ವೇಗವಾಗಿ ಜಾಲಿರೈಡ್‌: ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಕಾರು ಪಲ್ಟಿ, ವಿದ್ಯಾರ್ಥಿ ಸಾವು!

By Kannadaprabha NewsFirst Published Jun 20, 2023, 4:10 AM IST
Highlights

ನಗರದ 8ನೇ ಮೈಲಿ ಜಂಕ್ಷನ್‌ನ ಹೆಸರಘಟ್ಟರಸ್ತೆಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ವಿದ್ಯಾರ್ಥಿ ಮೃತಪಟ್ಟು, ಮೂವರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಬೆಂಗಳೂರು (ಜೂ.20) ನಗರದ 8ನೇ ಮೈಲಿ ಜಂಕ್ಷನ್‌ನ ಹೆಸರಘಟ್ಟರಸ್ತೆಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ವಿದ್ಯಾರ್ಥಿ ಮೃತಪಟ್ಟು, ಮೂವರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಕೊಡಗು ಮೂಲದ ಪ್ರಖ್ಯಾತ್‌ ಚಿನ್ನಪ್ಪ(22) ಮೃತ ವಿದ್ಯಾರ್ಥಿ. ಈತನ ಸ್ನೇಹಿತರಾದ ನಟರಾಜ್‌, ಬಸನಗೌಡ, ರಿಕ್ಕಿತ್‌ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಎರಡು ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಕ್‌ನಲ್ಲಿ ಜಾಲಿರೈಡ್‌ ಹೋದ ಸ್ನೇಹಿತರು ಪೀಸ್‌ ಪೀಸ್: ದೇಹದ ತುಂಡುಗಳನ್ನು ಎತ್ತಿಕೊಂಡು ಹೋದ ಪೊಲೀಸರು

ಮೃತ ಪ್ರಖ್ಯಾತ್‌ ಚಿನ್ನಪ್ಪ ನಗರದ ಆಚಾರ್ಯ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ. ಸ್ನೇಹಿತರಾದ ನಟರಾಜ್‌ ಮತ್ತು ರಿಕ್ಕಿತ್‌ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದಾರೆ. ಬಸನಗೌಡ ಇಂಜಿನಿಯರಿಂಗ್‌ ವ್ಯಾಸಂಗ ಮುಗಿಸಿದ್ದಾನೆ. ಭಾನುವಾರ ರಜೆ ಹಿನ್ನೆಲೆಯಲ್ಲಿ ತಡರಾತ್ರಿ ಪ್ರಖ್ಯಾತ್‌ ಚಿನ್ನಪ್ಪ ತನ್ನ ಹೋಂಡಾ ಸಿಟಿ ಕಾರಿನಲ್ಲಿ ಮೂವರು ಸ್ನೇಹಿತರನ್ನು ಕೂರಿಸಿಕೊಂಡು ಜಾಲಿ ರೈಡ್‌ ಹೊರಟ್ಟಿದ್ದಾಗ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ.

ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಪ್ರಖ್ಯಾತ್‌ ಚಿನ್ನಪ್ಪ ಹಾಗೂ ಮೂವರು ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದ ಪರಿಣಾಮ ಪ್ರಖ್ಯಾತ್‌ ಚಿನ್ನಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಉಳಿದ ಮೂವರಿಗೆ ಚಿಕಿತ್ಸೆ ಮುಂದುವರೆದಿದ್ದು, ಸದ್ಯಕ್ಕೆ ಪ್ರಾಣಾಮಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಕ್ಕಿಯ ರಭಸಕ್ಕೆ ಕಾರಿಗೆ ಬೆಂಕಿ!

ಹೆಸರಘಟ್ಟಕಡೆಯಿಂದ ಬೆಂಗಳೂರು ನಗರದ ಕಡೆಗೆ ಬರುವಾಗ 8ನೇ ಮೈಲಿ ಜಂಕ್ಷನ್‌ನ ಹೆಸರಘಟ್ಟರಸ್ತೆಯಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ವೇಗವಾಗಿ ಕಾರು ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿ ನಿಲುಗಡೆ ಮಾಡಿದ್ದ ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನಕ್ಕೆ ಗುದ್ದಿ ಉರುಳಿ ಬಿದ್ದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ.

 

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಮೂವರ ಸಾವು

ಮದ್ಯ ಸೇವಿಸಿ ಕಾರು ಚಾಲನೆ ಶಂಕೆ

ಭೀಕರ ಅಪಘಾತಕ್ಕೆ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮೃತ ಚಾಲಕ ಪ್ರಖ್ಯಾತ್‌ ಚಿನ್ನಪ್ಪ ಕಾರು ಚಾಲನೆ ವೇಳೆ ಮದ್ಯ ಸೇವಿಸಿರುವ ಶಂಕೆ ವ್ಯಕ್ತ ವಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ. ಈ ಸಂಬಂಧ ಪೀಣ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!