ಮತ್ತೆ ಚೀನಾ ಆ್ಯಪ್‌ ಹಾವಳಿ: ಸಾಲ ಕಟ್ಟಿದ್ರೂ ನಿಲ್ಲದ ಕಿರುಕುಳ

By Kannadaprabha NewsFirst Published Oct 3, 2021, 8:19 AM IST
Highlights

*   ಹಣದ ಬಾಬ್ತು ಬಾಕಿ ಇದೆ ಎಂದು ಕರೆ ಮಾಡಿ ನಿಂದನೆ
*   ಸಂಬಂಧಿಕರಿಗೂ ಕರೆ ಮಾಡಿ ಬ್ಲ್ಯಾಕ್‌ಮೇಲ್‌
*   ಮತ್ತೆ ಹೊಸ ರೂಪದಲ್ಲಿ 50 ಚೀನಿ ಆ್ಯಪ್‌ಗಳು
 

ಬೆಂಗಳೂರು(ಅ.03):  ಆನ್‌ಲೈನ್‌ನಲ್ಲಿ (Online) ಮತ್ತೆ ಚೀನಾ ಮೂಲದ ವಂಚಕ ಆ್ಯಪ್‌ಗಳ ಹಾವಳಿ ಶುರುವಾಗಿದ್ದು, ಕಡಿಮೆ ಬಡ್ಡಿಗೆ ಸಾಲದ ನೆಪದಲ್ಲಿ ಇಬ್ಬರಿಗೆ ಕಿರುಕುಳ ನೀಡಿರುವ ಪ್ರತ್ಯೇಕ ಎರಡು ಘಟನೆಗಳು ನಡೆದಿವೆ.

ವೈಯಾಲಿಕಾವಲ್‌ನ ಯಶವಂತ್‌ ಕುಮಾರ್‌ ಹಾಗೂ ವಿವೇಕನಗರದ ಹುಸ್ನಾ ಬೀ ಹಣ ಕಳೆದುಕೊಂಡಿದ್ದು, ಕೇಂದ್ರ ವಿಭಾಗದ ಸಿಇಎನ್‌ ಠಾಣೆಯಲ್ಲಿ ಸಂತ್ರಸ್ತರು ದೂರು ನೀಡಿದ್ದಾರೆ. ಅಂತೆಯೇ ಚೀನಾ ಮೂಲದ ಆ್ಯಪ್‌ಗಳ(China App) ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಇತ್ತೀಚೆಗೆ ‘ಅಸನ್‌ ಲೋನ್‌ ಆ್ಯಪ್‌’ನಲ್ಲಿ .10 ಸಾವಿರ ಸಾಲ(Loan) ಪಡೆದು ಯಶವಂತ್‌ ಹಂತ ಹಂತವಾಗಿ ಹಿಂತಿರುಗಿಸಿದ್ದರು. ಆದರೆ ಸಾಲದ ಬಾಬ್ತು ಇದೆ ಎಂದು ಹೇಳಿ ಆ್ಯಪ್‌ನ ಸಾಲ ವಸೂಲಿ ವಿಭಾಗದ ಸಿಬ್ಬಂದಿ ನಿರಂತವಾಗಿ ಕರೆ ಮಾಡಿ ಹಿಂಸೆ ಕೊಟ್ಟಿದ್ದಾರೆ. ಕರೆ ಮಾಡಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿ ನಿಮ್ಮ ಮನೆ ಬಳಿ ಬಂದು ಗಲಾಟೆ ಮಾಡುವುದಾಗಿ ಸಹ ಧಮ್ಕಿ ಹಾಕಿದ್ದರು. ಈ ಕಿರುಕುಳ ಸಹಿಸಲಾರದೆ ಕೊನೆಗೆ ಸಿಇಎನ್‌ ಠಾಣೆಗೆ ಸಂತ್ರಸ್ತ ದೂರು ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

21000 ಕೋಟಿ ರು. ಚೀನಾ ಆ್ಯಪ್‌ ಸಾಲ ದಂಧೆ ರೂವಾರಿ ಸಿನಿಮೀಯವಾಗಿ ಅರೆಸ್ಟ್‌!

ವಿವೇಕ ನಗರದ ಹುಸ್ನಾ ಬೀ ಸಹ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಕೊರೋನಾ ಸೋಂಕು ವೇಳೆ ಆರ್ಥಿಕ ಸಂಕಷ್ಟದಿಂದ ಚೀನಾ ಮೂಲದ ಆ್ಯಪ್‌ನಲ್ಲಿ .1.80 ಲಕ್ಷ ಸಾಲ ಮಾಡಿದ್ದರು. ಸಕಾಲಕ್ಕೆ ಸಾಲ ಪಾವತಿಸಿಲ್ಲವೆಂದು ಕಾರಣ ನೀಡಿ ಹುಸ್ನಾ ಬೀ ಅವರಿಗೆ ವಿವಿಧ ಮೊಬೈಲ್‌ ಸಂಖ್ಯೆಗಳಿಂದ ಕರೆ ಮಾಡಿ ಬೆದರಿಸಿದ್ದಾರೆ. ಅಲ್ಲದೆ ಸಂತ್ರಸ್ತರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಮೊಬೈಲ್‌ ನಂಬರ್‌ಗಳನ್ನು ಕದ್ದು ಬಳಿಕ ಅವರಿಗೂ ಸಹ ಕರೆ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೆ ಹೊಸ ರೂಪದಲ್ಲಿ 50 ಚೀನಿ ಆ್ಯಪ್‌ಗಳು

ಇತ್ತೀಚೆಗೆ ಸಾಲದ ನೆಪದಲ್ಲಿ ಜನರಿಗೆ ವಂಚಿಸಿದ್ದು(Fraud) ಮಾತ್ರವಲ್ಲದೆ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ 50ಕ್ಕೂ ಹೆಚ್ಚಿನ ಚೀನಾ ಆ್ಯಪ್‌ಗಳ ಮೇಲೆ ಸಿಐಡಿ ನಿಷೇಧ ಹೇರಿತ್ತು. ಇದಾದ ಬಳಿಕ ಮತ್ತೆ ಆನ್‌ಲೈನ್‌ನಲ್ಲಿ ಹೊಸ ರೂಪದಲ್ಲಿ ಚೀನಾ ಆ್ಯಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಚೀನಾ ಸಾಲದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ ನಂಬರ್‌ಗೆ ಬರುವ ಒಟಿಪಿ ನಮೂದಿಸಿದರೆ ಕ್ಷಣಾರ್ಧದಲ್ಲಿ ಗ್ರಾಹಕನ ಖಾತೆಗೆ ಸಾಲದ ಹಣ ಜಮೆಯಾಗಲಿದೆ ಎನ್ನಲಾಗಿದೆ.

ಈಗ ಹೊಸ ರೂಪದಲ್ಲಿ ಅಸನ್‌ ಲೋನ್‌, ಕೊಕೊ ಕ್ಯಾಷ್‌, ಕ್ಯಾಷ್‌ಮನಿ, ಕ್ಯಾಷ್‌ಬೂಸ್ಟ್‌, ಲೋನ್‌ಮಾಲ್‌, ಹಲೋ ಕ್ಯಾಷ್‌, ಮನಿಕ್ಯಾಷ್‌ ಸೇರಿದಂತೆ ಚೀನಾ ಮೂಲದ 50ಕ್ಕೂ ಅಧಿಕ ಸಾಲದ ಆ್ಯಪ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದು ಬಂದಿದೆ.
 

click me!