Bengaluru: ಪ್ರೇಯಸಿ ಜತೆಗಿದ್ದಾಗ ಬಂದ ಪತಿ: ಎಚ್‌ಎಎಲ್‌ಗೆ ನುಗ್ಗಿದ ಪ್ರಿಯಕರ

By Govindaraj SFirst Published Nov 17, 2022, 10:48 AM IST
Highlights

ತನ್ನ ಪ್ರೇಯಸಿ ಜತೆ ಏಕಾಂತದಲ್ಲಿದ್ದಾಗ ದಿಢೀರನೇ ಬಂದ ಆಕೆಯ ಪತಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕ ಪ್ರವೇಶ ನಿಷೇಧಿತ ಎಚ್‌ಎಎಲ್‌ ವಿಮಾನ ನಿಲ್ದಾಣ ಆವರಣಕ್ಕೆ ನುಗ್ಗಿ ವ್ಯಕ್ತಿಯೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ ಸ್ವಾರಸ್ಯಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಬೆಂಗಳೂರು (ನ.17): ತನ್ನ ಪ್ರೇಯಸಿ ಜತೆ ಏಕಾಂತದಲ್ಲಿದ್ದಾಗ ದಿಢೀರನೇ ಬಂದ ಆಕೆಯ ಪತಿಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕ ಪ್ರವೇಶ ನಿಷೇಧಿತ ಎಚ್‌ಎಎಲ್‌ ವಿಮಾನ ನಿಲ್ದಾಣ ಆವರಣಕ್ಕೆ ನುಗ್ಗಿ ವ್ಯಕ್ತಿಯೊಬ್ಬ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ ಸ್ವಾರಸ್ಯಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಮುಕುಂದ ಖೌಂದ್‌ (36) ಬಂಧಿತನಾಗಿದ್ದು, ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ಪ್ರಧಾನಿ ಮಂತ್ರಿಗಳ ಆಗಮಿಸಿದ ಹಿಂದಿನ ದಿನ ಈ ಘಟನೆ ನಡೆದಿದೆ. ಆದರೆ ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ವೇಳೆ ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ವೈಟ್‌ಫೀಲ್ಡ್‌ ಡಿಸಿಪಿ ಎಸ್‌.ಗಿರೀಶ್‌ ಸ್ಪಷ್ಟಪಡಿಸಿದ್ದಾರೆ.

ಎಚ್‌ಎಎಲ್‌ ಸಮೀಪದ ಯಮಲೂರಿನಲ್ಲಿ ಬಿಪುಲ್‌ ದೌಲಿ ಹಾಗೂ ಪೂರ್ವಿ ದೌಲಿ ದಂಪತಿ ವಾಸವಾಗಿದ್ದರು. ಆರೋಪಿ ತನ್ನ ಪ್ರಿಯತಮೆ ಪೂರ್ವಿ ಭೇಟಿಗೆ ನ.9ರಂದು ಅಸ್ಸಾಂ ನಿಂದ ಆಗಮಿಸಿ ಆಕೆಯ ಮನೆಯಲ್ಲಿದ್ದ. ಆ ಸಮಯದಲ್ಲೇ ಆಕೆಯ ಪತಿ ಮನೆಗೆ ಬಂದಿದ್ದಾನೆ. ಈ ಅನಿರೀಕ್ಷಿತ ಆಗಮನದಿಂದ ಭಯಗೊಂಡ ಆತ, ಪ್ರಿಯತಮೆ ಪತಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಕುಡಿದ ಮತ್ತಿನಲ್ಲಿದ್ದ ಇಬ್ಬರ ಮಧ್ಯೆ ಜಗಳವಾಗಿದೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಯಮಲೂರಿನ ಹತ್ತಿರದ ಎಚ್‌ಎಎಲ್‌ ವಿಮಾನ ನಿಲ್ದಾಣದ ಆವರಣದ ಗೋಡೆ ಜಿಗಿದು ನುಗ್ಗಿದ್ದಾನೆ.

ಟಿಪ್ಪು ನಿಜಕನಸುಗಳು ಪುಸ್ತಕ ಬಿಡುಗಡೆ: ಲೇಖಕ ರೋಹಿತ್ ಚಕ್ರತೀರ್ಥರಿಗೆ ಬೆದರಿಕೆ ಕರೆ

ಎಚ್‌ಎಎಲ್‌ ವಿಮಾನ ನಿಲ್ದಾಣದ ಸೇವಾ ಕೇಂದ್ರದೊಳಗೆ ರಾತ್ರಿ 12.30ಕ್ಕೆ ಅತಿಕ್ರಮ ಪ್ರವೇಶಿಸಿ ಟ್ರಾಲಿಗೇಟ್‌ ಬಳಿ ಅಳವಡಿಸಲಾಗಿರುವ ಸೌರ ಫಲಕಗಳ ಅಡಿಯಲ್ಲಿ ಅಡಗಿಕೊಳ್ಳಲು ಯತ್ನಿಸುತ್ತಿದ್ದ. ಆಗ ಆತನನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೆಂಪಾಪುರ ರಸ್ತೆಯ ಶಿವ ದೇವಸ್ಥಾನದ ಎದುರಿನ ವಾಚ್‌ ಟವರ್‌ ಸಂಖ್ಯೆ 3ರ ಬಳಿ ವಿಮಾನ ನಿಲ್ದಾಣದ ಕಾಂಪೌಂಡ್‌ ಜಿಗಿಯಲು ಯತ್ನಿಸಿ ಆತ ವಿಫಲವಾಗಿದ್ದ. ಬಳಿಕ ಟ್ರಾಲಿ ಗೇಟ್‌ ಬಳಿ ಸುತ್ತುವರೆದ ಗೋಡೆಯನ್ನೇರಿ ಎಎಚ್‌ಎಎಲ್‌ ಆವರಣವನ್ನು ಆತ ಪ್ರವೇಶಿಸಿದ್ದ. ಕೊನೆಗೆ ವಿಚಾರಣೆ ವೇಳೆ ಮೊದಲು ಕಳ್ಳತನ್ಕಕಾಗಿ ಎಚ್‌ಎಎಲ್‌ ಆವರಣ ಪ್ರವೇಶಿಸಿದ್ದಾಗಿ ಹೇಳಿದ್ದ ಆತ, ಬಳಿಕ ತೀವ್ರವಾಗಿ ಪ್ರಶ್ನಿಸಿದಾಗ ಸತ್ಯ ಸಂಗತಿ ಹೊರ ಹಾಕಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಬೆಳಗಾವಿ: ಆಶ್ರಯ ನೀಡಿದ್ದ ಅಜ್ಜಿಯನ್ನೇ ಕೊಂದಿದ್ದ ಹಂತಕರ ಹೆಡೆಮುರಿ ಕಟ್ಟಿದ ಪೊಲೀಸರು..!

ಪ್ರಧಾನ ಮಂತ್ರಿಗಳ ಭೇಟಿ ವೇಳೆ ಯಾವುದೇ ಭದ್ರತಾ ವೈಫಲ್ಯವಾಗಿಲ್ಲ. ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ.
-ಎಸ್‌.ಗಿರೀಶ್‌, ಡಿಸಿಪಿ, ವೈಟ್‌ಫೀಲ್ಡ್‌ ವಿಭಾಗ.

click me!