
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಏ.29): ಎಲ್ಲವು ಅಂದುಕೊಂಡಂತೆ ಆಗಿದ್ರೆ ಅವರಿಬ್ಬರು ಇಷ್ಟೊತ್ತಿಗೆ ಸತಿಪತಿಗಳಾಗಬೇಕಿತ್ತು. ಆ ಮನೆಯಲ್ಲಿ ಸಡಗರ ಸಂಭ್ರಮ ಮನೆ ಮಾಡಬೇಕಿತ್ತು. ಆದರೆ ಆ ಮನೆ ರಣಾಂಗಣವಾಗಿದೆ, ಎರಡೂ ಕಡೆಯವರು ಚಾಕುವಿನಿಂದ ಇರಿದು, ಬಡಿದಾಡಿಕೊಂಡು ರಕ್ತದ ಕೋಡಿ ಹರಿದಿದೆ. ಮದುವೆ ಮುರಿದುಬಿದ್ದಿದೆ. Marriages are made in heaven ಅನ್ನೋ ಮಾತಿದೆ. ಆದರೆ ಇಲ್ಲಿ ನಡೆಯಬೇಕಿದ್ದ ಮದುವೆ ಅಕ್ಷರಶಃ ನರಕಮಯವಾಗಿದೆ.
ವಧು, ವರ ಎರಡೂ ಕಡೆಯವರು ಚಾಕುವಿನಿಂದ ಪರಸ್ಪರ ಇರಿದುಕೊಂಡಿದ್ದಾರೆ. ಒಬ್ಬರಿಗೊಬ್ಬರು ಬಡಿದಾಡಿಕೊಂಡು ರಕ್ತದ ಕೋಡಿ ಹರಿಸಿದ್ದಾರೆ. ಈ ಘಟನೆ ನಡೆದಿರೋದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ. ಕೊಳ್ಳೆಗಾಲದ ಮೊಹಮದ್ ಮುದಸಿರ್ ಹಾಗು ಗುಲ್ನಾಜ್ ಬೇಗಂ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಎರಡೂ ಮನೆಯವರ ಒಪ್ಪಿಗೆ ಸಿಕ್ಕಿ ವಿವಾಹವೂ ನಿಶ್ಚಯವಾಗಿತ್ತು. ಮದುವೆ ವೇಳೆ ತಮ್ಮ ಶಕ್ತ್ಯಾನುಸಾರ ಎರಡೂ ಕಡೆಯವರು ಚಿನ್ನಾಭರಣ ಕೊಡುವುದಾಗಿ ಮಾತುಕತೆ ಆಗಿತ್ತು.
ಇಂದು ಕೊಳ್ಳೇಗಾಲದ ಆರ್‌ಎಂ ಕನ್ವೆವೆನ್ಷನ್ ಹಾಲ್ನಲ್ಲಿ ಇವರಿಬ್ಬರ ನಿಖಾ ನಿಗಧಿಯಾಗಿತ್ತು. ಆದರೆ ಕೊಟ್ಟ ಮಾತಿನಂತೆ ವಧುವಿಗೆ ಕೊಡಬೇಕಿದ್ದ ಚಿನ್ನಾಭರಣ ಕೊಡದ ಹಿನ್ನಲೆಯಲ್ಲಿ ವಧುವಿನ ಮನೆಯವರು ಕಲ್ಯಾಣಮಂಟಪಕ್ಕೆ ಹೋಗಿರಲಿಲ್ಲ. ಈ ಬಗ್ಗೆ ಮಾತುಕತೆ ನಡೆಸಲು ವರನ ಕಡೆಯವರು ವಧುವಿನ ಮನೆಗೆ ಬಂದಿದ್ದಾರೆ. ಈ ವೇಳೆ ಎರಡೂ ಕಡೆಯವರ ನಡುವೆ ಮಾತಿಗೆ ಮಾತಿ ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಮದುವೆ ಮನೆ ರಣಾಂಗಣವಾಗಿದೆ. ಪರಸ್ಪರ ಬಡಿದಾಡಿ ಚಾಕು ಇರಿದುಕೊಂಡು ರಕ್ತದೋಕುಳಿ ಆಡಿದ್ದಾರೆ. ಇನ್ನೂ ಯಾಕೆ ಚಿನ್ನ ತಂದಿಲ್ಲ ಅಂತ ವಧುವಿನಮನೆಯವರೇ ಗಲಾಟೆ ಮಾಡಿದ್ರು ಅಂತ ವರನ ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಆದರೆ ನಾವು ಯಾವುದೇ ಚಿನ್ನಾಭರಣಕ್ಕೆ ಒತ್ತಾಯ ಮಾಡಿಲ್ಲ, 15 ಲಕ್ಷ ರೂಪಾಯಿ ಮೌಲ್ಯದ ಕಾರು ಕೊಡಿಸುವಂತೆ ವರನ ಕಡೆಯವರೇ ಡಿಮ್ಯಾಂಡ್ ಮಾಡಿ ಗಲಾಟೆ ಮಾಡಿದ್ರು ಅಂತ ವಧುವಿನ ಕಡೆಯವರು ಆರೋಪಿಸುತ್ತಿದ್ದಾರೆ. ನಿಖಾ ನಡೆದು ನೆಂಟರಿಷ್ಟರಿಂದ ತುಂಬಿತುಳುಕಬೇಕಿದ್ದ ಕಲ್ಯಾಣ ಮಂಟಪ ಬಿಕೋ ಎನ್ನುತ್ತಿದೆ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲಿ ಮೌನ ಆವರಿಸಿದೆ. ಒಟ್ಟಾರೆ ಮದುವೆ ಹಂತಕ್ಕು ಬಂದಿದ್ದ ಅವರಿಬ್ಬರ ಪ್ರೀತಿ ಚಿನ್ನಾಭರಣದ ವಿಷಯಕ್ಕೆ ಮುರಿದುಬಿದ್ದುರುವುದು ಮಾತ್ರ ವಿಪರ್ಯಾಸ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