ಡ್ರಗ್ಸ್ ಕೊಟ್ಟು ಪುತ್ರಿ ಮೇಲೆ ಮಲತಂದೆ ಅತ್ಯಾಚಾರ| ವಿಕೃತಿ: ಹೇಯ ಕೃತ್ಯಕ್ಕೆ ತಾಯಿಯೂ ಸಹಕಾರ| ನೊಂದ ವಿದ್ಯಾರ್ಥಿನಿ ಹುಳಿಮಾವು ಪೊಲೀಸರಿಗೆ ದೂರು
ಎನ್. ಲಕ್ಷ್ಮಣ್
ಬೆಂಗಳೂರು(ಜು.12): ಮಲತಂದೆಯೊಬ್ಬ ಪುತ್ರಿಗೆ ಡ್ರಗ್ಸ್ ಹಾಗೂ ಮದ್ಯ ಕೊಟ್ಟು ಪ್ರಜ್ಞೆ ತಪ್ಪಿದ ಬಳಿಕ ನಿರಂತರವಾಗಿ ಅತ್ಯಾಚಾರ ಎಸಗಿರುವ ಹೇಯ ಕೃತ್ಯದ ಬಗ್ಗೆ ದೂರು ದಾಖಲಾಗಿದೆ.
ಈ ಕೃತ್ಯಕ್ಕೆ ತಾಯಿ ಕೂಡ ಸಹಕರಿಸಿದ್ದಾಳೆ ಎಂದು ಆರೋಪಿಸಿ ಸಂತ್ರಸ್ತೆ 20 ವರ್ಷದ ಕಾಲೇಜು ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಅತ್ಯಾಚಾರ, ಬೆದರಿಕೆ ಪ್ರಕರಣದಡಿ ಎಫ್‌ಐಆರ್ ದಾಖಲಿಸಿಕೊಂಡಿರುವ ಹುಳಿಮಾವು ಠಾಣೆ ಪೊಲೀಸರು ಆರೋಪಿ ಅರಕೆರೆಯ ಸಾಮ್ರಾಟ್ ಲೇಔಟ್ ನಿವಾಸಿ ಅಲೆಗ್ಸಾಂಡರ್ ದಾಸ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ಏನಿದು ಪ್ರಕರಣ?
ಸಂತ್ರಸ್ತೆಯ ತಾಯಿ ಸೌಮ್ಯ (ಹೆಸರು ಬದಲಾಯಿಸಲಾಗಿದೆ) ಹಲವು ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದಳು. ವಿಚ್ಛೇದನದ ನಂತರ ಆರೋಪಿ ಅಲೆಗ್ಸಾಂಡರ್‌ನನ್ನು ವಿವಾಹವಾಗಿದ್ದರು. ಅಲೆಗ್ಸಾಂಡರ್ ನಿರ್ಮಾಣ ಕಂಪನಿಯ ಮೇಲ್ವಿಚಾರಕನಾಗಿದ್ದ. ಸಂತ್ರಸ್ತೆ ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದು, ತಾಯಿ ಹಾಗೂ ಮಲತಂದೆ ಜತೆ ಅರಕೆರೆಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಳು.
ಚಹಾದಲ್ಲಿ ನಿದ್ರೆ ಮಾತ್ರೆ: ತಾಯಿ ಚಹಾ ಸೇರಿದಂತೆ ಇತರೆ ಆಹಾರ ಪದಾರ್ಥಗಳಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಡುತ್ತಿದ್ದರು. ಅರೆ ಪ್ರಜ್ಞಾನಸ್ಥೆಯಲ್ಲಿದ್ದ ನನ್ನ ಮೇಲೆ ಮಲತಂದೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಒಂದೂವರೆ ವರ್ಷದ ಹಿಂದೆ ಕೆಲಸದ ನಿಮಿತ್ತ ಮಲತಂದೆ ನನ್ನನ್ನು ಹೈದರಾಬಾದ್‌ಗೆ ಕರೆದುಕೊಂಡು ಹೋಗಿದ್ದು, ಹೋಟೆಲ್‌ವೊಂದರಲ್ಲಿ ತಂಗಿದ್ದೆವು. ಈ ವೇಳೆ ಬಲವಂತವಾಗಿ ಮದ್ಯಪಾನ ಮಾಡಿಸಿ ಪ್ರಜ್ಞೆ ತಪ್ಪಿದ ಬಳಿಕ ಅತ್ಯಾಚಾರ ಎಸಗಿದ್ದ. ಬೆಳಗ್ಗೆ ಎಚ್ಚರಗೊಂಡಾಗ ನನ್ನ ದೇಹದ ಮೇಲೆ ಬಟ್ಟೆಇರಲಿಲ್ಲ. ಮೊದಲ ಬಾರಿಗೆ ನನಗೆ ಹೊಟ್ಟೆನೋವಿನಂತಹ ಲಕ್ಷಣಗಳು ಕಂಡು ಬಂದಿತ್ತು.
8 ಪೊಲೀಸರ ಹತ್ಯೆಗೈದಿದ್ದ ವಿಕಾಸ್ ದುಬೆ ಎನ್‌ಕೌಂಟರ್‌ಗೆ ಬಲಿ!
ಹೀಗೆ ನಿರಂತರವಾಗಿ ನನ್ನ ಮೇಲೆ ಅತ್ಯಾಚಾರ ನಡೆದಿದೆ. ಪ್ರಶ್ನೆ ಮಾಡಿದರೆ ಮೊಬೈಲ್ ಕಸಿದುಕೊಂಡು ಕಾಲೇಜಿಗೆ ಹೋಗುವುದು ಬೇಡ, ಹೊರಗಡೆ ಈ ವಿಷಯ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ. ಇದರಿಂದ ನೊಂದು ನಾನು ಮನೆ ಬಿಟ್ಟು ಹೋಗಿದ್ದೆ. ನನಗೆ ಜೀವ ಭಯ ಇದ್ದು, ರಕ್ಷಣೆ ಅಗತ್ಯವಿದೆ. ನನ್ನ ಮೇಲೆ ಅತ್ಯಾಚಾರ ನಡೆಸಿ, ಮಾನಸಿಕ, ದೈಹಿಕ ಕಿರುಕುಳ ನೀಡಿರುವ ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ನಗ್ನ ಚಿತ್ರ ತೆಗೆಸಿಕೋ
ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿ, ಮಾಡೆಲಿಂಗ್‌ನಲ್ಲಿ ನಿನ್ನನ್ನು ನೀನು ತೊಡಗಿಸಿಕೋ. ನಗ್ನ ಭಾವಚಿತ್ರಗಳನ್ನು ತೆಗೆಸಿ, ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೀಡಿಸುತ್ತಿದ್ದರು. ಅಲ್ಲದೆ, ನಿತ್ಯ ಮಾದಕ ವಸ್ತು ಮತ್ತು ಮದ್ಯ ಸೇವನೆ ಮಾಡುವಂತೆ ಮಲತಂದೆ ಒತ್ತಾಯ ಮಾಡುತ್ತಿದ್ದ. ಹಲವು ಬಾರಿ ನನಗೆ ಗೊತ್ತಿಲ್ಲದಂತೆ ಮದ್ಯ ಹಾಗೂ ಮಾದಕ ದ್ರವ್ಯ ಕೊಟ್ಟು, ನಾನು ಪ್ರಜ್ಞೆ ಕಳೆದುಕೊಳ್ಳುವಂತೆ ಮಾಡುತ್ತಿದ್ದರು. ಇದಕ್ಕೆ ನನ್ನ ತಾಯಿಯ ಸಹಕಾರ ಇದೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.