ದೆಹಲಿಯಲ್ಲಿ ಖಾಸಗಿ ಹಾಸ್ಟೆಲ್‌ನ ಭದ್ರತೆಗೆ ನಿಯೋಜಿಸಿದ್ದ ಸೆಕ್ಯೂರಿಟಿ ಗಾರ್ಡ್ ಓರ್ವ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿನಿಯರನ್ನು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಹಲ್ಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ
ದೆಹಲಿ: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ದೆಹಲಿಯಲ್ಲಿ ಖಾಸಗಿ ಹಾಸ್ಟೆಲ್‌ನ ಭದ್ರತೆಗೆ ನಿಯೋಜಿಸಿದ್ದ ಸೆಕ್ಯೂರಿಟಿ ಗಾರ್ಡ್ ಓರ್ವ ಕುಡಿದ ಮತ್ತಿನಲ್ಲಿ ವಿದ್ಯಾರ್ಥಿನಿಯರನ್ನು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಹಲ್ಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ, ಇದರ ವಿಡಿಯೋ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
ವಿಡಿಯೋದಲ್ಲಿ ಕಾಣಿಸುವಂತೆ ಕಾಲೇಜು ವಿದ್ಯಾರ್ಥಿನಿಯರು ಹಾಸ್ಟೆಲ್‌ನ ಕಾರಿಡಾರ್‌ನಲ್ಲಿ ಸೇರಿದ್ದು, ಈ ವೇಳೆ ಕುಡಿದ ಮತ್ತಿನಲ್ಲಿದ ಸೆಕ್ಯೂರಿಟಿ ಗಾರ್ಡ್ ಯುವತಿಯರನ್ನು ಎಳೆದಾಡಿ ಅವರನ್ನು ತಬ್ಬಿಕೊಳ್ಳಲು ಯತ್ನಿಸಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯ ಕರೋಲ್ ಭಾಗ್ ಪ್ರದೇಶದ ಗೋಲ್ಡ್ ವಿಲ್ಲಾ ಪಿಜಿಯಲ್ಲಿ ಈ ಘಟನೆ ನಡೆದಿದೆ.
ಪಾಕ್‌ನಲ್ಲಿ ಪಾಪಿ: ಬುರ್ಖಾಧಾರಿ ಮಹಿಳೆಯ ಹಿಂಬಾಲಿಸಿ ದೌರ್ಜನ್ಯ: ವಿಡಿಯೋ ವೈರಲ್
ಘಟನೆಗೆ ಸಂಬಂಧಿಸಿದಂತೆ ಕರೋಲ್ ಭಾಗ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆದರೆ ದೂರುದಾರರು ಹೇಳಿಕೆ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಆಗಸ್ಟ್ 13 ರಂದೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ಬಳಿಕ ಕಿರುಕುಳಕ್ಕೊಳಗಾದ ಯುವತಿ ಪಿಜಿ ತೊರೆದಿದ್ದಾರೆ ಎನ್ನಲಾಗಿದೆ. ಆದರೆ ಆಗಸ್ಟ್ 16ರಂದು ಈ ವಿಡಿಯೋ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಮಹಿಳಾ ಆಯೋಗ, ದೆಹಲಿ ಪೊಲೀಸರಿಗೆ, ಎಫ್‌ಐಆರ್ ದಾಖಲಿಸುವಂತೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ ಎಂದು ದೆಹಲಿ ಮಹಿಳಾ ಆಯೋಗ ತಿಳಿಸಿದೆ.
ಬಾಲಕಿಯರಿಗೆ ಲೈಂಗಿಕ ಕಿರುಕುಳ: ತಮಿಳುನಾಡಲ್ಲಿ ಚರ್ಚ್ ಪಾದ್ರಿ ಅರೆಸ್ಟ್
ಕಿರುಕುಳದ ಘಟನೆಯ ಬಗ್ಗೆ ಮಹಿಳಾ ಆಯೋಗಕ್ಕೆ ವರದಿ ಬಂದಿದ್ದು, ಈ ಬಗ್ಗೆ ಕೂಡಲೇ ಎಫ್‌ಐಆರ್ ದಾಖಲಿಸಬೇಕು ಹಾಗೂ ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಹೇಳಿದರು. ಆದರೆ ಈ ಘಟನೆ ಬೆಳಕಿಗೆ ಬಂದ ನಂತರವೂ ಹಾಸ್ಟೆಲ್‌ನ ಮುಖ್ಯಸ್ಥ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೇ ಹಾಸ್ಟೆಲ್‌ನ ದಾಖಲೆಗಳ ಬಗ್ಗೆಯೂ ಮಹಿಳಾ ಆಯೋಗ ಕೇಳಿದ್ದು, ಆಗಸ್ಟ್ 18ರೊಳಗೆ ಕ್ರಮಕ್ಕೆ ಆದೇಶಿಸಿದೆ.