ಗಾಂಜಾ ಮಾಫಿಯಾದಿಂದ ದಾಳಿ: ಕಲಬುರಗಿ ಇನ್ಸ್‌ಪೆಕ್ಟರ್‌ ಗಂಭೀರ..!

By Kannadaprabha NewsFirst Published Sep 25, 2022, 5:00 AM IST
Highlights

ದಾಳಿ ವೇಳೆ ಪೊಲೀಸರ ಮೇಲೆ ನೂರಾರು ಜನರು ಅಟ್ಯಾಕ್‌, ಮಹಾರಾಷ್ಟ್ರದಲ್ಲಿ ನಡೆದ ಘಟನೆ, ಇನ್ಸ್‌ಪೆಕ್ಟರ್‌ ಏರ್‌ಲಿಫ್ಟ್‌ಗೆ ಸಿದ್ಧತೆ

ಕಲಬುರಗಿ(ಸೆ.25): ಕರ್ನಾಟಕದ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಉಮರ್ಗಾ ತಾಲೂಕಿನ ತರೂರಿನಲ್ಲಿ ಶುಕ್ರವಾರ ರಾತ್ರಿ ಗಾಂಜಾ ಮಾಫಿಯಾದ ಮೂಲ ಭೇದಿಸಲು ತೆರಳಿದ್ದ ಕರ್ನಾಟಕ ಪೊಲೀಸ್‌ ತಂಡದ ಮೇಲೆ ಗಾಂಜಾ ದಂಧೆಕೋರರು ದಾಳಿ ನಡೆಸಿದ್ದು, ಈ ವೇಳೆ ಕಲಬುರಗಿ ಗ್ರಾಮೀಣ ಸಿಪಿಐ ಶ್ರೀಮಂತ ಇಲ್ಲಾಳ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಇಲ್ಲಾಳರಿಗೆ ನಗರದ ಖಾಸಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್‌ಲಿಫ್ಟ್‌ ಮಾಡುವ ಸಿದ್ಧತೆ ನಡೆದಿದೆ. ದಾಳಿಗೆ ಬಂದ ಪೊಲೀಸ್‌ ಅಧಿಕಾರಿಗಳ ಮೇಲೆಯೇ ಮಾರಣಾಂತಿಕ ದಾಳಿ ನಡೆಸುವುದರ ಜತೆಗೆ ಅವರನ್ನು ದೋಚಿರುವ ಗಾಂಜಾ ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಪ್ರಬಲವಾಗಿ ವ್ಯಕ್ತವಾಗಿದೆ.

ಏನಾಯಿತು?:

ಅಕ್ರಮ ಗಾಂಜಾ ದಂಧೆ ಆರೋಪದಡಿ ಕಳೆದ ಎರಡು- ಮೂರು ದಿನಗಳ ಹಿಂದೆ ಸಂತೋಷ ಹಾಗೂ ಕಲಬುರಗಿಯ ನವೀನ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ದಸ್ತಾಪುರ ಕ್ರಾಸ್‌ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ನವೀನ್‌ ಬಂಧಿತನಾಗಿದ್ದ. ಮಹಾರಾಷ್ಟ್ರ ಗಡಿಯ ಹೊನ್ನಳ್ಳಿಯ ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿರುವುದಾಗಿ ತನಿಖೆ ವೇಳೆ ಆತ ಬಾಯಿಬಿಟ್ಟಿದ್ದ.

ಲೋಕಾಯುಕ್ತ ದಾಳಿ: ಲಂಚ ಸಮೇತ ಪೊಲೀಸ್‌ ಪೇದೆ, ಸಿಪಿಐ ವಾಹನ ಚಾಲಕನ ಬಂಧನ

ಈ ಮಾಹಿತಿ ಆಧರಿಸಿ ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದಲ್ಲಿ ಮಹಾಗಾಂವ್‌ ಪಿಎಸ್‌ಐ ಆಶಾ ರಾಥೋಡ್‌ ಸೇರಿದಂತೆ 10 ಜನ ಪೊಲೀಸರ ತಂಡ ಗಾಂಜಾ ವಿರುದ್ಧದ ಕಾರ್ಯಾಚರಣೆಗಾಗಿ ಕಲಬುರಗಿ ಗಡಿ ಪ್ರದೇಶ ಮಹಾರಾಷ್ಟ್ರದ ಉಮರ್ಗಾ ತಾಲೂಕಿನ ತರೂರಿ ಗ್ರಾಮಕ್ಕೆ ತೆರಳಿತ್ತು.

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಊರಾದ್ದರಿಂದ ತಂಡದಲ್ಲಿದ್ದ ಕೆಲ ಪೊಲೀಸರು ಸ್ಥಳೀಯ ಪೊಲೀಸರ ಸಹಕಾರ ಪಡೆಯಲು ಅಲ್ಲಿನ ಪೊಲೀಸ್‌ ಠಾಣೆಗೆ ತೆರಳಿದ್ದರು. ತಂಡದಲ್ಲಿದ್ದ ಉಳಿದ ಪೊಲೀಸರು ಹಾಗೂ ಸಿಪಿಐ ಸ್ಥಳಕ್ಕೆ ಭೇಟಿ ನೀಡಿದಾಗ ಗಾಂಜಾ ಗಿಡಗಳು ಕಂಡು ಬಂದವು. ಮಹಾರಾಷ್ಟ್ರ ಪೊಲೀಸರ ಬರುವಿಕೆಗಾಗಿ ಇವರು ಕಾಯುತ್ತಾ ಹೊಲದಲ್ಲೇ ಠಿಕಾಣಿ ಹೂಡಿದ್ದರು. ಈ ಹಂತದಲ್ಲಿ ಗಾಂಜಾ ದಂಧೆಕೋರರು ಪೊಲೀಸ್‌ ತಂಡದ ಮೇಲೆ ದಾಳಿ ನಡೆಸಿದರು.
ಗಾಂಜಾ ಬೆಳೆಯುವ ಹೊಲಗಳಲ್ಲೇ ಕರ್ನಾಟಕದ ಪೊಲೀಸರು ಕಂಡಾಗ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗಾಂಜಾ ದಂಧೆಕೋರರು ಹಂಟರ್‌, ಕಟ್ಟಿಗೆ, ರಾಡ್‌, ಕಲ್ಲುಗಳನ್ನು ಬಳಸಿ ಪೊಲೀಸರ ಮೇಲೆ ದಾಳಿ ನಡೆಸಿದರು. ಶುಕ್ರವಾರ ರಾತ್ರಿ ಸುಮಾರು 9.30ರ ವೇಳೆಗೆ ಈ ದಾಳಿ ನಡೆದಿದೆ.

ಗಾಂಜಾ ಮಾಫಿಯಾದವರು ಗುಂಪಾಗಿ ತಮ್ಮ ತಂಡದ ಮೇಲೆ ಮುಗಿಬಿದ್ದಿದ್ದನ್ನು ಕಂಡ ಸಿಪಿಐ ಇಲ್ಲಾಳ, ತಕ್ಷಣವೇ ತಮ್ಮ ಬಳಿಯ ಸರ್ವಿಸ್‌ ರಿವಾಲ್ವರ್‌ ಬಳಸಿ 2 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೆ, ಅದಕ್ಕೆ ಜಗ್ಗದ ಗಾಂಜಾ ದಂಧೆಕೋರರು ಪೊಲೀಸರನ್ನು ಅಟ್ಟಾಡಿಸಿಕೊಂಡು ದಾಳಿ ನಡೆಸಿದರು. ದಾಳಿಯಲ್ಲಿ ಶ್ರೀಮಂತ ಇಲ್ಲಾಳ ತೀವ್ರವಾಗಿ ಗಾಯಗೊಂಡು, ಅಲ್ಲೇ ಪ್ರಜ್ಞಾಹೀನರಾಗಿ ಬಿದ್ದರು. ಈ ಮಧ್ಯೆ, ಉಳಿದ ಪೊಲೀಸರು ಗ್ಯಾಂಗ್‌ ದಾಳಿಗೆ ಹೆದರಿ, ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿದರು.

ಈ ವೇಳೆ, ಗಾಂಜಾ ಮಾಫಿಯಾಕೋರರು ಇಲ್ಲಾಳ ಬಳಿಯಿದ್ದ ರಿವಾಲ್ವರ್‌ ಸಹ ಕಿತ್ತುಕೊಂಡರು. ಇದರಲ್ಲಿ ಇನ್ನೂ 8 ಗುಂಡುಗಳಿದ್ದವು ಎಂಬ ಮಾಹಿತಿ ಇದೆ. ಅಲ್ಲದೆ ಅವರ ಜೇಬಿನ ಹಣ, ಕತ್ತಲ್ಲಿ ಇದ್ದ ಬಂಗಾರದ ಚೈನ್‌, ಇತರ ಪೊಲೀಸರ ಬಳಿಯಿದ್ದ ಹಣ, ಬಂಗಾರದ ಚೈನ್‌ಗಳನ್ನು ದೋಚಿ, ಅಲ್ಲಿಂದ ಪರಾರಿಯಾದರು. ಬಳಿಕ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಲ್ಲಾಳರನ್ನು ಸಮೀಪದ ಬಸವಕಲ್ಯಾಣದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ, ತಡರಾತ್ರಿ ಅವರನ್ನು ಕಲಬುರಗಿಯ ಯುನೈಟೆಡ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಸ್ತುತ ತುರ್ತು ಚಿಕಿತ್ಸಾ ಘಟಕದಲ್ಲಿ ವೆಂಟಿಲೇಟರ್‌ನಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಿರಂತರ ನಿಗಾದಲ್ಲಿ ಇರಿಸಲಾಗಿದೆ ಎಂದು ಆಸ್ಪತ್ರೆ ಮುಖ್ಯ ವೈದ್ಯ ಡಾ.ವಿಕ್ರಂ ಸಿದ್ದಾರೆಡ್ಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲಾ ಎಸ್ಪಿ ಇಶಾ ಪಂತ್‌, ಡಿಸಿ ಯಶ್ವಂತ ಗುರುಕರ್‌ ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು. ಅಗತ್ಯ ಬಿದ್ದರೆ ಏರ್‌ಲಿಫ್‌್ಟಗೂ ಅವಕಾಶ ಕಲ್ಪಿಸಲಾಗುವುದು. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕಲಬುರಗಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಿನ್ಸಿಪಾಲ್‌..?

