ಡಿಜಿಪಿ ಅಲೋಕ್ ಕುಮಾರ್‌ಗೆ ಕಳಂಕ ತರಲು ಜೈಲು ದೃಶ್ಯ ವೈರಲ್ ಮಾಡಿದ ಕೈದಿಗಳು

Kannadaprabha News   | Kannada Prabha
Published : Mar 30, 2026, 04:24 AM IST
Jail

ಸಾರಾಂಶ

ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿರುವ 3 ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಸಂಚಲನ ಸೃಷ್ಟಿಸಿದೆ ಡಿಜಿಪಿ ಅಲೋಕ್ ಕುಮಾರ್ ಅವರ ವಿರುದ್ಧವೇ ಗಂಭೀರ ಆರೋಪ ಮಾಡಲಾಗಿದ್ದು, ಹೆಸರಿಗೆ ಕಳಂಕ ತರುವ ದುರುದ್ದೇಶದಿಂದ ವಿಡಿಯೋ ಹರಿಬಿಟ್ಟ ಕೈದಿಗಳ ವಿರುದ್ಧ ಪ್ರಕರಣ

ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃದಿಂದ ಬಿಡುಗಡೆಯಾಗಿರುವ 3 ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಸಂಚಲನ ಸೃಷ್ಟಿಸಿದೆ. ಆ ವಿಡಿಯೋದಲ್ಲಿ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರ ವಿರುದ್ಧವೇ ಗಂಭೀರ ಆರೋಪ ಮಾಡಲಾಗಿದ್ದು, ಅವರ ಹೆಸರಿಗೆ ಕಳಂಕ ತರುವ ದುರುದ್ದೇಶದಿಂದ ವಿಡಿಯೋ ಹರಿಬಿಟ್ಟ ವಿಚಾರಣಾಧೀನ ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಡಿಯೋ ವೈರಲ್‌ ಆಗುತ್ತಿದಂತೆ ಎಚ್ಚೆತ್ತ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿ 9 ಮೊಬೈಲ್‌ಗಳು ಮತ್ತು 6 ಸಿಮ್‌ ಕಾರ್ಡ್‌ಗಳು, ಇಯರ್‌ ಫೋನ್‌, ಇಯರ್‌ ಬಡ್ಸ್‌, ಚಾರ್ಜರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಶಿವಾನಂದ್‌ ಶಿವಾಪುರ್‌ ಎಂಬುವರು ನೀಡಿದ ದೂರಿನನ್ವಯ ಜಿಪ್ಸನ್‌ ಡೇನಿಯಲ್‌, ಸಂಜೀವ, ಮನೋಜ್‌, ಅಭಿಷೇಕ್‌, ಗೋಕುಲ್‌ ಶಿವಾನಂದ್‌ ಎಂಬ ವಿಚಾರಣಾಧೀನ ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣದ ವಿವರ:

ಶನಿವಾರ ಬೆಳಗ್ಗೆ 9 ಗಂಟೆಗೆ ಪೋರ್ಟಲ್‌ವೊಂದರ ಮೂಲಕ ಪರಪ್ಪನ ಅಗ್ರಹಾರ ಜೈಲಿನಿಂದ ಚಿತ್ರೀಕರಿಸಿದ್ದ 3 ವಿಡಿಯೋಗಳನ್ನು ಅಪ್ಲೋಡ್‌ ಮಾಡಲಾಗಿತ್ತು. ನಾಳೆ ಐಪಿಎಲ್ ಮ್ಯಾಚ್ ಇದೆ, ಈ ಸಲ ಕಪ್ ನಮ್ದೆ ಎಂದು ಹೇಳುವುದರ ಜತೆಗೆ, ಜೈಲಿನಲ್ಲಿ ಮೊಬೈಲ್, ಟಿ.ವಿ ಹಾಗೂ ನೆಟ್‌ಫ್ಲಿಕ್ಸ್ ಸೌಲಭ್ಯಗಳಿವೆ. ಹಣವಿದ್ದರೇ ಜೈಲಿನಲ್ಲಿ ಎಲ್ಲ ಸೌಲಭ್ಯವು ದೊರೆಯಲಿದೆ. ಈ ಮೊಬೈಲ್‌ಗಳನ್ನು ಅಲೋಕ್ ಕುಮಾರ್ ಅವರೇ ತಂದುಕೊಟ್ಟಿದ್ದಾರೆ ಎಂದು ವಿಡಿಯೋದಲ್ಲಿರುವ ವ್ಯಕ್ತಿಗಳು ಆರೋಪಿಸಿದ್ದರು. ಈ ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು.

ಪ್ರತಿಕಾರ ತೀರಿಸಿಕೊಳ್ಳುವ ಉದ್ದೇಶ:

ಅಲೋಕ್ ಕುಮಾರ್ ಅವರು ಕಾರಾಗೃಹ ಡಿಜಿಪಿಯಾಗಿ ಅಧಿಕಾರವಹಿಸಿಕೊಂಡ ನಂತರ ಜೈಲುಗಳಲ್ಲಿ ನಡೆಯುತ್ತಿದ್ದ ಎಲ್ಲಾ ಅಕ್ರಮಗಳಿಗೆ ಬ್ರೇಕ್ ಹಾಕಿದ್ದರು. ಅವರ ಈ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಅನೇಕ ಅಕ್ರಮ ಚಟುವಟಿಕೆಗಳು ನಿಂತುಹೋಗಿದ್ದವು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಉದ್ದೇಶದಿಂದ ದುಷ್ಕರ್ಮಿಗಳು ಡಿಜಿಪಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಈ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಜತೆಗೆ ವಿಚಾರಣಾಧೀನಾ ಕೈದಿಗಳನ್ನು ಅಲ್ಪಾಬೆಟಿಕ್‌ ಅನುಗುಣವಾಗಿ ವರ್ಗೀಕರಣ ಮಾಡಲಾಗಿತ್ತು. ಇದನ್ನು ವಿರೋಧಿಸಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ಬಾತ್‌ರೂಂ ಪೈಪ್‌ನಲ್ಲಿಟ್ಟಿದ್ದ ಮೊಬೈಲ್‌ಗಳು ವಶಕ್ಕೆ

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜೈಲಿನ ಅಧಿಕಾರಿಗಳು, ವಿಚಾರಣಾಧೀನ ಕೈದಿಗಳನ್ನು ಇರಿಸಲಾಗಿದ್ದ 1ನೇ ಬ್ಯಾರಕ್‌ನ 1ನೇ ಕೊಠಡಿಯನ್ನು ತೀವ್ರ ತಪಾಸಣೆಗೊಳಪಡಿದ್ದಾಗ ಜೈಲು ಅಧಿಕಾರಿಗಳ ಕಣ್ತಪ್ಪಿಸಿ ಹಾಲಿನ ಕವರ್‌ನಲ್ಲಿ ಸುತ್ತಿ ಬಾತ್ ರೂಮ್‌ನ ಪೈಪ್‌ನಲ್ಲಿ ಅಡಗಿಸಿಟ್ಟಿದ್ದ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ. ಕೈದಿಗಳ ಕೈಯಿಂದಲೇ ಮೊಬೈಲ್‌ ತೆಗೆಸಲಾಗಿದ್ದು, ಅದರ ವಿಡಿಯೋ ಕೂಡ ಮಾಡಿಕೊಳ್ಳಲಾಗಿದೆ. ಜೈಲಿನಲ್ಲಿ ಕೆಲವೆಡೆ ಏರ್‌ಟೈಲ್ ಸಿಗ್ನಲ್‌ಗಳು ಸಿಗುತ್ತಿರುವ ಮಾಹಿತಿ ಲಭ್ಯವಾಗಿದ್ದು, ಇದನ್ನು ಸರಿಪಡಿಸಲು ಸಂಬಂಧಪಟ್ಟವರಿಗೆ ಜೈಲಾಧಿಕಾರಿಗಳು ಸೂಚಿಸಿದ್ದಾರೆ.

3 ವಾರ್ಡ್‌ನ್‌ಗಳ ತಲೆದಂಡ

ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೆಂಡಾಮಂಡಲರಾದ ಡಿಜಿಪಿ ಅಲೋಕ್ ಕುಮಾರ್ ಜೈಲಿನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಕೈದಿಗಳಿದ್ದ ಬ್ಯಾರಕ್ ನೋಡಿಕೊಳ್ಳುತ್ತಿದ್ದ ಶಿವಾನಂದ ಕರ್ಲಬಟ್ಟಿ, ನಿರಂಜನ್.ಎ ಕಾಮತ್ ಹಾಗೂ ಹನುಮಂತಪ್ಪ ಹಡಪದ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಶಿಫ್ಟ್‌ ಮಾಡಿದಕ್ಕೆ ತರ್ಲೆ ಮಾಡಿದ್ದಾರೆ: ಡಿಜಿಪಿ

ಪ್ರಕರಣದ ಬಗ್ಗೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯಿಸಿ, ಅಭಿಷೇಕ್, ದರ್ಶನ್ ಎಂಬುವರು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. ದರ್ಶನ್ ಬಳಿ ಮೊಬೈಲ್ ಸಿಕ್ಕಿದ್ದಾಗ ಆತನನ್ನು ಕ್ವಾರೆಂಟೈನ್ ಸೆಲ್‌ಗೆ ಹಾಕಲಾಗಿತ್ತು. ಈ ಗ್ಯಾಂಗ್‌ನಲ್ಲಿಯೇ ಇದ್ದವರನ್ನು ಕೂಡ ಅಲ್ಪಾಬೆಟಿಕ್‌ ಪ್ರಕಾರ ಬೇರೆ ಬೇರೆ ಬ್ಯಾರಕ್‌ಗೆ ಶಿಫ್ಟ್‌ ಮಾಡಲಾಗಿತ್ತು. ಇದರಿಂದ ಕೋಪಗೊಂಡಿದ್ದ ಅವರು ಈ ರೀತಿಯ ತರ್ಲೆ ಕೆಲಸ ಮಾಡಿದ್ದಾರೆ. ಟಾಯ್ಲೆಟ್ ಚೇಂಬರ್‌ನಲ್ಲಿ ಮೊಬೈಲ್ ಇಟ್ಟು ಬಳಕೆ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿದ್ದೇವೆ. ಜೈಲರ್‌ನನ್ನು ವಿಚಾರಣೆ ಮಾಡಿ ಅವರ ವಿರುದ್ಧವು ಶಿಸ್ತುಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫಿಟ್ ಆಗಿರೋಣ ಅಂತ ಸೈಕ್ಲಿಂಗ್ ಮಾಡ್ತಿದ್ದ ಉದ್ಯಮಿ ಕಾರು ಡಿಕ್ಕಿಯಾಗಿ ಸಾವು: ಕಾರು ಚಲಾಯಿಸ್ತಿದ್ದ 17 ವರ್ಷದ ಬಾಲಕನ ಬಂಧನ
ಮಗಳ ಮದ್ವೆ ಆಗಿತ್ತು, ಇಬ್ಬರು ಹೆಂಡಿರಿದ್ರೂ ಮತ್ತೊಬ್ಬರ ಪತ್ನಿ ಮೇಲೆ ಕಣ್ಣು: ಕಾಲುವೆಯಲ್ಲಿ ಮೂಟೆಯಲ್ಲಿ ಪತ್ತೆಯಾದ ಮುನ್ನಾ