ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ಸಿಸಿಟಿವಿಯಿಂದ ಪತ್ತೆ

By Kannadaprabha NewsFirst Published Nov 8, 2020, 8:52 AM IST
Highlights

ಅಪಘಾತ ಎಸಗಿ ಪರಾರಿಯಾಗಿದ್ದ ಕ್ಯಾಂಟರ್‌ ಚಾಲಕ| ಆರೋಪಿಯನ್ನ ಬಂಧಿಸಿದ ಪೊಲೀಸರು| ಬೆಂಗಳೂರಿನ ಬಿಯಾಂಡ್‌ ಸರ್ಕಲ್‌ ಬಳಿ ನಡೆಸಿದ್ದ ಅಪಘಾತ|  

ಬೆಂಗಳೂರು(ನ.08): ಇತ್ತೀಚೆಗೆ ಬಿಯಾಂಡ್‌ ಸರ್ಕಲ್‌ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದ ಅಪರಿಚಿತ ವ್ಯಕ್ತಿಯ ಗುರುತನ್ನು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮೂಲಕ ಚಿಕ್ಕಪೇಟೆ ಸಂಚಾರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕೆ.ಆರ್‌.ಪುರದ ಪಿ.ರಾಮು (40) ಮೃತ ದುರ್ದೈವಿ. ಈ ಅಪಘಾತ ಎಸಗಿ ಪರಾರಿಯಾಗಿರುವ ಕ್ಯಾಂಟರ್‌ ಚಾಲಕ ಸುರೇಶ್‌ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಿಯಾಂಡ್‌ ಸರ್ಕಲ್‌ ಸಮೀಪ ನ.3ರಂದು ನಡೆದಿದ್ದ ಅಪಘಾತದಲ್ಲಿ ರಾಮು ಮೃತಪಟ್ಟಿದ್ದರು. ಘಟನೆಯಲ್ಲಿ ಮೃತದೇಹ ನಜ್ಜುಗುಜ್ಜಾಗಿತ್ತು. ರುಂಡವೇ ದೇಹದಿಂದ ಬೇರ್ಪಟ್ಟಿತ್ತು. ಆದರೆ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಗೆ ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್‌ ಕಲ್ಲೇಶಪ್ಪ ಎಸ್‌.ಖರಾತ್‌ ನೇತೃತ್ವದ ತಂಡವು, ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ವಶಕ್ಕೆ ಪಡೆದು ಪರಿಶೀಲಿಸಿತು. ಆಗ ವೈನ್ಸ್‌ ಶಾಪ್‌ವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಮೃತವ್ಯಕ್ತಿ, ನೀರು ಕುಡಿದು ಹೊರಟ್ಟಿರುವ ದೃಶ್ಯಾವಳಿ ಸಿಕ್ಕಿತು.

ಮೊಟ್ಟೆ ಸರಿಯಾಗಿ ಬೆಂದಿಲ್ಲ; ಹೊಟೇಲ್ ಮಾಲಿಕನಿಗೆ ಚಾಕು ಇರಿದ!

ಈ ಸುಳಿವು ಆಧರಿಸಿ ತನಿಖೆ ಚುರುಕುಗೊಳಿಸಿದ ಪೊಲೀಸರು, ಆ ದೃಶ್ಯಾವಳಿಯ ಫೋಟೋ ತೆಗೆದು ಸಾರ್ವಜನಿಕರಲ್ಲಿ ವಿಚಾರಿಸಿದ್ದರು. ಆಗ ಆ ಭಾವಚಿತ್ರ ನೋಡಿದ ಗುಜರಿ ವ್ಯಾಪಾರಿ ನಯಾಜ್‌, ಚಿತ್ರದಲ್ಲಿರುವ ವ್ಯಕ್ತಿ ತನ್ನ ಪರಿಚಯಸ್ಥ ಗುಜರಿ ವ್ಯಾಪಾರಿ ರಾಮು ಇರಬಹುದು ಎಂದಿದ್ದ. ಬಳಿಕ ಪೊಲೀಸರು, ರಾಮು ಪತ್ನಿಯನ್ನು ಸಂಪರ್ಕಿಸಿದರು. ಕೊನೆಗೆ ವಿಕ್ಟೋರಿಯಾ ಆಸ್ಪತ್ರೆ ಶವಾಗಾರಕ್ಕೆ ಬಂದ ಆತನ ಪತ್ನಿ, ರಾಮು ಕೈಯಲ್ಲಿನ ಅಚ್ಚೆ ಗುರುತಿನಿಂದ ಗುರುತು ಸ್ಪಷ್ಟಪಡಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.
 

click me!