ಮನೆ ಕಳ್ಳತನಕ್ಕೆ ಬಂದವನಿಗೆ ಗುಂಡು ಹಾರಿಸಿದ ಮಾಲೀಕ

By Kannadaprabha News  |  First Published Dec 14, 2022, 8:49 AM IST

ಮನೆಗಳ್ಳತನಕ್ಕೆ ಯತ್ನಿಸಿದವನ ಮೇಲೆ ಪರವಾನಗಿ ಪಡೆದ ಡಬಲ್‌ ಬ್ಯಾರಲ್‌ ಬಂದೂಕಿನಿಂದ ಒಂದು ಸುತ್ತು ಗುಂಡು ಹಾರಿಸಿದ ಮನೆಯ ಮಾಲೀಕ 


ಕಿರಣ್.ಕೆ.ಎನ್., ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಡಿ.14):  ಅದು ರೈಲ್ವೆ ಟ್ರ್ಯಾಕ್ ಪಕ್ಕದಲ್ಲೇ ಇರೋ ಒಂಟಿ ಮನೆ. ಒಂಟಿ ಮನೆಯ ಮೇಲೆ ಕಣ್ಣಾಕಿದ್ದ ಕಳ್ಳನೊಬ್ಬ ಮಧ್ಯರಾತ್ರಿ ಕಳ್ಳತನಕ್ಕೆ ಸ್ಕೆಚ್ ಹಾಕಿ ಕಾಂಪೌಂಡ್ ಹತ್ತಿದ್ದ. ಆದ್ರೆ ಗ್ರಹಚಾರ ಕೆಟ್ಟು ಮಾನೆ ಮಾಲೀಕನಿಂದ ಗುಂಡೇಟು ತಿಂದು ಪೊಲೀಸದರ ಅತಿಥಿಯಾಗಿದ್ದಾನೆ. 

Tap to resize

Latest Videos

ಸಮಯ ಸರಿಯಾಗಿ ಮಧ್ಯರಾತ್ರಿ 2.30. ಬೆಂಗಳೂರಿನ‌ ಜಕ್ಕೂರು ಸಮೀಪದ ರಾಚೇನಹಳ್ಳಿಯ ಈ ಮನೆಗೆ ಕಳ್ಳನೊಬ್ಬ ಕಳ್ಳತನ‌ ಮಾಡಲು ಮುಂದಾಗಿದ್ದ. ಮನೆಯ ಬೀಗ ಹೊಡೆಯೋದಕ್ಕೆ ಬೇಕಾದ ಗ್ಯಾಸ್ ಕಟ್ಟರ್ ಸೇರಿದಂತೆ ಬೇಕಾದ ಎಲ್ಲಾ ಸಾಮಗ್ರಿಗಳೊಂದಿಗೆ ಸಜ್ಜಾಗಿದ್ದ ಕಳ್ಳ ಮನೆ ಮುಂಭಾಗದ ಕಾಂಪೌಂಡ್ ಹಾರಿದ್ದ. ಆ ಶಬ್ದ ಕೇಳಿದ ಬೀದಿ ನಾಯಿಗಳು ಬೊಗಳೋದಕ್ಕೆ ಶುರು ಮಾಡಿದ್ವು. ಏನಾಪ್ಪ ನಾಯಿಗಳು ಒಂದೆ ಸಮನೇ ಬೊಗಳ್ತಿದ್ದಾವೆ ಅಂತ ಮಲಗಿದ್ದ ಮನೆ ಮಾಲೀಕ ವಂಕಟೇಶ್ ಲೈಟ್ ಆನ್ ಮಾಡಿ‌ ನೋಡಿದ್ರೆ ಕಳ್ಳ ಓಡಾಡ್ತಿದ್ದದ್ದು, ಕಣ್ಣಿಗೆ ಬಿದ್ದಿತ್ತು.

ಆಂಧ್ರದ ರಕ್ತ ಚರಿತ್ರೆ ಸೇಡಿಗೆ ಕರ್ನಾಟಕದಲ್ಲಿ ಸ್ಪಾಟ್ ಫಿಕ್ಸ್..!