ಕರ್ತವ್ಯದಲ್ಲಿದ್ದಾಗಲೇ ತಂದೆಯವರ ಮೇಲೆ ಅಟ್ಯಾಕ್‌ ಆಗಿದೆ. ದೇಹದ ಅನೇಕ ಕಡೆ ಗಂಭೀರವಾದ ಗಾಯಗಳಾಗಿವೆ. ಅಪಾಯಕಾರಿ ಎನಿಸುವ ಸ್ಥಳಗಳಿಗೆ ಕಳುಹಿಸುವಾಗ ಹೆಚ್ಚಿನ ಫೋರ್ಸ್‌ ಇರಬೇಕು. ಹೆಚ್ಚಿನ ಬಲವಿದ್ದಿದ್ದರೆ ಇಂದು ನಮ್ಮ ತಂದೆಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಅವರ ಆರೋಗ್ಯ ಸ್ಥಿತಿ ಕುರಿತು ಈಗಲೇ ಏನನ್ನೂ ಹೇಳಲು ಬರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸರಕಾರ ನಮ್ಮ ಕುಟುಂಬದ ನೆರವಿಗೆ ಬರಬೇಕು ಅಂತ ಸಿಪಿಐ ಶ್ರೀಮಂತ್‌ ಇಲ್ಲಾಳ ಪುತ್ರ. ಕಿರಣ್‌ ತಿಳಿಸಿದ್ದಾರೆ. 

ಇಲ್ಲಾಳ್‌ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಂದಿಗೆ ಮಾತನಾಡಿರುವೆ. ಇಲ್ಲಾಳ್‌ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಗತ್ಯವಿರುವ ಎಲ್ಲಾ ರೀತಿಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದೇನೆ. ಇಲ್ಲಾಳ್‌ ಅವರ ಆರೋಗ್ಯ ಸುಧಾರಣೆಗಾಗಿ ಎಲ್ಲರೂ ಪ್ರಾರ್ಥನೆ ಮಾಡೋಣ ಅಂತ ಕಲಬುರಗಿ ಡಿಸಿ.ಯಶವಂತ ಗುರುಕರ್‌ ಹೇಳಿದ್ದಾರೆ. 

ಏನಿದು ಪ್ರಕರಣ?

- ಕರ್ನಾಟಕ ಗಡಿಯ ಮಹಾರಾಷ್ಟ್ರ ಹಳ್ಳಿಯಲ್ಲಿ ಗಾಂಜಾ ಬೆಳೆಯುತ್ತಿರುವ ಕುರಿತು ಮಾಹಿತಿ
- ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದಲ್ಲಿ 10 ಜನರ ಪೊಲೀಸರ ತಂಡ ಆ ಹಳ್ಳಿಗೆ ಪ್ರಯಾಣ
- ಸ್ಥಳೀಯ ಪೊಲೀಸರಿಗೆ ತಿಳಿಸಲು ಕೆಲ ಪೊಲೀಸರನ್ನು ಕಳುಹಿಸಿ, ಹೊಲದಲ್ಲಿ ಕಾಯುತ್ತಿದ್ದ ತಂಡ
- ಈ ವೇಳೆ ಗಾಂಜಾ ಗಿಡಗಳ ಮಧ್ಯೆ ಅಡಗಿದ್ದ ದಂಧೆಕೋರರಿಂದ ಪೊಲೀಸರ ಮೇಲೆಯೇ ದಾಳಿ
- ನೂರಾರು ಸಂಖ್ಯೆಯಲ್ಲಿ ಮುಗಿಬಿದ್ದ ದಂಧೆಕೋರರು. ಇನ್ಸ್‌ಪೆಕ್ಟರ್‌ ಅವರನ್ನು ಅಟ್ಟಾಡಿಸಿ ಹಲ್ಲೆ
- ಪೊಲೀಸರ ಬಳಿ ಇದ್ದ ಹಣ, ಬಂಗಾರದ ಚೈನ್‌ಗಳನ್ನು ದೋಚಿ ಪರಾರಿಯಾದ ಗ್ಯಾಂಗ್‌
 

click me!