*ಮಂಗಳೂರಿನಲ್ಲಿ ನಾಲ್ವರ ಕುಟುಂಬದ ಸಾವಿನ ರಹಸ್ಯ ಭೇದಿಸಿದ ಪೊಲೀಸರು
*ಮತಾಂತರ ಭೀತಿಯಿಂದ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ
*ನನ್ನ ತಾಯಿ ಮತಾಂತರಕ್ಕೆ ಯತ್ನಿಸಿಲ್ಲ : ನೂರ್ ಕುಟುಂಬ
ಮಂಗಳೂರು(ಡಿ. 12): ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಮಂಗಳೂರಿನ ಒಂದೇ ಕುಟುಂಬದ ನಾಲ್ವರ (Manglore Family Suicide) ಸಾವಿಗೆ ಮತಾಂತರ ಯತ್ನವೇ ಕಾರಣ ಎಂಬುದು ಪೊಲೀಸ್ ತನಿಖೆಯಲ್ಲೀಗ ಖಚಿತವಾಗಿದೆ. ಆತ್ಮಹತ್ಯೆಗೂ ಮುನ್ನ ತನ್ನ ಪತ್ನಿಯನ್ನು ನೂರ್‌ಜಹಾನ್ ಎಂಬಾಕೆ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲು ಪ್ರಯತ್ನಿಸಿದ್ದಳು ಎಂದು ಮೃತ ನಾಗೇಶ್ ಆರೋಪಿಸಿದ್ದರು. ಅದರಂತೆ ನೂರ್ ಜಹಾನ್ ಬಂಧಿಸಿ ವಿಚಾರಣೆ ನಡೆಸಿದಾಗ ನಾಗೇಶ್ ಪತ್ನಿಯನ್ನು ಮತಾಂತರ ಮಾಡಿ, ಮರುಮದುವೆಗೆ ಮುಂದಾಗಿದ್ದನ್ನು ಸ್ವತಃ ನೂರ್ ಜಹಾನ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
undefined
- ಡಿ.8ಕ್ಕೆ ಮಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿ, ಮಕ್ಕಳನ್ನು ಕೊಂದು ನಾಗೇಶ್ ಎಂಬಾತ ಆತ್ಮಹತ್ಯೆ
- ಪತ್ನಿ ಕೆಲಸ ಮಾಡುತ್ತಿದ್ದ ಮನೆ ಮಾಲಕಿಯಿಂದ ಮತಾಂತರಕ್ಕೆ ಬಲವಂತ ಎಂದು ನಾಗೇಶ್ ಮರಣಪತ್ರ
- ಈ ಹಿನ್ನೆಲೆಯಲ್ಲಿ ಮನೆ ಮಾಲಕಿ ನೂರ್ ಜಹಾನ್‌ಳನ್ನು ಬಂಧಿಸಿ ಸಮಗ್ರ ವಿಚಾರಣೆ ನಡೆಸಿದ ಪೊಲೀಸರು
- ನಾಗೇಶ್ ಪತ್ನಿಯನ್ನು ಮತಾಂತರ ಮಾಡಿಸಿ, ಬೇರೊಬ್ಬನಿಗೆ ಮದುವೆ ಮಾಡಿಸಲು ಯತ್ನ: ನೂರ್ ಒಪ್ಪಿಗೆ
- ಘಟನೆ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಂದ ಸುದ್ದಿಗೋಷ್ಠಿಯಲ್ಲಿ ವಿವರಣೆ
ನಗರದ ಮೋರ್ಗನ್‌ಗೇಟ್ ಬಳಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ನಾಗೇಶ್, ವಿಜಯಲಕ್ಷ್ಮಿ, ಮಕ್ಕಳಾದ ಸ್ವಪ್ನ, ಸಮರ್ಥ್ ಡಿ.8ರಂದು ಶವವಾಗಿ ಪತ್ತೆಯಾಗಿದ್ದರು. ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದ ನಾಗೇಶ್ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಪೊಲೀಸರಿಗೆ ವಾಯ್‌್ಸ ಮೆಸೇಜ್ ಕಳುಹಿಸಿ, ನಮ್ಮ ಕುಟುಂಬದ ಸಾವಿಗೆ ನೆರೆ ಮನೆಯ ನೂರ್‌ಜಹಾನ್ ಕಾರಣ. ಆಕೆ ನನ್ನ ಪತ್ನಿಯನ್ನು ಮತಾಂತರ ಮಾಡಿದ್ದಾಳೆಂದು ಆರೋಪಿಸಿದ್ದರು.