ಬಾಗಿಲು ತೆರೆದು ಪ್ರಶ್ನೆ‌‌ಮಾಡೋಣ ಅಂದ್ರೆ ಹೊರಗೆ ಎಷ್ಟು ಜನ ಇದ್ದಾರೊ ಅನ್ನೋ ಭಯ ಬೇರೆ. ಆ ವೇಳೆ ಅವ್ರಿಗೆ ನೆನಪಾಗಿದ್ದೆ ಮನೆಯಲ್ಲಿದ್ದ ಲೈಸೆನ್ಸ್ಡ್ ಡಬ್ಬಲ್ ಬ್ಯಾರಲ್ ಗನ್. ಕೂಡಲೇ ಗನ್ ತೆಗೆದುಕೊಂಡ್ ಮೊದಲ‌ ಮಹಡಿಗೆ ತೆರಳಿದ ಮನೆ ಮಾಲೀಕ ಕಳ್ಳನ‌ ಮೇಲೆ ಒಂದ್ ಸುತ್ತು ಗುಂಡು ಹಾರಿಸಿ ಎಡಗಾಲನ್ನ ಗಾಯಗೊಳಿಸೋ ಮೂಲಕ ಕಾಂಪೌಂಡ್ ಹತ್ತಿದ್ದವನನ್ನ ನೆಲಕ್ಕುರುಳಿಸಿದ್ರು. ಬಳಿಕ ಕೂಡ್ಲೇ ಪೊಲೀಸ್ರಿಗೆ ಮಾಹಿತಿ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಪೊಲೀಸ್ರು ಗಾಯಗೊಂಡು ಬಿದ್ದಿದ್ದ ಕಳ್ಳನನ್ನ ವಿಚಾರಿಸಿದ್ದು, ಆತನ ಹೆಸ್ರು ಲಕ್ಷ್ಮಣ್ ಅನ್ನೋದು ತಿಳಿದು ಬಂದಿತ್ತು.

ಬಳಿಕ ಆರೋಪಿಯನ್ನ ಆಸ್ಪತ್ರೆಗೆ ದಾಖಲಸಿದ ಪೊಲೀಸ್ರು ಹೆಚ್ಚಿನ ವಿಚಾರಣೆ ಮಾಡಿದ್ದು, ಮನೆಕಳ್ಳತನಕ್ಕಿಳಿದಿದ್ದ ಲಕ್ಷ್ಮಣ್ ಬಾಗಲಕೋಟೆ ಮೂಲದವನೆಂದು ತಿಳಿದು ಬಂದಿದೆ. ಬೆಂಗಳೂರಿಗೆ ಬಂದಿದ್ದ ಕಳ್ಳ ಲಕ್ಷ್ಮಣ್ ಕಳ್ಳತನವನ್ನ ವೃತ್ತಿ ಮಾಡಿಕೊಂಡ್ ಕಳ್ಳತನ ಮಾಡ್ತಿದ್ದ ಅನ್ನೋದು ಸದ್ಯಕ್ಕೆ ತಿಳಿದು ಬಂದಿದೆ. 

ಇನ್ನು ಘಟನೆ ಸುದ್ದಿ ತಿಳಿದು ಹಿರಿಯ ಅಧಿಕಾರಿಗಳು, ಎಫ್ಎಸ್ ಎಲ್ ಟೀಂ  ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನ ಬಂಧಿಸಿರುವ ಸಂಪಿಗೇಹಳ್ಳಿ ಪೊಲೀಸ್ರು ಆರೋಪಿ ಲಕ್ಷ್ಮಣ್ ವಿರುದ್ದ ಯಾವ್ಯಾವ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ ಅನ್ನೋದನ್ನ ಪತ್ತೆಯಚ್ಚಲು ತನಿಖೆ ಮುಂದುವರೆಸಿದ್ದಾರೆ.
 

click me!