ಕಬ್ಬಿಣ ಕಳ್ಳತನ ಆರೋಪ ಹೊರಿಸಿ ಕಾರ್ಮಿಕನನ್ನು ಹೊಡೆದು ಕೊಂದ ಎಂಜಿನಿಯರ್!

By Kannadaprabha News  |  First Published Aug 3, 2022, 7:41 AM IST

ಕಬ್ಬಿಣ ಕಳ್ಳತನ ಆರೋಪ ಹೊರಿಸಿ ಕಾರ್ಮಿಕನನ್ನು ಹೊಡೆದು ಕೊಲೆ ಮಾಡಿದ  ಸೈಟ್‌ ಎಂಜಿನಿಯರ್‌. ಚಿಕ್ಕಕಲ್ಲಸಂದ್ರ ಬಳಿ ಘಟನೆ. ಇನ್ನೊಂಡೆದೆ ಬೆಂಗಳೂರು ಗಾಲ್ಫ್ ಕ್ಲಬ್‌ ಆವರಣದಲ್ಲಿ ಶ್ರೀಗಂಧ ಮರವನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ.


 ಬೆಂಗಳೂರು (ಆ.3): ನಿರ್ಮಾಣ ಹಂತದ ಕಟ್ಟಡದಲ್ಲಿ ಕಬ್ಬಿಣ ಕಳವು ಆರೋಪದ ಮೇರೆಗೆ ಕೂಲಿ ಕೆಲಸಗಾರನ ಮೇಲೆ ಎಂಜಿನಿಯರ್‌ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಟ್ಟಮಡು ನಿವಾಸಿ ಕಾರ್ಮಿಕ ತಂಗರಸನ್‌ (34) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈ ಹತ್ಯೆ ಸಂಬಂಧ ಬನಶಂಕರಿ ನಿವಾಸಿ ಸೈಟ್‌ ಎಂಜಿನಿಯರ್‌ ಭಾರ್ಗವನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಕಲ್ಲಸಂದ್ರ ಬಳಿ ನಿರ್ಮಾಣ ಹಂತದ ವಾಣಿಜ್ಯ ಕಟ್ಟಡದಲ್ಲಿ ತಂಗರಸನ್‌ ಕೆಲಸ ಮಾಡುವಾಗ ಈ ಘಟನೆ ನಡೆದಿದೆ ಎಂದು ಪೊಲೀಸರು  ಮಾಹಿತಿ ನೀಡಿದ್ದಾರೆ. ಮೃತ ತಂಗರಸನ್‌ ಮೂಲತಃ ತಮಿಳುನಾಡು ರಾಜ್ಯದವನಾಗಿದ್ದು, ಹಲವು ದಿನಗಳಿಂದ ತನ್ನ ಕುಟುಂಬದ ಜತೆ ಇಟ್ಟಮಡುವಿನಲ್ಲಿ ನೆಲೆಸಿದ್ದ ಎನ್ನಲಾಗಿದೆ. ಕಳೆದ ಹದಿನೈದು ವರ್ಷಗಳಿಂದ ಗುತ್ತಿಗೆದಾರ ಭಾಸ್ಕರ್‌ ಬಳಿ ಕೆಲಸ ಮಾಡುತ್ತಿದ್ದ ಆತ, ಕೆಲ ದಿನಗಳ ಹಿಂದೆ ಚಿಕ್ಕಕಲ್ಲಸಂದ್ರದ ಅಬ್ಬಯ್ಯ ನಾಯ್ಡು ಸ್ಟುಡಿಯೋ ಬಳಿ ನಿರ್ಮಾಣವಾಗುತ್ತಿದ್ದ ವಾಣಿಜ್ಯ ಕಟ್ಟಡದ ಕಾಮಗಾರಿಗೆ ನಿಯೋಜಿತನಾಗಿದ್ದ. ಇದೇ ಸೈಟ್‌ನಲ್ಲಿ ಭಾರ್ಗವ ಕೂಡ ಕಾರ್ಯನಿರ್ವಹಿಸುತ್ತಿದ್ದ.

ಇತ್ತೀಚೆಗೆ ಕಟ್ಟಡದ ಆವರಣದಲ್ಲಿ 100 ಕೇಜಿ ಕಬ್ಬಿಣ ಕಳ್ಳತನವಾಗಿತ್ತು. ಆದರೆ ಈ ಬಗ್ಗೆ ದೂರು ದಾಖಲಿಸದ ಸೈಟ್‌ ಎಂಜಿನಿಯರ್‌ ಭಾರ್ಗವ, ಜು.29ರಂದು ಕಳ್ಳತನ ಆರೋಪ ಹೊರಿಸಿ ತಂಗರಸನ್‌ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ. ಬಳಿಕ ಆತನ ಕಪಾಳಕ್ಕೆ ಹೊಡೆದ. ಹಲ್ಲೆಗೊಳಗಾಗಿ ಕುಸಿದು ಬಿದ್ದ ತಂಗರಸ್‌ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Tap to resize

Latest Videos

ಈ ಬಗ್ಗೆ ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಮೃತನ ತಂದೆ-ತಾಯಿ ಬಂದಿದ್ದಾರೆ. ನಂತರ ಕೂಡಲೇ ಸುಬ್ರಹ್ಮಣ್ಯ ಠಾಣೆಗೆ ದೂರು ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: ಮೆಡಿಕಲ್‌ ಎಮೆರ್ಜೆನ್ಸಿ ಕಿಟ್‌ನಲ್ಲಿ ಡ್ರಗ್ಸ್‌ ಪೂರೈಕೆ..!

