ನಂದೀಶ್‌ ಸಾವಿನ ತನಿಖೆಗೆ ಸಿಎಂ ಸೂಚನೆ; ಇಂದು ಎಂಟಿಬಿ ಸ್ಪಷ್ಟನೆ ಸಾಧ್ಯತೆ

By Kannadaprabha NewsFirst Published Oct 31, 2022, 8:17 AM IST
Highlights

 ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಇನ್‌ಸ್ಪೆಕ್ಟರ್‌ ನಂದೀಶ್‌ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರು (ಅ.31) : ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಇನ್‌ಸ್ಪೆಕ್ಟರ್‌ ನಂದೀಶ್‌ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದೀಶ್‌ ಪ್ರಕರಣದ ಬಗ್ಗೆ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಎಲ್ಲ ಮಾಹಿತಿ ಪಡೆದು ತನಿಖೆ ಕೈಗೊಳ್ಳಲಾಗುವುದು ಎಂದು ಹೇಳಿದರು. 

ಅಮಾನತ್ತಾಗಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ತೀವ್ರ ಹೃದಯಾಘಾತದಿಂದ ಸಾವು

ನಂದೀಶ್ ಸಾವಿಗೆ ಬಿಜೆಪಿ ಸರ್ಕಾರ ಕಾರಣ ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿವೆ. ಈ ಸಾವಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅದ್ಯಾಗೂ ನಂದೀಶ್ ಸಾನಿನ ಹಿನ್ನೆಲೆ ತಿಳಿದಿಲ್ಲ. ಹೀಗಾಗಿ ಈ ಪ್ರಕರಣದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಇಂದು ಎಂಟಿಬಿ ಸ್ಪಷ್ಟನೆ ನೀಡುವ ಸಾಧ್ಯತೆ

ಬೆಂಗಳೂರು: ಕೆ.ಆರ್‌. ಪುರ ಪೊಲೀಸ್‌ ಇನ್ಸ್‌ಪೆಕ್ಟರ್‌ ನಂದೀಶ್‌ ಸಾವಿನ ಬಗ್ಗೆ ಸಚಿವ ಎಂ.ಟಿ.ಬಿ. ನಾಗರಾಜ್‌ ಅವರು ಆಡಿರುವ ಮಾತು ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಸೋಮವಾರ ಸಚಿವ ನಾಗರಾಜ್‌ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ. ಸೋಮವಾರ ಮಧ್ಯಾಹ್ನ 1 ಗಂಟೆಗೆ ವಿಧಾನಸೌಧದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ನಂದೀಶ್‌ ಸಾವಿನ ಬಗ್ಗೆ ‘70-80 ಲಕ್ಷ ರು. ಕೊಟ್ಟು ಬಂದಿರುತ್ತಾರೆ. ನೀವು ಈ ಥರ ಹಿಂಸೆ ಕೊಟ್ಟರೆ ಇನ್ನೇನಾಗುತ್ತೆ?’ ಎಂದು ಹೇಳಿದ್ದರು. ಇದು ಪ್ರತಿಪಕ್ಷಗಳಿಗೆ ಆಹಾರವಾಗಿ ಪರಿಣಮಿಸಿ ಪ್ರತಿಪಕ್ಷಗಳ ನಾಯಕರು ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ಇದರಿಂದ ಉಂಟಾಗಿರುವ ವಿವಾದದ ಬಗ್ಗೆ ಸ್ಪಷ್ಟನೆ ನೀಡಲು ನಾಗರಾಜ್‌ ಪ್ರಯತ್ನಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನ್ಯಾಯಾಂಗ ತನಿಖೆಗಾಗಿ ಕಾಂಗ್ರೆಸ್‌ ಪ್ರತಿಭಟನೆ

ಕೆ.ಆರ್‌.ಪುರಂ ಇನ್‌ಸ್ಪೆಕ್ಟರ್‌ ನಂದೀಶ್‌ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್‌ ಕಾರ್ಯಕರ್ತರು ನಗರದ ಕಾಂಗ್ರೆಸ್‌ ಭವನದ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮುಖಂಡರು, ಸಚಿವ ಎಂಟಿಬಿ ನಾಗರಾಜ್‌ ಅವರು ‘ನಂದೀಶ್‌ ಅವರು .70-80 ಲಕ್ಷ ನೀಡಿ ಕೆ.ಆರ್‌.ಪುರಂಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ’ ಎಂದು ನೀಡಿರುವ ಹೇಳಿಕೆಯ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಸ್‌.ಮನೋಹರ್‌ ಮಾತನಾಡಿ, ಶೇ.40 ಪರ್ಸೆಂಟ್‌ ಭ್ರಷ್ಟಬಿಜೆಪಿ ಸರ್ಕಾರ ಎಲ್ಲದರಲ್ಲೂ ಲೂಟಿಯಲ್ಲಿ ತೊಡಗಿದೆ. ಲಂಚ ನೀಡದಿದ್ದರೆ ಯಾವ ಕೆಲಸವೂ ಆಗುತ್ತಿಲ್ಲ. ಸರ್ಕಾರ ಎಲ್ಲದರಲ್ಲೂ ಕಮೀಷನ್‌ ಹೊಡೆಯುತ್ತಿದೆ. ಕಣ್ಣು ಕಾಣಿಸದಂತೆ, ಕಿವಿ ಕೇಳಿಸದಂತೆ ವರ್ತಿಸುತ್ತಿದೆ ಎಂದು ಟೀಕಿಸಿದರು.

ನಂದೀಶ್‌ ಪ್ರಕರಣ: ಸಿಎಂ ಬೊಮ್ಮಾಯಿ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

ನಂದೀಶ್‌ ಅವರ ಸಾವಿನ ಸಂಬಂಧ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು. ನಂದೀಶ್‌ ಸಾವಿನ ಪ್ರಕರಣವನ್ನು ನೋಡಿದರೆ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿ ದೊರೆತಂತಾಗಿದೆ. ಒತ್ತಡ ಇತ್ತು, ಹಾಗಾಗಿ ಹೃದಯಾಘಾತವಾಗಿದೆ ಎಂದು ಕುಟುಂಬದ ಸದಸ್ಯರೇ ಹೇಳಿದ್ದಾರೆ. ಸರ್ಕಾರ ಪ್ರಕರಣ ಮುಚ್ಚಿ ಹಾಕುವ ಶಂಕೆ ಇದೆ. ಆದ್ದರಿಂದ ನ್ಯಾಯಾಂಗ ತನಿಖೆಗೆ ವಹಿಸಿದರೆ ಸತ್ಯ ಹೊರಬರುತ್ತದೆ ಎಂದರು.

click me!