ಡ್ಯೂಟಿ ಮುಗಿಸಿಕೊಂಡು ಮನೆಗೆ ಹೋಗಿದ್ದೇ ತಪ್ಪಾಯ್ತ!

By Kannadaprabha News  |  First Published Aug 26, 2022, 2:18 PM IST
  • ಸಂಜೆಗತ್ತಲಲ್ಲಿ ರಸ್ತೆ ಗುಂಡಿಗೆ ಬಿದ್ದು ಬದಲಾದ ದಾದಾಫೀರ್‌ ಚಹರೆ
  • ಯಾರನ್ನ ದೂರುವುದು, ಯಾರಲ್ಲಿ ನ್ಯಾಯ ಕೇಳುವುದು? ಹೊಣೆಗಾರಿಕೆ ಹೊತ್ತುಕೊಳ್ಳುವವರು ಯಾರು?

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ (ಆ.26): ಗಂಡು ಮೆಟ್ಟಿದನಾಡು, ಪಾಳೆಗಾರ ಅರಸರ ಬೀಡು, ಮದಕರಿನಾಯಕನ ನೆಲೆವೀಡು ಎಂದೆಲ್ಲಾ ಐತಿಹಾಸಿಕ ಮಹತ್ವದ ಕಿರೀಟ ಇಟ್ಟುಕೊಂಡಿರುವ ಚಿತ್ರದುರ್ಗವೆಂಬ ನೆಲದ ರಸ್ತೆಗಳ ತುಂಬಾ ಸಾವಿರಾರು ಗುಂಡಿ ಬಿದ್ದಿವೆ. ನೂರಾರು ಕೋಟಿಗಳ ಸುರಿದರೂ ಯಾವ ರಸ್ತೆಗಳು ಸುಧಾರಣೆ ಕಂಡಿಲ್ಲ. ಕಾದಿರುವೆ ನಿನಗಾಗಿ ಎಂದು ಮೆಲುದನಿಯಲ್ಲಿ ಗುನುಗುತ್ತ್ತ ಪಾದಚಾರಿಗಳು, ವಾಹನ ಸವಾರರನ್ನು ಅಪಘಾತಕ್ಕೆ ಬರಸೆಳೆದುಕೊಳ್ಳುತ್ತಿವೆ. ಗುಂಡಿಗಳಲ್ಲಿ ನಾಗರಿಕರು ಬಿದ್ದೆದ್ದು ಹೋಗುವ ದೃಶ್ಯಗಳು ಸಾಮಾನ್ಯ. ಆದರೆ ನಾಲ್ಕು ದಿನಗಳ ಹಿಂದೆ ಗೃಹರಕ್ಷಕ ದಳದ ಸಿಬ್ಬಂದಿಯೋರ್ವ ರಸ್ತೆಯಲ್ಲಿನ ಗುಂಡಿಗೆ ಬಿದ್ದು ತನ್ನ ಮುಖ ಚಹರೆ ಬದಲಾಯಿಸಿಕೊಂಡ ಘಟನೆ ಎಂತಹರಲ್ಲೂ ಆಕ್ರೋಶ ತರಿಸುತ್ತಿದೆ.

Tap to resize

Latest Videos

Chitradurga: ಸರ್ಕಾರಿ ಕೆಲಸ‌ ನೇಮಕಕ್ಕೆ ಕ್ರಿಮಿನಲ್ ಕೇಸ್ ಅಡ್ಡಿ, ಯುವತಿ ಆತ್ಮಹತ್ಯೆ

ಆದದ್ದು ಇಷ್ಟು:

