ವರದಿ- ಮಸ್ತಾಕ್ ಪೀರ್ಜಾದೆ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಳಗಾವಿ (ಡಿ.4) : ಮನುಷ್ಯನಿಗೆ ಸಂಶಯ ಅನ್ನೋದು ಎಷ್ಟೊಂದು ಭಯಾನಕ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಒಡಹುಟ್ಟಿದ ಅಣ್ಣನ ಮೇಲೆ ತಮ್ಮನದ್ದು ಎಲ್ಲಿಲ್ಲದ ಸಂಶಯ, ತನ್ನ ಪಾಡಿಗೆ ತಾನಿದ್ರೂ ಬೆಂಬಿಡದ ತಮ್ಮ ಅಣ್ಣನನ್ನೇ ಕೊಂದು ಜೈಲು ಸೇರಿದ್ದಾನೆ. ಅಷ್ಟಕ್ಕೂ ಪಾಪಿ ಅಣ್ಣನನ್ನ ಕೊಂದಿದ್ಯಾಕೆ? ಬರ್ಬರವಾಗಿ ಹತ್ಯೆ ಮಾಡಿದ್ದು ಹೇಗೆ? ಬೆಳಗಾವಿಯಲ್ಲಿ ತಮ್ಮನ ಸಂಶಯಕ್ಕೆ ಅಣ್ಣ ಬಲಿಯಾಗಿದ್ದು ಹೇಗೆ ಅಂತೀರಾ ಈ ಸ್ಟೋರಿ ನೋಡಿ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೊರ ವಲಯದಲ್ಲಿ ನಿನ್ನೆ ಆಕ್ಸಿಡೆಂಟ್ ಮಾಡಿ ಬೈಕ್ ಮೇಲೆ ಹೋಗ್ತಿದ್ದ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಪಾಪಿ, ನಂತರ ಪೊಲೀಸರಿಗೆ ಶರಣಾಗಿ ತಾನೂ ಮಾಡಿದ ಕೃತ್ಯದ ಬಗ್ಗೆ ಎಳೆ ಎಳೆಯಾಗಿ ಬಾಯಿ ಬಿಟ್ಟಿದ್ದನು. ಅಷ್ಟಕ್ಕೂ ಇಲ್ಲಿ ಕೊಲೆ ಮಾಡಿ ಪೊಲೀಸ್ ಠಾಣೆಗೆ ಶರಣಾಗಿದ್ದವನು ಚಿಕ್ಕೋಡಿ ಪಟ್ಟಣದ ನಿವಾಸಿ ಅಮ್ಜದ್ ಶೇಖ್(36). ಈತ ತನ್ನ ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿದ್ದಾನೆ. ರಸ್ತೆ ಪಕ್ಕದಲ್ಲೇ ಹೆಣವಾಗಿ ಹೋಗಿದ್ದು ಕೊಲೆ ಪಾತಕಿಯ ಸಹೋದರ ಅಕ್ಬರ್ ಶೇಖ್.
Crime News: ಸೊಸೆ ಮೇಲೆ ಕಣ್ಣು ಹಾಕಿದ್ದ ಮಾವ: ಕೊಂದು ಕೆರೆಗೆ ಬಿಸಾಕಿದ ಸುಪಾರಿ ಕಿಲ್ಲರ್ಸ್
ಕೊಲೆ ಮಾಡಲೆಂದೇ ಕಾರು ಖರೀದಿ: ಅಕ್ಬರ್ ಮತ್ತು ಅಜ್ಮದ್ ಸಹೋದರರು ಆಗಿದ್ದರೂ ಒಂದೇ ಮನೆಯ ಬೇರೆ ಬೇರೆ ಮಹಡಿಯಲ್ಲಿ ತಮ್ಮ ಕುಟುಂಬದ ಜತೆಗೆ ವಾಸವಿದ್ದರು. ಇನ್ನೂ ನಿನ್ನೆ ಅಣ್ಣನನ್ನ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಸೆಕೆಂಡ್ ಹ್ಯಾಂಡ್ ಕಾರೊಂದನ್ನ ಖರೀದಿ ಮಾಡಿದ ಅಜ್ಮದ್, ಅಕ್ಬರ್ ನ ಬೈಕ್ ಹಿಂಬಾಲಿಸಿಕೊಂಡು ಹೊರಟ್ಟಿದ್ದಾನೆ. ಕಬ್ಬೂರ ಗ್ರಾಮದಿಂದ ಚಿಕ್ಕೋಡಿಯತ್ತ ಹೊರಟ್ಟಿದ್ದ ಅಕ್ಬರನ ಬೈಕ್ ಗೆ ಉಮರಾಣಿ ಗ್ರಾಮದ ಹೊರ ವಲಯದ ಬಳಿ ಕಾರಿನಿಂದ ಗುದ್ದಿದ್ದಾನೆ. ಅಪಘಾತದ ಮಾದರಿಯಲ್ಲಿ ಕೊಲೆ ಮಾಡಲು ಯತ್ನಿಸಿದ್ದಾನೆ. ಆದರೆ ಅಕ್ಬರ್ ಬದುಕುಳಿದಿದ್ದಾನೆ. ಇದನ್ನ ಗಮನಿಸಿದ ಅಜ್ಮದ್ ಕೂಡಲೇ ಕಾರಿನಿಂದ ಕೆಳಗಿಳಿದು ಆತನ ತಲೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಚಿಕ್ಕೋಡಿ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.
ಹಾಸನ: ಸೊಸೆಗೆ ಲೈಂಗಿಕ ಕಿರುಕುಳ, ಸುಪಾರಿ ಕೊಟ್ಟು ಮಾವನ ಕಥೆ ಫಿನಿಷ್ ಮಾಡಿದ ಬೀಗರು..!
ಅಪಘಾತ ಮಾದರಿಯಲ್ಲಿ ಕೊಲೆಗೆ ಯತ್ನ: ಅಪಘಾತದ ಮಾದರಿಯಲ್ಲಿ ಅಣ್ಣನನ್ನು ಕೊಲೆ ಮಾಡಲು ಯತ್ನಿಸಿ ನಂತರ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ತನ್ನ ಮನೆಗೆ ಹೋಗಿ ಹೆಂಡತಿಗೆ ತಾನು ಅಕ್ಬರನ ಕೊಂದು ಬಂದಿದ್ದೇನೆ ಎಂದು ಹೇಳಿದ್ದಾನೆ. ನಂತರ ಚಿಕ್ಕೋಡಿ ಪೊಲೀಸರಿಗೆ ಶರಣಾಗಿದ್ದನು. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಶವವನ್ನ ಮರಣೋತ್ತರ ಪರೀಕ್ಷೆಗೆ ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನ ಕರೆಯಿಸಿ ನಂತರ ಪ್ರಕರಣವನ್ನ ದಾಖಲಿಸಿಕೊಂಡಿದ್ದರು. ಇತ್ತ ಮರಣೋತ್ತರ ಪರೀಕ್ಷೆ ಮುಗಿಸಿ ಅಕ್ಬರ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿ ಆರೋಪಿ ಅಜ್ಮದ್ ನನ್ನ ವಿಚಾರಣೆ ನಡೆಸಿದ್ದಾರೆ.
ಹೆಂಡತಿಯೊಂದಿಗೆ ಸಂಬಂಧದ ಸಂಶಯ: ನನ್ನ ಅಣ್ಣ ಅಕ್ಬರನು ತನ್ನ ಹೆಂಡತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಎನ್ನುವ ಸಂಶಯ ಇತ್ತು. ಹೀಗಾಗಿ ಆತನನ್ನ ಕೊಲೆ ಮಾಡಿದ್ದೇನೆ ಎಂದು ಆಜ್ಮದ್ ಹೇಳಿದ್ದಾನೆ. ಮತ್ತೊಂದೆಡೆ ಅಕ್ಬರ ಕೂಡ ತನ್ನ ಹೆಂಡತಿ ಜತೆಗೆ ತಮ್ಮನೇ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದುಕೊಂಡು ಹಲವು ಬಾರಿ ಜಗಳ ಮಾಡಿದ್ದನಂತೆ. ಹಿರಿಯರ ಸಮ್ಮುಖದಲ್ಲಿ ಜಗಳ ಕೂಡ ಬಗೆಹರಿಸಲಾಗಿತ್ತು. ಆದರೂ, ಅಜ್ಮದ್ ಬದಲಾಗದೇ ಸಂಶಯ ಅನ್ನೋ ಪಿಶಾಚಿಯನ್ನ ತಲೆಯಲ್ಲಿ ತುಂಬಿಕೊಂಡಿದ್ದು, ಈಗ ಅಣ್ಣನನ್ನು ಕೊಂದು ಜೈಲು ಸೇರಿದ್ದಾನೆ.