ಟ್ರಯಲ್ ಬ್ಲಾಸ್ಟ್‌ಗೆ ಸಂಬಂಧಿಸಿ ಮಾಜ್ ಮುನೀರ್ ಮತ್ತು ಸಯ್ಯದ್ ಯಾಸೀನ್ ಬಳಿ ಪತ್ತೆಯಾದ ಸ್ಫೋಟಕಗಳಿಗೂ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಬಳಕೆಯಾದ ಸ್ಫೋಟಕಕ್ಕೂ ಸಾಮ್ಯತೆ ಇದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಎನ್‌ಐಎ ಅಧಿಕಾರಿಗಳು
ಶಿವಮೊಗ್ಗ(ಡಿ.04): ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು (ಎನ್‌ಐಎ) ಶನಿವಾರ ಶಿವಮೊಗ್ಗಕ್ಕೆ ದಿಢೀರ್ ಭೇಟಿ ನೀಡಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಹಾಗೂ ಆತನ ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆಂದು ತಿಳಿದುಬಂದಿದೆ.
ಮೂರು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ತುಂಗಾ ತೀರದಲ್ಲಿ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣ ಬೆಳಕಿಗೆ ಬಂದ ಬಳಿಕ ಶಂಕಿತ ಉಗ್ರರಲ್ಲಿ ತೀರ್ಥಹಳ್ಳಿಯ ಶಾರೀಕ್ ಸಹಚರರಾದ ಮಾಜ್ ಮುನೀರ್ ಅಹಮದ್ ಮತ್ತು ಶಿವಮೊಗ್ಗದ ಸಯ್ಯದ್ ಯಾಸೀನ್‌ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದರು.
ಮಂಗಳೂರು ಬಾಂಬ್ ಸ್ಫೋಟ: ಮೈಸೂರಿಗೂ ಮುನ್ನ ಕೇರಳದಲ್ಲಿದ್ದ ಶಾರೀಕ್
ಈ ಸಂದರ್ಭದಲ್ಲಿ ತಲೆಮರೆಸಿಕೊಂಡಿದ್ದ ಶಾರೀಕ್ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿ, ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಈ ಮೂವರು ಶಿವಮೊಗ್ಗದ ತುಂಗಾನದಿ ತೀರದಲ್ಲಿ ಬಾಂಬ್ ಸ್ಫೋಟದ ಟ್ರಯಲ್ ಬ್ಲಾಸ್ಟ್ ನಡೆಸಿದ್ದರು. ಟ್ರಯಲ್ ಬ್ಲಾಸ್ಟ್‌ಗೆ ಸಂಬಂಧಿಸಿ ಮಾಜ್ ಮುನೀರ್ ಮತ್ತು ಸಯ್ಯದ್ ಯಾಸೀನ್ ಬಳಿ ಪತ್ತೆಯಾದ ಸ್ಫೋಟಕಗಳಿಗೂ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಬಳಕೆಯಾದ ಸ್ಫೋಟಕಕ್ಕೂ ಸಾಮ್ಯತೆ ಇದೆಯೇ ಎಂಬ ಬಗ್ಗೆ ಎನ್‌ಐಎ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗುತ್ತಿದೆ.