ಚನ್ನಮ್ಮನ ಕಿತ್ತೂರು: ಕಳ್ಳರ ಕಾಟಕ್ಕೆ ಬೇಸ್ತು, ಜನರಿಂದ ರಾತ್ರಿ ಗಸ್ತು

By Kannadaprabha News  |  First Published Feb 21, 2023, 11:00 PM IST

ಸಮರ್ಪಕ ಪೊಲೀಸ್‌ ಸಿಬ್ಬಂದಿ ಇಲ್ಲದ್ದಕ್ಕೆ ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣ


ಸೋಮಶೇಖರ ಕುಪ್ಪಸಗೌಡರ

ಚನ್ನಮ್ಮನ ಕಿತ್ತೂರು(ಫೆ.21): ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಸಮರ್ಪಕ ಸಿಬ್ಬಂದಿ ಇಲ್ಲದೇ ಇರುವ ಕಾರಣಕ್ಕೆ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಜನರು, ವ್ಯಾಪಾರಸ್ಥರು ನಿತ್ಯ ಭಯದ ವಾತಾವರಣದಲ್ಲೇ ಕಾಲ ಕಳೆಯುವಂತಾಗಿದೆ. ಹೀಗಾಗಿ ಜನರೇ ರಾತ್ರಿ ವೇಳೆ ಗಸ್ತು ತಿರುಗಿ ತಮ್ಮ ಆಸ್ತಿಪಾಸ್ತಿ ರಕ್ಷಿಸಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹೌದು, ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ಸಮರ್ಪಕ ಸಿಬ್ಬಂದಿ ಇಲ್ಲದ ಪರಿಣಾಮ ಅಧಿಕಾರಿಗಳಲ್ಲಿ ಹಾಗೂ ಸಿಬ್ಬಂದಿಗಳಿಗೆ ಕೆಲಸ ಹೊರೆ ಹೆಚ್ಚಾಗಿಯೇ ಕಂಡು ಬರುತ್ತಿದೆ. ಬೀಟ್‌ ವ್ಯವಸ್ಥೆಯಲ್ಲಿರುವ ಸಿಬ್ಬಂದಿ ಯಾವುದೇ ಅಪಘಾತ ಸಂಭವಿಸಲಿ ಅಥವಾ ಯಾವುದೇ ಅವಘಡ ಸಂಭವಿಸಿದರೂ ಕೂಡಲೇ ಕೈಯಲ್ಲಿರುವ ಕೆಲಸ ಬಿಟ್ಟು ಹಗಲುರಾತ್ರಿಯನ್ನದೆ ದುಡಿಯುವ ಅನಿವಾರ್ಯತೆ ಬಂದೂದಗಿದೆ. ಅತಿಯಾದ ಕೆಲಸದ ಒತ್ತಡದಲ್ಲಿ ಸಿಲುಕಿರುವ ಪೊಲೀಸ್‌ ಸಿಬ್ಬಂದಿಯೂ ಸಹ ಮಾನಸಿಕ ಒತ್ತಡದಲ್ಲಿ ದಿನಂಪ್ರತಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಇಲ್ಲಿ ತಲೆದೂರಿದೆ.

Tap to resize

Latest Videos

ಭಾನುವಾರ ನಾಲ್ಕು ಅಂಗಡಿ ಕಳ್ಳತನ:

ಈ ಹಿಂದೆ ಚಿನ್ನಾಭರಣದ ಅಂಗಡಿ ಕಳ್ಳತನದ ಪ್ರಕರಣ ಮಾಸುವ ಮುಂಚೆಯೇ ಭಾನುವಾರ ಮಧ್ಯರಾತ್ರಿ ಮತ್ತೆ ಸರಣಿ ಕಳ್ಳತನ ನಡೆದಿದ್ದು, ಹೋಟೆಲ್ ಸೇರಿದಂತೆ ಒಟ್ಟು ನಾಲ್ಕು ಅಂಗಡಿಗಳಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಪಟ್ಟಣದ ಹಳೇ ಬಸ್‌ ನಿಲ್ದಾಣದ ಬಳಿ ಇರುವ ಹೋಟೆಲ್‌ ಮಿತ್ರಪ್ರಿಯಾದಲ್ಲಿ ಸಿಸಿಕ್ಯಾಮರಾ ಸೇರಿದಂತೆ ಅಂದಾಜು .10 ಸಾವಿರ ನಗದು, ಪಕ್ಕದ ಹೀರಾ ಕೋಲ್ಡಂಕ್ಸ್‌ ಹಾಗೂ ಮೊಬೈಲ್‌ ಅಂಗಡಿಯಲ್ಲಿ ಎರಡು ಡೊಂಗಲ ಸೇರಿದಂತೆ .8 ಸಾವಿರ ಮೌಲ್ಯದ ವಸ್ತು ಹಾಗೂ ನಗದು, ಪಾನ್‌ ಶಾಪವೊಂದರಲ್ಲಿ ಅಂದಾಜು .10 ಸಾವಿರ ಮೌಲ್ಯದ ವಸ್ತುಗಳು ಹಾಗೂ ಕಿರಾಣಿ ಅಂಗಡಿಯಲ್ಲಿದ್ದು .6 ಸಾವಿರದ ಚಿಲ್ಲರೆ ಹಣವನ್ನು ಎಗರಿಸಿ ಕಳ್ಳರು ಕಾಲ್ಕಿತ್ತಿದ್ದಾರೆ. ಈ ಎಲ್ಲ ಘಟನೆಗಳಿಂದ ಚಿನ್ನಾಭರಣ ಹಾಗೂ ವಿವಿಧ ಅಂಗಡಿ ಮಾಲೀಕರು ಆಂತಕಕ್ಕೀಡಾಗಿದ್ದು ಪೊಲೀಸರಿಗೆ ಸೂಕ್ತ ಭದ್ರತೆ ನೀಡುವಂತೆ ದುಂಬಾಲು ಬಿದ್ದಿದ್ದಾರೆ.

40ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕರೆ ಮಾಡಿದ್ದ ಡೆಲಿವರಿ ಬಾಯ್ ಅರೆಸ್ಟ್!

ಇನ್ನುಳಿದಂತೆ ಹಳೇ ಪ್ರಕರಣಗಳ ಕುರಿತು ಆರೋಪಿಗಳ ಪತ್ತೆ ಕಾರ್ಯಕ್ಕಾಗಿ ಇಲ್ಲಿರುವ ಅಲ್ಪ ಸಿಬ್ಬಂದಿಯಲ್ಲೆಯೇ ಕೆಲವರನ್ನು ನೇಮಿಸಿ ಕಳಿಸುವುದರಿಂದ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಯಾವುದೇ ಅವಘಡ ಸಂಭವಿಸಲಿ ಅಥವಾ ರಾತ್ರಿ ಪಾಳೆಯಲ್ಲಿ ಕೆಲಸ ಮಾಡುವ ಅನಿವಾರ್ಯತೆಯೂ ಬೆರಳೆಣಿಕೆಯಷ್ಟುಸಿಬ್ಬಂದಿಯ ಹೆಗಲೇರುತ್ತಿದೆ. ಇವೆಲ್ಲದರ ಪ್ರಯೋಜನ ಪಡೆಯುತ್ತಿರುವ ಕಳ್ಳರು ಪದೇಪದೇ ಕಿತ್ತೂರು ಪಟ್ಟಣವನ್ನೆ ಟಾರ್ಗೆಟ್‌ ಮಾಡುತ್ತಿರುವುದು ಕಂಡು ಬರುತ್ತಿದೆ. ಸಮರ್ಪಕ ಸಿಬ್ಬಂದಿಯನ್ನು ಕಿತ್ತೂರು ಪೊಲೀಸ್‌ ಠಾಣೆಗೆ ನೀಡಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಇನ್ನಾದರೂ ಪೊಲೀಸ್‌ ಇಲಾಖೆ ಎಚ್ಚೆತ್ತು ಠಾಣೆಗೆ ಸಿಬ್ಬಂದಿ ನೀಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಕಳ್ಳರಿಗೆ ಅಡ್ಡೆಗಳಂತಾದ ದಾಬಾಗಳು

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ದಾಬಾಗಳು ಹಗಲು ರಾತ್ರಿ ಎನ್ನದೇ ತಮ್ಮ ಕಾರ್ಯನಿರ್ವಹಿಸುತ್ತಿವೆ. ಇವುಗಳಿಗೆ ಯಾವುದೇ ಸಮಯದ ಮೀತಿಯೇ ಇಲ್ಲ. ಪರಿಣಾಮ ಪುಂಡರು ಹಾಗೂ ಕಳ್ಳರಿಗೆ ಇವುಗಳು ಅಡ್ಡೆಗಳಂತೆ ಆಗಿವೆ. ಮಧ್ಯರಾತ್ರಿಯವರೆಗೂ ಇವುಗಳು ಪ್ರಾರಂಭವಿರುವ ಕಾರಣ ಇಂತಹ ಕೃತ್ಯಗಳಿಗೆ ಇವು ಸಹಕಾರಿಯಾಗುತ್ತಿವೆಯೇ ಎಂಬ ಸಂಶಯ ಸಾರ್ವಜನಿಕರಲ್ಲಿದೆ. ಮಧ್ಯರಾತ್ರಿಯವರೆಗೂ ದಾಬಾಗಳಲ್ಲಿ ಠಿಕಾಣೆ ಹೂಡುವ ಪುಂಡರು ರಾತ್ರಿ ಗಸ್ತಿನಲ್ಲಿರುವ ಪೊಲೀಸ್‌ ಸಿಬ್ಬಂದಿಯ ಚಲನವಲನಗಳ ಮೇಲೆ ನಿಗಾ ವಹಿಸಿ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆಯೇ ಎಂಬ ಸಂಶಯ ಮೂಡುವುದು ಸಹಜವಾಗಿದೆ. ಇನ್ನಾದರೂ ಪೊಲೀಸ್‌ ಸಿಬ್ಬಂದಿ ಹೋಟೆಲ್‌, ದಾಬಾ ಹಾಗೂ ರೆಸ್ಟೊರೆಂಟ್‌ಗಳಿಗೆ ಸಮಯದ ಮಿತಿ ನೀಡುತ್ತಾರೆಯೇ ಎಂಬುವುದನ್ನು ಕಾಯ್ದು ನೋಡಬೇಕಿದೆ.

ಕಿತ್ತೂರಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಎಲ್ಲ ಅಂಗಡಿಕಾರರ ಮನದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಪಟ್ಟಣದ ಪ್ರಮುಖ ಬೀದಿಯಲ್ಲಿರುವ ಅಂಗಡಿಗಳ ಪರಿಸ್ಥಿತಿಯೇ ಹೀಗಾದಲ್ಲಿ ಮಾಲೀಕರು ಹೇಗೆ ನೆಮ್ಮದಿ ಜೀವನ ಸಾಗಿಸಲು ಸಾಧ್ಯ ಅಂತ ಮಿತ್ರಪ್ರಿಯಾ ಹೋಟೆಲ್‌ ಮಾಲೀಕ ಅನಂತ ನಾಯ್ಕ ಹೇಳಿದ್ದಾರೆ. 

click me!