ಕೆಲಸ ಕೊಡಿಸುವುದಾಗಿ ವಿದೇಶಕ್ಕೆ ಮಹಿಳೆ ಸೇಲ್, ಕುವೈತಿನಲ್ಲಿ ಬಂಧಿಯಾದ ಕೊಡಗಿನ ಮಹಿಳೆ!

By Suvarna NewsFirst Published Jan 17, 2023, 11:01 PM IST
Highlights

ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ಕುವೈತ್ ರಾಷ್ಟ್ರಕ್ಕೆ ಸೇಲ್ ಮಾಡಿರುವ ಬೆಚ್ಚಿಬೀಳಿಸುವ ಮೋಸದ ಜಾಲ ಬೆಳಕಿಗೆ ಬಂದಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ಚಿಕ್ಕಿ ಎಂಬುವರ 35 ವರ್ಷದ ಮಗಳು ಪಾರ್ವತಿ ಈಗ ಕುವೈತ್ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ.17): ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮಹಿಳೆಯನ್ನು ಕುವೈತ್ ರಾಷ್ಟ್ರಕ್ಕೆ ಸೇಲ್ ಮಾಡಿರುವ ಬೆಚ್ಚಿಬೀಳಿಸುವ ಮೋಸದ ಜಾಲ ಬೆಳಕಿಗೆ ಬಂದಿದೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ಚಿಕ್ಕಿ ಎಂಬುವರ 35 ವರ್ಷದ ಮಗಳು ಪಾರ್ವತಿ ಈಗ ಕುವೈತ್ ದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪತಿಯಿಂದ ದೂರವಾಗಿ ಚಿಕ್ಕ ಎರಡು ಮಕ್ಕಳೊಂದಿಗೆ ತವರು ಮನೆಯಲ್ಲಿದ್ದ ಪಾರ್ವತಿ ಎಂಬಾಕೆಗೆ ವಿದೇಶದಲ್ಲಿ 30 ಸಾವಿರ ಸಂಬಳ ಕೊಡಿಸುವುದಾಗಿ ಹೇಳಿದ್ದ ಊಟಿಯ ಖಾಸಗಿ ಏಜೆನ್ಸಿಯೊಂದರ ಹನೀಫ್ ಎಂಬಾತ ಮಹಿಳೆಯನ್ನು 3 ಲಕ್ಷ ರೂಪಾಯಿಗೆ ಸೇಲ್ ಮಾಡಿದ್ದಾನೆ ಎನ್ನಲಾಗಿದೆ.

ಚಿಕ್ಕ ಎರಡು ಮಕ್ಕಳ ಜೊತೆಗೆ ವಯಸ್ಸಾದ ತನ್ನ ತಂದೆ ತಾಯಿಯನ್ನು ನೆಮ್ಮದಿಯಾಗಿ ಇರಿಸಬೇಕು, ಮಕ್ಕಳ ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎನ್ನುವ ದೃಷ್ಟಿಯಿಂದ ಪಾರ್ವತಿ ಹಣ ಸಂಪಾದಿಸಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ ಆರಂಭದಲ್ಲಿ ಕೇರಳದ ತಲಚೇರಿಯಲ್ಲಿ ಮನೆಗೆಲಸಕ್ಕೆ ಸೇರಿದ್ದರು. ಅಲ್ಲಿ ಒಂದೆರಡು ವರ್ಷ ಕೆಲಸ ಮಾಡಿದ್ದ ಪಾರ್ವತಿ ಅವರಿಗೆ ಕಾವೇರಿ ಎಂಬ ಮಹಿಳೆಯ ಪರಿಚಯವಾಗಿತ್ತು. ನಂತರ ಆ ಮಹಿಳೆಯ ಮೂಲಕವೇ ಪಾರ್ವತಿಗೆ ಊಟಿಯ ಹನೀಫ್ ಎಂಬಾತ ಪರಿಚಯವಾಗಿದ್ದ. ಆತ ಕುವೈತ್‍ನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ. ಹನೀಫ್‍ನ ಮಾತನ್ನು ನಂಬಿದ್ದ ಮಹಿಳೆ ಪಾರ್ವತಿ ಕುವೈತ್‍ಗೆ ನಾಲ್ಕು ತಿಂಗಳ ಹಿಂದೆ ಹೋಗಿದ್ದರು.

ವಿಸಿಟರ್ಸ್ ವೀಸಾದ ಆಧಾರದಲ್ಲಿ ಕೊಚ್ಚಿ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಹಾರಿದ್ದರು. ಕೊಚ್ಚಿಯಿಂದ ನೇರ ಮಸ್ಕತ್ ಬಳಿಕ ಅಲ್ಲಿಂದ ಕುವೈತ್‍ಗೆ ಹೋಗಿ ಕೆಲಸ ಮಾಡುತ್ತಿದ್ದರು. ಮೂರು ತಿಂಗಳಿಂದ ಯಾವುದೇ ಸಮಸ್ಯೆ ಇಲ್ಲದೆ ಪಾರ್ವತಿ ಅವರು ಮನೆಯೊಂದರಲ್ಲಿ ಕೆಲಸ ಮಾಡಿದ್ದರು. ಅಷ್ಟರಲ್ಲೇ ಮೂರು ತಿಂಗಳು ಪೂರೈಸಿದ್ದು, ವಿಸಿಟರ್ಸ್ ವೀಸಾದ ಅವಧಿಯೂ ಮುಗಿದಿತ್ತು. ವಿಪರ್ಯಾಸವೆಂದರೆ ಮೂರು ತಿಂಗಳ ಬಳಿಕ ಕುವೈತ್‍ನಲ್ಲಿ ಶ್ರೀಲಂಕಾದ ಏಜೆನ್ಸಿಯೊಂದರ ವ್ಯಕ್ತಿಯೊಬ್ಬ ಪಾರ್ವತಿಯನ್ನು ಬೇರೊಂದು ಮನೆಗೆ ಕೆಲಸಕ್ಕೆ ಸೇರಿಸುವುದಾಗಿ ಹೇಳಿ ಯಾವುದೇ ಒಂದು ಮನೆಯ ಕೋಣೆಯಲ್ಲಿ ಕೂಡಿ ಹಾಕಿದ್ದಾನೆ.

ಅಲ್ಲಿಂದ ಪಾರ್ವತಿಗೆ ಇನ್ನಿಲ್ಲದ ಸಮಸ್ಯೆ ಎದುರಾಗಿದೆ. ವಿಸಿಟರ್ಸ್ ವೀಸಾ ಅವಧಿ ಮುಗಿದಿರುವುದರಿಂದ ಪಾರ್ವತಿ ಮನೆ ಬಿಟ್ಟು ಎಲ್ಲೂ ಹೊರಗಡೆಯೂ ಓಡಾಡುವಂತಿಲ್ಲ. ಇತ್ತ ಕೆಲಸವೂ ಇಲ್ಲ. ಸರಿಯಾದ ಊಟ, ತಿಂಡಿಯನ್ನೂ ಕೊಡುತ್ತಿಲ್ಲ. ನನ್ನನ್ನು ನಮ್ಮ ದೇಶಕ್ಕೆ ಕಳುಹಿಸಿಕೊಡಿ ಎಂದು ಕೇಳಿದರೆ ಶ್ರೀಲಂಕಾದ ಏಜೆನ್ಸಿಯ ವ್ಯಕ್ತಿ ಮೂರು ಲಕ್ಷ ಕೊಡು, ಇಲ್ಲವೇ ಆರು ತಿಂಗಳಾದರೂ ಕೆಲಸ ಮಾಡು ಎಂದು ಹಿಂಸೆ ಕೊಡುತ್ತಿರುವುದಾಗಿ ಪಾರ್ವತಿ ತನ್ನ ಮನೆಯವರಿಗೆ ವಾಟ್ಸಾಪ್ ಕರೆ ಮಾಡಿ ತಿಳಿಸಿದ್ದಾರೆ.

Chikkamagaluru: ಅಪ್ರಾಪ್ತ ಯುವತಿ ಆತ್ಮಹತ್ಯೆ ಪ್ರಕರಣ, ಆರೋಪಿ ಬಿಜೆಪಿ ಕಾರ್ಯಕರ್ತ

ಹೀಗಾಗಿ ಪಾರ್ವತಿಯನ್ನು ಹನೀಫ್ 3 ಲಕ್ಷಕ್ಕೆ ಸೇಲ್ ಮಾಡಿದ್ದಾನೆ ಎನ್ನಲಾಗಿದೆ. ಇತ್ತ ಪಾರ್ವತಿ ಮನೆಯವರು ಊಟಿಯ ಆ ವ್ಯಕ್ತಿಗೆ ಕರೆ ಮಾಡಿ ಕೇಳಿದರೆ ಇಲ್ಲ ಸಲ್ಲದ ಮಾತುಗಳನ್ನೆಲ್ಲಾ ಆಡುತ್ತಿದ್ದಾನೆ ಹೊರತ್ತು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪಾರ್ವತಿ ತಾಯಿ ಚಿಕ್ಕಿ ಮತ್ತು ತಮ್ಮ ನಂದ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಡಿ ಎಂದು ಕೊಡಗು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಪಾರ್ವತಿ ಕುಟುಂಬದವರು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದಂತೆ ಜಿಲ್ಲಾಡಳಿತ ಭಾರತೀಯ ವಿದೇಶಾಂಗ ಇಲಾಖೆ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿದ್ದಾರೆ.

CHITRADURGA: ಪೋಟೋ ಸ್ಟುಡಿಯೋ ಮಾಲೀಕ ಬಸವರಾಜ್ ಕೊಲೆಗೆ ಕಾರಣವೇ ಸ್ವಂತ ಅಕ್ಕ!

ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ವಿಪತ್ತು ನಿರ್ವಹಣಾ ಪರಿಣಿತ ಅಧಿಕಾರಿ ಅನನ್ಯವಾಸುದೇವ್ ಅವರು ಈಗಾಗಲೇ ಇಂಡಿಯನ್ ಎಂಬೆಸ್ಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಜೊತೆಗೆ ಮಹಿಳೆಗೆ ಕರೆ ಮಾಡಿ ಮಾತನಾಡಲಾಗಿದ್ದು, ಅವರು ಇರುವ ಲೊಕೇಶನ್ ಗುರುತ್ತಿಸಿದ್ದೇವೆ. ಮಹಿಳೆಗೆ ಮತ್ತು ಅವರ ಕುಟುಂಬದವರಿಗೆ ಧೈರ್ಯ ಹೇಳಿದ್ದೇವೆ. ಆದಷ್ಟು ಬೇಗ ಮಹಿಳೆ ಪಾರ್ವತಿ ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

click me!