ಗಡಿಜಿಲ್ಲೆ ಬೆಳಗಾವಿ ಪಾಲಿಗೆ ಮಹಾಲಯ ಅಮವಾಸ್ಯೆ ಕರಾಳ ಅಮಾವಾಸ್ಯೆ ಆಗಿದೆ. ಬೆಳಗಾವಿ ಜಿಲ್ಲೆಯ ವಿವಿಧೆಡೆ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಉಸಿರು ಚೆಲ್ಲಿದ್ದಾರೆ.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಸೆ.25): ಗಡಿಜಿಲ್ಲೆ ಬೆಳಗಾವಿ ಪಾಲಿಗೆ ಮಹಾಲಯ ಅಮವಾಸ್ಯೆ ಕರಾಳ ಅಮಾವಾಸ್ಯೆ ಆಗಿದೆ. ಬೆಳಗಾವಿ ಜಿಲ್ಲೆಯ ವಿವಿಧೆಡೆ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಉಸಿರು ಚೆಲ್ಲಿದ್ದಾರೆ. ಅದರಲ್ಲೂ ರಾಯಬಾಗ ತಾಲೂಕಿನ ಕುಡಚಿ ಠಾಣೆ ಎಎಸ್ಐ ಕುಟುಂಬದ ನೋವು ಹೇಳತೀರದಾಗಿದೆ. ಬೆಳಗಾವಿಗರ ಪಾಲಿಗೆ ಇಂದಿನ ಮಹಾಲಯ ಅಮಾವಾಸ್ಯೆ ಕರಾಳವಾಗಿದೆ. ಎರಡು ಪ್ರತ್ಯೇಕ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ರೆ ಐವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್ ಬಳಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಕಾರು ಹಾಗೂ ಬೈಕ್‌ಗೆ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ ಓರ್ವ ವೃದ್ಧೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಠಾಣೆ ಎಎಸ್ಐ ವೈ.ಎಂ.ಹಲಕಿರವರ ಪತ್ನಿ, ಪುತ್ರಿ ಸೇರಿ ಕುಟುಂಬಸ್ಥರು ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬೆಳಗಾವಿಯಿಂದ ಜಮಖಂಡಿಗೆ ತೆರಳುತ್ತಿದ್ದರು. ಬಾಚಿ - ರಾಯಚೂರು ರಾಜ್ಯ ಹೆದ್ದಾರಿ ಬೆಳಗಾವಿ ಬಾಗಲಕೋಟ ರಸ್ತೆ ಮಾರ್ಗವಾಗಿ ಜಮಖಂಡಿಗೆ ತೆರಳುತ್ತಿದ್ದಾಗ ಬೂದಿಗೊಪ್ಪ ಕ್ರಾಸ್ ಬಳಿ ಯಮನಂತೆ ಬಂದ ಲಾರಿ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿಗೆ ಡಿಕ್ಕಿ ಹೊಡೆದ ಬಳಿಕ ಕಾರಿನ ಹಿಂಬದಿ ಬರುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ.
undefined
ಕಾರಿನಲ್ಲಿದ್ದ ಎಎಸ್ಐ ವೈ.ಎಂ.ಹಲಕಿ ಪತ್ನಿ ರುಕ್ಮಿಣಿ (48), ಪುತ್ರಿ ಅಕ್ಷತಾ ಹಲಕಿ(22) ಹಾಗೂ ಕಾರು ಚಾಲಕ ನಿಖಿಲ್ ಕದಂ(24) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನ ಹಿಂಬದಿ ಬೈಕ್ ಮೇಲೆ ಬರುತ್ತಿದ್ದ ಮೂವರ ಪೈಕಿ 65 ವರ್ಷದ ವೃದ್ಧೆ ಹನುಮವ್ವ ಚಿಪ್ಪಲಕಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್‌ಪಿ ಡಾ.ಸಂಜೀವ್ ಪಾಟೀಲ್, ಎಎಸ್‌ಪಿ ಮಹಾನಿಂಗ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯಪುರದಲ್ಲಿ ಮಕ್ಕಳ ಕಳ್ಳರ ವದಂತಿ, ಅಮಾಯಕರ ಮೇಲೆ ಹಲ್ಲೆ!
ಇನ್ನು ಸಿಮೆಂಟ್ ಸಾಗಿಸುತ್ತಿದ್ದ ಲಾರಿಯ ರಭಸಕ್ಕೆ ಸ್ವಿಫ್ಟ್ ಡಿಸೈರ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಅಪಘಾತ ಹಿನ್ನೆಲೆ ಸುಮಾರು ಅರ್ಧ ಗಂಟೆ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸ್ಥಳದಲ್ಲಿ ಹೆಚ್ಚಿನ ಜನ ಜಮಾವಣೆಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಬೈಲಹೊಂಗಲ, ಮುರಗೋಡ, ನೇಸರಗಿ ಪೊಲೀಸ್ ಠಾಣೆ, ಯರಗಟ್ಟಿ ಉಪಠಾಣೆ ಪೊಲೀಸರು ಜೆಸಿಬಿ ಮೂಲಕ ಅಪಘಾತವಾದ ಕಾರು ತೆರವುಗೊಳಿಸಿದರು. ಬಳಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇನ್ನು ಬೈಕ್ ಮೇಲೆ ತೆರಳುತ್ತಿದ್ದ ಇಬ್ಬರು, ಕಾರಿನಲ್ಲಿದ್ದ ಓರ್ವ ಬಾಲಕನಿಗೆ ಗಂಭೀರ ಗಾಯವಾಗಿದ್ದು ಯರಗಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತವೆಸಗಿದ ಲಾರಿ ಚಾಲಕನ ವಶಕ್ಕೆ ಪಡೆದು ಲಾರಿ ಜಪ್ತಿ ಮಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Chikkamagaluru; ನೀರಿನ ತೊಟ್ಟಿಯಲ್ಲಿ ಬಿದ್ದು 11 ತಿಂಗಳ ಮಗು ಸಾವು
ಬೆಳಗಾವಿ ತಾಲೂಕು ಉಕ್ಕಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದು 30 ವರ್ಷದ ಮೀರಜ್ ಮೂಲದ ಸುಲ್ತಾನ್ ಖಾಜಿ ಮೃತಪಟ್ಟಿದ್ದಾನೆ. ಮಹಾರಾಷ್ಟ್ರದ ಮಿರಜ್‌ನಿಂದ ಬೆಳಗಾವಿಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ಸುಲ್ತಾನ್ ಖಾಜಿ ಮೃತಪಟ್ಟಿದ್ದು, ಇಬ್ಬರಿಗೆ ಗಾಯಗೊಂಡಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಅಪಘಾತದಲ್ಲಿ ಪತ್ನಿ, ಪುತ್ರಿ ಮೃತಪಟ್ಟ ವಿಷಯ ತಿಳಿದು ಕುಡಚಿಯಿಂದ ಆಗಮಿಸಿದ ಎಎಸ್ಐ ವೈ.ಎಂ.ಹಲಕಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.