Karwar: ಕೋಟಿಗಟ್ಟಲೆ ಅಕ್ರಮ ಹಣ ಸಾಗಾಟ: ರಾಜಸ್ಥಾನ ಮೂಲದ ವ್ಯಕ್ತಿಯ ಬಂಧನ

By Govindaraj SFirst Published Jun 9, 2022, 8:07 PM IST
Highlights

ಅದು ಮಹಾರಾಷ್ಟ್ರದ ಮುಂಬೈನಿಂದ ಮಂಗಳೂರಿನತ್ತ ಸಾಗುತ್ತಿದ್ದ ಭಾರೀ ಮೊತ್ತದ ದಾಖಲೆ ರಹಿತ ಹಣ. ಈ ಹಣವನ್ನು ಏಜೆಂಟ್ ಕಳ್ಳರಂತೆ‌ ರೈಲು ಮಾರ್ಗದಲ್ಲಿ ಸಾಗಿಸುವಾಗ ಎಡವಟ್ಟು ಮಾಡ್ಕೊಂಡು ಆರ್‌ಪಿಎಫ್ ಕೈಗೆ ಸಿಕ್ಕಿಬಿದ್ದಿದ್ದಾನೆ. 

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ (ಜೂ.09): ಅದು ಮಹಾರಾಷ್ಟ್ರದ ಮುಂಬೈನಿಂದ ಮಂಗಳೂರಿನತ್ತ ಸಾಗುತ್ತಿದ್ದ ಭಾರೀ ಮೊತ್ತದ ದಾಖಲೆ ರಹಿತ ಹಣ. ಈ ಹಣವನ್ನು ಏಜೆಂಟ್ ಕಳ್ಳರಂತೆ‌ ರೈಲು ಮಾರ್ಗದಲ್ಲಿ ಸಾಗಿಸುವಾಗ ಎಡವಟ್ಟು ಮಾಡ್ಕೊಂಡು ಆರ್‌ಪಿಎಫ್ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಭಾರೀ ಮೊತ್ತದ ಹಣವನ್ನು ನೋಡಿ ಆರ್‌ಪಿಎಫ್ ಸಿಬ್ಬಂದಿ ಬೆಚ್ಚಿ ಬಿದ್ದಿದ್ದು, ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಅಷ್ಟಕ್ಕೂ ಅಲ್ಲಿದ್ದ ಮೊತ್ತವಾದ್ರೂ ಎಷ್ಟು? ಆ ಹಣ ಸೇರಬೇಕಿದ್ದಾದ್ರೂ ಯಾರಿಗೆ? ಈ ಕುರಿತ ಒಂದು ಸ್ಟೋರಿ ಇಲ್ಲಿದೆ. 

ಹೌದು! ಉತ್ತರಕನ್ನಡ ಜಿಲ್ಲೆಯ ಕಾರವಾರ ರೈಲ್ವೇ ಪೊಲೀಸರು ಭಾರೀ ಮೊತ್ತದ ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದಾರೆ. ಖಾಸಗಿ ಜ್ಯುವೆಲ್ಲರಿಗೆ ಸಂಬಂಧಿಸಿದ ಈ ಹಣವನ್ನು ಏಜೆಂಟ್ ಮೂಲಕ ಮುಂಬೈನಿಂದ ಬರುತ್ತಿದ್ದ ಸಿಎಸ್‌‌ಎಂಟಿ ರೈಲಿನ ಮೂಲಕ ಮಂಗಳೂರಿಗೆ ಸಾಗುತ್ತಿದ್ದಾಗ ರೈಲ್ವೇ ಪೊಲೀಸರು ದಾಳಿ ನಡೆಸಿ 2 ಕೋಟಿ ರೂ. ನಗದು ಹಾಗೂ ಆರೋಪಿ ರಾಜಸ್ಥಾನ ಮೂಲದ ವ್ಯಕ್ತಿ ಮನೋಹರ್ ಸಿಂಗ್ ಅಲಿಯಾಸ್ ಚೇನ್ ಸಿಂಗ್‌(22)ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಾಮಾನ್ಯ ಬ್ಯಾಗ್‌ನಲ್ಲಿ ಇಷ್ಟೊಂದು ಬೃಹತ್ ಮೊತ್ತವನ್ನು ಕಂಡು ಪ್ರಾರಂಭದಲ್ಲಿ ಇದು ಚುನಾವಣೆಗೆ ಸಂಬಂಧಪಟ್ಟ ಹಣ ಆಗಿರಬಹುದೇ ಎಂಬ ಸಂಶಯ ಅಧಿಕಾರಿಗಳಿಗೆ ಮೂಡಿತ್ತಾದ್ರೂ, ನಂತರ ತನಿಖೆಯ ಮೂಲಕ ಆರೋಪಿಯಿಂದ ಬಾಯಿ ಬಿಡಿಸಿದಾಗ ಇದು ಖ್ಯಾತ ಜ್ಯುವೆಲ್ಲರಿಯೊಂದಕ್ಕೆ ಸೇರಿದ ಅಕ್ರಮ ಹಣ ಎಂದು ತಿಳಿದುಬಂದಿದೆ. 

