ಕಡಿಮೆ ಸಮಯದಲ್ಲಿ, ಅಡ್ಡ ದಾರಿಲೀ ಹೆಚ್ಚೆಚ್ಚು ಹಣ ಸಂಪಾದಿಸುವ ಯೋಚನೆಯಲ್ಲಿದ್ದೀರಾ.? ಹಾಗಾದ್ರೆ ಈ ಸ್ಟೋರಿ ನೋಡಿ
ವರದಿ : ನಂದನ್ ರಾಮಕೃಷ್ಣ, ಮಂಡ್ಯ
ಮಂಡ್ಯ (ಮೇ 26): ಕಡಿಮೆ ಸಮಯದಲ್ಲಿ, ಅಡ್ಡ ದಾರಿಲೀ ಹೆಚ್ಚೆಚ್ಚು ಹಣ ಸಂಪಾದಿಸುವ ಯೋಚನೆಯಲ್ಲಿದ್ದೀರಾ.? ಹಾಗಾದ್ರೆ ಈ ಸ್ಟೋರಿ ನೋಡಿ. ಮೊದಲು ಅಂತಹ ಯೋಚನೆಯನ್ನ ಈಗಲೇ ತಲೆಯಿಂದ ತೆಗೆದುಹಾಕಿ. ಯಾಕೆಂದರೆ ಮೋಸಗಾರರ ಟಾರ್ಗೆಟ್ ನೀವೆ ಇರಬಹುದು. ಹಣ ಡಬಲ್ ಮಾಡಿಕೊಡುವುದಾಗಿ (Double your money scam) ನಂಬಿಸಿ ಜನರನ್ನ ವಂಚಿಸುತ್ತಿದ್ದ ಗ್ಯಾಂಗ್ ಮಂಡ್ಯ ಪೊಲೀಸರ (Mandya Police) ಬಲೆಗೆ ಬಿದ್ದಿದೆ. ಅಮಾಯಕರಿಗೆ ದುಡ್ಡಿನ ಆಸೆ ಹುಟ್ಟಿಸಿ ಅವರಿಂದ ಲಕ್ಷ ಲಕ್ಚ ಹಣ ಲಪಟಾಯಿಸಿಕೊಂಡು ಪಾರಾರಿಯಾಗುತ್ತಿದ್ದ ಖದೀಮರನ್ನ ಹೆಡೆಮುರಿ ಕಟ್ಟಿದ್ದಾರೆ.
ವಂಚನೆ ನಡೆದದ್ದು ಹೇಗೆ?: ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದಿಸುವ ಆಸೆ ಹೊಂದಿದ್ದ ತುಮಕೂರು ಮೂಲದ ಕಿರಣ್ ಮತ್ತು ಪ್ರದೀಪ್ ಹಣ ಡಬಲ್ ಮಾಡಿಕೊಡುವುದಾಗಿ ಹೇಳ್ತಿದ್ದ ವ್ಯಕ್ತಿಯೊಬ್ಬನನ್ನ ಸಂಪರ್ಕ ಮಾಡಿದ್ರು. ಆತ ತನ್ನ ಗ್ಯಾಂಗ್ ಪರಿಚಯ ಮಾಡಿಸಿ ಹಣ ದುಪ್ಪಟ್ಟು ಮಾಡಿಕೊಡಲು ದಿನಾಂಕ ನಿಗಧಿಪಡಿಸಿದ್ದ. ಅದರಂತೆ ಕಳೆದ ಮೇ 3 ರಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಉಪ್ಪಿನಕೆರೆ ಗೇಟ್ ಬಳಿಗೆ ಬಂದಿದ್ದ ಕಿರಣ್ ಹಾಗೂ ಪ್ರದೀಪ್ 10 ಲಕ್ಷ ಸಿಗುವ ದುರಾಸೆಯಿಂದ 5.50 ಲಕ್ಷ ರೂ. ತಂದಿದ್ದರು. ಆದ್ರೆ ಹೊಂಚುಹಾಕಿ ಕುಳಿತಿದ್ದ ವಂಚಕರು. ಇಬ್ಬರಿಗೂ ಪಂಗನಾಮ ಹಾಕಿ ಎಸ್ಕೇಪ್ ಆಗಿದ್ದಾರೆ.
5.50 ಲಕ್ಷ ಹಣ ಪಡೆದು, ನೋಟ್ ಬುಕ್ ಇರುವ ಬ್ಯಾಗ್ ನೀಡಿ ದೋಖಾ: ಕಿರಣ್ ಮತ್ತು ಪ್ರದೀಪ್ ಅವರಿಂದ 5.50 ಲಕ್ಷ ಇರುವ ಬ್ಯಾಗ್ ಪಡೆದಿದ್ದ ಖದೀಮರು. ನಂತರ ತಮ್ಮ ಬಳಿಯಿದ್ದ ಬ್ಯಾಗ್ ನೀಡಿ ಇದರಲ್ಲಿ 10 ಲಕ್ಷ ಇದೆ ಎಂದು ಹೇಳಿ ಅಲ್ಲಿಂದ ಹೊರಟಿದ್ದರು. 5 ಲಕ್ಷಕ್ಕೆ 10 ಲಕ್ಷ ಹಣ ಸಿಕ್ಕಿತು ಎಂಬ ಖುಷಿಯಲ್ಲಿದ್ದ ಸ್ನೇಹಿತರು ಕಾರಿನಲ್ಲಿ ಕುಳಿತು ಬ್ಯಾಗ್ ತೆರೆದಾಗ ಇಬ್ಬರಿಗೂ ಅಘಾತವಾಗಿತ್ತು.
