* ಉಡುಪಿ ಲವ್ ಜಿಹಾದ್ ಪ್ರಕರಣ
* ಶಿಲ್ಪಾಳ ಪ್ರೀತಿ ಬಿಚ್ಚಿಟ್ಟ ನಂಬರ್ ಗೇಮ್ ರಹಸ್ಯ
* ಶಿಲ್ಪಾಳ ಪ್ರೀತಿಯ ಧ್ಯೋತಕ ಪತ್ರ
ವರದಿ-ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಮೇ.27): ಕುಂದಾಪುರದಲ್ಲಿ ನಡೆದಿರುವ ಲವ್ ಜಿಹಾದ್ ಪ್ರಕರಣ, ಭಜರಂಗದಳದ ಕೆಂಗಣ್ಣಿಗೆ ಗುರಿಯಾಗಿದೆ. 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ವಿಶ್ವಹಿಂದೂ ಪರಿಷತ್-ಬಜರಂಗದಳ ಎಚ್ಚರಿಸಿದೆ.
ಘಟನೆಯ ಕುರಿತು ಮಾತನಾಡಿರುವ ಭಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ಸುನಿಲ್ ಕೆಆರ್, ಸಂತ್ರಸ್ತೆ ಶಿಲ್ಪಾ ದೇವಾಡಿಗ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶಿಲ್ಪಾ ದೇವಾಡಿಗ ಮತಾಂತರಕ್ಕೆ ಒಪ್ಪದೇ ಇದ್ದ ಕಾರಣ ಆಕೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆ. ಕೇವಲ ಮತಾಂತರ ನಿಷೇಧ ಕಾಯ್ದೆ ಜಾರಿಯಾದರೆ ಸಾಲುವುದಿಲ್ಲ. ಲವ್ ಜಿಹಾದ್ ನಿಯಂತ್ರಿಸಲು ಪ್ರತ್ಯೇಕ ಕಾನೂನು ತರುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ. ಮೇ 31 ರಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ಈ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ. ಆರೋಪಿಗಳಾದ ಅಜೀಜ್ ಮತ್ತು ಆತನ ಪತ್ನಿ ಸಲ್ಮಾಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಬಡವರ ಮನೆ ಹುಡುಗಿಗೆ ಮೋಡಿ, ಉಡುಪಿಯಲ್ಲಿ ಲವ್ ಜಿಹಾದ್‌ಗೆ ಯುವತಿ ಬಲಿ?
ಶಿಲ್ಪಾಳ ಪ್ರೀತಿಯ ಧ್ಯೋತಕ ಪತ್ರ- ನಂಬರ್ ಗೇಮ್ ರಹಸ್ಯ
ಅಜೀಜ್ ತನಗೆ ವಂಚಿಸಿರುವ ಬಗ್ಗೆ ಶಿಲ್ಪಾ ಸಹೋದರ ರಾಘವೇಂದ್ರ ಬಳಿ ಕೆಎಂಸಿ ಆಸ್ಪತ್ರೆಯಲ್ಲಿ ಹೇಳಿಕೊಂಡಿದ್ದಳು. ಕಳೆದ ಐದಾರು ವರ್ಷಗಳಿಂದ ಅಜೀಜ್ ನನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದಳು. ನೀನು ನನಗೆ ಬೇಡ ಸತ್ತೇ ಹೋಗು ಎಂದು ಆತ ಬೆದರಿಕೆ ಹಾಕಿದ ನಂತರ ವಿಷ ಸೇವಿಸಿದ್ದಳು. ಇದೀಗ ಶಿಲ್ಪಾ ದೇವಾಡಿಗ ಅಜೀಜ್ ನನ್ನು ಅದೆಷ್ಟು ಪ್ರೀತಿಸುತ್ತಿದ್ದಳು ಅನ್ನುವುದಕ್ಕೆ ಸಾಕ್ಷಿಯಾಗಿ ಪತ್ರವೊಂದು ಲಭ್ಯವಾಗಿದೆ.
ಈ ನಂಬರ್ ಗೇಂ ರಹಸ್ಯ ಪತ್ರ ಶಿಲ್ಪಾಳ ಪ್ರೇಮ ಭಾವನೆಗಳನ್ನು ವ್ಯಕ್ತಪಡಿಸುವಂತೆ ಇದೆ. ಈ ನಂಬರ್ ಗೆ ಇಂತಹಾ ಅರ್ಥ ಎನ್ನುವಂತೆ ಅನೇಕ ವಾಕ್ಯಗಳು ಅದರಲ್ಲಿದೆ. ಉದಾಹರಣೆಗೆ....