Police Firing: ಆಟೋ ಚಾಲಕನ ಅಪಹರಿಸಿ ಕೊಂದವನ ಮೇಲೆ ಗುಂಡಿನ ದಾಳಿ
ನಾಗೇಶ್ ಪತ್ನಿ ವಿಜಯಲಕ್ಷ್ಮಿಗೆ ಮುಸ್ಲಿಂ ಸಮುದಾಯದಲ್ಲಿ ಬೇರೊಂದು ವಿವಾಹ ಮಾಡಿಸಲು ನೂರ್‌ಜಹಾನ್ ಸಿದ್ಧತೆ ನಡೆಸಿದ್ದಳು. ಇದಕ್ಕಾಗಿ ಪತಿಯಿಂದ ವಿಚ್ಛೇದನ ಪಡೆಯುವಂತೆ ಸೂಚಿಸಿದ್ದಳು. ಇದೇ ಕಾರಣಕ್ಕೆ ಪತಿ-ಪತ್ನಿ ನಡುವಿನ ಜಗಳ ಡೈವೋರ್ಸ್ ಹಂತ ತಲುಪಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸ:
ಆರೋಪಿ ನೂರ್‌ಜಹಾನ್ ಮತ್ತು ನಾಗೇಶ್ ಕುಟುಂಬ ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ನೂರ್‌ಜಹಾನ್ ವಿವಾಹಕ್ಕೆ ಸಂಬಂಧ ಹುಡುಕುವ ಉದ್ಯೋಗ ಮಾಡುತ್ತಿದ್ದರೆ, ಬಾಗಲಕೋಟೆಯ ಬೀಳಗಿಯಿಂದ ಉದ್ಯೋಗ ಅರಸಿ ಬಂದಿದ್ದ ನಾಗೇಶ್ ಕುಟುಂಬ 4 ವರ್ಷಗಳಿಂದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿತ್ತು. ನಾಗೇಶ್ ನೀರಿನ ಟ್ಯಾಂಕರ್‌ನ ಚಾಲಕನಾಗಿದ್ದರೆ, ವಿಜಯಲಕ್ಷ್ಮಿ ಅಪಾರ್ಟ್‌ಮೆಂಟ್‌ನಲ್ಲೇ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದರು.
