ಅಪ್ರಾಪ್ತೆ ಜತೆ ಲೈಂಗಿಕ ಸಂಪರ್ಕ ಪ್ರಕರಣ; ಮದುವೆ ಷರತ್ತು ವಿಧಿಸಿ ಆರೋಪಿಗೆ ಜಾಮೀನು

By Kannadaprabha News  |  First Published Oct 31, 2022, 7:18 AM IST
  • ಸಂತ್ರಸ್ತೆ ವಯಸ್ಸಿಗೆ ಬಂದಾಕ್ಷಣ ಮದುವೆಯಾಗು: ಹೈಕೋರ್ಚ್‌
  • ಅಪ್ರಾಪ್ತೆ ಜತೆ ಲೈಂಗಿಕ ಸಂಪರ್ಕ ಬೆಳೆಸಿದವನ ಜಾಮೀನಿಗೆ ಷರತ್ತು

ಬೆಂಗಳೂರು (ಅ.31) :ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಯುವಕನಿಗೆ ಜಾಮೀನು ನೀಡಿರುವ ಹೈಕೋರ್ಚ್‌, ಸಂತ್ರಸ್ತೆಯು ಪ್ರಾಪ್ತ ವಯಸ್ಸಿಗೆ ಬಂದ ತಕ್ಷಣ ಮದುವೆಯಾಗಬೇಕು ಎಂದು ಆರೋಪಿಗೆ ಷರತ್ತು ವಿಧಿಸಿದೆ.

ಭ್ರೂಣಲಿಂಗ ಪತ್ತೆ ಕೇಂದ್ರಗಳ ಮೇಲೆ ದಾಳಿಗೆ ಹೈಕೋರ್ಟ್‌ ಆದೇಶ

Tap to resize

Latest Videos

ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ರಾಮನಗರದ 22 ವರ್ಷದ ಯುವಕ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್‌ ಅವರ ಪೀಠ, ಸಂತ್ರಸ್ತೆಯು ಪ್ರಾಪ್ತ ವಯಸ್ಸಿಗೆ ಬಂದ ತಕ್ಷಣ ಆಕೆಯನ್ನು ವಿವಾಹವಾಗಬೇಕು. ವಿವಾಹ ನೋಂದಣಿ ಮಾಡಿಸಬೇಕು ಹಾಗೂ ನೋಂದಣಿ ದಾಖಲೆಯನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ ಅಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂಬ ಆರೋಪಿಗೆ ಷರತ್ತು ವಿಧಿಸಿದೆ.

ಅರ್ಜಿ ವಿಚಾರಣೆ ವೇಳೆ ಹಾಜರಿದ್ದ ಸಂತ್ರಸ್ತೆಯ ತಂದೆ, ಪ್ರಕರಣವು ಸಂಬಂಧಿಕರಿಗೆ ತಿಳಿದಿದೆ. ಸಂತ್ರಸ್ತೆಯನ್ನು ಅರ್ಜಿದಾರ-ಆರೋಪಿ ಜೊತೆಗೆ ಮದುವೆ ಮಾಡಿಸುವುದು ಬಿಟ್ಟು ಬೇರೆ ದಾರಿಯಿಲ್ಲ ಎಂಬುದಾಗಿ ಹೇಳಿದ್ದಾರೆ. ಮತ್ತೊಂದೆಡೆ ಆರೋಪಿಯೊಂದಿಗೆ ಸ್ವ ಇಚ್ಛೆಯಿಂದ ದೈಹಿಕ ಸಂಬಂಧ ಬೆಳೆಸಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ. ಸಂತ್ರಸ್ತೆಗೆ 17 ವರ್ಷ. ಯಾವುದು ಸರಿ ಮತ್ತು ತಪ್ಪು ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದೆ. ಸಂತ್ರಸ್ತೆಯು ಪ್ರಾಪ್ತ ವಯಸ್ಸಿಗೆ ಬಂದ ತಕ್ಷಣ ಆಕೆಯನ್ನು ಮದುವೆಯಾಗುವುದಾಗಿ ಆರೋಪಿ ಹೇಳಿದ್ದಾನೆ. ಹಾಗಾಗಿ ಆರೋಪಿಗೆ ಜಾಮೀನು ನೀಡುವುದು ಸೂಕ್ತ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

11 ಲಕ್ಷಕ್ಕೆ ಒಪ್ಪದ ವಿಮಾ ಕಂಪನಿ ಈಗ 44 ಲಕ್ಷ ಕೊಡಬೇಕು: ಹೈಕೋರ್ಟ್‌ ಆದೇಶ

ಸಂತ್ರಸ್ತೆ 17 ವರ್ಷ ವಯಸ್ಸಿನ ವಿದ್ಯಾರ್ಥಿನಿಯಾಗಿದ್ದು, ಆರೋಪಿಯ ಸಂಬಂಧಿಯಾಗಿದ್ದಾರೆ. ಕುಟುಂಬದ ಸಮಾರಂಭದಲ್ಲಿ ಭೇಟಿಯಾಗಿದ್ದ ಅವರು ಪರಸ್ಪರ ಇಷ್ಟಪಟ್ಟಿದ್ದರು. ಮನೆಯಲ್ಲಿ ಯಾರೂ ಇಲ್ಲ ಎಂದು ಸಂತ್ರಸ್ತೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಆರೋಪಿ, ಮದುವೆಯಾಗುವ ಭರವಸೆಯ ಮೇಲೆ ದೈಹಿಕ ಸಂಪರ್ಕ ಬೆಳೆಸಿದ್ದ. ಬಾಲಕಿ ಗರ್ಭಿಣಿಯಾಗಿದ್ದರಿಂದ ಆಕೆಯ ತಂದೆ ದೂರು ದಾಖಲಿಸಿದ್ದರು. ಪೋಕ್ಸೋ ಪ್ರಕರಣದಡಿ ಆರೋಪಿಯನ್ನು ಬಂಧಿಸಲಾಗಿತ್ತು. ವಿಚಾರಣಾಧೀನ ನ್ಯಾಯಾಲಯವು ಜಾಮೀನು ನಿರಾಕರಿಸಿದ್ದರಿಂದ ಆರೋಪಿ ಹೈಕೋರ್ಚ್‌ ಮೊರೆ ಹೋಗಿದ್ದ.

click me!