000 - ನಿಮಗಾಗಿ ದೀರ್ಘಕಾಲ ಬೇಕಾದರೂ ಕಾಯುತ್ತಾರೆ,
010- ಅವರ ಮನಸ್ಸಲ್ಲಿ ನೀವೇ ತುಂಬಿದ್ದೀರ
002 -ನಿಮ್ಮ ತುಂಟ ಮನಸ್ಸು ಮೆಚ್ಚಿದ್ದಾರೆ
012 -ನಿಮ್ಮ ಸುಖ ದುಃಖದಲ್ಲಿ ಭಾಗಿಯಾಗುತ್ತಾರೆ
022- ನಿಮ್ಮನ್ನು ಪ್ರೀತಿಸಿ ಮೋಸ ಮಾಡುತ್ತಾರೆ
112 -ನಿಮ್ಮ ಮನಸ್ಸನ್ನು ಇಷ್ಟಪಡುವುದಿಲ್ಲ ಸೌಂದರ್ಯಕ್ಕಾಗಿ ಇಷ್ಟಪಡುತ್ತಾರೆ
222- ಐ ಹೇಟ್ ಯು ಅನ್ನುತ್ತಾರೆ
224 ನಿಮಗೆ ಕಿಸ್ ಕೊಡಲು ಹಂಬಲಿಸುತ್ತಾರೆ
ಹೀಗೆ ಅನೇಕ ರಹಸ್ಯ ಸಂಖ್ಯೆಗಳು ಮತ್ತು ಅದರ ಎದುರು ನಾನಾ ವಾಕ್ಯಗಳನ್ನು ಮುಗ್ಧವಾಗಿ ಬರೆದಿರುವ ಪತ್ರವೊಂದು ಇದೀಗ ಲಭ್ಯವಾಗಿದೆ. ಇದು ಶಿಲ್ಪಾಗೆ ಅಜೀಜ್ ಮೇಲಿದ್ದ ಪ್ರೀತಿಯ ಸಾಕ್ಷಿಯಾಗಿದೆ.
ದೂರು ನೀಡಿದ ಸಹೋದರ
ಮೃತ ಶಿಲ್ಪಾಳ ಸಹೋದರ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಮತಾಂತರದ ಒತ್ತಾಯ ಹಾಗೂ ಲವ್ ಜಿಹಾದಿಗೆ ತನ್ನ ಸಹೋದರಿ ಬಲಿಯಾಗಿರುವುದಾಗಿ ದೂರಿದ್ದಾರೆ. ಆತ ನೀಡಿರುವ ಲಿಖಿತ ದೂರಿನಲ್ಲಿ ಅಜೀಜ್ ಮತ್ತು ಸಲ್ಮಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯ ಆರೋಪ ಮಾಡಿದ್ದಾರೆ. ಅವರಿಬ್ಬರ ಸಂಬಂಧದ ಬಗ್ಗೆ ನನಗೆ ಈ ಮೊದಲು ಗೊತ್ತಿರಲಿಲ್ಲ, ಮತಾಂತರಕ್ಕೆ ಒತ್ತಾಯಿಸಿರುವ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಸಹೋದರ ರಾಘವೇಂದ್ರ ಆಗ್ರಹಿಸಿದ್ದಾರೆ.
ಪೊಲೀಸರ ತಂಡ ರಚನೆ
ಪ್ರಕರಣ ಲವ್ ಜಿಹಾದ್ ಆಯಾಮ ಪಡೆಯುತ್ತಿದ್ದಂತೆ ಪೊಲೀಸರು ಚುರುಕಾಗಿದ್ದಾರೆ. ಸಹೋದರ ಕೊಟ್ಟ ದೂರಿನಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಜೀಜ್ ಮತ್ತು ಆತನ ಪತ್ನಿ ಸಲ್ಮಾ ವಿರುದ್ಧ ದೂರು ದಾಖಲಾಗಿದೆ. ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಮುಖಂಡರು ಶುಕ್ರವಾರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.ತನಿಖೆಗೆ ಎರಡು ತಂಡಗಳನ್ನು ರಚಿಸಿದ್ದು ಭಟ್ಕಳ ಮತ್ತು ಕಾಸರಗೋಡು ಭಾಗದಲ್ಲಿ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ.