10 ದಿನಗಳ ಹಿಂದೆ ಬಿಜೆಪಿ ಮಾಜಿ ವಕ್ತಾರ ನೂಪುರ್ ಶರ್ಮ ಪರವಾಗಿ ಟ್ವೀಟ್ ಮಾಡಿದ್ದ ಟೈಲರ್ ಕನ್ಹಯ್ಯಲಾಲ್‌ರನ್ನು ಮಂಗಳವಾರ ಭೀಕರವಾಗಿ ಶಿರಚ್ಛೇಧ ಮಾಡಿ ಕೊಲೆ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಕಳೆದ ಆರು ದಿನಗಳಿಂದಲೂ ಕನ್ಹಯ್ಯಲಾಲ್‌ಗೆ ಬೆದರಿಕೆ ಕರೆಗಳು ಬರುತ್ತಿದ್ದವು ಎನ್ನುವ ಮಾಹಿತಿ ಬಹಿರಂಗವಾಗಿದೆ.
ಜೈಪುರ (ಜೂನ್ 28): ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮ (Nupur Sharma) ಅವರನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಏಕೈಕ ಕಾರಣಕ್ಕೆ ಹಾಡುಹಗಲೇ ಹಿಂದೂ ವ್ಯಕ್ತಿಯನ್ನು ಶಿರಚ್ಛೇದ ಮಾಡಿ ಕೊಲೆಗೆಯ್ಯಲಾಗಿದೆ. ಇದರ ಬೆನ್ನಲ್ಲಿಯೇ ರಾಜಸ್ಥಾನ ಸರ್ಕಾರ ಹಾಗೂ ರಾಜಸ್ಥಾನ ಪೊಲೀಸ್ ವಿರುದ್ಧ ದೇಶಾದ್ಯಂತ ಟೀಕಾಪ್ರಹಾರ ಆರಂಭವಾಗಿದೆ.
ಮಂಗಳವಾರ ಹಾಡಹಗಲೇ ಅವರ ಅಂಗಡಿಗೆ ನುಗ್ಗಿದ ದಾಳಿಕೋರರು ಕತ್ತಿಯಿಂದ ಹಲವು ಬಾರಿ ಇರಿದು ಬಳಿಕ 40 ವರ್ಷದ ಕನ್ಹಯ್ಯಲಾಲ್‌ನ (Kanhaiyalal ಕತ್ತು ಸೀಳಿದ್ದಾರೆ. ಈ ಸಂಪೂರ್ಣ ದಾಳಿಯ ವಿಡಿಯೋ ಕೂಡ ಮಾಡಲಾಗಿದೆ. ಇಷ್ಟೇ ಅಲ್ಲ, ಘಟನೆಯ ನಂತರ ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಉದಯಪುರ ಜಿಲ್ಲೆಯಲ್ಲಿ 24 ಗಂಟೆಗಳ ಕಾಲ ನೆಟ್ ಬಂದ್ ಮಾಡಲಾಗಿದೆ.
ಆರು ದಿನಗಳಿಂದ ಅಂಗಡಿ ಬಾಗಿಲು ತೆರೆಯದ ಕನ್ಹಯ್ಯಲಾಲ್: ಕನ್ಹಯ್ಯಾಲಾಲ್ ಗೋವರ್ಧನ್ ವಿಲಾಸ್ ಪ್ರದೇಶದ ನಿವಾಸಿಯಾಗಿದ್ದರು. ಅವರಿಗೆ ಯಶ್ (19) ಮತ್ತು ತರುಣ್ (17) ಎಂಬ ಇಬ್ಬರು ಮಕ್ಕಳಿದ್ದಾರೆ. 10 ದಿನಗಳ ಹಿಂದೆ ಅವರು ಬಿಜೆಪಿಯಿಂದ ತೆಗೆದುಹಾಕಲ್ಪಟ್ಟ ನೂಪುರ್ ಶರ್ಮಾ ಪರವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅಂದಿನಿಂದ, ನಿರ್ದಿಷ್ಟ ಸಮುದಾಯದ ಜನರು ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು. ಕನ್ಹಯ್ಯಾಲಾಲ್ ನಿರಂತರ ಬೆದರಿಕೆಗಳಿಂದ ಹೆದರಿದ್ದಲ್ಲದೆ, ಕಳೆದ ಆರು ದಿನಗಳಿಂದ ಅಂಗಡಿ ತೆರೆದಿರಲಿಲ್ಲ. ಬೆದರಿಕೆ ಹಾಕಿದವರ ವಿರುದ್ಧ ಹೆಸರಿಟ್ಟು ಪೊಲೀಸರಿಗೆ ದೂರು ಕೂಡ ನೀಡಿದ್ದರು. ಕೆಲ ದಿನಗಳ ಕಾಲ ಎಚ್ಚರಿಕೆ ವಹಿಸುವಂತೆ ಸೂಚಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಗಂಭೀರತೆ ತೋರಿಸಿರಲಿಲ್ಲ.
ಅರ್ಧ ಡಜನ್ ಪ್ರದೇಶಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ತಾರಾ ಚಂದ್ ಮೀನಾ, ಎಸ್ಪಿ ಮನೋಜ್ ಚೌಧರಿ ಅವರು ಸ್ಥಳಕ್ಕೆ ಧಾವಿಸಿದರು. ಸದ್ಯ ಸ್ಥಳದಲ್ಲಿಯೇ ಮೃತದೇಹ ಬಿದ್ದಿದೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಖೇರ್ವಾರಾದಿಂದ ಹೆಚ್ಚುವರಿ ಪೊಲೀಸ್ ಘಟಕಗಳನ್ನು ಕರೆಯಲಾಗಿದೆ. ನಗರದ 5 ಪ್ರದೇಶಗಳಲ್ಲಿ ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಇದರ ನಡುವೆ ಉದಯಪುರದಾದ್ಯಂತ ಪ್ರತಿಭಟನೆಗಳು ತೀವ್ರವಾಗಿದೆ.
ನೂಪುರ್ ಶರ್ಮಾಗೆ ಬೆಂಬಲ ಸೂಚಿಸಿದ ಹಿಂದೂ ಯುವಕನ ತಲೆ ಕತ್ತರಿಸಿದ ಮುಸ್ಲಿಂ ಯುವಕರು, ವಿಡಿಯೋ ವೈರಲ್!
ಪೊಲೀಸರಿಂದ ದಾಖಲೆಗಳ ಪರಿಶೀಲನೆ: ಮಾಹಿತಿ ಲಭಿಸಿದ ಕೂಡಲೇ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಉದಯಪುರ ಎಸ್ಪಿ ಮನೋಜ್ ಚೌಧರಿ ತಿಳಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಸಂತ್ರಸ್ಥರ ಕುಟುಂಬದೊಂದಿಗೆ ಯಾವುದೇ ಸಂವಹನ ನಡೆದಿಲ್ಲ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ ನಂತರ ಬೆದರಿಕೆಗಳು ಬಂದಿವೆ ಎಂಬ ದೂರಿನ ಪ್ರಶ್ನೆಗೆ, ಮೃತರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಎಸ್‌ಪಿ ಹೇಳಿದರು. ಕೆಲ ಆರೋಪಿಗಳ ಗುರುತು ಪತ್ತೆಯಾಗಿದೆ.
ನೂಪುರ್ ಶರ್ಮ ಅವಾಂತರಕ್ಕೆ ಕಾರಣವಾದ ಮೊಹಮದ್ ಜುಬೇರ್ ಖಾತೆಯಲ್ಲಿ 3 ತಿಂಗಳಲ್ಲಿ 50 ಲಕ್ಷ ಠೇವಣಿ!
ಕೊಲೆ ನಡೆದ ಬೆನ್ನಲ್ಲಿಯೇ ಉದಯ್‌ಪುರನ ಹತಿಪೋಲ್ ಕ್ರಾಸ್‌ರೋಡ್ಸ್‌ನಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಆರಂಭಿಸಿದ್ದು, ಪೊಲೀಸರು ಉದಯಪುರದ ಪ್ರತಿ ಗಲ್ಲಿಯನ್ನೂ ಕಂಟೋನ್ಮೆಂಟ್ ವಲಯವನ್ನಾಗಿ ಪರಿವರ್ತನೆ ಮಾಡಿದೆ. ಮತ್ತೊಂದೆಡೆ, ಮಂಗಳವಾರ ಸಂಜೆ ಉದಯಪುರ ಜಿಲ್ಲೆಯಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿ ವಿಭಾಗೀಯ ಆಯುಕ್ತ ರಾಜೇಂದ್ರ ಭಟ್ ಆದೇಶ ಹೊರಡಿಸಿದ್ದಾರೆ.