ಅವ್ಯವಸ್ಥೆಗಳ ತಾಣವಾದ ದಶಪಥ ಹೆದ್ದಾರಿ, ಡ್ರ್ಯಾಗನ್ ತೋರಿಸಿ ಹೈವೆಯಲ್ಲಿ ದರೋಡೆ, ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ಟೋಲ್ ಸಂಗ್ರಹಕ್ಕೆ ಮುಂದಾದ ಹೆದ್ದಾರಿ ಪ್ರಾಧಿಕಾರ.
ವರದಿ- ಜಗದೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್,ರಾಮನಗರ
ರಾಮನಗರ(ಮಾ.16): ರಾಜ್ಯದ ಮೊದಲ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಕಳೆದ ಮಾರ್ಚ್ 12 ರಂದು ಉದ್ಘಾಟಿಸಿದ್ದರು. ಆದರೆ ಉದ್ಘಾಟನೆಯಾದ ಮೊದಲ ದಿನವೇ ಎಕ್ಸ್‌ಪ್ರೆಸ್ ವೇಯಲ್ಲಿ ಮಧ್ಯರಾತ್ರಿ ವೇಳೆ ಕೆಟ್ಟು ನಿಂತಿದ್ದ ಕಾರು ಪ್ರಯಾಣಿಕರಿಗೆ ಡ್ರ್ಯಾಗನ್ ತೋರಿಸಿ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಲಭೂತ ವ್ಯವಸ್ಥೆ ಕಲ್ಪಿಸದೇ ಹೆದ್ದಾರಿ ಉದ್ಘಾಟನೆ ಮಾಡಿದ್ದಕ್ಕೆ ವಾಹನ ಸವಾರರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಹೌದು, ರಾಜ್ಯದ ಮೊದಲ ಎಕ್ಸ್‌ಪ್ರೆಸ್ ವೇ ಉದ್ಘಾಟನೆಯಾದ ಮೊದಲ ದಿನವೇ ದರೋಡೆ ಕೋರರು ತಮ್ಮ ಕೈಚಳಕವನ್ನು ತೋರಿದ್ದಾರೆ. ಮೈಸೂರು ಮೂಲದ ವೈದ್ಯ ಲೋಹಿತ್ ರಾವ್ ಮತ್ತು ಅವರ ಪತ್ನಿ ಸ್ನೇಹಿತರನ್ನು ಬೆಂಗಳೂರಿಗೆ ಡ್ರಾಪ್ ಮಾಡಿ ವಾಪಸ್ ಹೋಗುವಾಗ ರಾಮನಗರ ಜಿಲ್ಲೆಯ ರಾಮನಗರ-ಚನ್ನಪಟ್ಟಣ ಬೈಪಾಸ್ ಮಧ್ಯ ಸಿಗುವ ದೇವರಹೊಸಹಳ್ಳಿ ಹಾಗೂ ತಿಟ್ಟಮಾರನಹಳ್ಳಿ ಮಧ್ಯ ಮಧ್ಯರಾತ್ರಿ ಸುಮಾರು ಒಂದೂವರೆ ಗಂಟೆಯಲ್ಲಿ ತಾಂತ್ರಿಕ ದೋಷದಿಂದ ಕಾರು ಕೆಟ್ಟು ನಿಂತಿತ್ತು. ತಕ್ಷಣ ಹೆಲ್ಪ್ ಲೈನ್ ಕರೆ ಮಾಡಿದ್ದರು ಯಾವುದೇ ಪ್ರಯೋಜನ ಆಗಲಿಲ್ಲ ಹಾಗಾಗಿ ಟೂಯಿಂಗ್ ವಾಹನಕ್ಕೆ ಕಾಲ್ ಮಾಡಿ ಕಾರಿನಲ್ಲಿ ಎಲ್ಲರೂ ಮಾತನಾಡುತ್ತಾ ಕುಳಿತುಕೊಂಡಿದ್ದರು.
ಉದ್ಘಾಟನೆಯಾದ ಮೂರೇ ದಿನಕ್ಕೆ ಕಿತ್ತೋಯ್ತಾ ದಶಪಥ ಹೆದ್ದಾರಿ..? ಪ್ರತಾಪ್ ಸಿಂಹ ಹೇಳಿದ್ದು ಹೀಗೆ..
ರಾತ್ರಿ ವೇಳೆ ಪ್ರಯಾಣಿಸಲು ಹೈವೆ ಡೇಂಜರ್...!
ಅಂದಹಾಗೆ ಕಾರಿನಲ್ಲಿದ್ದ ಕುಳಿತಿದ್ದ ಸಂದರ್ಭದಲ್ಲಿ ಇಬ್ಬರು ದುಷ್ಕರ್ಮಿಗಳು ಕಾರಿನ ಕಿಟಕಿಯನ್ನು ಜೋರಾಗಿ ಬಡಿದಿದ್ದಾರೆ, ಅದರಲ್ಲಿ ಒಬ್ಬರು ಹಾಕಿದ್ದ ಪ್ಯಾಂಟ್ ಖಾಕಿ ಬಣ್ಣ ಆಗಿದ್ದರಿಂದ ನಾವು ಪೊಲೀಸರೆಂದು ಕಾರಿನ ಡೋರ್ ಓಪನ್ ಮಾಡಿದ್ದೆವು. ವೈದ್ಯ ಲೋಹಿತ್ ರಾವ್ ಡೋರ್ ತೆಗೆಯುತ್ತಿದ್ದಂತೆ ನಮಗೆ ಇಬ್ಬರು ಡ್ರ್ಯಾಗನ್ ತೋರಿಸಿ ಭಯ ಪಡಿಸಿದ್ದರು. ಆ ಸಂದರ್ಭದಲ್ಲಿ ಕಿರಿಚೋಣ ಅನ್ನುವಷ್ಟರಲ್ಲಿ ನಮ್ಮ ಕುತ್ತಿಗೆಗೆ ಡ್ರ್ಯಾಗನ್ ಇಟ್ಟರು ಆಗ ನಾವು ಅಸಹಾಯಕ ರಾಗಿ ನಮ್ಮಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಸಿದು ಎಕ್ಸ್ ಪ್ರೆಸ್ ಹೈವೇಯಲ್ಲಿ ಬೀದಿ ದೀಪಗಳಿಲ್ಲದೆ ಕಾರಣ ಕೆಲವು ದೂರ ನಡೆದುಕೊಂಡು ಹೋಗಿ ಕಣ್ಮರೆಯಾದರೂ. ನಂತರ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆವು ಎಂದು ಹೆದ್ದಾರಿ ಪ್ರಾಧೀಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಇನ್ನೂ ಅದೆಷ್ಟೋ ಪ್ರಯಾಣೀಕರು ರಾತ್ರಿ ಹೈವೆಯಲ್ಲಿ ಸಂಚರಿಸುವ ಸಮಯದಲ್ಲಿ ಖದೀಮರು ವಾಹನ ಅಡ್ಡಗಟ್ಟಿ ದರೋಡೆ ಮಾಡುವ ಸಮಯದಲ್ಲಿ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಈ ಕುರಿತು ಕೆಲವು ವಾಹನ ಸವಾರರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದು ಜೀವ ಭಯದಲ್ಲೇ ಹೈವೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಾರೆ ಬೆಂಗಳೂರು ಮೈಸೂರು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರಂಭಗೊಂಡ ದಶಪಥ ಹೆದ್ದಾರಿ ಈಗ ಅದೇ ಹೆದ್ದಾರಿ ಸರಿಯಾದ ವ್ಯವಸ್ಥೆಗಳಿಲ್ಲದಿದ್ದರೂ ಜನರಿಂದ ಟೋಲ್ ಸಂಗ್ರಹ ಮಾಡುತ್ತಿರುವುದಕ್ಕೆ ಒಂದು ಕಡೆ ಸಾರ್ವಜನಿಕರಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ರಾತ್ರಿ ವೇಳೆ ಸಂಚರಿಸಬೇಕಾ ಬೇಡ್ವಾ ಎಂಬ ಅನುಮಾನ ವಾಹನ ಸವಾರರಲ್ಲಿ ವ್ಯಕ್ತವಾಗಿದೆ.