Uttara Kannada; ರಾಜ್ಯಕ್ಕೆ ಮಾದರಿ ಈ ಕೃಷಿ ಪಾಠದ ಶಾಲೆ!

ರಾಜ್ಯದಾದ್ಯಂತ ಖ್ಯಾತಿ ಪಡೆದಿರುವ ಖಾಸಗಿ ಜ್ಯುವೆಲ್ಲರಿ ಸಂಸ್ಥೆಯೊಂದು ತನ್ನ ಅಕ್ರಮ ಹಣವನ್ನು ಕದ್ದು ಮುಚ್ಚಿ ಸಾಗಿಸಲು ಯತ್ನಿಸಿರುವುದು ಈ ಪ್ರಕರಣದ ಮೂಲಕ ಬೆಳಕಿಗೆ ಬಂದಿದ್ದು, ನಗದು ಹಣವನ್ನು ರೈಲ್ವೇ ಪೊಲೀಸರಿಂದ ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿರುವ ಕಾರವಾರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಇನ್ನು ಆರೋಪಿ ರಾಜಸ್ಥಾನ ಮೂಲದ ವ್ಯಕ್ತಿ ಮನೋಹರ್ ಸಿಂಗ್ ಅಲಿಯಾಸ್ ಚೇನ್ ಸಿಂಗ್‌‌ ಎಂಬಾತ ಮುಂಬೈ ಮೂಲದ ಭರತ್ ಭಾಯ್ ಅಲಿಯಾಸ್ ಪಿಂಟು ಎಂಬಾತನ ಅಡಿಯಲ್ಲಿ ತಿಂಗಳ ಖರ್ಚು 15,000ರೂ. ಗಾಗಿ ಕೆಲಸ ಮಾಡುತ್ತಿದ್ದ. ಭರತ್ ಭಾಯ್ ಸೂಚನೆ ಮೇರೆಗೆ ಮಂಗಳೂರಿನ ರಾಜು ಎಂಬಾತನಿಗೆ ಆರೋಪಿ ಮನೋಹರ್ ಸಿಂಗ್ ಹಣ ಹಸ್ತಾಂತರಿಸಬೇಕಿತ್ತು. 

ಆದರೆ, ರೈಲಿನಲ್ಲಿ ಬರೋವಾಗಲೇ ಆರೋಪಿ ಎಡವಟ್ಟು ಮಾಡಿಕೊಂಡಿದ್ದ. ಈ ಎಡವಟ್ಟಿನಿಂದಲೇ ಸಿಕ್ಕಿಬಿದ್ದು ಆರೋಪಿ ಬಂಧನಕ್ಕೊಳಗಾಗಿದ್ದಲ್ಲದೇ, ಈತನ ಹಿಂದಿರುವ ಜಾಲಗಳ ಮಾಹಿತಿಯೂ ಹೊರಕ್ಕೆ ಬಿದ್ದಿದೆ. ಅಂದಹಾಗೆ, ಬೃಹತ್ ಪ್ರಮಾಣದ ಅಕ್ರಮ ಹಣದೊಂದಿಗೆ ಆರೋಪಿ ಸೆರೆ ಸಿಕ್ಕಿರೋ ಕಥೆ ಬಹಳ ಇಂಟರೆಸ್ಟಿಂಗ್ ಆಗಿದೆ. ರೈಲು ಸಂಖ್ಯೆ 12133 ಸಿಎಸ್‌‌ಎಂಟಿ- ಮಂಗಳೂರು ಜಂಕ್ಷನ್ ರೈಲಿನಲ್ಲಿ ಟಿಕೆಟ್ ಖರೀದಿಸದೇ ಖಾಕಿ ಬಣ್ಣದ ಬಟ್ಟೆ ಧರಿಸಿಕೊಂಡು ಆರೋಪಿ ಮನೋಹರ್ ಸಿಂಗ್ ಸಿಎಸ್‌ಎಂಟಿ ರೈಲಿನ ಎಸಿ ಕೋಚ್‌ನಲ್ಲಿ ಕುಳಿತುಕೊಂಡಿದ್ದ. ಟಿಕೆಟ್ ಪರಿಶೀಲನೆಗೆ ಬಂದಾಗ ಈತ ಟಿಕೆಟ್ ಪರಿವೀಕ್ಷಕನ ಜತೆ ಜಗಳವಾಡಿದ್ದಲ್ಲದೇ, ಚೀಫ್ ವಿಜಿಲೆನ್ಸ್ ಇನ್ಸ್‌ಪೆಕ್ಟರ್ ಬಂದು ಸಂಶಯದ ಮೇಲೆ ಬ್ಯಾಗ್ ಪರಿಶೀಲಿಸಲು ಮುಂದಾದಾಗ ಮತ್ತಷ್ಟು ಕಿರಿಕ್ ಮಾಡಲಾರಂಭಿಸಿದ್ದ. 

ಅದಾಗಲೇ ಕಾರವಾರ ಶಿರವಾಡದ ರೈಲ್ವೇ ಸ್ಟೇಷನ್ ಆಗಮಿಸಿದ್ದರಿಂದ ಆರೋಪಿಯನ್ನು ಇಳಿಸಿದ ಚೀಫ್ ವಿಜಿಲೆನ್ಸ್ ಇನ್ಸ್‌ಪೆಕ್ಟರ್, ಟಿಕೆಟ್ ಖರೀದಿಸದ್ದಕ್ಕೆ 1060ರೂ. ದಂಡ ವಿಧಿಸಿ ಆತನನ್ನು ಆರ್‌ಪಿಎಫ್ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಯಾವಾಗ ಆರ್‌ಪಿಎಫ್ ಅಧಿಕಾರಿ ಹಾಗೂ ಸಿಬ್ಬಂದಿ ಆತನನ್ನು ತನಿಖೆಗೆ ಒಳಪಡಿಸಿ ಬ್ಯಾಗ್ ತೆರೆದಿದ್ರೋ ಆಗ ಕಂತೆ ಕಂತೆ ಹಣವನ್ನು ನೋಡಿ ಶಾಕ್‌ಗೆ ಒಳಗಾಗಿದ್ದಾರೆ. ಕೂಡಲೇ ಆರ್‌ಪಿಎಫ್ ಇನ್ಸ್‌ಪೆಕ್ಟರ್ ತನ್ನೆಲ್ಲಾ ಸಿಬ್ಬಂದಿಯನ್ನು ಕರೆಯಿಸಿ ಬ್ಯಾಗ್‌ನಲ್ಲಿದ್ದ ಹಣ ಲೆಕ್ಕ ಮಾಡಿಸಿದ್ದು, ಈ ವೇಳೆ ಪ್ರತಿಯೊಂದು ಕಂತೆಯಲ್ಲಿ 20ಲಕ್ಷ ರೂ.ನಂತೆ ಒಟ್ಟು 2 ಕೋಟಿ ರೂ. ಹಣ ಪತ್ತೆಯಾಗಿದೆ. 

ನಂತರ ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಈ ಹಣ ಎಲ್ಲಿಂದ ಬಂತು ಹಾಗೂ ಎಲ್ಲಿಗೆ ಹೋಗಬೇಕೆಂದು ಪೂರ್ತಿಯಾಗಿ ಬಾಯಿಬಿಟ್ಟಿದ್ದಾನೆ. ನಂತರ ಆರ್‌ಪಿಎಫ್ ಪೊಲೀಸರು ಕಾರವಾರ ಗ್ರಾಮೀಣ ಠಾಣಾ ಪೊಲೀಸರಿಗೆ ಆರೋಪಿಯನ್ನು ಹಸ್ತಾಂತರಿಸಿದ್ದು, 2 ಕೋಟಿ ರೂ.ವನ್ನು ಆದಾಯ ತೆರಿಗೆ ಇಲಾಖೆಯ ವಶಕ್ಕೆ ನೀಡಲಾಗಿದೆ. ಈ ಪ್ರಕರಣ ಮೂಲಕ ಅಕ್ರಮ ಹಣ ಹಾಗೂ ಹವಾಲಾ ಹಣ ಸಾಗಾಟ ಮಾಡೋ ಜಾಲದ ಕೈವಾಡವೂ ಬೆಳಕಿಗೆ ಬಂದಿದ್ದು, ಪೊಲೀಸ್ ಇಲಾಖೆ ಹಾಗೂ ಆದಾಯ ತೆರಿಗೆ ಇಲಾಖೆ ಜಾಲದ ಪತ್ತೆ ಹಾಗೂ ಹಣ ಮಾಲಕರ ಪತ್ತೆಗೆ ಮತ್ತಷ್ಟು ತನಿಖೆ ಮುಂದುವರಿಸಿದೆ. 

ಅಂಕೋಲಾ- ಹುಬ್ಬಳ್ಳಿ ರೈಲು ಮಾರ್ಗ: ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆಯೇ ಯೋಜನೆ?

ಉತ್ತರಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಸ್ಯಾಟಲೈಟ್ ಕರೆಯ ಲೊಕೇಷನ್‌ಗಳು ಪತ್ತೆ ಪ್ರಕರಣ ಹಾಗೂ ಇದೀಗ ಭಾರೀ ಪ್ರಮಾಣದ ಅಕ್ರಮ ಹಣ ಸಾಗಾಟ ಪತ್ತೆ ಪ್ರಕರಣಗಳು ಜನಸಾಮಾನ್ಯರನ್ನು ಭೀತಿಗೊಳಗಾಗಿಸಿದ್ದು, ಶೀಘ್ರದಲ್ಲಿ ಇಂತಹ ಅಕ್ರಮ ಹಾಗೂ ಸಮಾಜಘಾತುಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಜನರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಅಕ್ರಮ ಹಣ ಸಾಗಾಟ ಮಾಡೋ ಏಜೆಂಟ್‌ನ ಸಣ್ಣ ಎಡವಟ್ಟಿನಿಂದಾಗಿ ಬೃಹತ್ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡ ಮೊತ್ತದ ಹಣವನ್ನು ವಶಕ್ಕೆ ಪಡೆಯಲು ರೈಲ್ವೇ ಪೊಲೀಸರು ಸಫಲರಾಗಿದ್ದಾರೆ. ಈ ಪ್ರಕರಣವನ್ನು ಅರ್ಧದಲ್ಲೇ ಬಿಡದೆ ಇದರ ಹಿಂದೆ ಯಾರೆಲ್ಲಾ ಇದ್ದಾರೋ ಅವರೆಲ್ಲರನ್ನೂ ಹಿಡಿದು ಪೊಲೀಸರು ಸೆರೆಮನೆಗೆ ತಳ್ಳಬೇಕಿದೆ. ಈ ಮೂಲಕ ಅಕ್ರಮ ಚಟುಚಟಿಕೆಗಳಿಗೆ ಪೊಲೀಸರು ಸೇರಿದಂತೆ ಎಲ್ಲಾ ಇಲಾಖೆಗಳು ಕಡಿವಾಣ ಹಾಕಬೇಕಿದೆ. 

click me!