ಪತಿ - ಪತ್ನಿ ಮಧ್ಯದ ಕಲಹ ದೂರ ಮಾಡುತ್ತೀನಿ ಅಂತಾ ಬಂದವಳ ಜೊತೆಯೇ ನೊಂದ ಮಹಿಳೆಯ ಪತಿ ಎರಡನೇ ಮದುವೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಫೆ.17): ಪತಿ - ಪತ್ನಿ ಮಧ್ಯದ ಕಲಹ ದೂರ ಮಾಡುತ್ತೀನಿ ಅಂತಾ ಬಂದವಳ ಜೊತೆಯೇ ನೊಂದ ಮಹಿಳೆಯ ಪತಿ ಎರಡನೇ ಮದುವೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಕೇಂದ್ರ ಜಿಎಸ್‌ಟಿ ಕಚೇರಿಯಲ್ಲಿ ಸುಪರಿಟೆಂಡೆಂಟ್ ಆಗಿ ಕೆಲಸ ಮಾಡುತ್ತಿರುವ ಮುಹಮ್ಮದ್ ಆಸೀಫ್ ಎಂ. ಇನಾಂದಾರ್ ವಿರುದ್ಧ ಪತ್ನಿ ತಬಸ್ಸುಮ್ ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. 23 ವರ್ಷಗಳ ಹಿಂದೆ ಮದುವೆಯಾಗಿದ್ದ ಮುಹಮ್ಮದ್ ಆಸೀಫ್ ಇನಾಂದಾರ್ ಹಾಗೂ ತಬಸ್ಸುಮ್ ದಂಪತಿಗೆ 21 ವರ್ಷ ಹಾಗೂ 16 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಕಳೆದ 12 ವರ್ಷಗಳಿಂದ ತಬಸ್ಸುಮ್‌ಗೆ ಪತಿ ಮುಹಮ್ಮದ್ ಆಸೀಫ್ ಇನಾಂದಾರ್ ಕಿರುಕುಳ ನೀಡುತ್ತಿದ್ದನಂತೆ. ಈ ವೇಳೆ ಬೆಳಗಾವಿಯಲ್ಲಿ ಎನ್‌ಜಿಒ ನಡೆಸುತ್ತಾ ಜನರ ಸಮಸ್ಯೆ ಬಗೆಹರಿಸುತ್ತೇನೆ ಅಂತಾ ಹೇಳಿಕೊಳ್ಳುತ್ತಿದ್ದ ಸೀಮಾ ಇನಾಂದಾರ್‌ಗೆ ತಬಸ್ಸುಮ್ ತಮ್ಮ ಸಂಸಾರ ಸರಿಮಾಡಿಕೊಡುವಂತೆ ಮನವಿ ಮಾಡಿದ್ದಳಂತೆ. ಮುಹಮ್ಮದ್ ಆಸೀಫ್ ಇನಾಂದಾರ್ - ತಬಸ್ಸುಮ್ ದಂಪತಿ ಮಧ್ಯದ ಕಲಹವನ್ನು ದೂರ ಮಾಡ್ತೀನಿ ಅಂತಾ ಬಂದಿದ್ದ ಸೀಮಾ ಇನಾಂದಾರ್ ಮುಹಮ್ಮದ್ ಆಸೀಫ್‌ನ ಜೊತೆ ಎರಡನೇ ಮದುವೆಯಾಗಿದ್ದಾಳೆ.
ಸ್ಥಳೀಯ ಮೌಲ್ವಿಯೊಬ್ಬನ ಕೆಲ ದಿನಗಳ ಹಿಂದೆ ಮುಹಮ್ಮದ್ ಆಸೀಫ್ ಹಾಗೂ ಸೀಮಾ ಇನಾಂದಾರ್ ನಿಖಾ ಆಗಿದ್ದಾರೆ. ಈ ಫೋಟೋಗಳನ್ನು ಮುಹಮ್ಮದ್ ಆಸೀಫ್ ತನ್ನ ಹಿರಿಯ ಮಗನಿಗೆ ವಾಟ್ಸಪ್ ಮಾಡಿದ್ದ. ಬಳಿಕ ಫೆಬ್ರವರಿ 10ರಂದು ಮುಹಮ್ಮದ್ ಆಸೀಫ್ ಬೆಳಗಾವಿಯ ಹನುಮಾನ ನಗರದ ಮನೆಗೆ ಬಂದು ಮೊದಲ ಪತ್ನಿ ತಬಸ್ಸುಮ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಗಾಯಾಳು ತಬಸ್ಸುಮ್ ಳನ್ನು ಮಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ. ಬಳಿಕ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿರುವ ತಬಸ್ಸುಮ್ ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾಳೆ.
ನಗರದ ಖಾಸಗಿ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದ ಮುಹಮ್ಮದ್ ಆಸೀಫ್ ಇನಾಂದಾರ್ ಹಾಗೂ ಸೀಮಾ ಇನಾಂದಾರ್‌ರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇನ್ನು ಘಟನೆ ಕುರಿತು ಪ್ರತಿಕ್ರಿಯಿಸಿರುವ ತಬಸ್ಸುಮ್ ಇನಾಂದಾರ್, 'ಆಸೀಫ್ ಜೊತೆ ಮದುವೆಯಾಗಿ 23 ವರ್ಷ ಆಯ್ತು. ನನಗೆ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಮಗ 21 ವರ್ಷದವನಿದ್ದು, ಕಿರಿಯ ಮಗ 16 ವರ್ಷದವನಿದ್ದಾನೆ. ಕಳೆದ 12 ವರ್ಷಗಳಿಂದ ನನ್ನ ಪತಿ ನನಗೆ ಕಿರುಕುಳ ನೀಡುತ್ತ ಬಂದಿದ್ದಾರೆ.
ಎಂಟು ದಿನಗಳಿಂದ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದರು. ಕಳೆದ ಗುರುವಾರಂದು ಬೆಂಗಳೂರಿನಲ್ಲಿ ಇರುವ ನನ್ನ ಹಿರಿಯ ಮಗನಿಗೆ ಫೋಟೋ ಕಳಿಸಿ ತಾನು ಎರಡನೇ ಮದುವೆ ಆಗಿದ್ದಾಗಿ ತಿಳಿಸಿದ್ದಾನೆ. ಮಗ ನನಗೆ ತಿಳಿಸಿದ. ಬಳಿಕ ಒಂದಿನ ಮನೆಗೆ ಬಂದು ನನ್ನ ಮೇಲೆ ಹಲ್ಲೆ ಮಾಡಿ ನೀನು ಇನ್ನು ಮುಂದೆ ಇಲ್ಲಿ ಇರಬಾರದು ನಾನು ಬೇರೆ ಮದುವೆಯಾಗಿದ್ದೇನೆ. ಅವಳ ಜೊತೆ ಇರ್ತೀನಿ ಅಂತಾ ಹೇಳಲು ಶುರು ಮಾಡಿದ. ನನಗೆ ಚಾಕುವಿನಿಂದ ಕೈ ಮೇಲೆ ಹಲ್ಲೆ ಮಾಡಿ ಗೋಡೆಗೆ ನೂಕಿದ. ಆಗ ನಾನು ಪ್ರಜ್ಞೆ ತಪ್ಪಿ ಬಿದ್ದೆ. ಬಳಿಕ ನನ್ನ ಮಗ ನನ್ನ ಆಸ್ಪತ್ರೆಗೆ ದಾಖಲಿಸಿದ. ನನಗೆ ನ್ಯಾಯ ಬೇಕು ಅಂತಾ ತಬಸ್ಸುಮ್ ಕಣ್ಣೀರು ಹಾಕುತ್ತಿದ್ದಾರೆ.
ಬೆಂಗಳೂರು: ಎಚ್‌ಎಎಲ್‌ನ 833 ಎಕರೆ ಗುತ್ತಿಗೆ ಕೊಟ್ಟ ಖದೀಮರು..!
ಸೀಮಾ ಇನಾಂದಾರ್ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ಸದಸ್ಯೆ ಆಯೇಷಾ ಸನದಿ ಒತ್ತಾಯ:
ಇನ್ನು ಸಂತ್ರಸ್ತೆ ತಬಸ್ಸುಮ್ ಇನಾಂದಾರ್‌ಗೆ ನ್ಯಾಯ ಕೊಡುಸುವಂತೆ ಆಗ್ರಹಿಸಿ ಕೆಪಿಸಿಸಿ ಸದಸ್ಯೆ ಆಯೇಷಾ ಸನದಿ ನೇತೃತ್ವದಲ್ಲಿ ಮಹಿಳಾ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿದ ಆಯೇಷಾ ಸನದಿ, 'ತಬಸ್ಸುಮ್ ಹಾಗೂ ಮುಹಮ್ಮದ್ ಆಸೀಫ್ ದಂಪತಿ ಮಧ್ಯದ ಕಲಹ ದೂರ ಮಾಡುವಂತೆ ಸೀಮಾ ಇನಾಂದಾರ್ ಬಳಿ ಹೋದ ತಬಸ್ಸುಮ್‌ಗೆ ಅನ್ಯಾಯ ಮಾಡಿದ್ದಾರೆ. ಇವಳು ಸಾಮಾಜಿಕ ಹೋರಾಟಗಾರ್ತಿ ಅಂತಾ ಹೇಳಿಕೊಳ್ಳಲು ನಾಲಾಯಕ್. ಎರಡನೇ ಮದುವೆಯಾಗಬೇಕಂದ್ರೆ ಡೈವೋರ್ಸ್ ಆಗಿರಬೇಕು. ಮೊದಲ ಪತ್ನಿಯ ಒಪ್ಪಿಗೆ ಇರಬೇಕು. ಗಂಡ ಹೆಂಡತಿ ಜಗಳ ಬಗೆಹರಿಸುತ್ತೇನೆ ಎಂದು ಬಂದು ಈ ರೀತಿ ಕೃತ್ಯ ಮಾಡಿದ ಸೀಮಾ ಇನಾಂದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು.
ಗೋಕಾಕ್: ಉದ್ಯಮಿ ರಾಜು ಝಂವರ್ ಹತ್ಯೆ ಪ್ರಕರಣ, 6 ದಿನಗಳ ಬಳಿಕ ಶವ ಪತ್ತೆ
ಅಷ್ಟೇ ಅಲ್ಲದೇ ಇಬ್ಬರಿಗೂ ಮದುವೆ ಮಾಡಿಸಿದ ಮೌಲ್ವಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಸೀಮಾ ಇನಾಂದಾರ್ ಪರ ಪೊಲೀಸರು ನಿಂತಿದ್ದು ತಬಸ್ಸುಮ್‌ಗೆ ನ್ಯಾಯ ಒದಗಿಸಿ ಕೊಡಬೇಕು' ಎಂದು ಆಗ್ರಹಿಸಿದ್ದಾರೆ. ಸದ್ಯ ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ನಿಂದ ಮಹಿಳೆಗೆ ನ್ಯಾಯ ದೊರಕಿಸಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹ.