ಕಳ್ಳರನ್ನು ಕಂಡರೇ ಪೊಲೀಸರಿಗೆ ಭಯ, ಆರೋಪಿಗಳಿಂದ ಬರುತ್ತಿದೆ ಕೊರೋನಾ!

By Kannadaprabha News  |  First Published Jul 12, 2020, 7:34 AM IST

ಕಳ್ಳರನ್ನು ಕಂಡರೇ ಪೊಲೀಸರಿಗೆ ಭಯ!| ಸೀಲ್‌ಡೌನ್‌ ಆಗುತ್ತಿರುವ ಠಾಣೆಗಳು, ನ್ಯಾಯಾಲಯಗಳು| ಆರೋಪಿಗಳಿಂದ ಬರುತ್ತಿದೆ ಕೊರೋನಾ ಸೋಂಕು


ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.12): ಕೊರೋನಾ ವಾರಿಯರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಇದೀಗ ಕಳ್ಳತನ ಸೇರಿದಂತೆ ವಿವಿಧ ಅಪರಾಧ ಆರೋಪಿಗಳ ವಿರುದ್ಧ ಕಾರ್ಯಾಚರಣೆ ಮಾಡುವುದೇ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಲಾಕ್‌ಡೌನ್‌ ಕಾರ್ಯಾಚರಣೆ ವೇಳೆ ಪೊಲೀಸರಿಗೆ ಸೋಂಕು ತಗಲುತ್ತಿತ್ತು. ಆದರೆ ಇದೀಗ ಆರೋಪಿಗಳ ಕಾರ್ಯಾಚರಣೆ, ವಿಚಾರಣೆ ಸಂದರ್ಭಗಳಲ್ಲಿ ಪೊಲೀಸರಿಗೂ ಸೋಂಕು ತಗಲುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದೆ.

Tap to resize

Latest Videos

undefined

ಆರೋಪಿಗಳ ದೆಸೆಯಿಂದಾಗಿ ಇದೀಗ ಪೊಲೀಸ್‌ ಠಾಣೆ ಮಾತ್ರವಲ್ಲದೆ ಜೈಲು, ಕೋರ್ಟ್‌ಗಳೂ ಸೀಲ್‌ಡೌನ್‌ ಆಗುತ್ತಿದ್ದು ಜೈಲು ಸಿಬ್ಬಂದಿ, ನ್ಯಾಯಾಲಯ ಸಿಬ್ಬಂದಿ, ವಕೀಲರಿಗೂ ಸೋಂಕಿನ ಭೀತಿ ಎದುರಾಗಿದೆ. ಈ ರೀತಿಯ ಬೆಳವಣಿಗೆ ಪೊಲೀಸ್‌ ಇಲಾಖೆಯ ಆಡಳಿತದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಆರೋಪಿಗಳನ್ನು ಕಂಡರೇ ಪೊಲೀಸರು ಭಯಪಡುತ್ತಿದ್ದು, ಯಾಕಪ್ಪ ಈ ಇವರ ಸಹವಾಸ ಎಂದು ದೂರ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಸಕ್ರಿಯ ಕೇಸು ಹೆಚ್ಚಳದಲ್ಲಿ ದೇಶದಲ್ಲಿ ಕರ್ನಾಟಕವೇ ನಂ.1!

ಕಳ್ಳನೊಬ್ಬ ಪೊಲೀಸರಿಗೆ ಕೊರೋನಾ ಸೋಂಕು ತಗಲಿಸಿದ ಮೊದಲ ಪ್ರಕರಣ ನಡೆದದ್ದು ಹುಬ್ಬಳ್ಳಿಯಲ್ಲಿ. ಇಲ್ಲಿನ ಉಪನಗರ ಠಾಣೆಯಲ್ಲಿ ಕೊರೋನಾ ಹಬ್ಬಲು ಹಾರ್ಡ್‌ವೇರ್‌ ಅಂಗಡಿಯಲ್ಲಿ ಕಳ್ಳತನ ನಡೆಸಿದ್ದ ಆರೋಪಿಯೊಬ್ಬನ ಬಂಧನವೇ ಕಾರಣ. ಆತನಿಂದಾಗಿ ಮೂವರು ಪೊಲೀಸರಿಗೆ ಕೊರೋನಾ ಸೋಂಕು ತಗಲಿದ್ದು ಮಾತ್ರವಲ್ಲದೆ ಎಸಿಪಿ, ಇನ್‌ಸ್ಪೆಕ್ಟರ್‌ ಸೇರಿದಂತೆ 24 ಸಿಬ್ಬಂದಿ ಕ್ವಾರಂಟೈನ್‌ ಆಗಿದ್ದರು.

ಮತ್ತೊಂದು ಪ್ರಕರಣದಲ್ಲಿ ದೇವಸ್ಥಾನ ಹಾಗೂ ಎರಡು ಬೈಕ್‌ಗಳ ಕಳ್ಳತನದ ಆರೋಪದ ಮೇರೆಗೆ ಜೂ.24ರಂದು ಶಿರಸಿಯಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿಗೆ ಕೊರೋನಾ ಪಾಸಿಟಿವ್‌ ವರದಿ ಬಂದಿತ್ತು. ಪರಿಣಾಮ ಶಿರಸಿ ಠಾಣೆ, ವೃತ್ತ ನಿರೀಕ್ಷಕರ ಕಚೇರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿ ಸೀಲ್‌ಡೌನ್‌ ಮಾಡಲಾಗಿತ್ತು. ನಗರ ಠಾಣೆಯ ಪಿಎಸ್‌ಐ ಸೇರಿದಂತೆ ಚೋರನನ್ನು ಬಂಧಿಸಿದ ಸಿಬ್ಬಂದಿ ಸಹಿತ ಒಟ್ಟು 6 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಉಪಕಾರಾಗೃಹದ ಪ್ರತ್ಯೇಕ ಕೋಣೆಯಲ್ಲಿ ಈ ಕಳ್ಳತನದ ಆರೋಪಿಯನ್ನು ಇರಿಸಿದ್ದರೂ ಉಳಿದ 20 ಆರೋಪಿಗಳ ಗಂಟಲು ದ್ರವ ಪರೀಕ್ಷಿಸಲು ಕಳಿಸಲಾಗಿತ್ತು. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರಿಂದ ನ್ಯಾಯಾಧೀಶರು ಹಾಗೂ ನ್ಯಾಯಾಲಯದ ಸಿಬ್ಬಂದಿಯೂ 14 ದಿನ ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ಇಷ್ಟೂಸಾಲದೆಂಬಂತೆ ಈ ಆರೋಪಿ ಎರಡು ಬಾರಿ ಕಾರವಾರದ ಕೋವಿಡ್‌-19 ವಾರ್ಡ್‌ನಿಂದ ತಪ್ಪಿಸಿಕೊಂಡು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ. ಎರಡೂ ಬಾರಿಯೂ ಪೊಲೀಸರು ಹಿಡಿದು ತಂದಿದ್ದರು.

ರಾಜ್ಯಾದ್ಯಂತ ಲಾಕ್‌ಡೌನ್‌ ವಿಸ್ತರಣೆ?: ಮಹತ್ವದ ಸುಳಿವು

ಇನ್ನು ಹುಬ್ಬಳ್ಳಿಯ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಆರೋಪಿಗೆ ಕೊರೋನಾ ದೃಢಪಟ್ಟಿದ್ದರಿಂದ 17 ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಇಂತಹ ಪ್ರಕರಣಗಳು ರಾಜ್ಯದ ವಿವಿಧ ಭಾಗಗಳಿಂದ ವರದಿಯಾಗುತ್ತಲೇ ಇವೆ. ಹೀಗಾಗಿ ಕಳ್ಳರು, ದರೋಡೆಕೋರರು, ವಂಚಕರು ಸೇರಿದಂತೆ ಯಾವುದೇ ಬಗೆಯ ಆರೋಪಿಗಳನ್ನು ಬಂಧಿಸಬೇಕೆಂದರೂ ಪೊಲೀಸರು ಯೋಚಿಸುವಂತಾಗಿದೆ ಎಂಬ ಮಾತು ಪೊಲೀಸ್‌ ಸಿಬ್ಬಂದಿಯಿಂದಲೇ ಬರುತ್ತಿದೆ.

ಪೊಲೀಸ್‌ ಸಿಬ್ಬಂದಿಯಲ್ಲೂ ಕೊರೋನಾ ಹಬ್ಬುತ್ತಿದೆ. ಕೆಲವರಿಗೆ ಆರೋಪಿಗಳಿಂದ ಬಂದಿದ್ದರೆ, ಕೆಲವರಿಗೆ ಬೇರೆ ಮೂಲಗಳಿಂದ ತಗುಲಿದೆ. ಸುರಕ್ಷಾ ಸಾಧನಗಳನ್ನೆಲ್ಲ ಸಿಬ್ಬಂದಿಗೆ ಕೊಟ್ಟಿದ್ದೇವೆ. ಜಾಗ್ರತರಾಗಿ ಕೆಲಸ ಮಾಡುವಂತೆ ಸೂಚಿಸಿದ್ದೇವೆ. ಆದರೂ ಹಬ್ಬುತ್ತಿದೆ.

-ಬಸರಗಿ, ಡಿಸಿಪಿ, ಪೊಲೀಸ್‌ ಕಮಿಷನರೇಟ್‌

click me!