
ಬೆಂಗಳೂರು(ಜೂ.24): ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯ ಬಿನ್ನಾಣದ ಮಾತಿಗೆ ಮರುಳಾಗಿ ಖಾಸಗಿ ಬ್ಯಾಂಕ್‌ನ ವ್ಯವಸ್ಥಾಪಕರೊಬ್ಬರು ಕೇವಲ ಆರು ದಿನಗಳಲ್ಲಿ ತಮ್ಮ ಸ್ವಂತ .12 ಲಕ್ಷ ಹಾಗೂ ಬ್ಯಾಂಕ್‌ನ .5.69 ಕೋಟಿಯನ್ನು ಆಕೆಗೆ ಸಂದಾಯ ಮಾಡಿದ ಆರೋಪದ ಮೇರೆಗೆ ಜೈಲು ಸೇರುವಂತಾಗಿದೆ.
ಹನುಮಂತ ನಗರದ ಇಂಡಿಯನ್ ಬ್ಯಾಂಕ್ ವ್ಯವಸ್ಥಾಪಕ ಎಸ್.ಹರಿಶಂಕರ್ ಬಂಧಿತರಾಗಿದ್ದು, ಹಣ ದುರುಪಯೋಗದಲ್ಲಿ ವ್ಯವಸ್ಥಾಪಕನಿಗೆ ನೆರವಾದ ಆರೋಪದ ಮೇರೆಗೆ ಆ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕಿ ಕೌಶಲ್ಯಾ ಜಯರಾಮ್ ಹಾಗೂ ಪ್ರಥಮ ದರ್ಜೆ ಸಹಾಯಕ ಮುನಿರಾಜು ಮೇಲೂ ಸಹ ಪ್ರಕರಣ ದಾಖಲಾಗಿದೆ.
Kalaburagi News: ದತ್ತನ ಹೆಸರಲ್ಲಿ ಪೂಜಾರಿಗಳಿಂದಲೇ ಸರ್ಕಾರಕ್ಕೆ ಕೋಟ್ಯಂತರ ರೂ ವಂಚನೆ?
ಇತ್ತೀಚೆಗೆ ಬ್ಯಾಂಕಿನ ಲೆಕ್ಕ ಪರಿಶೋಧನೆ ವೇಳೆ ಬ್ಯಾಂಕ್‌ನಿಂದ ಬೇರೆಡೆಗೆ ಹಣ ವರ್ಗಾವಣೆ ಆಗಿರುವ ಸಂಗತಿ ಬಯಲಾಗಿದೆ. ಈ ಮಾಹಿತಿ ಮೇರೆಗೆ ಹನುಮಂತ ನಗರ ಠಾಣೆಗೆ ಇಂಡಿಯನ್ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ಡಿ.ಎಸ್.ಮೂರ್ತಿ ಅವರ ನೀಡಿದ ದೂರಿನ ಮೇರೆಗೆ ಹರಿಶಂಕರ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ನಿ ಬಾಣಂತನಕ್ಕೆ, ಪತಿ ಡೇಟಿಂಗ್‌ಗೆ
ಕೇರಳ ಮೂಲದ ಹರಿಶಂಕರ್ ಅವರು ತನ್ನ ಪತ್ನಿ ಜತೆ ಜಯ ನಗರ ಸಮೀಪ ನೆಲೆಸಿದ್ದರು. ಈ ಮೊದಲು ಬೇರೆ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಹರಿಶಂಕರ್ ಅವರು, ಕೆಲ ವರ್ಷಗಳ ಹಿಂದೆ ಇಂಡಿಯನ್ ಬ್ಯಾಂಕ್ ಸೇರಿದ್ದರು. ತಮ್ಮ ಕೆಲಸದಿಂದ ಬ್ಯಾಂಕ್‌ನ ಆಡಳಿತ ಮಂಡಳಿಯ ಮೆಚ್ಚುಗೆಗೂ ಅವರು ಪಾತ್ರರಾಗಿದ್ದರು. ಒಳ್ಳೆಯ ಕೆಲಸಗಾರ ಎಂದು ಗುರುತಿಸಿಕೊಂಡಿದ್ದರು. ಇತ್ತೀಚೆಗೆ ತಮ್ಮ ಪತ್ನಿ ಬಾಣಂತನ ಸಲುವಾಗಿ ಕೇರಳಕ್ಕೆ ತೆರಳಿದ ಬಳಿಕ ಹರಿಶಂಕರ್, ಏಕಾಂತ ಕಳೆಯಲು ಅಡ್ಡದಾರಿ ತುಳಿದಿದ್ದಾರೆ ಎನ್ನಲಾಗಿದೆ.
ಡೇಟಿಂಗ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡ ಬಳಿಕ ಅವರಿಗೆ ಯುವತಿಯೊಬ್ಬಳು ಪರಿಚಯವಾಗಿದೆ. ಆಗ ಇಬ್ಬರ ನಡುವೆ ಚಾಟಿಂಗ್ ನಡೆದು ಕೊನೆಗೆ ಮೊಬೈಲ್ ಸಂಖ್ಯೆಗಳು ಪರಸ್ಪರ ವಿನಿಮಯವಾಗಿವೆ. ಆಕೆಯ ವೈಯಾರದ ಮಾತುಗಳಿಗೆ ಬೆಪ್ಪನಾದ ಹರಿಶಂಕರ್, ತಮ್ಮ ಖಾತೆಯಿಂದ ಮೊದಲು .12 ಲಕ್ಷ ನೀಡಿದ್ದಾರೆ. ಆನಂತರ ಡೇಟಿಂಗ್ ಗೆಳತಿ ಮತ್ತೆ ಹಣ ಕೇಳಿದಾಗ ಬ್ಯಾಂಕ್‌ನಲ್ಲಿದ್ದ ಗ್ರಾಹಕರ .5.69 ಕೋಟಿ ಕೊಟ್ಟಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
1 ಕೋಟಿ ಠೇವಣಿ ಮೇಲೆ 5 ಕೋಟಿ ಸಾಲ ತೆಗೆದ!
ಇತ್ತೀಚೆಗೆ ಇಂಡಿಯನ್ ಬ್ಯಾಂಕ್‌ನ ಲೆಕ್ಕಪರಿಶೋಧನೆಯನ್ನು ಪ್ರಾದೇಶಿಕ ವ್ಯವಸ್ಥಾಪಕರು ನಡೆಸಿದ್ದರು. ಆಗ ಗ್ರಾಹಕಿ ಅನಿತಾ ಅವರ ಹೆಸರಿನಲ್ಲಿ ಹಣ ದುರ್ಬಳಕೆಯಾಗಿರುವ ಸಂಗತಿ ಗೊತ್ತಾಗಿದೆ. ಈ ಬಗ್ಗೆ ಪರಿಶೀಲಿಸಿದಾಗ ವಂಚನೆ ಬಯಲಾಯಿತು.
ಶಿವ ದೇಗುಲದಿಂದ ಹಣ ಕದ್ದು ಹಿಂದಿರುಗಿಸಿದ ಕಳ್ಳ: ಕ್ಷಮೆ ಕೋರಿ ಪತ್ರ ಬರೆದ
ಬ್ಯಾಂಕ್‌ನಲ್ಲಿ .1.32 ಕೋಟಿ ಠೇವಣಿ ಇಟ್ಟಿದ್ದ ಅನಿತಾ ಅವರು, .75 ಲಕ್ಷ ಸಾಲ ಪಡೆದಿದ್ದರು. ಆದರೆ ಆರೋಪಿಗಳು, ಅನಿತಾ ಅವರ ಠೇವಣಿ ಖಾತೆಯ ಲೀನ್ ಮಾರ್ಕನ್ನು ಅನಧಿಕೃತವಾಗಿ ಅಳಿಸಿ ಮೇ 13ರಿಂದ 19ರ ನಡುವೆ ಠೇವಣಿ ಹಣದ ಆಧಾರದಡಿ ಓವರ್ ಡ್ರಾಫ್ಟ್‌ನಲ್ಲಿ ಅಕ್ರಮವಾಗಿ ಹಣ ಮಂಜೂರು ಮಾಡಿಕೊಂಡಿದ್ದರು. ಈ ಓವರ್ ಡ್ರಾಫ್ಟ್‌ಗಳಿಗೂ ಅನಿತಾ ಅವರ .1.32 ಕೋಟಿ ಠೇವಣಿ ಹಣವನ್ನೇ ಆಧಾರವಾಗಿ ತೋರಿಸಿ .5.70 ಕೋಟಿ ಓವರ್ ಡ್ರಾಫ್ಟ್ ಖಾತೆಗಳನ್ನು ತೆರೆದು ಕರ್ನಾಟಕದ 2 ಹಾಗೂ ಪಶ್ಚಿಮ ಬಂಗಾಳದ 28 ಬ್ಯಾಂಕ್ ಖಾತೆಗಳು ಸೇರಿ ಒಟ್ಟು 30 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಅದೂ 6 ದಿನಗಳ ಅವಧಿಯಲ್ಲಿ ಇಂಡಿಯನ್ ಬ್ಯಾಂಕ್‌ನಿಂದ 136 ಬಾರಿ ವರ್ಗಾವಣೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯವಸ್ಥಾಪಕನ ಗೆಳತಿಗೆ ಪೊಲೀಸರ ಹುಡುಕಾಟ
ಡೇಟಿಂಗ್ ಆ್ಯಪ್ ಗೆಳತಿಗೆ ಹರಿಶಂಕರ್ ಇಷ್ಟುದೊಡ್ಡ ಮಟ್ಟದ ಹಣ ಕೊಟ್ಟಿರುವ ಬಗ್ಗೆ ಅನುಮಾನವಿದ್ದು, ಈಗ ಆತನ ಡೇಟಿಂಗ್ ಗೆಳತಿ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಡೇಟಿಂಗ್ ಆ್ಯಪ್‌ನ ಗೆಳೆತಿಯನ್ನು ಆತ ಒಮ್ಮೆಯೂ ಭೇಟಿಯಾಗಿಲ್ಲ. ಕೇವಲ ಮಾತುಕತೆಯಲ್ಲೇ ಮಾತ್ರ ಅವರ ಸ್ನೇಹ ಇತ್ತು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