PSI ನೇಮಕಾತಿ ಅಕ್ರಮ: ತನಿಖೆಗೆ ಮುನ್ನವೇ ಎಳ್ಳು ನೀರು ಬಿಟ್ರಾ ಗೃಹ ಸಚಿವ ಜ್ಞಾನೇಂದ್ರ?

By Girish Goudar  |  First Published Mar 30, 2022, 11:19 AM IST

*  ಪಿಎಸೈ ನೇಮಕಾತಿ ಅಕ್ರಮದಲ್ಲಿ ಅವರೇ ಶಾಮೀಲಾಗಿದ್ದಾಗ ತನಿಖೆ ಹೇಗೆ ಮಾಡ್ತಾರೆ?
*  'ದೂರುಗಳು ಬಂದಿವೆ, ಆದರೆ ಅಕ್ರಮ ನಡೆದಿಲ್ಲ’
*  ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್‌ಗೆ ಗೃಹ ಸಚಿವರ ಉತ್ತರ
 


ಆನಂದ್‌ ಎಂ. ಸೌದಿ

ಯಾದಗಿರಿ(ಮಾ.30):  545 ಪಿಎಸೈ ನೇಮಕಾತಿ(PSI Recruitment) ಪರೀಕ್ಷೆಯಲ್ಲಿನ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ, ನೊಂದ ಅಭ್ಯರ್ಥಿಗಳು(Candidates) ನೀಡಿದ ದಾಖಲೆಗಳ ದೂರಿನ ಆಧಾರದ ಮೇಲೆ ಸಮಿತಿ ರಚಿಸಿ ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವಂತಿರುವ ಗೃಹ ಇಲಾಖೆ, ಅದ್ಯಾವುದೋ ಒತ್ತಡಕ್ಕೆ ಮಣಿದಂತಿದ್ದು ನೂರಾರು ಕೋಟ್ಯಂತರ ರುಪಾಯಿಗಳ ಹಗರಣಕ್ಕೆ ತೇಪೆ ಸಾರಿಸಿ, ಎಳ್ಳು ನೀರು ಬಿಡುವ ತಯ್ಯಾರಿಯಲ್ಲಿದ್ದಂತಿದೆ.

Tap to resize

Latest Videos

undefined

ಜ.19ರಂದು ಬಿಡುಗಡೆಯಾದ, 545 ಪಿಎಸೈ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ವಿಚಾರಕ್ಕೆ ಸಂಬಂಧಿಸಿದಂತೆ, ಮೂಡಿಬಂದ ಅನೇಕ ಆರೋಪಗಳಿಗೆ ಉತ್ತರಿಸಬೇಕಾದ ಗೃಹ ಸಚಿವ ಅರಗ ಜ್ಞಾನೇಂದ್ರ(Araga Jnanendra), ಈ ಕುರಿತು ಕೇಳಿಬರುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದು ತನಿಖೆ(Investigation) ನಡೆಸದೇ ತೇಪೆ ಸಾರಿಸುತ್ತಿರುವುದು ಸಾಕಷ್ಟು ಅನುಮಾನಗಳ ಮೂಡಿಸಿದೆ.

PSI Recruitment Scam: ನೊಂದ ಅಭ್ಯರ್ಥಿಗಳಿಂದ ಕಾನೂನು ಸಮರಕ್ಕೆ ಸಿದ್ಧತೆ

ಈ ಹಿಂದೆ, ಪರಿಷತ್ತಿನಲ್ಲಿ ಈ ಬಗ್ಗೆ ಸದಸ್ಯರುಗಳಿಗೆ ಭಿನ್ನ ಉತ್ತರಗಳ ನೀಡಿ, ಪ್ರಕರಣವನ್ನು ಮರೆಮಾಚುವ ಯತ್ನ ನಡೆಸಿದಂತಿದ್ದ ಗೃಹ ಸಚಿವರು, ನೊಂದ ಅಭ್ಯರ್ಥಿಗಳ ದೂರುಗಳ ಪ್ರಾಮಾಣಿಕವಾಗಿ ಆಲಿಸುವ ಬದಲು, ಆಯ್ಕೆಯಾಗದ ಅಭ್ಯರ್ಥಿಗಳು ‘ಅಸಹನೆಯಿಂದ’ ಹೀಗೆ ಆರೋಪಿಸುತ್ತಾರೆ ಎಂದು ಷರಾ ಬರೆದಿಟ್ಟು, ಹತ್ತು ಹಲವಾರು ಅನುಮಾನಗಳು ಹಾಗೂ ಆರೋಪಗಳಿಗೆ ಗುರಿಯಾಗಿದ್ದ ನೇಮಕಾತಿ ಪಟ್ಟಿಯನ್ನು ಸಮರ್ಥಿಸಿಕೊಂಡು, ಕಲ್ಯಾಣ ಕರ್ನಾಟಕ ಮೀಸಲಾತಿ (ಕಲಂ 371 ಜೆ) ಅನ್ವಯ ಪಟ್ಟಿಯನ್ನು ತಡೆಹಿಡಿಯಲಾಗಿದ್ದು, ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದರು.

ಪರಿಷತ್‌ ಸದಸ್ಯರುಗಳಾದ ಅರವಿಂದ ಅರಳಿ, ಶಶಿಲ್‌ ನಮೋಶಿ, ಮರಿ ತಿಬ್ಬೇಗೌಡರು ಸೇರಿದಂತೆ ಅನೇಕರು ಈ ಬಗ್ಗೆ ಪ್ರಶ್ನಿಸಿದ್ದರು. ಈಗ ಪರಿಷತ್‌ ಸದಸ್ಯ ಯು. ಬಿ. ವೆಂಕಟೇಶ್‌ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ (ಸಂಖ್ಯೆ 2543)ಗೆ ಗೃಹ ಸಚಿವರು, ದೂರುಗಳು ಬಂದಿದ್ದವಾದರೂ, ಯಾವುದೇ ಅಕ್ರಮ ನಡೆದಿಲ್ಲ ಎಂದು ಉತ್ತರಿಸಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿ(Police Department) ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ(Illegal) ನಡೆದಿರುವ ಆರೋಪ ಕೇಳಿ ಬಂದಿರುವುದು ನಿಜವೇ ? ಹಾಗಿದ್ದರೆ ಯಾವ ರೀತಿ ಅಕ್ರಮ ನಡೆದಿದೆ ? ಸಮಾಜಕ್ಕೆ ಎಲ್ಲ ರೀತಿಯಲ್ಲಿ ರಕ್ಷಣೆ, ಮಾರ್ಗದರ್ಶನ ಮಾಡುವ ಪೊಲೀಸ್‌ ಇಲಾಖೆಯಲ್ಲಿ ಈ ರೀತಿಯ ಅಕ್ರಮ ಅವ್ಯವಹಾರ ನಡೆದರೆ, ಸಾಮಾಜಿಕವಾಗಿ ರವಾನೆ ಆಗುವ ಸಂದೇಶದ ಬಗ್ಗೆ ಸರ್ಕಾರದ ನಿರ್ಧಾರವೇನು ? ಎಂದು ಯು. ಬಿ. ವೆಂಕಟೇಶ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ಲಿಖಿತ ಉತ್ತರಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra), ಪೊಲೀಸ್‌ ಇಲಾಖೆಯಲ್ಲಿ ಪೊಲೀಸ್‌ ಸಬ್‌ ಇನ್ಸಪೆಕ್ಟರ್‌ (ಪಿಎಸೈ ಸಿವಿಲ್‌) 545 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಕೆಲವು ಅಭ್ಯರ್ಥಿಗಳು ದೂರು ಸಲ್ಲಿಸಿರುತ್ತಾರೆ. ಆದರೆ, ಸದರಿ ದೂರುಗಳನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದು, ಅಭ್ಯರ್ಥಿಗಳು ದೂರಿರುವಂತೆ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ತಿಳಿಸಿದ್ದಾರೆ.

ಅಕ್ರಮದಲ್ಲಿ ಅವರೇ ಶಾಮೀಲಾಗಿದ್ದಾಗ ತನಿಖೆ ಹೇಗೆ ಮಾಡ್ತಾರೆ..? 

ಯಾರ ವಿರುದ್ಧ ನೊಂದ ಅಭ್ಯರ್ಥಿಗಳು ಆರೋಪಿಸಿದ್ದಾರೋ, ಅವರೇ ಪರಿಶೀಲಿಸಿದ್ದಾರೆ ಎಂದ ಮೇಲೆ ನ್ಯಾಯ ಹೇಗೆ ಸಿಗಲು ಸಾಧ್ಯ ಅನ್ನೋದು ನೊಂದ ಅಭ್ಯರ್ಥಿಗಳ ಪ್ರಶ್ನೆಯಾಗಿದೆ. ಗೃಹ ಸಚಿವರು ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿರುವುದು ಅಥವಾ ನಿಷ್ಪಕ್ಷಪಾತ ತನಿಖೆಗೆ ಮುನ್ನವೇ ಎಲ್ಲವೂ ಸರಿಯಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಿರುವುದು ಅವರ ಕಾರ್ಯವೈಖರಿಯನ್ನು ಮತ್ತಷ್ಟೂಅನುಮಾನಿಸುತ್ತಿರುವಂತಿದೆ ಎಂದು ಆರೋಪಿಸುವ ಧಾರವಾಡದ ನೊಂದ ಅಭ್ಯರ್ಥಿಯೊಬ್ಬರು, ಗೃಹ ಇಲಾಖೆಯ ದೊಡ್ಡ ದೊಡ್ಡವರೇ ಇದರಲ್ಲಿ ಶಾಮೀಲಾಗಿದ್ದಾಗ, ತಮ್ಮ ವಿರುದ್ಧ ತಾವೇ ಹೇಗೆ ತನಿಖೆ ನಡೆಸುತ್ತಾರೆ ? ಇದೊಂದು ರೀತಿ ಕುರಿಗಳ ಕಾಯಲು ತೋಳ ಬಿಟ್ಟಂತೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಇತ್ತ, ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಬಳಿ ಎರಡು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿರುವ ನೊಂದ ಅಭ್ಯರ್ಥಿಗಳು, ತನಿಖೆ ಕೈಗೊಳ್ಳದ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೊಂದ ಅಭ್ಯರ್ಥಿಗಳ ಹೋರಾಟಕ್ಕೆ ಆಮ್‌ ಆದ್ಮಿ ಪಕ್ಷ ಬೆಂಬಲಿಸಿದೆ.

ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರಗಳ(Corruption) ಆರೋಪಗಳ ಕುರಿತು ಮೊನ್ನೆ ಮೊನ್ನೆಯಷ್ಟೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅವರು ಸರ್ಕಾರವನ್ನು ಸದನದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಸಾಕ್ಷ್ಯಾಧಾರಗಳ ನೆಪದಲ್ಲಿ ಇಂತಹ ಆರೋಪಗಳನ್ನು ಗೃಹ ಸಚಿವರು ತಳ್ಳಿಹಾಕುವ ಪ್ರಯತ್ನಕ್ಕೆ ಇಳಿದಂತಿತ್ತು.

ಅಚ್ಚರಿ ಅಂದರೆ

545 ಪಿಎಸೈ ನೇಮಕಾತಿ ಅಕ್ರಮ ಆರೋಪಗಳ ಕುರಿತು ನೊಂದ ಅಭ್ಯರ್ಥಿಗಳು ಸೂಕ್ತ ಸಾಕ್ಷ್ಯಾಧಾರಗಳ ಸಮೇತ ದೂರು ನೀಡಿದ್ದರೂ ಸಹ, ಯಾವುದೋ ಒತ್ತಡಕ್ಕೆ ಮಣಿದಂತಿರುವ ಗೃಹ ಇಲಾಖೆ, ತನಿಖೆ ನಡೆಸುವ ಮುನ್ನವೇ, ಏನು ಆಗಿಲ್ಲವೆಂಬ ಷರಾ ಬರೆದಿಟ್ಟು ತೆಪ್ಪಗಿದೆ.

PSI Recruitment Scam: ಸದನದಲ್ಲಿ ಸುಳ್ಳು ಉತ್ತರ ನೀಡಿತೇ ಸರ್ಕಾರ..?

ಸದನದಲ್ಲಿ ಗೃಹ ಸಚಿವರ ಅರೆ-ಬರೆ ಉತ್ತರ ಹಾಗೂ ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವಂತಿರುವ ಸರಕಾರದ ಜಾಣ ಕುರುಡು, ಜಾಣ ಕಿವುಡು ನೀತಿಯಿಂದಾಗಿ ನೊಂದ ಅಭ್ಯರ್ಥಿಗಳು ಕಾನೂನು ಸಮರಕ್ಕೆ ಸಿದ್ಧತೆ ನಡೆಸಿದಂತಿದೆ. ಇನ್ನೊಂದೆಡೆ, ಇದೇ ಸದನದಲ್ಲಿ ಪರಿಷತ್ ಸದಸ್ಯರುಗಳಿಗೆ ಗೃಹ ಸಚಿವರು ನೀಡಿರುವ ಉತ್ತರದಲ್ಲಿ, "ಒಂದೈದು ದೂರುಗಳು ಬಂದಿದ್ದವು, ಅಧಿಕಾರಿಗಳು ಪರಿಶೀಲಿಸಿದ್ದಾರೆ, ಎಲ್ಲವೂ ಸರಿಯಾಗಿದೆ" ಎಂದು ಲಿಖಿತ ಉತ್ತರ ನೀಡಿದ್ದಾರೆ. ಆದರೆ, ಬಂದ ಆರೋಪದಲ್ಲಿ ಯಾವ ತರಹದ ದೂರುಗಳಿದ್ದವು, ತನಿಖೆ ನಡೆದಿದ್ದರೆ ಯಾರ ನೇತೃತ್ವದಲ್ಲಿ ನಡೆಯಿತು ಮುಂತಾದ ವಿವರಗಳನ್ನು ನೀಡುವಲ್ಲಿ ಗೃಹ ಸಚಿವರು ಮೀನಾಮೇಷ ಎಣಿಸಿದಂತಿದೆ. 

"ಯಾರ ವಿರುದ್ಧ ಆರೋಪಗಳಿವೆಯೋ ? ಅಂಥವರ ಮೂಲಕ ತನಿಖೆ ನಡೆಸಿದರೆ, ಆಕ್ರಮದ ಬಗ್ಗೆ ಅವರು ಏನು ವರದಿ ನಡೆಸುತ್ತಾರೆ ? ಸುಮಾರು 200 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತದ ಈ ಹಗರಣದ ತನಿಖೆ ಶುರು ಮಾಡಿದರೆ ಅವರವರೇ ಸಿಕ್ಕಿ ಬೀಳುತ್ತಾರೆ, ಹೀಗಾಗಿ, ಈ ಬಗ್ಗೆ ಎಷ್ಟೇ ಆರೋಪಗಳು ಕೇಳಿ  ಬಂದರೂ ಸಹ ಏನೂ ಆಗಿಯೇ ಇಲ್ಲವೆಂದು ಸಮರ್ಥಿಸಿಕೊಳ್ಳುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ." ಅನ್ನೋದು ನೊಂದ ಅಭ್ಯರ್ಥಿಗಳ ಮಾತಾಗಿದೆ. ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಇದೆ, ಕುರಿಗಳ ಕಾಯಲು ತೋಳ ಬಿಟ್ಟಂತಿದೆ.
 

click me!