ಪತಿಯಿಂದ ಪತ್ನಿಯ ಕೊಲೆ: ತಾಯಿಯ ಶವದ ಪಕ್ಕದಲ್ಲೇ ರಾತ್ರಿ ಕಳೆದ ಮಕ್ಕಳು

By Kannadaprabha NewsFirst Published Aug 5, 2020, 8:40 AM IST
Highlights

ತಾಯಿಯ ಶವದೆದುರು ಇಡೀ ರಾತ್ರಿ ಕಂದಮ್ಮಗಳ ಆರ್ತನಾದ| ಕೌಟುಂಬಿಕ ಕಲಹ ಹಿನ್ನೆಲೆ ಸೋಮವಾರ ತಡರಾತ್ರಿ ಪತಿಯಿಂದ ಪತ್ನಿಯ ಕೊಲೆ| ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿ ನಡೆದ ಘಟನೆ|  ಆರೋಪಿಯನ್ನ ಬಂಧಿಸಿದ ಪೊಲೀಸರು|

ಬೆಂಗಳೂರು(ಆ.05): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ತಾಯಿಯನ್ನು ಕೊಂದು ತಂದೆ ಪರಾರಿಯಾದ ಬಳಿಕ ಎರಡು ಕಂದಮ್ಮಗಳು ತಮ್ಮ ತಾಯಿ ಮೃತದೇಹದ ಪಕ್ಕದಲ್ಲೇ ರಾತ್ರಿ ಕಳೆದಿರುವ ದಾರುಣ ಘಟನೆ ಮಾರತ್‌ಹಳ್ಳಿ ಸಮೀಪ ನಡೆದಿದೆ.

ಮುನೇಕೊಳಲು ಸಮೀಪದ ಸಪ್ತಗಿರಿ ಲೇಔಟ್‌ ನಿವಾಸಿ ಸಂಧ್ಯಾ (26) ಕೊಲೆಯಾದ ದುರ್ದೈವಿ. ಈ ಘಟನೆ ಸಂಬಂಧ ಮೃತಳ ಪತಿ ನಾಗೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ವಿಚಾರವಾಗಿ ಕೋಪಗೊಂಡ ನಾಗೇಶ್‌, ಮನೆಯಲ್ಲಿ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ನಿದ್ರೆಯಲ್ಲಿದ್ದ ಪತ್ನಿಯನ್ನು ಕೊಂದು ಪರಾರಿಯಾಗಿದ್ದ. ಈ ಕೃತ್ಯದ ಅರಿವಿಲ್ಲದ ಮೃತರ ಇಬ್ಬರು ಮಕ್ಕಳು, ಮುಂಜಾನೆವರೆಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹದ ಪಕ್ಕದಲ್ಲೇ ಇದ್ದರು. ಬೆಳಗ್ಗೆ ಎಚ್ಚರಗೊಂಡ ಮೂರು ವರ್ಷದ ಮಗು, ತನ್ನ ಸೋದರ ಮಾವನಿಗೆ ಕರೆ ಮಾಡಿದಾಗಲೇ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಆಫ್ರಿಕನ್ನರಿಗೆ ಸಿಸಿಬಿ ಪೊಲೀಸರ ಬಿಸಿ: ಅಕ್ರಮವಾಗಿ ನೆಲೆಸಿದ್ದ 17 ಮಂದಿ ಬಂಧನ

ಐದು ವರ್ಷಗಳ ಹಿಂದೆ ಮುಳಬಾಗಿಲು ತಾಲೂಕಿನ ನಾಗೇಶ್‌ ಹಾಗೂ ಸಂಧ್ಯಾ ವಿವಾಹವಾಗಿದ್ದು, ಈ ದಂಪತಿಗೆ ಮೂರು ಮತ್ತು ಒಂದೂವರೆ ವರ್ಷದ ಇಬ್ಬರು ಮಕ್ಕಳಿದ್ದಾರೆ. ಮದುವೆ ಬಳಿಕ ಸಪ್ತಗಿರಿ ಲೇಔಟ್‌ನಲ್ಲಿ ನೆಲೆಸಿದ್ದ ದಂಪತಿ, ಕೂಲಿ ಕೆಲಸ ಮಾಡುತ್ತಿದ್ದರು. ಇತ್ತೀಚಿಗೆ ವೈಯಕ್ತಿಕ ವಿಚಾರವಾಗಿ ಅವರ ಮಧ್ಯೆ ಮನಸ್ತಾಪವಾಗಿತ್ತು. ಪತಿ ಅನೈತಿಕ ಸಂಬಂಧ ವಿಷಯ ತಿಳಿದು ಸಂಧ್ಯಾ ಆಕ್ಷೇಪಿಸಿದ್ದಳು. ಇದರಿಂದ ಕೆರಳಿದ ಆತ, ಪತ್ನಿ ಕೊಲೆಗೆ ನಿರ್ಧರಿಸಿದ. ತನ್ನೂರಿಗೆ ಭಾನುವಾರ ತೆರಳಿದ್ದ ನಾಗೇಶ್‌, ಸೋಮವಾರ ರಾತ್ರಿ ಮತ್ತೆ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಬಳಿಕ ನಿದ್ರೆಗೆ ಜಾರಿದ ಪತ್ನಿಯನ್ನು ಕೊಂದು ಪುನಃ ಮುಳಬಾಗಿಲಿಗೆ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸೋದರಮಾವನಿಗೆ ಕಂದನ ಕರೆ!

ಇತ್ತ ತಾಯಿ ಹತ್ಯೆಯಾಗುವ ವೇಳೆಗೆ ನಿದ್ರೆಗೆ ಜಾರಿದ್ದ ಮಕ್ಕಳು, ಇಡೀ ರಾತ್ರಿ ಮೃತದೇಹದ ಪಕ್ಕದಲ್ಲೇ ಮಲಗಿವೆ. ಮಂಗಳವಾರ ಬೆಳಗ್ಗೆ ಎಚ್ಚರಗೊಂಡ ಮೂರು ವರ್ಷದ ಮಗು, ತನ್ನ ತಾಯಿ ಮೊಬೈಲ್‌ ತೆಗೆದುಕೊಂಡು ಸೋದರ ಮಾವನಿಗೆ ಕರೆ ಮಾಡಿದೆ. ಮಾಮ ಮಾಮ ಎಂದು ತೊದಲು ನುಡಿಗಳಿಂದ ಆತಂಕಗೊಂಡಿದ್ದಾರೆ. ತಕ್ಷಣವೇ ತನ್ನ ಮತ್ತೊಬ್ಬ ಸೋದರಿಗೆ ಕರೆ ಮಾಡಿದ ಮೃತಳ ಸೋದರ, ಸಂಧ್ಯಾ ಮನೆಗೆ ತೆರಳುವಂತೆ ಸೂಚಿಸಿದ್ದಾನೆ. ಅಂತೆಯೇ ಮೃತಳ ಸೋದರಿ ಬಂದಾಗ ಕೊಲೆ ಬೆಳಕಿಗೆ ಬಂದಿದೆ. ಮೊಬೈಲ್‌ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮಾಹಿತಿ ಆಧರಿಸಿ ಆರೋಪಿಯನ್ನು ಮಂಗಳವಾರ ಸಂಜೆ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
 

click me!