ಬೆಂಗಳೂರು: ಸಿಬಿಐ ಸೋಗಲ್ಲಿ ವಿದ್ಯಾರ್ಥಿಗಳ ಸುಲಿಗೆ, ಕೇರಳಿಗರ ಬಂಧನ

Published : May 31, 2024, 06:00 AM IST
ಬೆಂಗಳೂರು: ಸಿಬಿಐ ಸೋಗಲ್ಲಿ ವಿದ್ಯಾರ್ಥಿಗಳ ಸುಲಿಗೆ, ಕೇರಳಿಗರ ಬಂಧನ

ಸಾರಾಂಶ

ಕೇರಳ ಮೂಲದ ಅನಂತಕೃಷ್ಣ, ಪ್ರಮೋದ್‌, ಆದರ್ಶ್‌ ಹಾಗೂ ಆರ್‌.ದೀಪಕ್ ಬಂಧಿತರಾಗಿದ್ದು, ಆರೋಪಿಗಳು ಬಳಸಿದ್ದ ಎರಡು ಕಾರು, ಏರ್ ಪಿಸ್ತೂಲ್‌, ಕೈ ಕೋಳ, ಲಾಟಿ, ಸಿಬಿಐ ನಕಲಿ ಐಡಿ ಕಾರ್ಡ್‌, 1 ಬ್ಯಾಟನ್‌ ಹಾಗೂ ನಾಲ್ಕು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. 

ಬೆಂಗಳೂರು(ಮೇ.31):  ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದ ಕೇರಳ ಗ್ಯಾಂಗ್‌ವೊಂದನ್ನು ಕೃತ್ಯದ ನಡೆದ 12 ತಾಸಿನೊಳಗೆ ಸೋಲದೇವನಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಕೇರಳ ಮೂಲದ ಅನಂತಕೃಷ್ಣ, ಪ್ರಮೋದ್‌, ಆದರ್ಶ್‌ ಹಾಗೂ ಆರ್‌.ದೀಪಕ್ ಬಂಧಿತರಾಗಿದ್ದು, ಆರೋಪಿಗಳು ಬಳಸಿದ್ದ ಎರಡು ಕಾರು, ಏರ್ ಪಿಸ್ತೂಲ್‌, ಕೈ ಕೋಳ, ಲಾಟಿ, ಸಿಬಿಐ ನಕಲಿ ಐಡಿ ಕಾರ್ಡ್‌, 1 ಬ್ಯಾಟನ್‌ ಹಾಗೂ ನಾಲ್ಕು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಹೆಸರಘಟ್ಟ ಮುಖ್ಯರಸ್ತೆಯ ಎಜಿಬಿ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಕೇರಳ ಮೂಲದ ವಿದ್ಯಾರ್ಥಿಗಳ ಫ್ಲ್ಯಾಟ್‌ಗೆ ಮೇ 27ರಂದು ರಾತ್ರಿ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿ ವಿದ್ಯಾರ್ಥಿಗಳಿಗೆ ಬೆದರಿಸಿ ಹಣ ಸುಲಿಗೆ ಮಾಡಿ ಕೇರಳ ಗ್ಯಾಂಗ್ ಪರಾರಿಯಾಗಿತ್ತು. ಈ ಕೃತ್ಯದ ತನಿಖೆ ನಡೆಸಿದ ಪೊಲೀಸರು, ಕೃತ್ಯ ಎಸಗಿ ಕೇರಳಕ್ಕೆ ಪರಾರಿಯಾಗುವ ಮಾರ್ಗ ಮಧ್ಯೆ ತಮಿಳುನಾಡಿನ ಕೃಷ್ಣಗಿರಿ ಸಮೀಪ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಾಯ್‌ಫ್ರೆಂಡ್ ಜೊತೆ ಸೇರಿ ತಂದೆ, ತಮ್ಮನನ್ನು ಕೊಚ್ಚಿ ಹಾಕಿ ಫ್ರೀಜರ್‌ನಲ್ಲಿಟ್ಟ ಬಾಲಕಿ!