ಇದನ್ನೂ ಓದಿ: MBBS ಸೀಟು ಕೊಡಿಸೋದಾಗಿ ವೈದ್ಯನಿಗೆ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿದ ವಂಚಕರ ಬಂಧನ
ಬ್ಯಾಗ್‍ನ ಮೇಲ್ಭಾಗದಲ್ಲಿ 500 ಮತ್ತು 200 ಮುಖ ಬೆಲೆಯ ನೋಟುಗಳನ್ನು ಇರಿಸಿದ್ದ ಖತರ್ನಾಕ್‌ಗಳು ನೋಟಿನ ಕೆಳಭಾಗದಲ್ಲಿ ನೋಟ್ ಪುಸ್ತಕಗಳನ್ನ ಇಟ್ಟು ಪಂಗನಾಮ ಹಾಕಿದ್ರು (Fraud). ನಂತರ ಮೋಸ ಹೋದ ಬಗ್ಗೆ ಕಿರಣ್ ಹಾಗೂ ಪ್ರದೀಪ್ ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಖದೀಮರ ಸುಳಿವು ಕೊಟ್ಟ ಮೊಬೈಲ್: ಮೋಸ ಹೋದವರು ನೀಡಿದ ದೂರಿನ ಆಧಾರದ ಮೇಲೆ ವಂಚಕರ ಹುಡುಕಾಟಕ್ಕೆ ಮಂಡ್ಯ ಎಸ್‌ಪಿ ಯತೀಶ್ ಮದ್ದೂರು ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್ ನೇತೃದಲ್ಲಿ ತಂಡ ರಚನೆ ಮಾಡಿದ್ದರು. ಘಟನೆ ನಡೆದ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಖದೀಮರ ಅಡ್ಡಗಳಲ್ಲಿ ಹುಡುಕಾಟ ನಡೆಸಿದರೂ ಸಣ್ಣ ಸುಳಿವು ಪತ್ತೆಯಾಗಲಿಲ್ಲ ಆದರೆ ಘಟನಾ ಸ್ಥಳದಲ್ಲಿ ಕಳ್ಳರು ಬಳಸಿದ್ದ ಫೋನ್ ಟ್ರೇಸ್ ಮಾಡಿದ ಪೊಲೀಸರು ಲೋಕೇಶನ್ ಜಾಡು ಹಿಡಿದು ಅವರಿದ್ದ ಜಾಗಕ್ಕೆ ಹೋಗಿ 8 ಮಂದಿಯನ್ನು ಬಂಧಿಸಿದ್ದರು.
4,02,000 ಹಣ,1 ಕಾರು, 1 ಬೈಕ್ ಹಾಗೂ 8 ಮೊಬೈಲ್‍ಗಳು ವಶ: ಪ್ರಕರಣದಲ್ಲಿ (Crime) ಭಾಗಿಯಾಗಿದ್ದ ನಂಜುಂಡ ಆರಾಧ್ಯ, ಶ್ರೀನಿವಾಸ, ಸಲೀಂ ಉಲ್ಲಾಖಾನ್, ಕೆಂಪರಾಜು, ಸಾಜಿದ್ ಅಹಮದ್, ಮಂಜುನಾಥ್, ಶ್ರೀನಿವಾಸ್‍ರೆಡ್ಡಿ ಹಾಗೂ ರಾಜು ಸೇರಿ 8 ಮಂದಿಯನ್ನ ಪೊಲೀಸರು ಸೆರೆ ಹಿಡಿದಿದ್ದಾರೆ. ಇದರಲ್ಲಿ ನಂಜುಂಡ ಆರಾಧ್ಯ ಐದು ವರ್ಷಗಳ ಹಿಂದೆ ಖೋಟಾ ನೋಟು ಕೇಸ್‍ನಲ್ಲಿ ಮದ್ದೂರಿನ ಪೊಲೀಸರಿಗೆ ಅತಿಥಿಯಾಗಿದ್ದ ಎಂಬ ವಿಷಯ ತಿಳಿದು ಬಂದಿದೆ.
ಇದೀಗ ಮತ್ತೆ ಸಕ್ರಿಯವಾಗಿರುವ ನಂಜುಂಡ ತನ್ನದೇ ಗುಂಪು ಕಟ್ಟಿಕೊಂಡು ಅಮಾಯಕ ಜನರನ್ನ ಯಾಮಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ನಂಜುಂಡ & ಟೀಂ ಮದ್ದೂರು ಪೊಲೀಸರ ಅತಿಥಿಗಳಾಗಿದ್ದಾರೆ. ಬಂಧಿತರಿಂದ 4,02,000 ಹಣ ಕತ್ಯಕ್ಕೆ ಬಳಸಲಾಗಿದ್ದ 1 ಕಾರು, 1 ಬೈಕ್ ಹಾಗೂ 8 ಮೊಬೈಲ್‍ಗಳನ್ನು ವಶ ಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ದೇವರ ಮಗ ಮರ್ಡರ್ ಕೇಸ್, 48 ಗಂಟೆಯಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು