ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗಣೆ ಗ್ರಾಮದಲ್ಲಿ. ಕೌಟುಂಬಿಕ ಕಲಹ, ಮಾನಸಿಕ ಖಿನ್ನತೆ ಹಾಗೂ ಕುಡಿತದ ಚಟದಿಂದ ಪತ್ನಿ ಮತ್ತು ಮಗನನ್ನು ಪಾಪಿ ತಂದೆ ಕೊಂದಿರುವ ಘಟನೆ ನಡೆದಿದೆ.
ಭರತ್‌ರಾಜ್ ಕಲ್ಲಡ್ಕ ಏಷಿಯಾನೆಟ್ ಸುವರ್ಣ ನ್ಯೂಸ್
ಕಾರಾವರ (ಜು.9): ಕುಡಿತದ ದಾಸನಾಗಿದ್ದ ಆತ ಮಾನಸಿಕವಾಗಿ ಕುಗ್ಗಿದ್ದ. ಇದೇ ಕುಡಿತದ ಚಟ ಕುಟುಂಬದಲ್ಲಿ ಪ್ರತೀ ದಿನ ಜಗಳಕ್ಕೆ ಕಾರಣವಾಗುತ್ತಿತ್ತು. ಗುರುವಾರ ರಾತ್ರಿ ಕೂಡಾ ಕುಡಿತದ ಅಮಲಿನಲ್ಲಿ ಬಂದ ಆತ ಪತ್ನಿ ಜತೆ ಜಗಳಕ್ಕಿಳಿದಿದ್ದ. ದಿನನಿತ್ಯದ ಜಗಳ ಎಂದು ಪಕ್ಕದ ಮನೆಯವರು ಕೂಡಾ ಸುಮ್ಮನಾಗಿದ್ದರು. ಆದರೆ, ಬೆಳಗಾಗುವ ಮುನ್ನವೇ ಆ ಮನೆಯಲ್ಲಿ ಮೂರು ಹೆಣಗಳು ಉರುಳಿದ್ದು, ಇಡೀ ಊರನ್ನೇ ಬೆಚ್ಚಿ ಬೀಳಿಸಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಈ ಮನೆಯಲ್ಲಿ ಓರ್ವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡರೆ, ಇನ್ನಿಬ್ಬರು ಮಚ್ಚಿನ ಏಟಿನಿಂದ ಭೀಕರವಾಗಿ ಕೊಲೆಯಾಗಿದ್ದರು. ಇನ್ನೊಬ್ಬನಂತೂ ಜೀವ ಉಳಿಸಿಕೊಳ್ಳಲು ಮನೆಯನ್ನೇ ಬಿಟ್ಟು ಓಡಿ ಹೋಗಿದ್ದ. ಅಷ್ಟಕ್ಕೂ ಇಂತಹ ಭೀಕರ ಹಾಗೂ ವಿಚಿತ್ರ ಘಟನೆ ನಡೆದದ್ದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗಣೆ ಗ್ರಾಮದಲ್ಲಿ. ಕೌಟುಂಬಿಕ ಕಲಹ, ಮಾನಸಿಕ ಖಿನ್ನತೆ ಹಾಗೂ ಕುಡಿತದ ಚಟವೇ ಈ ದುರಂತಕ್ಕೆ ಕಾರಣ.
ಕುಮಟಾ ತಾಲೂಕಿನ ಬಗಣೆ ಗ್ರಾಮದ ನಿವಾಸಿ ರಾಮಾ ಮರಾಠಿ ಎಂಬಾತ ತೀವ್ರ ಕುಡಿತದ ಚಟಕ್ಕೆ ಬಿದ್ದು ಪ್ರತಿನಿತ್ಯ ಮನೆಗೆ ಬಂದು ಪತ್ನಿ ತಾಕಿ ಮರಾಠಿ ಜತೆ ಜಗಳವಾಡುತ್ತಿದ್ದ. ನಿನ್ನೆ ಕೂಡಾ ರಾತ್ರಿ ಮನೆಗೆ ಹತ್ತು ಗಂಟೆ ವೇಳೆಗೆ ರಾಮಾ ಮರಾಠಿ ಕುಡಿದು ಬಂದಿದ್ದು, ಬಂದ ತಕ್ಷಣ ಹೆಂಡತಿ ತಾಕಿ ಜತೆ ಕಾಲು ಕೆರೆದು ಜಗಳವಾಡಲು ಆರಂಭಿಸಿದ್ದ. ಪತಿ- ಪತ್ನಿಯರ ಜಗಳ ರಾತ್ರಿ ಎರಡು ಗಂಟೆಯವರೆಗೆ ನಡೆದಿದೆ. ಮೊದಲೇ ಕುಡಿತದ ನಶೆ ತಲೆಗೇರಿದ್ದರಿಂದ ಕುಪಿತನಾಗಿದ್ದ ರಾಮಾ ಮರಾಠಿ ಮಚ್ಚಿನಿಂದ ಏಕಾಏಕಿ ಹೆಂಡತಿಯನ್ನು ಹೊಡೆದು ಕೊಲೆ ಮಾಡಿದ್ದಾನೆ. ತಮ್ಮ ತಂದೆ ತಮ್ಮ ತಾಯಿಯನ್ನು ಹೊಡೆದು ಸಾಯಿಸಿದ್ದನ್ನು ನೋಡಿದ ಮಕ್ಕಳು ಮನೆಯಿಂದ ಹೊರಕ್ಕೆ ಓಡಿದ್ದಾರೆ.
ಕಲಾಸಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್ ಅಮಾನತು ಮಾಡಿರೋದು ಸರಿಯಲ್ಲ: ದೂರುದಾರ ಬೇಸರ
ಈ ವೇಳೆ ಮಕ್ಕಳನ್ನು ಅಟ್ಟಾಡಿಸಿದ ಆರೋಪಿ ರಾಮಾ ಮರಾಠಿಯ ಮಚ್ಚಿನೇಟಿಗೆ ತನ್ನ ಸಣ್ಣ ಮಗ 12 ವರ್ಷದ ಲಕ್ಷಣ ಮರಾಠಿ ಬಲಿಯಾಗಿದ್ದ. ಆದರೆ, ಹಿರಿಯ ಮಗ 15 ವರ್ಷದ ಭಾಸ್ಕರ್ ಮರಾಠಿ ಮಾತ್ರ ತಪ್ಪಿಸಿಕೊಳ್ಳಲು ಸಫಲನಾಗಿದ್ದ. ಈ ನಡುವೆ ಮನೆಗೆ ವಾಪಾಸ್ ಹಿಂತಿರುಗಿದ ರಾಮಾ ಮರಾಠಿ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ರಾಮಾ ಮರಾಠಿ ದಂಪತಿಯ ಇಬ್ಬರು ಮಕ್ಕಳ ಪೈಕಿ ಲಕ್ಷ್ಮಣ ಸ್ಥಳೀಯ ಶಾಲೆಯಲ್ಲಿ 6 ನೇ ತರಗತಿ ಓದುತ್ತಿದ್ದರೆ, ಭಾಸ್ಕರ ಕುಮಟಾದ ಶಾಲೆಯೊಂದರಲ್ಲಿ 9 ನೇ ತರಗತಿ ಓದುತ್ತಿದ್ದ. ಮಳೆ ಹಿನ್ನೆಲೆಯಲ್ಲಿ ರಜೆ ಕೊಟ್ಟಿದ್ದರಿಂದ ಭಾಸ್ಕರ ಸಹ ಮನೆಗೆ ಬಂದಿದ್ದ. ಇನ್ನು ತಂದೆ ಮಚ್ಚನ್ನ ಹಿಡಿದು ತಾಯಿಗೆ ಕಡಿಯುವುದನ್ನ ನೋಡುವಾಗ ಭಾಸ್ಕರ ಹಾಗೂ ಲಕ್ಷ್ಮಣ ಇಬ್ಬರು ಓಡಿ ಹೋಗಿದ್ದಾರೆ. ಆದ್ರೆ, ತಂದೆ ಕೈಗೆ ಲಕ್ಷ್ಮಣ ಸಿಕ್ಕಿದ್ದು, ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಇನ್ನು ಭಾಸ್ಕರ್ ಬೇಗ ಓಡಿ ಹೋಗಿದ್ದರಿಂದ ಬದುಕಿಕೊಂಡಿದ್ದು, ಆತನ ಹೇಳಿಕೆ ಮೇಲೆ ಕುಮಟಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಐಐಟಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಅಧಿಕಾರಿ ಅಮಾನತುಗೊಳಿಸಿದ ಸರ್ಕಾರ
ಒಟ್ಟಿನಲ್ಲಿ ಈ ಭೀಕರ ಘಟನೆಯಿಂದ ಇಡೀ ಊರಿಗೆ ಊರೇ ಬೆಚ್ಚಿ ಬಿದ್ದಿದ್ದು, ಕುಡಿತದ ಅಮಲು ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದೆ. ತಂದೆ, ತಾಯಿ ಹಾಗೂ ತಮ್ಮನ್ನು ಕಳೆದುಕೊಂಡ 15 ವರ್ಷದ ಭಾಸ್ಕರ್ ಮಾತ್ರ ತಾನು ಮಾಡದೆ ತಪ್ಪಿಗೆ ಅನಾಥನಾಗಿದ್ದಾನೆ.