ತಾಯಿಗೆ ಹುಷಾರಿಲ್ಲ ಎಂದು ಮೊಬೈಲ್ ಶಾಪ್ ಮಾಲಿಕನಿಗೆ ಟೋಪಿ, 50 ಸಾವಿರ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಬಳಿಕ ಪರಾರಿ ಆದ
ಬೆಂಗಳೂರು(ಡಿ.14): ಚಾಲಾಕಿ ವಂಚಕನೊಬ್ಬ ತಾಯಿಗೆ ಅನಾರೋಗ್ಯವೆಂದು ಹೇಳಿ ತುರ್ತಾಗಿ ಹಣ ಕಳುಹಿಸುವಂತೆ ಮೊಬೈಲ್ ಅಂಗಡಿ ಮಾಲಿಕನಿಂದ .50 ಸಾವಿರ ವರ್ಗಾವಣೆ ಮಾಡಿಸಿಕೊಂಡ ಬಳಿಕ .50 ಸಾವಿರ ನಗದು ಇರುವುದಾಗಿ ಪೇಪರ್ ಸುತ್ತಿದ ಪಾರ್ಲೆ ಬಿಸ್ಕೆಟ್ ಪೊಟ್ಟಣ ನೀಡಿ ವಂಚಿಸಿರುವ ಘಟನೆ ನಡೆದಿದೆ. ಗೋವಿಂದಪುರ ಡಾಮಿನಿಕ್ ಸ್ಕೂಲ್ ಬಳಿಯ ಆಲ್ ಇನ್ ಒನ್ ಕಮ್ಯೂನಿಕೇಷನ್ ಅಂಗಡಿ ಮಾಲಿಕ ಮೊಹಮ್ಮದ್ ಜಾಸಿಮ್ (36) ಹಣ ಕಳೆದುಕೊಂಡವರು. ದೂರಿನ ಮೇರೆಗೆ ಗೋವಿಂದಪುರ ಪೊಲೀಸರು ಪ್ರಕರಣ ದಾಖಲಿಸಿ ವಂಚಕನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ಡಿ.5ರ ರಾತ್ರಿ 10.30ರಲ್ಲಿ ಮೊಹಮ್ಮದ್ ಅವರ ಅಂಗಡಿ ಬಳಿಗೆ ಬಂದಿದ್ದಾನೆ. ‘ಊರಿಗೆ ತುರ್ತಾಗಿ ಹಣ ಕಳುಹಿಸಬೇಕಾಗಿದೆ. ನನ್ನ ಬಳಿ ನಗದು ಹಣವಿದೆ. ಖಾತೆಯಲ್ಲಿ ಹಣವಿಲ್ಲ. ನಿಮಗೆ ಕಮಿಷನ್ ಕೊಡುತ್ತೇನೆ. .10 ಸಾವಿರ ಪೋನ್ ಪೇ ಮಾಡಿ’ ಎಂದು ಕೇಳಿದ್ದಾನೆ. ತೊಂದರೆಯಲ್ಲಿ ಇರಬೇಕೆಂದು ಭಾವಿಸಿದ ಮೊಹಮ್ಮದ್, ಅಪರಿಚಿತ ವ್ಯಕ್ತಿ ನೀಡಿದ ಮೊಬೈಲ್ ಸಂಖ್ಯೆಗೆ ಫೋನ್ ಪೇ ಮುಖಾಂತರ .10 ಸಾವಿರ ಕಳುಹಿಸಿ, .100 ಕಮಿಷನ್ ಪಡೆದಿದ್ದಾರೆ.
ಚಿಕನ್ ರೋಲ್ ಕೊಟ್ಟಿಲ್ಲವೆಂದು ಹೋಟೆಲ್ ಸಿಬ್ಬಂದಿ ರೂಮಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು
ತಾಯಿಗೆ ಅನಾರೋಗ್ಯದ ಕಥೆ:
ಮಾರನೇ ದಿನ ಬೆಳಗ್ಗೆ 10ಕ್ಕೆ ಮತ್ತೆ ಅಂಗಡಿ ಮಾಲಿಕ ಮೊಹಮ್ಮದ್ ಬಳಿ ಬಂದಿರುವ ಅಪರಿಚಿತ, ‘ನನ್ನ ತಾಯಿಗೆ ಆರೋಗ್ಯ ಸರಿ ಇಲ್ಲ. ಆಸ್ಪತ್ರೆ ತೋರಿಸಬೇಕು. ಆದರೆ, ಅವರ ಬಳಿ ಹಣವಿಲ್ಲ. ನನಗೆ ತುರ್ತಾಗಿ .75 ಸಾವಿರವನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಿ’ ಎಂದು ಕೋರಿದ್ದಾನೆ. ರಾತ್ರಿಯಷ್ಟೇ .10 ಸಾವಿರ ಕಳುಹಿಸಿ ಕಮಿಷನ್ ಪಡೆದಿದ್ದ ಮೊಹಮ್ಮದ್, ಅಪರಿಚಿತ ಹೇಳುವುದು ಸತ್ಯವೆಂದು ಭಾವಿಸಿ, .75 ಸಾವಿರ ಕಳುಹಿಸಲು ಸಾಧ್ಯವಿಲ್ಲ. .50 ಸಾವಿರ ವರ್ಗ ಮಾಡುವುದಾಗಿ ಹೇಳಿದ್ದಾರೆ. ಬಳಿಕ .5 ಸಾವಿರದಂತೆ 10 ಬಾರಿ ಅಪರಿಚಿತ ನೀಡಿದ ಬ್ಯಾಂಕ್ ಖಾತೆ ಸಂಖ್ಯೆಗೆ .50 ಸಾವಿರ ಕಳುಹಿಸಿದ್ದಾರೆ.
ಪಾರ್ಲೆ ಬಿಸ್ಕಟ್ ಪ್ಯಾಕ್ ಕೊಟ್ಟ!
ಮೊಹಮ್ಮದ್‌ನಿಂದ .50 ಸಾವಿರ ವರ್ಗಾವಣೆ ಮಾಡಿಸಿಕೊಂಡ ಬಳಿಕ ಅಪರಿಚಿತ, ‘ಇದರಲ್ಲಿ .50 ಸಾವಿರ ಇದೆ’ ಎಂದು ಪೇಪರ್ ಸುತ್ತಿದ ಪೊಟ್ಟಣವೊಂದನ್ನು ಮೊಹಮ್ಮದ್ ಕೈಗಿಟ್ಟು ಸ್ಥಳದಿಂದ ತೆರಳಿದ್ದಾನೆ. ಈ ವೇಳೆ ಮೊಹಮ್ಮದ್ ಪೇಪರ್ ಬಿಚ್ಚಿ ನೋಡಿದಾಗ, ಪಾರ್ಲೆ ಬಿಸ್ಕೆಟ್ ಪೊಟ್ಟಣಕ್ಕೆ ಪೇಪರ್ ಸುತ್ತಿ ಹಣವೆಂದು ನೀಡಿ ವಂಚಿಸಿರುವುದು ಗಮನಕ್ಕೆ ಬಂದಿದೆ. ಕೂಡಲೇ ಆತನನ್ನು ಸುತ್ತಮುತ್ತಾ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗಿಲ್ಲ. ಬಳಿಕ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.