
ಕೆಲವೊಂದು ದೇಶಗಳಲ್ಲಿ ಹಲವಾರು ರೀತಿಯ ಕಠಿಣ ಕಾನೂನುಗಳಿವೆ. ಅದರಲ್ಲಿಯೂ ಹೆಣ್ಣು-ಗಂಡಿನ ಸಂಬಂಧಗಳ ಮೇಲೆ ಕ್ರೂರವಾಗಿರುವ ಶಿಕ್ಷೆಯಿದ್ದರೆ, ಇನ್ನು ಕೆಲವು ದೇಶಗಳಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯವೇ ಇರದ ಕಾರಣ, ಅವರಿಗೆ ಅತ್ಯಂತ ಕ್ರೂರ ಎನ್ನಿಸುವಂಥ ಶಿಕ್ಷೆಗಳನ್ನು ನೀಡಲಾಗುತ್ತಿದೆ. ಅದರಲ್ಲಿಯೂ ಇಂಥ ಕಠಿಣ ಹಾಗೂ ಬೇರೆಯವರಿಗೆ ಅತ್ಯಂತ ಕ್ರೂರ ಎನ್ನಿಸುವ ಶಿಕ್ಷೆಗಳ ವಿಷಯದಲ್ಲಿ ಹಲವಾರು ಮುಸ್ಲಿಂ ರಾಷ್ಟ್ರಗಳೇ ಮುಂದಿವೆ.
ಇದೀಗ ಅಂಥದ್ದೇ ಒಂದು ಘಟನೆ ವಿಶ್ವದ ಅತಿದೊಡ್ಡ ಮುಸ್ಲಿಂ ರಾಷ್ಟ್ರವಾದ ಇಂಡೋನೇಷ್ಯಾದಲ್ಲಿ ನಡೆದಿದೆ. ಟಿಕ್ಟಾಕ್ಗಾಗಿ ಪರಸ್ಪರ ಚುಂಬಿಸುತ್ತಿರುವ ಅವಿವಾಹಿತ ಜೋಡಿಯ ದೃಶ್ಯಗಳು ವೈರಲ್ ಆಗುತ್ತಲೇ, ಇಬ್ಬರಿಗೂ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗಿದೆ. ಇಸ್ಲಾಮಿಕ್ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಶರಿಯಾ ನ್ಯಾಯಾಲಯವು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿ ತಲಾ 21 ಛಡಿಯೇಟಿನ ಶಿಕ್ಷೆ ವಿಧಿಸಿದೆ. ನಾಲ್ಕು ತಿಂಗಳು ಜೈಲು ಶಿಕ್ಷೆಯಯ ಬಳಿಕ ದೊಡ್ಡ ಜನಸಮೂಹದ ಎದುರು ಛಡಿಯೇಟು ನೀಡಲಾಗಿದೆ.
ವರದಿಗಳ ಪ್ರಕಾರ, ಫೆಬ್ರವರಿ 27 ರಂದು 22 ವರ್ಷದ ಯುವಕ ಮತ್ತು 25 ವರ್ಷದ ಯುವತಿ, ಕಾರಿನೊಳಗೆ ಟಿಕ್‌ಟಾಕ್ ವಿಡಿಯೋಗಳನ್ನು ನೇರ ಪ್ರಸಾರ ಮಾಡುತ್ತಿದ್ದರು. ಇಲ್ಲಿಯ ಕಾನೂನಿನ ಅರಿವಿದ್ದಾಗೂ ಇಂಥದ್ದೊಂದು ಸಾಹಸಕ್ಕೆ ಇವರು ಕೈಹಾಕಿದ್ದರೋ ಅಥವಾ ಹೀಗೆ ಮಾಡಿದ್ರೆ ಇಂಥದ್ದೊಂದು ಶಿಕ್ಷೆ ಸಿಗುತ್ತದೆ ಎನ್ನುವ ಅರಿವು ಇರಲಿಲ್ಲವೋ ಗೊತ್ತಿಲ್ಲ, ಒಟ್ಟಿನಲ್ಲಿ ವಿಡಿಯೋದಲ್ಲಿ ಸಮಯದಲ್ಲಿ, ಅವರು ಪರಸ್ಪರ ಚುಂಬಿಸಿದರು. ವಿಡಿಯೋ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಸ್ಥಳೀಯ ನಿವಾಸಿಗಳು ಘಟನೆಯನ್ನು ಷರಿಯಾ ಅಧಿಕಾರಿಗಳಿಗೆ ವರದಿ ಮಾಡಲು ಪ್ರೇರೇಪಿಸಿತು.
ಬಳಿಕ ಏಪ್ರಿಲ್‌ನಲ್ಲಿ ಈ ಜೋಡಿಯನ್ನು ಬಂಧಿಸಲಾಯಿತು. ಇದರ ರೆಕಾರ್ಡಿಂಗ್ ಮಾಡುತ್ತಿದ್ದ ನಾಲ್ವರನ್ನೂ ಅರೆಸ್ಟ್ಮಾಡಲಾಯಿತು. ವಿಡಿಯೋ ಮಾಡುತ್ತಿದ್ದವರನ್ನು ಆನ್‌ಲೈನ್ ಜೂಜಾಟದ ಅಡಿ ಹಾಗೂ ಈ ಜೋಡಿಯನ್ನು ವಿವಾಹೇತರ ಸಂಬಂಧಗಳಿಗಾಗಿ ಸಾರ್ವಜನಿಕವಾಗಿ ಛಡಿಯೇಟಿಗೆ ಗುರಿಪಡಿಸಲಾಯಿತು. ಇದಕ್ಕೂ ಮುನ್ನ ಇವರನ್ನು ಜೈಲಿಗೆ ತಳ್ಳಲಾಯಿತು. ಬಂಧನದ ನಂತರ, ಇಬ್ಬರನ್ನೂ ಸುಮಾರು ನಾಲ್ಕು ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಯಿತು. ನಂತರದ ವಿಚಾರಣೆಯಲ್ಲಿ, ನ್ಯಾಯಾಲಯವು ಅವರಿಗೆ ತಲಾ ಛಡಿಯೇಟು ಶಿಕ್ಷೆ ವಿಧಿಸಿತು. ಸಾಕ್ಷಿಯಾಗಿ ಟಿಕ್‌ಟಾಕ್ ಲೈವ್ ರೆಕಾರ್ಡಿಂಗ್‌ಗಳನ್ನು ಹೊಂದಿರುವ ಮೊಬೈಲ್ ಫೋನ್ ಮತ್ತು ಯುಎಸ್‌ಬಿ ಡ್ರೈವ್ ಅನ್ನು ನಾಶಮಾಡಲು ನ್ಯಾಯಾಲಯ ಆದೇಶಿಸಿತು.
ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡೋನೇಷ್ಯಾ ಶಿಕ್ಷೆಯನ್ನು ತೀವ್ರವಾಗಿ ಟೀಕಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಇಂತಹ ನಡವಳಿಕೆಯನ್ನು ತಪ್ಪು ಎಂದು ಪರಿಗಣಿಸಬಹುದಾದರೂ, ಅದಕ್ಕೆ ಜೈಲು ಶಿಕ್ಷೆ ಅಥವಾ ಸಾರ್ವಜನಿಕವಾಗಿ ಚಾಟಿಯೇಟು ಹೊಡೆಯುವುದು ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಸಂಘಟನೆಯ ಕಾರ್ಯನಿರ್ವಾಹಕ ನಿರ್ದೇಶಕ ಉಸ್ಮಾನ್ ಹಮೀದ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