Kolar Crime News: IPL ಬೆಟ್ಟಿಂಗ್‌ನಲ್ಲಿ ಹಣ ಕಳ್ಕೊಂಡ, ಗುಟ್ಟು ಹೇಳ್ಬಿಡ್ತಾನೆ ಅಂದ್ಕೊಂಡು ಮಗನನ್ನೇ ಕೊಂದ!

By Suvarna News  |  First Published Jun 28, 2022, 8:30 PM IST

Kolar Crime News: ಇವತ್ತು ಬೆಳಿಗ್ಗೆ ಶೆಟ್ಟಿಮಾದಮಂಗಲ ಕೆರೆಯಲ್ಲಿ 12 ವರ್ಷದ ಬಾಲಕನೊಬ್ಬನ ಶವ ಪತ್ತೆಯಾಗಿದೆ, ಮೃತ ಬಾಲಕ ಯಾರೆಂದು ನೋಡಲಾಗಿ, ಬಾಲಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮಾದರಕಲ್ಲು ಗ್ರಾಮದ ಮಣಿಕಂಠ ಎಂಬುವರ ಮಗ ನಿಖಿಲ್​ ಕುಮಾರ್​ ಎಂದು ತಿಳಿದು ಬಂದಿದೆ. 


ವರದಿ : ದೀಪಕ್, ಕೋಲಾರ

ಕೋಲಾರ (ಜೂ. 28): ಐಪಿಎಲ್​ ಬೆಟ್ಟಿಂಗ್​ ಚಟಕ್ಕೆ (IPL Betting) ಬಿದ್ದು ಸಾಲ ಸೋಲ ಮಾಡಿಕೊಂಡು ಹಾಳಾಗಿದ್ದ ತಂದೆಯನ್ನು ಸಾಲಗಾರರು ಬಂದು ಮಗನ ಎದುರು ಕೊಟ್ಟ ಹಣ ವಾಪಸ್​ ಕೊಡುವಂತೆ ದಬಾಯಿಸಿದ್ದಾರೆ, ಈ ವಿಷಯ ಎಲ್ಲಿ ಮನೆಯಲ್ಲಿ ಹೆಂಡತಿ ಬಳಿ ಮಗ ಹೇಳಿ ಬಿಡ್ತಾನೋ, ನನ್ನ ಬಂಡವಾಳವೆಲ್ಲಾ ಮನೆಲಿ  ಬಯಲಾಗುತ್ತದೋ ಅನ್ನೋ ಭಯದಲ್ಲಿ ತಂದೆಯೇ ತನ್ನ ಮಗನನ್ನು ಕೊಲೆ (Murder) ಮಾಡಿದ್ದಾನೆ. ಮಗನ ಶವದ ಎದುರು ಮುಗಿಲು ಮುಟ್ಟುವಂತೆ ತಾಯಿಯ ಆಕ್ರಂದನ, ಐದು ಜನ ಹಿಡಿದರೂ ತಡೆಯಲಾಗದ ನೋವು ಚೀರಾಟ ಕೂಗಾಟ, ಮಗನಿಲ್ಲ ಅನ್ನೋದನ್ನು ಜೀರ್ಣಿಸಿಕೊಳ್ಳಲಾಗದ ತಾಯಿಯ ಸಂಕಟ. ಈ ಘಟನೆ ನಡೆದಿದ್ದು ಕೋಲಾರ ತಾಲ್ಲೂಕು ಶೆಟ್ಟಿಮಾದಮಂಗಲ ಗ್ರಾಮದಲ್ಲಿ.

Latest Videos

undefined

ಇವತ್ತು ಬೆಳಿಗ್ಗೆ ಶೆಟ್ಟಿಮಾದಮಂಗಲ ಕೆರೆಯಲ್ಲಿ 12 ವರ್ಷದ ಬಾಲಕನೊಬ್ಬನ ಶವ ಪತ್ತೆಯಾಗಿದೆ, ಮೃತ ಬಾಲಕ ಯಾರೆಂದು ನೋಡಲಾಗಿ, ಬಾಲಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಮಾದರಕಲ್ಲು ಗ್ರಾಮದ ಮಣಿಕಂಠ ಎಂಬುವರ ಮಗ ನಿಖಿಲ್​ ಕುಮಾರ್​ ಎಂದು ತಿಳಿದು ಬಂದಿದೆ. 