ಚಿತ್ರದುರ್ಗದ ಹೊರಪೇಟೆ ನಿವಾಸಿ ಮೊಮಮದ್‌ ದಾದಾಫೀರ್‌ ಗೃಹ ರಕ್ಷಕ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆತನನ್ನು ಐತಿಹಾಸಿಕ ಕೋಟೆ ಮುಂಭಾಗದಲ್ಲಿರುವ ಪ್ರವಾಸೋದ್ಯಮ ಇಲಾಖೆಗೆ ಪ್ರವಾಸಿ ಮಿತ್ರನಾಗಿ ನಿಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಸೈಕಲ್‌ ಏರಿ ಕಚೇರಿಗೆ ಹೋದರೆ ಸಂಜೆ ಆರು ಗಂಟೆಗೆ ವಾಪಸಾಗುತ್ತಾನೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಾದಿನ ಅಂದರೆ ಆಗಸ್ಟ್‌ 14 ರಂದು ರಾತ್ರಿ 9 ಗಂಟೆವರೆಗೂ ಕಾರ್ಯನಿರ್ವಹಿಸಿ ಮನೆಗೆ ವಾಪಸಾಗುವಾಗ ಉಮಾಪತಿ ಕಲ್ಯಾಣ ಮಂಟಪದ ಸಮೀಪದಲ್ಲಿನ ಗುಂಡಿ ಏಮಾರಿಸಿದೆ. ಕತ್ತಲು ಆವರಿಸಿದ್ದರಿಂದ ಗುಂಡಿ ಕಾಣಿಸಿಲ್ಲ. ಪುಟ್ಟಕಲ್ಲಿನ ಮೇಲೆ ಸೈಕಲ್‌ ಚಕ್ರ ಹತ್ತಿದ ಪರಿಣಾಮ ಸ್ಕಿಡ್‌ ಆಗಿ ನೇರವಾಗಿ ಗುಂಡಿಗೆ ಬಿದ್ದಿದ್ದಾನೆ. ನೀರು ಬಿಡುವ ವಾಲ್‌್ವ ಗುಂಡಿ ತುದಿಗೆ ಮುಖ ಅಪ್ಪಳಿಸಿದೆ. ಪರಿಣಾಮ ನಾಲ್ಕು ಹಲ್ಲುಗಳು ಮುರಿದು ಹೋಗಿದ್ದು, ಮೂಗಿಗೆ ಹೊಡೆತ ಬಿದ್ದಿದೆ. ದವಡೆ ಹಾಗೂ ತುಟಿ, ನಾಲಿಗೆಗೆ ಹಾನಿಯಾಗಿದೆ. ರಕ್ತಸ್ರಾವವಾಗಿ ಎಚ್ಚರ ತಪ್ಪಿ ಗುಂಡಿ ಪಕ್ಕಬಿದ್ದಿದ್ದ ದಾದಾಫೀರ್‌ನನ್ನು ಕಂಡ ಸ್ಥಳೀಯರು ಮನೆಗೆ ವಿಷಯ ಮುಟ್ಟಿಸಿ ನಂತರ ಆಸ್ಪತ್ರೆಗೆÜ ದಾಖಲು ಮಾಡಿದ್ದಾರೆ. ವೈದ್ಯರು ತುಟಿ,ದವಡೆ, ನಾಲಿಗೆ ಸೇರಿ ಒಟ್ಟು ಆರು ಹೊಲಿಗೆ ಹಾಕಿದ್ದಾರೆ. ಕನ್ನಡಿಯಲ್ಲಿ ಮುಖ ನೋಡಿಕೊಂಡರೆ, ನಾನಾ ದಾದಾಫೀರ್‌ ಎಂದು ಚಕಿತಗೊಳ್ಳುವಷ್ಟರ ಮಟ್ಟಿಗೆ ಮೂತಿ ಬದಲಾಗಿದೆ.

ಹೋಗಾಚೆ ದೂರ:

ಒಳರೋಗಿಯಾಗಿ ಚಿಕಿತ್ಸೆ ಪಡೆದ ನಂತರ ಮನೆಗೆ ಹೋಗುವಾಗ ಯಾರೋ ಇದು ಪೊಲೀಸ್‌ ಕೇಸ್‌ ಆಗುತ್ತದೆ. ಎಂಎಲ್‌ಸಿ(ಮೆಡಿಕಲ್‌ ಲೀಗಲ್‌ ಕೇಸ್‌) ಮಾಡಿಸಿ ಅಂದಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿರುವ ಪೊಲೀಸ್‌ ಔಟ್‌ ಸ್ಟೇಷನ್‌ಗೆ ಹೋದಾಗ ಕೇಸು ರಿಜಿಸ್ಟರ್‌ ಮಾಡೋಕೆ ಬರೋಲ್ಲ ಅಂದಿದ್ದಾರೆ. ನಂತರ ನಗರ ಪೊಲೀಸ್‌ ಠಾಣೆಗೆ ಹೋಗಿ ನಗರಸಭೆ ಸಿಬ್ಬಂದಿ ರಸ್ತೆಯಲ್ಲಿನ ಗುಂಡಿ ಮುಚ್ಚದೆ ಇರುವ ಕಾರಣ ಅಪಘಾತವಾಗಿ ಗಾಯಾಳುವಾಗಿದ್ದೇನೆ. ಹಾಗಾಗಿ ದೂರು ದಾಖಲಿಸಿಕೊಳ್ಳುವಂತೆ ಬೇಡಿಕೊಂಡಾಗ ಸೈಕಲ್‌ನಲ್ಲಿ ಬರುವಾಗ ಗುಂಡಿಗೆ ಬಿದ್ದೆ ಅನ್ನೋಕೆ ಏನು ಗ್ಯಾರಂಟಿ ಎಂದು ಪ್ರಶ್ನಿಸಿದ್ದಾರೆ. ಅವಘಡ ಸಂಭವಿಸಿದ ಜಾಗದ ಗುಂಡಿ, ಬಿದ್ದಾಗ ಆಗಿದ್ದ ರಕ್ತದ ಕಲೆಗಳು ಎಲ್ಲ ವಿಡಿಯೋ ಮಾಡಿ ಫೋಟೋ ತೆಗೆದ ದೃಶ್ಯ ಪೊಲೀಸರ ಮುಂದೆ ಹರವಿದ್ದಾನೆ. ಈ ದಾಖಲೆಗಳಿಗೆ ತೃಪ್ತಿ ಪಡದ ಪೊಲೀಸರು ಕಡೆಗೊಂದು ಸಲಹೆ ಮಾಡಿದ್ದಾರೆ. ಕೋರ್ಚ್‌ಗೆ ಹೋಗಿ ಅಫಿಡವಿಟ್‌ ಮಾಡಿಸಿಕೊಂಡು ಬನ್ನಿ ಎಂದಿದ್ದಾರೆ.

ಅಪಘಾತದಲ್ಲಿ ಮೆದುಳು ನಿಷ್ಕ್ರಿಯ: ಯಕೃತ್ ಅನ್ನು ಝೀರೋ ಟ್ರಾಫಿಕ್‌ನಲ್ಲಿ ಕೊಂಡೊಯ್ದ ವೈದ್ಯಕೀಯ ಸಿಬ್ಬಂದಿ

ಹದಿನೇಳನೆ ತಾರೀಕು ನೋಟರಿ ಮುಂದೆ ಹೋಗಿ ಅಫಿಡವಿಟ್‌ ಮಾಡಿಸಿಕೊಂಡು ಬಂದರೂ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಆಗ ಬಾ, ಈಗ ಬಾ ಎಂದು ಹೇಳಿ ಕಳಿಸುತ್ತಿದ್ದಾರೆ. 25ನೇ ತಾರೀಕು ಮಧ್ಯಾಹ್ನ 4 ಗಂಟೆಯಾದರೂ ಎಫ್‌ಐಆರ್‌ ಆಗಿರಲಿಲ್ಲ. ಚಿತ್ರದುರ್ಗ ರಸ್ತೆ ಅಧ್ವಾನ ಕುರಿತಂತೆ ಕನ್ನಡಪ್ರಭ ಆರಂಭಿಸಿರುವ ಸರಣಿ ವರದಿ ಗಮನಿಸಿದ ದಾದಾಫೀರ್‌ ಎಲ್ಲವನ್ನು ಚಾಚೂ ತಪ್ಪದೆ ಓದಿದ್ದಾನೆ. ಕನ್ನಡಪ್ರಭ ಕಚೇರಿಗೆ ಧಾವಿಸಿ ಬಂದಿದ್ದ ದಾದಾಫೀರ್‌ ತನಗಾಗಿರುವ ನೋವು ಹಂಚಿಕೊಂಡಿದ್ದಾನೆ.

ಕೇರಳ ಹೈಕೋರ್ಚ್‌ ಮಹತ್ತರ ತೀರ್ಪು

ರಸ್ತೆ ಅವಘಡಗಳಿಗೆ ಸಂಬಂಧಿಸಿದಂತೆ ಸಾವು ನೋವಾದಲ್ಲಿ ಆಯಾ ಪ್ರದೇಶದ ಜಿಲ್ಲಾಧಿಕಾರಿಗಳೇ ಉತ್ತರ ನೀಡಬೇಕಾಗುತ್ತದೆ ಎಂಬ ಮಹತ್ವದ ತೀರ್ಪೊಂದನ್ನು ಕಳೆದ ಶುಕ್ರವಾರ ಕೇರಳ ಹೈಕೋರ್ಚ್‌ ನೀಡಿದೆ. ರಸ್ತೆ ಸುರಕ್ಷತಾ ಸಮಿತಿ ಹಾಗೂ ರಸ್ತೆ ಸುರಕ್ಷತಾ ಪ್ರಾಧಿಕಾರಿದ ಅಧ್ಯಕ್ಷರು ಜಿಲ್ಲಾಧಿಕಾರಿಗಳೇ ಆಗಿದ್ದಾರೆ. ಅಸುರಕ್ಷಿತ ರಸ್ತೆಯಿಂದಾಗಿ ಅವಘಡ ಸಂಭವಿಸಿದ ದಾದಾಫೀರ್‌ನ ಮುಖ ಚಹರೆ ಬದಲಾಗಿದೆ. ಈ ಘಟನೆಗೆ ಜಿಲ್ಲಾಧಿಕಾರಿಗಳೇ ಉತ್ತರ ಹೇಳಬೇಕಾಗುತ್ತದೆ.

click me!