* ಡ್ರಗ್ಸ್ ಸಾಗಿಸುತ್ತಿದ್ದವನ ಬಂಧನ
* ಪ್ರಶಾಂತಿ ಎಕ್ಸ್‌ಪ್ರೆಸ್‌ನಲ್ಲಿ ಸಾಗಾಟ
* ಆರ್‌ಪಿಎಫ್ ಪೊಲೀಸರ ಕಾರ್ಯಾಚರಣೆ
ಬೆಂಗಳೂರು(ಅ.03): ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸುಮಾರು 3.20 ಕೋಟಿ ಮೌಲ್ಯದ ನಿಷೇಧಿತ ಮೆಥಾಫೆಟಮೆನ್ ಮಾದಕವಸ್ತು(Drugs) ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನ್ನು ಬೆಂಗಳೂರು ರೈಲ್ವೆ ವಿಭಾಗದ ರೈಲ್ವೆ ಭದ್ರತಾ ಪಡೆ(ಆರ್‌ಪಿಎಫ್) ಸಿಬ್ಬಂದಿ ಮಾಲು ಸಮೇತ ಹಿಡಿದಿದ್ದಾರೆ.
ಬಂಧಿತ ವ್ಯಕ್ತಿಯಿಂದ 3.20 ಕೋಟಿ ಮೌಲ್ಯದ 640 ಗ್ರಾಂ ಮೆಥಾಫೆಟಮೆನ್ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ಆರ್‌ಪಿಎಫ್‌ನ ಎಎಸ್‌ಐ ಎನ್.ಪಿ.ತನುಜಾ ಅವರು ಶುಕ್ರವಾರ ಬೆಂಗಳೂರು-ಭುವನೇಶ್ವರ ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ(Train) ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ರೈಲಿನೊಳಗೆ ವ್ಯಕ್ತಿಯೊಬ್ಬನ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಇದನ್ನು ತನುಜಾ ಗಮನಿಸಿದ್ದಾರೆ. ಬಳಿಕ ರೈಲಿನಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಇತರೆ ಆರ್‌ಪಿಎಫ್(RPF) ಸಿಬ್ಬಂದಿಗೂ ಈತನ ವರ್ತನೆ ಬಗ್ಗೆ ಮಾಹಿತಿ ನೀಡಿದ್ದು, ನಿಗಾವಹಿಸುವಂತೆ ಸೂಚಿಸಿದ್ದಾರೆ.
ಅದರಂತೆ ರೈಲು ಹಿಂದೂಪುರ ರೈಲು ನಿಲ್ದಾಣದಲ್ಲಿ ನಿಂತ ತಕ್ಷಣ ಆ ವ್ಯಕ್ತಿ ರೈಲಿನಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಜಾಗೃತರಾದ ಆರ್‌ಪಿಎಫ್ ಸಿಬ್ಬಂದಿ ಆತನನ್ನು ಬೆನ್ನಟ್ಟಿ ಸುತ್ತುವರಿದು ವಶಕ್ಕೆ ಪಡೆದಿದ್ದಾರೆ. ಬಳಿಕ ಆತನನ್ನು ಬಳಿಯಿದ್ದ ಚೀಲವನ್ನು ಪರಿಶೀಲಿಸಿದಾಗ ನಿಷೇಧಿತ ಮಾದಕವಸ್ತು ಪತ್ತೆಯಾಗಿದೆ. ಬಳಿಕ ಆರೋಪಿಯನ್ನು ಯಶವಂತಪುರ ಆರ್‌ಪಿಎಫ್ ಘಟಕಕ್ಕೆ ಕರೆತಂದು ವಿಚಾರಣೆ ಮಾಡಿದಾಗ ಅಕ್ರಮವಾಗಿ ಮಾದಕವಸ್ತು ಸಾಗಣೆಯನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ರೈಲ್ವೆ ಪೊಲೀಸರ ವಶಕ್ಕೆ ನೀಡಲಾಗಿದೆ.
ಸ್ವಿಗ್ಗಿ ಬಾಯ್ಸ್ ಮೂಲಕ ಡ್ರಗ್ಸ್ ಸಪ್ಲೈ, ಎನ್‌ಸಿಬಿಯಿಂದ ಸಿನಿಮೀಯ ಕಾರ್ಯಾಚರಣೆ
480 ಬಾಟಲ್ ವಿಸ್ಕಿ ಜಪ್ತಿ:
ಇದೇ ಪ್ರಶಾಂತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಆರ್‌ಪಿಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈತನ ಬಳಿಯಿದ್ದ ಸುಮಾರು 51 ಸಾವಿರ ಮೌಲ್ಯದ 480 ವಿಸ್ಕಿ ಬಾಟಲಿ ಜಪ್ತಿ ಮಾಡಿದ್ದಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಆರೋಪಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.