ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕನ್ನಡದ ಹೆಸರಾಂತ ಸಿನಿಮಾ ‘ಬಂಗಾರದ ಮನುಷ್ಯ’ ನಿರ್ದೇಶಕ ದಿವಂಗತ ಸಿದ್ದಲಿಂಗಯ್ಯ ಅವರ ಪತ್ನಿ ಹಿರಿಯ ನಟಿ ಶ್ಯಾಮಲಾದೇವಿ ಅವರು ತಮ್ಮ ಪುತ್ರ ಹಾಗೂ ಸೊಸೆಯ ವಿರುದ್ಧವೇ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು (ಜೂ.22): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕನ್ನಡದ ಹೆಸರಾಂತ ಸಿನಿಮಾ ‘ಬಂಗಾರದ ಮನುಷ್ಯ’ ನಿರ್ದೇಶಕ ದಿವಂಗತ ಸಿದ್ದಲಿಂಗಯ್ಯ ಅವರ ಪತ್ನಿ ಹಿರಿಯ ನಟಿ ಶ್ಯಾಮಲಾದೇವಿ ಅವರು ತಮ್ಮ ಪುತ್ರ ಹಾಗೂ ಸೊಸೆಯ ವಿರುದ್ಧವೇ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಂದ್ರಾಲೇಔಟ್ ಜ್ಯೋತಿನಗರ ನಿವಾಸಿ ಶ್ಯಾಮಲಾದೇವಿ ಅವರು ನೀಡಿದ ದೂರಿನ ಮೇರೆಗೆ ಆಕೆಯ ಪುತ್ರ ನಿತಿನ್ ಮತ್ತು ಸೊಸೆ ಸ್ಮಿತಾ ವಿರುದ್ಧ ಕಿರುಕುಳ, ಹಲ್ಲೆ, ದೌರ್ಜನ್ಯ, ಬ್ಲ್ಯಾಕ್‌ಮೇಲ್ ಆರೋಪದಡಿ ಎಫ್‌ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೂರಿನಲ್ಲಿ ಏನಿದೆ?: ತಮಗೆ ನಿತಿನ್ ಮತ್ತು ಉಮಾ ಎಂಬ ಇಬ್ಬರು ಮಕ್ಕಳಿದ್ದಾರೆ. ಕೆಲ ವರ್ಷಗಳ ಹಿಂದೆ ಪುತ್ರ ನಿತಿನ್‌ಗೆ ನಿವೃತ್ತ ಪೊಲೀಸ್ ಅಧಿಕಾರಿಯ ಪುತ್ರಿ ಸ್ಮಿತಾ ಜತೆಗೆ ವಿವಾಹ ಮಾಡಿಸಿದೆ. ಬಳಿಕ ಹೊಸ ಮನೆ ಖರೀದಿಸಿ, ಪುತ್ರ-ಸೊಸೆ ಜತೆಗೆ ನೆಲೆಸಿದ್ದೆ. ಮದುವೆಯಾದ ಕೆಲವೇ ದಿನಕ್ಕೆ ಪುತ್ರ ಮತ್ತು ಸೊಸೆ ಮನೆಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಕಿರಕುಳ ನೀಡಲು ಆರಂಭಿಸಿದ್ದರು. ಇದಕ್ಕೆ ಒಪ್ಪದಿದ್ದಾಗ, ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ಮಾಡಿದರು. ಈ ಬಗ್ಗೆ ಹಿರಿಯ ನಾಗರಿಕರ ವೇದಿಕೆಗೆ ದೂರು ನೀಡಿದ್ದೆ. ಈ ವೇಳೆ ಪುತ್ರ ನಿತಿನ್ ಕ್ಷಮೆಯಾಚಿಸಿದ.
ಅಕ್ಕಿಭಾಗ್ಯ ಕಾಂಗ್ರೆಸ್ ಸ್ವಯಂಕೃತ ಅಪರಾಧ, ಕೇಂದ್ರದ ಮೇಲೆ ಗೂಬೆ ಕೂರಿಸಲೆತ್ನ: ಎಚ್‌ಡಿಕೆ
ಪತ್ನಿ ಗರ್ಭಿಣಿ ಆಗಿರುವುದರಿಂದ ಮನೆಗೆ ಹೊರಗೆ ಕಳುಹಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದ. ಇದಾದ ಕೆಲ ದಿನ ಸುಮ್ಮನಿದ್ದ ಪುತ್ರ ಮತ್ತು ಸೊಸೆ, ಮತ್ತೆ ಮನೆ ವಿಚಾರ ಪ್ರಸ್ತಾಪಿಸಿ ಕಿರುಕುಳ ನೀಡಲು ಆರಂಭಿಸಿದ್ದರು. ನನ್ನ ಹೆಸರಿಗೆ ಮನೆ ಬರೆದು ಕೊಡದಿದ್ದಲ್ಲಿ ಪತ್ನಿ ಕಡೆಯಿಂದ ವರಕ್ಷಿಣೆ ಕಿರುಕುಳದಡಿ ಪೊಲೀಸ್ ಠಾಣೆಗೆ ದೂರು ಕೊಡಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ಕೆಲಸದ ನಿಮಿತ್ತ ಲಂಡನ್‌ಗೆ ತೆರಳಿರುವ ಪುತ್ರಿ ಉಮಾಳನ್ನು ಕೊಲೆ ಮಾಡಿವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಿದ್ಯುತ್ ದರ ಏರಿಕೆ: ಉತ್ತರ, ಮಧ್ಯ ಕರ್ನಾಟಕದಲ್ಲಿಂದು ಉದ್ಯಮ ಬಂದ್!
ಮನೆಯಲ್ಲಿ ಅಡುಗೆ ಮಾಡಲು ಅವಕಾಶ ನೀಡುತ್ತಿಲ್ಲ. ಮಲಗುವ ಕೋಣೆ ಸೇರಿದಂತೆ ಯಾವುದನ್ನೂ ಬಳಸಲು ಬಿಡುತ್ತಿಲ್ಲ. ಪುತ್ರ ಮತ್ತು ಸೊಸೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಮನೆ ಬಿಟ್ಟು ಹೋಗು ಎಂದು ಹಲ್ಲೆ ಮಾಡುತ್ತಿದ್ದಾರೆ. ಪ್ರತಿ ಕ್ಷಣವೂ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶ್ಯಾಮಲಾದೇವಿ ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.