ಕಾನ್ಪುರ ಡಾನ್ 33 ಮನೆ ಒಡೆಯ!| 80 ಎಕರೆ ಜಮೀನು, 10 ಕೋಟಿ ಆದಾಯ| 100 ಜನರಿಗೆ ನೌಕರಿ
ಲಖನೌ(ಜು.12): ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿ ಹತನಾದ ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ, ನೂರಾರು ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಆತನ ಆಸ್ತಿಪಾಸ್ತಿಯ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ಆರಂಭಿಸುವ ಸಾಧ್ಯತೆ ಇದೆ.
ಹಫ್ತಾ ವಸೂಲಿ, ಭೂಕಬಳಿಕೆ, ಬಡ್ಡಿ ವ್ಯಾಪಾರ, ಸುಲಿಗೆ ಮಾಡುತ್ತಿದ್ದ ಈತನ ವಾರ್ಷಿಕ ಆದಾಯ ಸುಮಾರು 10 ಕೋಟಿ ರು. ಇತ್ತು. ಈತ ಸುಮಾರು 80 ಎಕರೆ ಜಮೀನಿನ ಒಡೆಯ ಎಂದು ತಿಳಿದುಬಂದಿದೆ.
undefined
ಹಫ್ತಾ ವಸೂಲಿ ಮೂಲಕವೇ ಈತನಿಗೆ ಮಾಸಿಕ 50 ಲಕ್ಷ ರು. ಬರುತ್ತಿತ್ತು. ಉದ್ಯಮಿಗಳಿಗೆ ಈತ ಇಂತಿಷ್ಟುನೀಡಬೇಕು ಎಂದು ಹಫ್ತಾ ‘ಫಿಕ್ಸ್’ ಮಾಡಿದ್ದ. ಭೂಕಬಳಿಕೆ ದಂಧೆ ನಡೆಸುತ್ತಿದ್ದ ಈತ ಇದಕ್ಕೆಂದೇ 100 ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಎಂದು ಮೂಲಗಳು ಹೇಳಿವೆ.
ತನ್ನ ಸ್ವಗ್ರಾಮ ಕಾನ್ಪುರ ಸಮೀಪದ ಬಿಕ್ರುನಲ್ಲಿ 80 ಎಕರೆ ಜಮೀನಿನ ಮಾಲೀಕ ಈತ. ಲಖನೌದಲ್ಲಿ 2 ಫ್ಲ್ಯಾಟ್ ಸೇರಿದಂತೆ ವಿವಿಧೆಡೆ 21 ಫ್ಲ್ಯಾಟ್, 12 ಮನೆ ಹಾಗೂ ಉತ್ತರ ಪ್ರದೇಶದ ಹಲವೆಡೆ ಜಮೀನು ಕಬಳಿಸಿ ಸಾಕಷ್ಟುನಿವೇಶನ ಹೊಂದಿದ್ದಾನೆ ಎಂದು ತನಿಖೆದಾರರಿಗೆ ಮಾಹಿತಿ ಲಭ್ಯವಾಗಿದೆ.
ದುಬೆಯ ಹಿರಿಯ ಮಗ ಬ್ರಿಟನ್‌ನಲ್ಲಿ ಮೆಡಿಕಲ್ ಓದುತ್ತಿದ್ದಾನೆ. ಇಷ್ಟೇ ಅಲ್ಲ, ಈತನ ಬಂಧುಗಳು ದುಬೈನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ. ಈತನ ಶಿಷ್ಯಂದಿರು ಕೂಡ ಕೋಟ್ಯಂತರ ರು. ಆದಾಯ ಸಂಪಾದಿಸಿದ್ದಾರೆ. ಈವರೆಗೆ ಈತನ ಸಹಚರರ 15 ಕೋಟಿ ರು. ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.