ಗಾಲ್ಫ್ ಕ್ಲಬ್‌ನಲ್ಲಿ ಶ್ರೀಗಂಧ ಕಳವು: ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಸಮೀಪದ ಬೆಂಗಳೂರು ಗಾಲ್ಫ್ ಕ್ಲಬ್‌ ಆವರಣದಲ್ಲಿ ಶ್ರೀಗಂಧ ಮರವನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ನಡೆದಿದೆ. ಭಾನುವಾರ ರಾತ್ರಿ ಈ ಕೃತ್ಯ ನಡೆದಿದ್ದು, ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ಗಾಲ್ಫ್ ಕ್ಲಬ್‌ ಎಸ್ಟೇಟ್‌ ವ್ಯವಸ್ಥಾಪಕ ಬಿ.ಡಿ.ಬೋಪಯ್ಯ ದೂರು ದಾಖಲಿಸಿದ್ದಾರೆ. ಅಂದು ಕ್ಲಬ್‌ಗೆ ರಾತ್ರಿ ರೋಹನ್‌ ಅನ್ವರ್‌ ಹಾಗೂ ಮನೀಶ್‌ ಕೂಜರ್‌ ಭದ್ರತೆಯಲ್ಲಿದ್ದರು. ಆಗ ಕಾವಲುಗಾರರಿಗೆ ತಿಳಿಯದಂತೆ ಒಳ ನುಗ್ಗಿರುವ ಕಿಡಿಗೇಡಿಗಳು, ಕ್ಲಬ್‌ ಆವರಣದಲ್ಲಿ ಬೆಳೆದಿದ್ದ ಸುಮಾರು 6 ಅಡಿ ಎತ್ತರದ ಶ್ರೀಗಂಧದ ಮರವನ್ನು ಕಡಿದು ತುಂಡು ತುಂಡಾಗಿ ಮಾಡಿ ಕಳವು ಮಾಡಿದ್ದಾರೆ. ಮುಂಜಾನೆ ಮರ ಕಳವು ಕೃತ್ಯವು ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಗೇ’ ಡೇಟಿಂಗ್‌ ಆ್ಯಪಲ್ಲಿ ವಿಹಾರಕ್ಕೆ ಕರೆದು ಟೆಕ್ಕಿಯ ಸುಲಿದವರ ಸೆರೆ

ಬಾಡಿಗೆದಾರರಿಂದ ಮನೆ ಕಳವು: ಮನೆಯ ಮಾಲೀಕರು ಇಲ್ಲದ ವೇಳೆಯಲ್ಲಿ ಬಾಡಿಗೆ ಮನೆಯಿಂದ ಚಿನ್ನಾಭರಣ ಕಳವಾಗಿರುವುದಾಗಿ ಮನೆಯ ಮಾಲೀಕ ದೂರು ನೀಡಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ಐಮಂಗಲ ಗ್ರಾಮದಲ್ಲಿ ನಡೆದಿದೆ.

ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ ಗ್ರಾಮದ ನಿವಾಸಿ, ವೃತ್ತಿಯಿಂದ ಚಾಲಕರಾಗಿರುವ ಅನಿಲ್‌ ನಾರೋನ ದೂರುದಾರರು. ಅನಿಲ್‌ ನಾರೋನ ಅವರು ಮನೆಯ ಒಂದು ಭಾಗದ ಮನೆಯನ್ನು ಸುಮಾರು ಎರಡು ತಿಂಗಳ ಹಿಂದೆ ದಂಪತಿಗೆ ಬಾಡಿಗೆಗೆ ನೀಡಿದ್ದರು. ಬಾಡಿಗೆಗೆ ಪಡೆದು ಸುಮಾರು 15 ದಿನದ ಅಂತರದಲ್ಲಿ ಮನೆಯಲ್ಲಿದ್ದ ರು. 5 ಸಾವಿರ ರು. ಕಳವಾಗಿತ್ತು. ಬಾಡಿಗೆದಾರರನ್ನು ಕೇಳಿದಾಗ ಅವರು ಕಳವನ್ನು ನಿರಾಕರಿಸಿದ್ದರು.

ಇದಾದ ಕೆಲವು ದಿನಗಳು ಕಳೆದಂತೆ ಬಾಡಿಗೆದಾರರ ಪತ್ನಿಯನ್ನು ತಮಿಳುನಾಡಿನಲ್ಲಿರುವ ತನ್ನ ಮಾವನ ಮನೆಗೆ ಕಳುಹಿಸಿ ಹಿಂದಿರುಗಿದ್ದಾನೆ. ಜು.31ರಂದು ಅನಿಲ್‌ ನಾರೋನ ಅವರ ಭಾವನ ಮಗನ ಹುಟ್ಟುಹಬ್ಬ ಕಾರ್ಯಕ್ರಮದ ನಿಮಿತ್ತ ಚಿನ್ನಾಭರಣ ಧರಿಸಲು ಮುಂದಾದ ಸಮಯದಲ್ಲಿ ಮನೆಯಲ್ಲಿ ಬೀರುವಿನ ಭಾಗಿಲು ಮುರಿದಿರುವುದು ಬೆಳಕಿಗೆ ಬಂದಿದೆ. ಬೀರುವಿನಲ್ಲಿದ್ದ 20 ಗ್ರಾಂ. ತೂಕದ, ಒಟ್ಟು 1 ಲಕ್ಷ ರು.ಮೌಲ್ಯದ ಚಿನ್ನಾಭರಣ ಕಳವು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮನೆಯ ಮಾಲೀಕರು ಸೋಮವಾರ, ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಗೆ, ಬಾಡಿಗೆದಾರ ದಂಪತಿ ವಿರುದ್ಧ ಕಳವು ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

click me!