ಬೆಂಗಳೂರು: ಮಾಜಿ ಪ್ರೇಮಿಯ ಮೊಬೈಲ್‌ ಸುಲಿಗೆಗೆ ಲೇಡಿ ಸುಪಾರಿ..!

By Kannadaprabha NewsFirst Published Sep 29, 2024, 5:15 AM IST
Highlights

ವಂಶಿಕೃಷ್ಣ ಮೊಬೈಲ್‌ನಲ್ಲಿ ತನ್ನ ಖಾಸಗಿ ವಿಡಿಯೋಗಳು ಹಾಗೂ ಫೋಟೋಗಳು ಇರುವ ಬಗ್ಗೆ ಅನುಮಾನಗೊಂಡಿದ್ದ ಶ್ರುತಿ, ಮುಂದೆ ತೊಂದರೆಯಾಗಲಿದೆ ಎಂದು ಭಾವಿಸಿದ್ದಳು. ಹೇಗಾದರೂ ಮಾಡಿ ಆತನ ಮೊಬೈಲ್ ಪಡೆದು ಪರಿಶೀಲಿಸಲು ಆಲೋಚಿಸಿದ್ದಳು. ಅದಕ್ಕಾಗಿ ತನಗೆ ಪರಿಚಯವಿದ್ದ ಮನೋಜ್ ಕುಮಾರ್‌ನನ್ನು ಸಂಪರ್ಕಿಸಿ, ವಂಶಿಕೃಷ್ಣನ ಮೊಬೈಲ್ ಸುಲಿಗೆ ಮಾಡಲು 1.15 ಲಕ್ಷಕ್ಕೆ ಸುಪಾರಿ ನೀಡಿದ್ದಳು. 
 

ಬೆಂಗಳೂರು(ಸೆ.29):  ಮೊಬೈಲ್‌ನಲ್ಲಿ ಖಾಸಗಿ ಕ್ಷಣದ ವಿಡಿಯೋಗಳು ಹಾಗೂ ಫೋಟೋಗಳಿರುವ ಬಗ್ಗೆ ಅನುಮಾನ ಗೊಂಡು ಸಿನಿಮೀಯ ಶೈಲಿಯಲ್ಲಿ ಸುಪಾರಿ ನೀಡಿ ಮಾಜಿ ಪ್ರಿಯಕರನ ಮೊಬೈಲ್ ಸುಲಿಗೆ ಮಾಡಿಸಿದ್ದ ಯುವತಿ ಸೇರಿ ಐವರು ಆರೋಪಿಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಕೊಡತಿ ನಿವಾಸಿ ಪಿ.ಶ್ರುತಿ (29) ಸೇರಿದಂತೆ ಸುಪಾರಿ ಪಡೆದುಕೊಂಡಿದ್ದ ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ಮನೋಜ್ ಕುಮಾರ್ (25), ಸುರೇಶ್ ಕುಮಾರ್ (26), ಹೊನ್ನಪ್ಪ (25) ಹಾಗೂ ವೆಂಕಟೇಶ್ (27) ಬಂಧಿತರು. ಸಿಂಗಸಂದ್ರದ ಎಇಸಿಎಸ್ ಲೇಔಟ್ ನಿವಾಸಿ ದೂಂಪಾ ವಂಶಿಕೃಷ್ಣ ರೆಡ್ಡಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. 

Latest Videos

ಬೆಂಗಳೂರು: ಇ.ಡಿ ಹೆಸರಲ್ಲಿ ಜಿಎಸ್‌ಟಿ ಸಿಬ್ಬಂದಿ ನಕಲಿ ರೇಡ್‌, 1.5 ಕೋಟಿ ಸುಲಿಗೆ..!

ಪ್ರಕರಣದ ವಿವರ: 

ದೂರುದಾರ ಬಡಿತಾ ಮೂಲದ ವಂಶಿಕೃಷ್ಣ ರೆಡ್ಡಿ ಮತ್ತು ತಮಿಳುನಾಡು ಮೂಲದ ಆರೋಪಿ ಶ್ರುತಿ ನಗರದ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2 ವರ್ಷಗಳಿಂದ ಪ್ರೀತಿಸುತ್ತಿದ್ದು, ಕುಟುಂಬದವರ ಅನುಮತಿ ಪಡೆದು ಮದುವೆಯಾಗಲು ನಿರ್ಧರಿಸಿದ್ದರು. ಈ ನಡುವೆ ಶ್ರುತಿ ತನಗೆ ಕೆಲ ವರ್ಷಗಳ ಹಿಂದೆ ಬೇರೊಬ್ಬ ಯುವಕನ ಜತೆಗೆ ಸಂಬಂಧ ಇದ್ದ ವಿಚಾರವನ್ನು ಹೇಳಿಕೊಂಡಿದ್ದಳು. ಇದರಿಂದ ಅಸಮಾಧಾನಗೊಂಡ ವಂಶಿಕೃಷ್ಣ, ಶ್ರುತಿ ಯನ್ನು ಮದುವೆಯಾಗಲು ನಿರಾಕರಿಸಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿ ಕೆಲ ತಿಂಗಳಿಂದ ದೂರವಾಗಿದ್ದರು.

ಮೊಬೈಲ್ ಸುಲಿಗೆಗೆ ಸುಪಾರಿ: 

ಆದರೆ, ವಂಶಿಕೃಷ್ಣ ಮೊಬೈಲ್‌ನಲ್ಲಿ ತನ್ನ ಖಾಸಗಿ ವಿಡಿಯೋಗಳು ಹಾಗೂ ಫೋಟೋ ಗಳು ಇರುವ ಬಗ್ಗೆ ಅನುಮಾನಗೊಂಡಿದ್ದ ಶ್ರುತಿ, ಮುಂದೆ ತೊಂದರೆಯಾಗಲಿದೆ ಎಂದು ಭಾವಿಸಿದ್ದಳು. ಹೇಗಾದರೂ ಮಾಡಿ ಆತನ ಮೊಬೈಲ್ ಪಡೆದು ಪರಿಶೀಲಿಸಲು ಆಲೋಚಿಸಿದ್ದಳು. ಅದಕ್ಕಾಗಿ ತನಗೆ ಪರಿಚಯವಿದ್ದ ಮನೋಜ್ ಕುಮಾರ್‌ನನ್ನು ಸಂಪರ್ಕಿಸಿ, ವಂಶಿಕೃಷ್ಣನ ಮೊಬೈಲ್ ಸುಲಿಗೆ ಮಾಡಲು 1.15 ಲಕ್ಷಕ್ಕೆ ಸುಪಾರಿ ನೀಡಿದ್ದಳು. ಅದರಂತೆ ಮನೋಜ್ ಹಾಗೂ ಆತನ ಮೂವರು ಸ್ನೇಹಿತರು ಗ್ಯಾಂಗ್ ಕಟ್ಟಿಕೊಂಡು ಮೊಬೈಲ್ ಸುಲಿಗೆಗೆ ಯೋಜನೆ ರೂಪಿಸಿದ್ದರು. 

ಇಬ್ಬರ ಮೊಬೈಲ್ ಸುಲಿಗೆ: 

ಆರೋಪಿ ಶ್ರುತಿ, ಸೆ.20ರಂದು ವಂಶಿಕೃಷ್ಣನ ಸಂಪರ್ಕಿಸಿ ಮಾತನಾಡಲು ಭೋಗನಹಳ್ಳಿಯ ಗುರು ಸ್ಪೋರ್ಟ್ಸ್ ಸಮೀಪದ ಪಾರ್ಕಿಂಗ್ ಸ್ಥಳಕ್ಕೆ ಕರೆದಿದ್ದಳು. ಸಂಜೆ ವಂಶಿಕೃಷ್ಣ ಮತ್ತು ಶ್ರ ಭೇಟಿಯಾಗಿದ್ದಾರೆ. ಬಳಿಕ ರಾತ್ರಿ 8.15ಕ್ಕೆ ಮನೆಗೆ ತೆರಳಲು ಇಬ್ಬರು ದ್ವಿಚಕ್ರ ವಾಹನ ಏರ ಹೊರಟ್ಟಿದ್ದಾರೆ. ಗುರು ಸೋರ್ಟ್ ಸಮೀಪದ ವೈ ಜಂಕ್ಷನ್‌ನಲ್ಲಿ ಹೋಗುವಾಗ, ಹಿಂದಿನಿಂದ ಬಂದ ಬಳಿ ಬಣ್ಣದ ಕಾರೊಂದು ಏಕಾಏಕಿ ಬೈಕ್ ಗೆ ಡಿಕ್ಕಿಯಾಗಿದೆ. ಬಳಿಕ ಇಬ್ಬರು ಅಪರಿಚಿತರು ಕಾರಿನಿಂದ ಕೆಳಗೆ ಇಳಿದು ವಂಶಿಕೃಷ್ಣನ ಮೇಲೆ ಹಲ್ಲೆ ಮಾಡಿ, ಮೊಬೈಲ್ ಕಿತ್ತುಕೊಂಡಿದ್ದಾರೆ. ಅಂತೆಯೇ ಶ್ರುತಿಯ ಮೊಬೈಲ್ ಸಹ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ಬಳಿಕ ಶ್ರುತಿ, ಬೆಂಗಳೂರಿನಲ್ಲಿ ಈ ರೀತಿ ಘಟನೆಗಳು ಸಾಮಾನ್ಯ, ಪೊಲೀಸರಿಗೆ ದೂರು ನೀಡುವುದು ಬೇಡ ಎಂದು ಮಾಜಿ ಪ್ರಿಯಕರ ವಂಶಿಕೃಷ್ಣಗೆ ಹೇಳಿದ್ದಾಳೆ. ಆದರೂ ವಂತಿಕೃಷ್ಣ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಕಳ್ಳತನ, ದರೋಡೆ, ಪಿಕ್‌ಪಾಕೆಟ್‌, ಸುಲಿಗೆ ಕಲಿಸಲು ಶುರುವಾಗಿದೆ ಸ್ಕೂಲ್: ಬಾಡಿಗೆಗೂ ಸಿಗ್ತಾರೆ ಪಕ್ಕಾ ಕ್ರಿಮಿನಲ್‌ಗಳು!

ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ ಸಿಕ್ಕಿ ಸುಳಿವಿನ ಮೇರೆಗೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಸುಪಾರಿ ವಿಚಾರ ಬೆಳಕಿಗೆ ಬಂದಿದೆ.

ಮೊಬೈಲ್ ಕೆರೆಗೆ ಎಸೆದರು 

ಆರೋಪಿಗಳು ವಂಶಿಕೃಷ್ಣನ ಮೊಬೈಲ್ ಸುಲಿಗೆ ಬಳಿಕ ಮೊಬೈಲ್ ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ, ಪಾಸ್ ವರ್ಡ್ ಹೊಂದಿಕೆ ಆಗಿಲ್ಲ, ಹೀಗಾಗಿ ಸಿಂಗಸಂದ್ರ ಕೆರೆಯಲ್ಲಿ ವಂಶಿಕೃಷ್ಣನ ಮೊಬೈಲ್ ಎಸೆದು ಪರಾರಿಯಾಗಿದ್ದರು. ಸದ್ಯ ಶ್ರುತಿ ಸೇರಿ ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!