ಆರನೇ ತರಗತಿ ಓದುತ್ತಿದ್ದ ನಿಖಿಲ್​​ ಕುಮಾರ್​ ನಿನ್ನೆ ಎಂದಿನಂತೆ ಪಕ್ಕದೂರಿನ ಹಿರೇಕಟ್ಟಿಗೇನಹಳ್ಳಿ ಗ್ರಾಮಕ್ಕೆ ಶಾಲೆಗೆಂದು ಹೋಗುತ್ತಿದ್ದ. ಈ ವೇಳೆ ತಂದೆ ಮಣಿಕಂಠನನ್ನು ಊರ ಬಳಿ ಸಾಲ ವಾಪಸ್​ ಕೊಡುವಂತೆ ಬಾಯಿಗೆ ಬಂದಂತೆ ಬೈದಿದ್ದಾರೆ.  ಈ ವೇಳೆ ನೋಡಿಕೊಂಡು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದ ನಿಖಿಲ್​ ಕುಮಾರ್​ನನ್ನು ಶಾಲೆಗೆ ಬಿಡ್ತೀನಿ ಬಾ ಎಂದು ಹೇಳಿ ತಂದೆ ಮಣಿಕಂಠ ಬೈಕ್​ನಲ್ಲಿ ಕರೆದುಕೊಂಡು ಹೋಗಿದ್ದ.

ಸಂಜೆ ಮನೆಗೆ ಬಾರದ ಮಗ: ಆದರೆ ಸಂಜೆ ವೇಳೆಗೆ ಮಗ ನಿಖಿಲ್​​ ​ಕುಮಾರ್​ ಮನೆಗೆ ಬಂದಿಲ್ಲ, ಮಗ ಮನೆಗೆ ಬಾರದೆ ಇದ್ದ ಹಿನ್ನೆಲೆ ಚಿಂತಾಮಣಿ ಗ್ರಾಮಾಂತರ ಪೊಲೀಸ್​ ಠಾಣೆಗೆ ಮೌಕಿಕ ದೂರು ನೀಡಿದ ಕುಟುಂಬಸ್ಥರು ಮತ್ತು ಸಂಬಂಧಿಕರು,ಗ್ರಾಮದ ಸುತ್ತಮುತ್ತ ಬೆಟ್ಟ ಗುಡ್ಡಗಳು, ಕೆರೆ ಕಟ್ಟೆ ಬಳಿ ಎಲ್ಲಾ ಹುಡುಕಾಡಿದ್ದಾರೆ, ಆದರೆ ನಿಖಿಲ್​​ ​ಕುಮಾರ್​ ಸುಳಿವು ಮಾತ್ರ ಸಿಕ್ಕಿಲ್ಲ. 

ಇದನ್ನೂ ಓದಿ: ಕಾರ್ಪೋರೆಟರ್ ಹತ್ಯೆಗೆ ಪತಿಯಿಂದಲೇ ಯತ್ನ: ದೂರು ದಾಖಲು

ಗ್ರಾಮದ ಕೆರೆಯಲ್ಲಿ ಬಾಲಕನ ಶವ ಪತ್ತೆ: ಹೀಗಿರುವಾಗಲೇ ಇಂದು ಬೆಳಿಗ್ಗೆ ಕೋಲಾರ ತಾಲ್ಲೂಕು ಶೆಟ್ಟಿಮಾದಮಂಗಲ ಗ್ರಾಮದ ಕೆರೆಯಲ್ಲಿ ಬಾಲಕ ನಿಖಿಲ್​​ ಕುಮಾರ್​ ಶವವಾಗಿ ಪತ್ತೆಯಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದ ನಿಖಿಲ್​​ ಕುಮಾರ್​ ಮಾವ ಮಾರುತಿ ಹಾಗೂ ತಾತ ಮುನಿಯಪ್ಪ ನೇರವಾಗಿ ನಿಖಿಲ್​​ ಕುಮಾರ್​ನನ್ನು ಅವರ ತಂದೆಯೇ ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿದ್ದಾನೆಂದು ನೇರ ಆರೋಪ ಮಾಡಿದ್ದಾರೆ. 

ತಂದೆಯೇ ಕೊಲೆ ಮಾಡಿದ್ದಾರೆ: ಇನ್ನು ಮುನಿಯಪ್ಪ ನೇರವಾಗಿ ನಿಖಿಲ್​​ ಕುಮಾರನನ್ನು ಅವರ ತಂದೆಯೇ ಸಾಯಿಸಿದ್ದಾನೆ ಅನ್ನೋದಕ್ಕೆ ಕಾರಣವೂ ಇದೆ. ನಿನ್ನೆ ಶಾಲೆಗೆಂದು ಹೊರಟಿದ್ದ ಮಗನನ್ನು ತಂದೆ ಮಣಿಕಂಠ ಬೈಕ್​ನಲ್ಲಿ ಕೂರಿಸಿಕೊಂಡು ಶಾಲೆಗೆ ಬಿಡುತ್ತೀನಿ ಎಂದು ಹೇಳಿ ಕರೆದುಕೊಂಡು ಹೋಗಿದ್ದ. ಈ ವೇಳೆ ಹಿರೇಕಟ್ಟಿಗೇನಹಳ್ಳಿ ಗ್ರಾಮದ ಶಾಲೆಗೆ ಬಿಡದೆ, ಜೇಡರಹಳ್ಳಿ ಬಳಿ ಕರೆದುಕೊಂಡು ಬಂದಿದ್ದಾನೆ, ಅವನು ಮಗನೊಂದಿಗೆ ಬೈಕ್​ನಲ್ಲಿ ಹೋಗಿರುವ ಸಿಸಿಟಿವಿ ಕ್ಯಾಮರಾ ದೃಷ್ಯ ಸಿಕ್ಕಿದೆ. 

ಮಗನೊಂದಿಗೆ ಹೋದವನು ಮತ್ತೆ ವಾಪಸ್​ ಬಂದಿಲ್ಲ, ಅಲ್ಲದೆ ಹಿರೇಕಟ್ಟಿಗೇನಹಳ್ಳಿಯಲ್ಲಿರುವ ಶಾಲೆಗೆ ಹೋಗಬೇಕಾದವನು ಜೇಡರಹಳ್ಳಿಗೆ ಕರೆದುಕೊಂಡು ಹೋಗಿದ್ದೇಕೆ ಅನ್ನೋ ಅನುಮಾನ ಮೂಡಿದೆ. ಈ ಬಗ್ಗೆ ತಂದೆ ಮಣಿಕಂಠನನ್ನು ಕೇಳಿದ್ರೆ ನಿಖಿಲ್​​ ಕುಮಾರ್​ ಶೌಚಾಲಯಕ್ಕೆ ಹೋಗಬೇಕು ಎಂದ ಅದಕ್ಕಾಗಿ ಅವನನ್ನು ಕರೆದುಕೊಂಡು ಬಂದು ಜೇಡರಹಳ್ಳಿ ಕೆರೆಯಲ್ಲಿ ಶೌಚ ಮಾಡಿಸಿ ನಂತರ ಅವನನ್ನು ಶಾಲೆಯ ಬಳಿ ಅಂದರೆ ಹಿರೇಕಟ್ಟಿಗೇನಹಳ್ಳಿ ಗೇಟ್​ನಲ್ಲಿ ಬಿಟ್ಟು ಹೋಗಿದ್ದೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಬೇರೊಬ್ಬನೊಂದಿಗೆ ಪತ್ನಿ ಚಕ್ಕಂದ, ಕೆರಳಿ ರುಂಡ ಚೆಂಡಾಡಿದ ಗಂಡ

ನಿಖಿಲ್​​ ಕುಮಾರ್​ ಶಾಲೆ ಇರುವ ಹಿರೇಕಟ್ಟಿಗೇನಹಳ್ಳಿಗೂ ನಿಖಿಲ್​​ ಕುಮಾರ್​ ಮೃತದೇಹ ಸಿಕ್ಕಿರುವ ಸ್ಥಳ ಶೆಟ್ಟಿ ಮಾದಮಂಗಲ ಕೆರೆ ಪ್ರದೇಶಕ್ಕೂ ಸುಮಾರು 8 ಕಿ.ಮೀ. ದೂರವಾಗುತ್ತದೆ ಅಷ್ಟೊಂದು ದೂರ ನಿಖಿಲ್​​ ಕುಮಾರ್​ ಬಂದಿದ್ದೇಕೆ ಅನ್ನೋ ಹಲವು ಅನುಮಾನಗಳ ನಡುವೆ ಸ್ಥಳಕ್ಕೆ ಬಂದ ನಿಖಿಲ್​ ತಾತ ಮುನಿಯಪ್ಪ ಹಾಗೂ ಮಾವ ಮಾರುತಿ ನಿಖಿಲ್​ ತಂದೆ ಮಣಿಕಂಠನೆ ಕೊಲೆ ಮಾಡಿರುವುದು ಎಂದು ಹೇಳಿದ್ರು.

