
ಕಾನ್ಪುರ್: ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಗಂಡನೇ ವಿಡಿಯೋ ಮಾಡಿದ್ದಾನೆ. ನಂತರ ಆಕೆ ಸತ್ತ ಬಳಿಕ ವಿಡಿಯೋವನ್ನು ಆಕೆಯ ಕುಟುಂಬಸ್ಥರಿಗೆ ತೋರಿಸಿದ್ದಾನೆ. ಸಂಜಯ್ ಗುಪ್ತಾ ಎಂಬುವವನೇ ಹೆಂಡತಿಯ ಸಾವನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿರುವ ಗಂಡ. ಮೃತಳನ್ನು ಶೋಭಿತಾ ಗುಪ್ತಾ ಎಂದು ಗುರುತಿಸಲಾಗಿದೆ. ಅವರಿಬ್ಬರಿಗೂ ಮದುವೆಯಾಗಿ ನಾಲ್ಕು ವರ್ಷಗಳಾಗಿತ್ತು. ಸಂಜಯ್ ಗುಪ್ತಾ ತನ್ನ ಪತ್ನಿ ರೂಮಿನ ಫ್ಯಾನ್‌ಗೆ ನೇಣು ಹಾಕಿ ಕೊಳ್ಳುವುದನ್ನು ಚಿತ್ರೀಕರಿಸಿದ್ದಾನೆ. ಆಕೆಯನ್ನು ತಡೆಯುವ ಪ್ರಯತ್ನವನ್ನೂ ಮಾಡಿಲ್ಲ. ನಂತರ ಆಕೆ ಮೃತಪಟ್ಟಿದ್ದಾಳೆ.
ಆಕೆ ನೇಣು ಬಿಗಿದುಕೊಂಡ ನಂತರವೂ ಆತ ತಡೆಯಲು ಅಥವಾ ರಕ್ಷಿಸಲು ಪ್ರಯತ್ನಿಸಿಲ್ಲ. ವಿಡಿಯೋದಲ್ಲಿ ಆತ ಮಾತನಾಡುತ್ತಿರುವುದು ಕೇಳಿಸುತ್ತದೆ. "ಗ್ರೇಟ್, ಇದು ನಿನ್ನ ಮನಸ್ಥಿತಿ. ನೀನು ತುಂಬಾ ಬಡ ಮನಸ್ಥಿತಿಯನ್ನು ಹೊಂದಿದ್ದೀಯಾ," ಎನ್ನುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆಕೆ ಆ ಹೊತ್ತಿಗೆ ಇನ್ನೇನು ಜೀವ ಬಿಡುವ ಹಂತದಲ್ಲಿದ್ದಳು.
ಇದನ್ನೂ ಓದಿ: Mumbai: "ಕ್ಯಾ ಐಟಂ..." ಎಂದು ಹದಿಹರೆಯದ ಬಾಲಕಿಗೆ ಕಿರುಕುಳ ನೀಡಿದ ವ್ಯಕ್ತಿಗೆ ಜೈಲು ಶಿಕ್ಷೆ..!
ಶೋಭಿತಾ ತಂದೆ ರಾಜ್ ಕಿಶೋರ್ ಗುಪ್ತಾಗೆ ಸಂಜಯ್ ಕರೆ ಮಾಡಿ, ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾನೆ. ಓಡೋಡಿ ಬಂದ ಪೋಷಕರು ಮಗಳು ಬೆಡ್ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ಆಕೆ ನೇಣು ಹಾಕಿಕೊಂಡ ನಂತರ ಸಿಪಿಆರ್ ಮಾಡಿರುವುದಾಗಿ ಸಂಜಯ್ ಗುಪ್ತಾ ಹೇಳಿದ್ದಾನೆ. ಆದರೆ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಮೊದಲೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಆಗ ನಾನು ರಕ್ಷಿಸಿದ್ದೆ ಎಂದು ಸಂಜಯ್ ಗುಪ್ತಾ ಹೇಳಿದ್ದಾನೆ. ಆದರೆ ಶೋಭಿತಾ ಪೋಷಕರು, ಸಿಪಿಆರ್ ಮಾಡುವ ಬದಲು ಆಸ್ಪತ್ರೆಗೇಕೆ ಕರೆದೊಯ್ಯಲಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ನಂತರ ಆಕೆಯನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ. ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮಂಡ್ಯ: ಮಳವಳ್ಳಿ ಬಾಲಕಿ ರೇಪ್ ಅಂಡ್ ಮರ್ಡರ್ ಕೇಸ್, ಜಾರ್ಜ್‌ಶೀಟ್ ಸಲ್ಲಿಕೆ
ಶೋಭಿತಾ ಸಾವಿನಲ್ಲಿ ಸಂಜಯ್ ಗುಪ್ತಾ ಪಾತ್ರವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆಗೆ ವೈವಾಹಿಕ ಕಲಹ ಕಾರಣವಾ ಅಥವಾ ಬೇರಾವುದೇ ಕಾರಣ ಇರಬಹುದು. ಆದರೆ ಒಬ್ಬ ವ್ಯಕ್ತಿ ಕಣ್ಣ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ತಡೆಯುವ ಬದಲು ವಿಡಿಯೋ ಮಾಡುವಂತಾ ವಿಕೃತಿ ಸಂಜಯ್ ತೋರಿದ್ದಾನೆ. ಇದೊಂದೇ ಸಾಕು ಆತ ಆಕೆಯ ಸಾವಿಗೆ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂಜಯ್‌ನನ್ನು ವಿಚಾರಣೆಗೊಳಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