Crime News: ಮಂಗ್ಳೂರು ಹಲ್ಲೆ ಕೇಸ್‌ನಲ್ಲಿ ನಾಲ್ವರು ಪೊಲಿಸರ ವಶಕ್ಕೆ, ಕಾರಿನಲ್ಲಿ ಮಹಿಳೆಯ ಚಪ್ಪಲಿ ಪತ್ತೆ
ಜಗಳವೇ ದಾಳವಾಯ್ತು: ಈ ಹಿಂದೆ ನಾಗೇಶ್ ಪಾನಮತ್ತನಾಗಿ ಬಂದು ಪತ್ನಿ ಜೊತೆ ಜಗಳ ಮಾಡುತ್ತಿದ್ದ. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಬುದ್ಧಿಮಾತು ಹೇಳಿ ಕಳುಹಿಸಲಾಗಿತ್ತು. ಬಳಿಕವೂ ದಂಪತಿಯಲ್ಲಿ ಮನಸ್ತಾಪ ಮುಂದುವರಿದ ಹಿನ್ನೆಲೆಯಲ್ಲಿ ಈ ವಿಚಾರವನ್ನು ವಿಜಯಲಕ್ಷ್ಮಿ ತನ್ನ ಪರಿಚಯದ ನೂರ್‌ಜಹಾನ್ ಬಳಿ ಹೇಳಿಕೊಂಡಿದ್ದಳು. ಇದನ್ನೇ ದಾಳ ಮಾಡಿಕೊಂಡ ನೂರ್‌ಜಹಾನ್, ಆತನನ್ನು ಬಿಟ್ಟು ಬಂದರೆ ನಮ್ಮ ಧರ್ಮದಲ್ಲಿ ಮರು ಮದುವೆ ಮಾಡಿಸುತ್ತೇನೆ. ನೆಮ್ಮದಿಯಾಗಿರಬಹುದೆಂದು ನಂಬಿಸಿದ್ದಳು. ಇದಕ್ಕಾಗಿ ಮಕ್ಕಳ ಸಮೇತ ಮತಾಂತರಗೊಳ್ಳುವಂತೆಯೂ ಸೂಚಿಸಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಳೆ.
ರಾತ್ರಿ ಇಡೀ ಶವಗಳ ಎದುರು ಕುಳಿತುಕೊಂಡಿದ್ದ ನಾಗೇಶ್
ಈ ಮಧ್ಯೆ ಒಂದು ದಿನ ನಾಪತ್ತೆಯಾಗಿದ್ದ ವಿಜಯಲಕ್ಷ್ಮಿ ನೂರ್‌ಜಹಾನ್ ಜೊತೆ ಇರುವುದು ಗೊತ್ತಾಗಿತ್ತು. ಈ ಸಂಬಂಧ ಗಲಾಟೆಯೂ ಆಗಿತ್ತು. ಆ ಬಳಿಕ ಮತ್ತೆ ವಿಜಯಲಕ್ಷ್ಮಿ ಮನೆಗೆ ಬಂದಿದ್ದರೂ ಇಬ್ಬರೂ ಡೈವೋರ್ಸ್ ಪಡೆದುಕೊಳ್ಳಲು ಪ್ರತ್ಯೇಕವಾಗಿ ವಕೀಲರನ್ನು ಸಂಪರ್ಕಿಸಲು ಮುಂದಾಗಿದ್ದರು. ಈ ಮಧ್ಯೆ, ವಿಜಯಲಕ್ಷ್ಮಿ ಪರ ಡೈವೋರ್ಸ್‌ಗೆ ನೂರ್‌ಜಹಾನ್ ವಕೀಲರನ್ನು ಸಂಪರ್ಕಿಸಿದ್ದಳು. ಅಲ್ಲದೆ ವಿಜಯಲಕ್ಷ್ಮಿಗೆ ಮುಸ್ಲಿಂ ಸಮುದಾಯದಲ್ಲಿ ಸಂಬಂಧ ಕುದುರಿಸಲು ಆಕೆಯ ಫೋಟೋವನ್ನು ಹಲವರಿಗೆ ಕಳುಹಿಸಿದ್ದಳು ಎಂದು ನೂರ್ ಜಹಾನ್ ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.
ಈ ವಿಚಾರ ತಿಳಿದ ನಾಗೇಶ್ ಡಿ.8ರ ರಾತ್ರಿ ನಿದ್ರಿಸುತ್ತಿದ್ದ ಮಕ್ಕಳನ್ನು ಕೊಂದು, ಪತ್ನಿಯ ಕತ್ತುಹಿಸುಕಿ, ಉಸಿರುಗಟ್ಟಿಸಿ ಸಾಯಿಸಿದ್ದಾನೆ. ರಾತ್ರಿ ಇಡೀ ಶವಗಳ ಎದುರು ಕುಳಿತುಕೊಂಡಿದ್ದ ನಾಗೇಶ್, ನಸುಕಿನ ಜಾವ ಪಾಂಡೇಶ್ವರ ಎಎಸ್‌ಐ ಚಂದ್ರಶೇಖರ್ ಅವರ ಮೊಬೈಲ್‌ಗೆ ವಿಡಿಯೋ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸದ್ಯ ನೂರ್‌ಜಹಾನ್‌ಳನ್ನು ಬಂಧಿಸಿ, ಆಕೆಯ ವಿರುದ್ಧ ಸೆಕ್ಷನ್ 306ರನ್ವಯ (ಆತ್ಮಹತ್ಯೆಗೆ ಪ್ರಚೋದನೆ) ಕೇಸು ದಾಖಲಿಸಲಾಗಿದೆ.
‘ನನ್ನ ತಾಯಿ ಮತಾಂತರಕ್ಕೆ ಯತ್ನಿಸಿಲ್ಲ’
ಮಂಗಳೂರು: ನಾಲ್ವರ ಆತ್ಮಹತ್ಯೆಗೆ ನೂರ್‌ಜಹಾನ್ ಮತಾಂತರಕ್ಕೆ ಯತ್ನಿಸಿದ್ದೇ ಕಾರಣ ಎಂಬ ಆರೋಪವನ್ನು ನೂರ್‌ಜಹಾನ್‌ಳ ಕುಟುಂಬಸ್ಥರು ತಳ್ಳಿಹಾಕಿದ್ದಾರೆ. ವಿಜಯಲಕ್ಷ್ಮಿಗೆ ಆಕೆಯ ಪತಿ ನೀಡುತ್ತಿದ್ದ ಕಿರುಕುಳದ ವಿರುದ್ಧ ನಿಂತಿದ್ದೇ ನಮ್ಮ ತಾಯಿ ಮೇಲಿನ ಮತಾಂತರ ಯತ್ನದ ಆರೋಪಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ನನ್ನ ತಾಯಿ ಮತಾಂತರ ಮಾಡಿಲ್ಲ, ಮಾಡಲು ಯತ್ನಿಸಿಯೂ ಇಲ್ಲ. ವಿಜಯಲಕ್ಷ್ಮಿ ಕುಟುಂಬಕ್ಕೆ ಹಣಕಾಸು ಸಹಾಯ ಮಾಡಿದ್ದರು, ಮಕ್ಕಳಿಗೆ ತಿಂಡಿ ಕೊಡುತ್ತಿದ್ದರು. ವಿಜಯಲಕ್ಷ್ಮಿಯ ಪತಿ ನಾಗೇಶ್ ಮದ್ಯ ಸೇವಿಸಿ ಅವರಿಗೆ ಹಲ್ಲೆ ಮಾಡುತ್ತಿದ್ದರು. ಆಗ ನಮ್ಮ ತಾಯಿ ಪೊಲೀಸ್ ದೂರು ಕೊಡಲು ಹೇಳಿದ್ದು ನಿಜ. ಅವರು ಮದುವೆ ಮ್ಯಾಚ್ ಮೇಕರ್ ಹೌದು, ಆದರೆ ವಿಜಯಲಕ್ಷ್ಮಿಗೆ ಗಂಡು ನೋಡಿಲ್ಲ. ಮುಸ್ಲಿಂ ಗಂಡು ನೋಡಿ ಮದುವೆ ಮಾಡಲು ಹೋಗಿಲ್ಲ. ಆ ರೀತಿ ಮಾಡಿದ್ದಾರೆಂಬುದೆಲ್ಲ ಸುಳ್ಳು. ಇನ್ನು, ಮತಾಂತರ ಮಾಡುವ ಅಗತ್ಯವೂ ನಮಗಿಲ್ಲ ಎಂದು ನೂರ್‌ಜಹಾನ್‌ಳ ಹೆಸರು ಹೇಳಲಿಚ್ಛಿಸದ ಪುತ್ರಿ ಹೇಳಿದ್ದಾರೆ.