ಐಪಿಎಲ್​ ಬೆಟ್ಟಿಂಗ್​: ಲಕ್ಷಾಂತರ ರೂ ಸಾಲ: ಮೊದಲಿನಿಂದಲೂ ಮಗ ನಿಖಿಲ್​​​ ಕುಮಾರ್​ ಕಂಡರೆ ತಂದೆ ಮಣಿಕಂಠನಿಗೆ ಅಷ್ಟಕಷ್ಟೇ, ಆಗಾಗ ಮಗನಿಗೆ ಮನಸ್ಸಿಗೆ ಬಂದಂತೆ ಹೊಡೆಯುತ್ತಿದ್ದ, ಇತ್ತೀಚೆಗೆ ಐಪಿಎಲ್​ ಬೆಟ್ಟಿಂಗ್​ ಆಡಲು ಹೋಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ, ಹಲವು ಚಟಗಳಿತ್ತು, ನಮ್ಮ ಬಳಿಯೂ ಆಗಾಗ ದುಡ್ಡುಕೊಡುವಂತೆ ಪೀಡಿಸುತ್ತಿದ್ದ ಹಾಗಾಗಿ ಸೈಕೋನಂತೆ ವರ್ತಿಸುತ್ತಿದ್ದ ಮಣಿಕಂಠನೇ ಕೊಲೆ ಮಾಡಿದ್ದಾನೆ ಎಂದು ಹೇಳಿದ್ರು.

ತಪ್ಪೊಪ್ಪಿಕೊಂಡ ತಂದೆ: ಈ ವೇಳೆ ಸ್ಥಳಕ್ಕೆ ಬಂದಿದ್ದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಇವರ ದೂರಿನ ಮೇರೆಗೆ ಮಣಿಕಂಠನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ತಂದೆ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಐಪಿಎಲ್​ ಬೆಟ್ಟಿಂಗ್​ನಲ್ಲಿ ಹಣ ಸೋತು ಸಾಲ ಮಾಡಿಕೊಂಡಿದ್ದು ಸಾಲಗಾರರು ಬಂದು ಸಾಲ ಕೇಳುವಾಗ ಮಗ ನಿಖಿಲ್​ ನೋಡಿದ್ದ ಎಲ್ಲಿ ಅದನ್ನು ಮನೆಯಲ್ಲಿ ಹೇಳ್ತಾನೋ ಅನ್ನೋ ಕಾರಣಕ್ಕೆ ಅವನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ, ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಪತಿ, ಮೂವರು ಸ್ನೇಹಿತರಿಂದ ಸಾಮೂಹಿಕ ರೇಪ್‌

ಒಟ್ಟಾರೆ ಐಪಿಎಲ್​ ಬೆಟ್ಟಿಂಗ್ ಚಟಕ್ಕೆ ಬಿದ್ದ ತಂದೆ ಮಣಿಕಂಠ ಈಗಾಗಲೇ ಮಾಡಬಾರದನ್ನು ಮಾಡಿದ್ದ, ತನ್ನ ವರ್ತನೆಯನ್ನು ಬದಲಾಯಿಸಿಕೊಂಡು ಎಲ್ಲವನ್ನು ಸರಿ ಮಾಡಬಹುದಿತ್ತು ಆದರೆ, ತಾನು ಮಾಡಿದ ಪಾಪವನ್ನು ಮುಚ್ಚಿಹಾಕಲು ತನ್ನ ಮುದ್ದಾದ ಮಗನನ್ನೇ ಕೊಂದು ಮತ್ತೊಂದು ಘನ ಘೋರ ಪಾಪ ಮಾಡಿದ್ದಾನೆ ಈ ಪಾಪಿ ತಂದೆ, ಆದರೆ ಹೀಗೆ ಮುಗಿಲು ಮುಟ್ಟುವಂತೆ ಗೋಳಿಡುತ್ತಿರುವ ಈ ಹೆತ್ತ ಕರುಳಿಗೆ ಸಮಾದಾನ ಹೇಳುವುದಾದರೂ ಯಾರು?

click me!