೆ ಮಾಡಿರೋ ಆರೋಪಿ. ಕೊಲೆಯಾದ ಸೋನು ಪತ್ನಿ ಮೀನಾ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
Crime News: ಭಿಕ್ಷುಕರ ಹಣಕ್ಕಾಗಿ ತಲೆ ಮೇಲೆ ಕಲ್ಲು ಹಾಕುತ್ತಿದ್ದ ಆತ ಮಾಡಿದ್ದು ಎಷ್ಟು ಕೊಲೆ ಗೊತ್ತಾ?
ಹೊಟ್ಟೆಪಾಡಿಗಾಗಿ ತಾಳಿಕೋಟೆಗೆ ಬಂದಿದ್ದ ಸೋನು..!
ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ತಾಳಿಕೋಟೆಯ ಡೋಣಿ ಹಳ್ಳದಲ್ಲಿ ಬೆಳೆದ ಜೀನಿ ಕಟ್ಟಿಗೆಗಳನ್ನು ಕಡಿದು ಸುಟ್ಟು ಇದ್ದಿಲು ತಯಾರಿ ಮಾಡುತ್ತಾರೆ. ಈ ಇದ್ದಿಲು ತಯಾರು ಮಾಡಲೆಂದೆ ಪ್ರತಿ ವರ್ಷ ಮೆರೆಯ ಮಹಾರಾಷ್ಟದಿಂದ ಕಾರ್ಮಿಕರು ಬರ್ತಾರೆ. ಹೊಟ್ಟೆ ಪಾಡಿಗಾಗಿ ಈ ಇದ್ದಿಲು ಬಟ್ಟಿಯಲ್ಲಿ ಕೆಲಸ ಮಾಡಲು ಮಹಾರಾಷ್ಟ್ರದಿಂದ ಕಾರ್ಮಿಕರು ಬರೋದು ಇಲ್ಲಿ ವಾಡಿಕೆ. ಹೀಗೆ ಹೊಟ್ಟೆಪಾಡಿಗಾಗಿ ಇದ್ದಿಲು ಮಾಡಲು ಮಹಾರಾಷ್ಟ್ರದಿಂದ ಮೂಕಿಹಾಳ ಗ್ರಾಮಕ್ಕೆ ಬಂದವನೇ ಈ ಕೊಲೆಯಾದ ಸೋನು.. ತನ್ನ ಕುಟುಂಬ ಸಮೇತವಾಗಿ ಕೆಲಸ ಅರಿಸಿ ವಲಸೆ ಬಂದಿದ್ದ. ಸೋನು ಹಾಗೂ ಕುಟುಂಬಸ್ಥರನ್ನ ತಾಳಿಕೋಟೆಯ ನಿವಾಸಿ ಶ್ರೀಕಾಂತ ಮಲ್ಲಪ್ಪ ಬೆಳ್ಳಗಿ ಎಂಬ ವ್ಯಕ್ತಿ 20 ಸಾವಿರ ರೂಪಾಯಿ ಅಡ್ವಾನ್ಸ್ ನೀಡಿ ಕರೆತಂದಿದ್ದ. ಮೂಕಿಹಾಳ ರಸ್ತೆಯ ಡೋಣಿ ನದಿಗೆ ಹೊಂದಿಕೊಂಡಿರುವ ಪ್ರಕಾಶ ಕುಲಕರ್ಣಿ ಎಂಬುವರ ಜಮೀನಿನಲ್ಲಿ ಸಣ್ಣ ಗುಡಿಸಲು ಹಾಕಿಕೊಂಡು ಸೋನು ಕುಟುಂಬ ವಾಸವಾಗಿತ್ತು. ಇವರ ಜೊತೆಗೆ ಮಹಾರಾಷ್ಟ್ರದಿಂದ ಕೆಲಸಕ್ಕೆ ಬಂದ ಗೋಪಾಲ ಮಾಧು ಜಾಧವ ಕುಟುಂಬ ಹತ್ತಿರದಲ್ಲಿಯೇ ಬೀಡು ಬಿಟ್ಟಿತ್ತು.
ಊಟಕ್ಕೆಂದು ಮನೆಗೆ ಬಂದವ ವಾಪಸ್ ಹೋಗಿದ್ದು ಬಾರದಲೋಕಕ್ಕೆ..!
ಮಾರ್ಚ್ 17ರಂದು ರಾತ್ರಿ ಕೆಲಸ ಮುಗಿಸಿ ಸೋನು ಮನೆಗೆ ಊಟಕ್ಕೆ ಬಂದಿದ್ದ. ಈ ಸಮಯದಲ್ಲಿ ಸೋನು ತನ್ನ ಸಂಬಂಧಿಕರಿಗೆ ಕರೆ ಮಾಡಿದ್ದ.. ಆದ್ರೆ ವಿಪರ್ಯಾಸವೋ ಗೊತ್ತಿಲ್ಲ ಆ ಕರೆ ಆಕಸ್ಮಿಕವಾಗಿ ಗೋಪಾಲ ಮಾಧು ಜಾಧವಗೆ ಹೋಗಿದೆ. ಈ ವೇಳೆ ಗೋಪಾಲ ತನಗೇಕೆ ಕರೆ ಮಾಡಿದ್ದೆ ಎಂದು ಸೋನು ಜೊತೆಗೆ ಜಗಳ ಮಾಡಿದ್ದಾನೆ. ಸೋನು ತಪ್ಪಾಗಿ ಕರೆ ಬಂದಿದೆ ಎಂದು ಹೇಳಿದರೂ ಕೇಳದೆ ಗೋಪಾಲ ಸೋನುಗೆ ಬಲವಾಗಿ ಹೊಡೆದು ಗಾಯ ಗೊಳಿಸಿದ್ದಾನೆ. ಕೂಡಲೇ ಸುತ್ತಲಿನವರೆಲ್ಲ ಸೇರಿ ಸೋನುಗೆ ತಾಳಿಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸೋನು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ಈ ಸಂಬಂಧ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ಗೋಪಾಲನನ್ನ ವಶಕ್ಕೆ ಪಡೆದಿರುವ ತಾಳಿಕೋಟೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ..