Crime News in Kannada: ಅಸ್ಸಾಂನಲ್ಲಿ ವ್ಯಕ್ತಿಯೊಬ್ಬ ಕೇವಲ ಐನೂರು ರೂಪಾಯಿ ವಿಚಾರಕ್ಕೆ ಸ್ನೇಹಿತನ ತಲೆ ಕಡಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಘಟನೆಯ ನಂತರ ರುಂಡವನ್ನು ಹಿಡಿದು ಪೊಲೀಸ್ ಠಾಣೆಗೆ ತೆರಳಿ ಆರೋಪಿ ಸರಂಡರ್ ಆಗಿದ್ದಾನೆ.
ಗುವಾಹಟಿ: ಫುಟ್‌ಬಾಲ್ ಮ್ಯಾಚ್‌ಗೆ ರೂ. 500 ಬೆಟ್ಟಿಂಗ್ ಕಟ್ಟಿದ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಅಸ್ಸಾಮಿನ ಗುವಾಹಟಿಯಲ್ಲಿ ಜಗಳವಾಗಿದೆ. ಜಗಳ ತಾರಕಕ್ಕೇರಿ, ಸ್ನೇಹಿತನ ತಲೆ ಕಡಿದ ವ್ಯಕ್ತಿ 25 ಕಿಲೋಮೀಟರ್ ದೂರ ಆತನ ರುಂಡವನ್ನು ಹಿಡಿದು ನಡೆದಿದ್ದಾನೆ. ನಂತರ ಪೊಲೀಸ್ ಠಾಣೆಗೆ ತೆರಳಿ ಸರಂಡರ್ ಆಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗುವಾಹಟಿಯ ಸೊಂಟಿಪುರ್ ಎಂಬ ಜಿಲ್ಲಯಲ್ಲಿ ಸೋಮವಾರ ಈ ಘಟನೆ ನಡೆದಿದೆ. ಸ್ವತಂತ್ರೋತ್ಸವ ಆಚರಣೆಯ ಸಲುವಾಗಿ ಆಯೋಜಿಸಿದ್ದ ಫುಟ್‌ಬಾಲ್ ಪಂದ್ಯದಲ್ಲಿ ಬೆಟ್ಟಿಂಗ್ ಜೋರಾಗಿ ನಡೆಯುತ್ತಿತ್ತು ಎನ್ನಲಾಗಿದೆ. ಬೆಟ್ಟಿಂಗ್ ಕಟ್ಟಲು ಸ್ನೇಹಿತನ ಬಳಿ ಕೊಲೆಯಾದ ವ್ಯಕ್ತಿ ಐನೂರು ರೂಪಾಯಿ ಸಾಲ ಕೇಳಿದ್ದ ಎನ್ನಲಾಗಿದೆ. ಕೇವಲ ಇಷ್ಟು ಚಿಕ್ಕ ವಿಚಾರಕ್ಕೆ ವ್ಯಕ್ತಿಗಳು ಒಬ್ಬರ ಜೀವವನ್ನೇ ತೆಗೆದುಕೊಳ್ಳುವಷ್ಟು ಕ್ರೌರ್ಯ ಏಕೆ ತೋರಿಸುತ್ತಾರೆ? ವ್ಯಕ್ತಿಯ ಮಾನಸಿಕ ಸ್ಥಿತಿಗತಿಗಳು, ಸುತ್ತಲಿನ ಸಮಾಜ ಇವೆಲ್ಲವೂ ಈ ರೀತಿಯ ವರ್ತನೆಗಳಿಗೆ ಕಾರಣವಾಗುತ್ತವೆ ಎನ್ನುತ್ತಾರೆ ಮಾನಸಿಕ ತಜ್ಞರು.
ಪಂದ್ಯ ಮುಗಿದ ನಂತರ ಆರೋಪಿ ತುನಿರಾಮ್ ಮದ್ರಿ ಬೆಟ್ಟಿಂಗ್‌ನಲ್ಲಿ ದೊಡ್ಡ ಮೊತ್ತವನ್ನು ಗೆದ್ದಿದ್ದ. ನಂತರ ಕೊಲೆಯಾದ ವ್ಯಕ್ತಿ ಬೊಲಿಯಾ ಹೇಮ್ರಾಮ್‌ನನ್ನು ತನ್ನ ಜೊತೆ ಕಸಾಯಿಖಾನೆಗೆ ಒಟ್ಟಿಗೆ ಹೋಗಲು ಕರೆದಿದ್ದ. ಆದರೆ ಹೇಮ್ರಾಮ್ ಒಪ್ಪಲಿಲ್ಲ. ಇದರಿಂದ ಸಿಟ್ಟಿಗೆದ್ದ ತುನಿರಾಮ್ ಮದ್ರಿ, ಹೇಮ್ರಾಮ್ ಮೇಲೆ ದಾಳಿ ಮಾಡಿದ್ದಾನೆ. ಆತನ ತಲೆಯನ್ನು ಕತ್ತರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಜಮ್ಮು ವಸತಿಗೃಹ: ಕೊಳೆತ ಸ್ಥಿತಿಯಲ್ಲಿ ಆರು ಮೃತದೇಹ ಪತ್ತೆ
ಹೇಮ್ರಾಮ್‌ನನ್ನು ಕೊಲೆ ಮಾಡಿದ ಬಳಿಕ ರುಂಡವನ್ನು ಹಿಡಿದು ಮನೆಗೆ ತೆರಳಿದ್ದಾನೆ. ಅಲ್ಲಿ ತುನಿರಾಮ್‌ನ ಅಣ್ಣ ತುನಿರಾಮ್ ತಪ್ಪು ಮಾಡಿದ್ದಾನೆ ಎಂಬ ಕಾರಣಕ್ಕೆ ಹೊಡೆಯಲು ಮುಂದಾಗಿದ್ದಾನೆ. ತುನಿರಾಮ್ ಅಣ್ಣನ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ನಂತರ ಸೀದಾ 25 ಕಿಲೋಮೀಟರ್ ದೂರ ನಡೆದು ಪೊಲೀಸ್ ಠಾಣೆಗೆ ತೆರಳಿ ಸರಂಡರ್ ಆಗಿದ್ದಾನೆ. ತುನಿರಾಮ್ ಹೇಮ್ರಾಮ್‌ನ ರುಂಡ ಮತ್ತು ಕೊಲೆಗೆ ಬಳಸಿದ ಕತ್ತಿಯನ್ನು ಪೊಲೀಸರಿಗೆ ನೀಡಿದ್ದಾನೆ.
"ತುನಿರಾಮ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೇವಲ ಬೆಟ್ಟಿಂಗ್ ವಿಚಾರಕ್ಕೆ ಗಲಾಟೆಯಾಗಿದೆಯಾ ಅಥವಾ ಬೇರಿನ್ಯಾವುದಾದರೂ ವೈಷಮ್ಯವಿತ್ತಾ ಇಬ್ಬರ ನಡುವೆ ಎಂಬ ಬಗ್ಗೆ ತನಖೆ ಮಾಡಲಾಗುತ್ತಿದೆ," ಎಂದು ಠಾಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾರವಾರ: ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟ ಯುವತಿ ನಿಗೂಢ ಕಣ್ಮರೆ ಪ್ರಕರಣ
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿರುವ ಆರೋಪಿ ತುನಿರಾಮ್‌ಗೆ ಯಾವುದೇ ಪಶ್ಚಾತ್ತಾಪವಿಲ್ಲವಂತೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ ತುನಿರಾಮ್ ಕೊಲೆ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿಲ್ಲವಂತೆ. ಈ ರೀತಿಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯುತ್ತಲೇ ಇವೆ. ಧರ್ಮದ ಹೆಸರಿನಲ್ಲಿ ಕೆಲವು ಅಹಿತಕರ ಘಟನೆ ನಡೆದರೆ, ವೈಯಕ್ತಿಕ ವೈಷಮ್ಯದಿಂದಲೂ ಹಲವು ದುರ್ಘಟನೆಗಳು ನಡೆಯುತ್ತಿವೆ.