ಕೇರಳ ವಿದ್ಯಾರ್ಥಿಗಳ ಟಾರ್ಗೆಟ್:

ಕೇರಳ ರಾಜ್ಯ ತಿರುವಂತಪುರದಲ್ಲಿ ಪದವಿ ಮುಗಿಸಿ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದ ಪ್ರಮೋದ್‌, ಯಲಹಂಕದಲ್ಲಿ ನೆಲೆಸಿರುವ ತನ್ನ ತಂಗಿ ಮನೆಗೆ ಆಗಾಗ ಬರುತ್ತಿದ್ದರಿಂದ ಬೆಂಗಳೂರು ಪರಿಚಯವಾಗಿತ್ತು. ನಗರದ ಖಾಸಗಿ ಕಾಲೇಜಿನಲ್ಲೇ ವ್ಯಾಸಂಗ ಮಾಡಿದ್ದ ಈತನ ಸ್ನೇಹಿತ ಅನಂತಕೃಷ್ಣ ಕೂಡ ಕೇರಳದಲ್ಲಿ ತಂದೆಯ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದ. ದೀಪಕ್ ಪೋಟೋಗ್ರಾಫರ್ ಆಗಿದ್ದರೆ, ಮತ್ತೊಬ್ಬ ಆರೋಪಿ ಆದರ್ಶ ಎಂಬಾತ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಸುಲಭವಾಗಿ ಹಣ ಸಂಪಾದನೆಗೆ ಈ ಸ್ನೇಹಿತರು ದರೋಡೆಗೆ ಯೋಜಿಸಿದ್ದರು ಎಂದು ತಿಳಿದು ಬಂದಿದೆ.

ಬೆಂಗಳೂರಿನ ಯಲಹಂಕ, ಹೆಸರಘಟ್ಟ ಹಾಗೂ ವಿದ್ಯಾರಣ್ಯಪುರ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ನೆಲಸಿರುವ ಕೇರಳ ಮೂಲದ ವಿದ್ಯಾರ್ಥಿಗಳನ್ನು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಬೆದರಿಸಿ ಹಣ ಸುಲಿಗೆ ಮಾಡಲು ಈ ನಾಲ್ವರು ಸಂಚು ರೂಪಿಸಿದ್ದರು. ಅದರಂತೆ ಮೇ 27ರಂದು ಆರೋಪಿಗಳು ಹೆಸರಘಟ್ಟ ಮುಖ್ಯರಸ್ತೆಯ ಎಜಿಬಿ ಲೇಔಟ್‌ನ ಅಪಾರ್ಟ್‌ಮೆಂಟ್‌ಗೆ ಬಂದು ಸೆಕ್ಯೂರಿಟಿ ಗಾರ್ಡ್‌ಗೆ ತಾವು ಸಿಬಿಐ ಅಧಿಕಾರಿಗಳು ಎಂದು ನಕಲಿ ಐಡಿ ಕಾರ್ಡ್ ತೋರಿಸಿ ಪರಿಚಯಿಸಿಕೊಂಡಿದ್ದಾರೆ. ಬಳಿಕ ಕೇರಳ ರಾಜ್ಯದ ವಿದ್ಯಾರ್ಥಿಗಳು ಯಾವ ಫ್ಲ್ಯಾಟ್‌ ನೆಲೆಸಿದ್ದಾರೆಂಬ ಮಾಹಿತಿ ಪಡೆದು ಆ ಫ್ಲ್ಯಾಟ್‌ಗೆ ಬಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗಾಂಜಾ ಕೊಟ್ಟು ವಿಡಿಯೋ

ವಿದ್ಯಾರ್ಥಿಗಳ ಫ್ಲ್ಯಾಟ್‌ಗೆ ನುಗ್ಗಿದ ಆರೋಪಿಗಳು, ತಾವು ಸಿಬಿಐ ಪೊಲೀಸರೆಂದು ಪರಿಚಯಿಸಿಕೊಂಡು ತಮ್ಮ ಬಳಿಯಿದ್ದ ಪಿಸ್ತೂಲ್, ನಕಲಿ ಐ.ಡಿ.ಕಾರ್ಡ್ ತೋರಿಸಿ ಲಾಟಿಗಳಿಂದ ವಿದ್ಯಾರ್ಥಿಗಳಿಗೆ ಕೈಗಳಿಗೆ ಹೊಡೆದಿದ್ದಾರೆ. ಬಳಿಕ ತಾವು ತೆಗೆದುಕೊಂಡು ಹೋಗಿದ್ದ ಗಾಂಜಾವನ್ನು ವಿದ್ಯಾರ್ಥಿಗಳ ಕೈಗೆ ಬಲವಂತವಾಗಿಟ್ಟು ವಿಡಿಯೋ ಮಾಡಿಕೊಂಡ ಆರೋಪಿಗಳು, ನೀವು ₹3 ಲಕ್ಷವನ್ನು ಕೊಡದೆ ಹೋದರೆ ವಿಡಿಯೋ ಬಹಿರಂಗಪಡಿಸುತ್ತೇವೆ. ಡ್ರಗ್ಸ್ ಕೇಸ್ ಹಾಕುತ್ತೇವೆ ಎಂದು ಬೆದರಿಸಿದ್ದಾರೆ.

ಕೊಪ್ಪಳ: ಒಂದೇ ಕುಟುಂಬದ ಮೂವರ ನಿಗೂಢ ಸಾವು ಪ್ರಕರಣ, ಭಗ್ನ ಪ್ರೇಮಿಯಿಂದ ಮೂವರ ಹತ್ಯೆ

ಆಗ ತಮ್ಮ ಬಳಿ ಹಣವಿಲ್ಲವೆಂದಾಗ ಆರೋಪಿಗಳು, ವಿದ್ಯಾರ್ಥಿಗಳ ಪೈಕಿ ಒಬ್ಬಾತನ ಮೊಬೈಲ್ ಕಸಿದುಕೊಂಡು ಯುಪಿಐ ಮೂಲಕ ತಮ್ಮ ಖಾತೆಗೆ ₹90 ಸಾವಿರ ವರ್ಗಾಯಿಸಿಕೊಂಡು ಮೊಬೈಲ್ ಮರಳಿಸಿದ್ದಾರೆ. ನಂತರ ಇನ್ನುಳಿದ ಹಣವನ್ನು ನಾಳೆ ಸಂಜೆಯೊಳಗೆ ಕೊಡಬೇಕು ಎಂದು ತಾಕೀತು ಮಾಡಿ ತೆರಳಿದ್ದರು. ತಕ್ಷಣವೇ ಈ ಬಗ್ಗೆ ಸೋಲದೇವನಹಳ್ಳಿ ಠಾಣೆಗೆ ತೆರಳಿ ವಿದ್ಯಾರ್ಥಿಗಳು ದೂರು ಕೊಟ್ಟಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಇನ್‌ಸ್ಪೆಕ್ಟರ್‌ ಜಿ.ಎನ್‌.ನಾಗೇಶ್ ತಂಡ, ತಕ್ಷಣವೇ ಸುಲಿಗೆಕೋರರ ಪತ್ತೆಗೆ ಕಾರ್ಯಾಚರಣೆಗಿಳಿದಿದೆ.

ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆರೋಪಿಗಳ ಚಹರೆ ಸಿಕ್ಕಿತು. ಈ ಸುಳಿವು ಆಧರಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲ್ಲ ಅಡಾವತ್ ತಿಳಿಸಿದ್ದಾರೆ. ಇನ್ನು ಆರೋಪಿ ಪ್ರಮೋದ್‌ ಓದಿರುವುದು ಬಿಎ. ಆದರೆ ಅಮೆರಿಕದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್‌ ಪದವಿ ಪಡೆದಿದ್ದ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು