* ಪತ್ನಿ ಕೊಂದು ಪರಾರಿಯಾದ ಗಂಡ
* ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ದಂಪತಿ
* ಈ ಸಂಬಂಧ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳಗಾವಿ(ಜು.04): ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಗಂಡ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಶಹಾಪುರ ಬಳಿಯ ಅಳವಣ್ ಗಲ್ಲಿಯಲ್ಲಿ ಇಂದು(ಭಾನುವಾರ) ನಡೆದಿದೆ. ಜ್ಯೋತಿ ಯಲ್ಲಾರಿ(19) ಎಂಬಾಕೆಯೇ ಕೊಲೆಯಾದ ದುರ್ದೈವಿಯಾಗಿದ್ದಾಳೆ.
ಪತ್ನಿ ಜ್ಯೋತಿ ಯಲ್ಲಾರಿಯನ್ನ ಕೊಂದ ಬಳಿಕ ಆರೋಪಿ ಪತಿ ಲಕ್ಷ್ಮೀಕಾಂತ್ ಪರಾರಿಯಾಗಿದ್ದಾನೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಜ್ಯೋತಿ, ಲಕ್ಷ್ಮೀಕಾಂತ್ ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ. ಬೆಳಗಾವಿ ನಗರದ ಬಸವನ ಗಲ್ಲಿಯಲ್ಲಿ ಮೃತ ಯುವತಿಯ ಕುಟುಂಬ ವಾಸವಿತ್ತು. ಯುವತಿ ಮನೆಯ ಬಳಿ ಗಾರೆ ಕೆಲಸಕ್ಕೆ ಲಕ್ಷ್ಮೀಕಾಂತ್ ಬರುತ್ತಿದ್ದ, ಕಳೆದ ಎರಡು ವರ್ಷಗಳಿಂದ ಜ್ಯೋತಿ, ಲಕ್ಷ್ಮೀಕಾಂತ್ ಪರಸ್ಪರ ಪ್ರೀತಿಸುತ್ತಿದ್ದರು.
ಜ್ಯೋತಿ, ಲಕ್ಷ್ಮೀಕಾಂತ್ ಅಂತರ್ಜಾತಿ ವಿವಾಹವಾಗಿತ್ತು. ವಿವಾಹವಾದ ಬಳಿಕ ಲಕ್ಷ್ಮೀಕಾಂತ್ ಸ್ವಗ್ರಾಮ ಮುಚ್ಚಂಡಿಯಲ್ಲಿ ದಂಪತಿ ವಾಸಿಸುತ್ತಿದ್ದರು. ಹಿನ್ನೆಲೆ ಲಕ್ಷ್ಮೀಕಾಂತ್ ಕುಟುಂಬಸ್ಥರಿಂದ ಕಿರುಕುಳ ಆರೋಪ ಕೇಳಿ ಬಂದಿದೆ. ಕಳೆದ ಒಂದು ವಾರದ ಹಿಂದೆಯಷ್ಟೇ ಅಳವಣ್ ಗಲ್ಲಿಯಲ್ಲಿ ದಂಪತಿ ಬಾಡಿಗೆ ಮನೆಗೆ ಬಂದಿದ್ದರು. ಶುಕ್ರವಾರ ರಾತ್ರಿ ಪತಿ, ಪತ್ನಿ ಮಧ್ಯೆ ಗಲಾಟೆ ನಡೆದಿತ್ತು, ಈ ವೇಳೆ ಪತ್ನಿ ಜ್ಯೋತಿ ಕತ್ತು ಹಿಸುಕಿ ಕೊಲೆಗೈದು ಪತಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಚಾಮರಾಜನಗರ; ಗಂಡ-ಮಗುವಿಗಿಂತ ಅವನೇ ಹೆಚ್ಚು..ನೌಟಂಕಿ ನಂದಿನಿ!
ಜ್ಯೋತಿ ಕುಟುಂಬಸ್ಥರು ಮನೆಗೆ ತೆರಳಿದಾಗ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಸದಾಶಿವನಗರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆದಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಪರಾರಿಯಾದ ಪತಿ ಲಕ್ಷ್ಮೀಕಾಂತ್‌ಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಕೊಲೆಯಾದ ಮಹಿಳೆ ತಾಯಿ ದೂರಿನ ಮೇರೆಗೆ ಪತಿ ಲಕ್ಷ್ಮೀಕಾಂತ್ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.