91 ಬಾರಿ ಚುಚ್ಚಿ ವೃದ್ಧೆಯ ಕೊಂದವ ಅರೆಸ್ಟ್‌!

By Kannadaprabha NewsFirst Published Jul 25, 2022, 7:10 AM IST
Highlights

ಷೇರು ಟ್ರೇಡಿಂಗ್‌ನಲ್ಲಿ ನಷ್ಟವಾಗಿದ್ದ ಕಾರಣಕ್ಕೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಸಾಲ ಕೇಳಿದ್ದಕ್ಕೆ ಮನೆ ಮಾಲಕಿ ಅಪಮಾನ ಮಾಡಿದ್ದರು. ಈ ಸಿಟ್ಟಿಗೆ ಮನೆ ಮಾಲಕಿಯನ್ನೇ 91 ಬಾರಿ ಇರಿದು ಕೊಂದಿದ್ದ ಪಾಪಿ. ಬಳಿಕ ಚಿನ್ನಾಭರಣ ಕೊಂಡೊಯ್ದು ಗರವಿ ಇಟ್ಟು ಸಿಕ್ಕಿಬಿದ್ದ. ವೃದ್ಧೆಯ ಕೊಂದು ತಾನೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದ. ಅನುಮಾನ ಬಾರದಂತಿರಲು ಅಂತ್ಯ ಸಂಸ್ಕಾರದಲ್ಲೂ ಭಾಗಿಯಾಗಿದ್ದ.
 

ಬೆಂಗಳೂರು (ಜುಲೈ 25): ಸಾಲಗಾರರ ಕಾಟ ತಾಳಲಾರದೇ ಹಾಡಹಗಲೇ ಮನೆ ಮಾಲಕಿಯನ್ನೇ 91 ಬಾರಿ ಚುಚ್ಚಿ ಹತ್ಯೆಗೈದು ಮೈ ಮೇಲಿದ್ದ ಚಿನ್ನಾಭರಣ ದೋಚಿ ಬಳಿಕ ಮೃತರ ಅಂತ್ಯಸಂಸ್ಕಾರದಲ್ಲೂ ಪಾಲ್ಗೊಂಡು ಮಳ್ಳನಂತೆ ಓಡಾಡಿಕೊಂಡಿದ್ದ ಹಂತಕ, ಕೊನೆಗೆ ಚಿನ್ನಾಭರಣ ಅಡವಿಟ್ಟು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ವಿನಾಯಕ ನಗರ 5ನೇ ಕ್ರಾಸ್‌ ನಿವಾಸಿ ಜೈ ಕಿಶನ್‌ (29) ಬಂಧಿತ. ಆರೋಪಿಯು ಜುಲೈ 1ರಂದು ತಾನು ವಾಸವಿದ್ದ ಮನೆಯ ಕಟ್ಟಡದ ಮಾಲಕಿ ಯಶೋಧಮ್ಮ(75) ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ವೇಳೆ ಸಿಕ್ಕಿ ಸಣ್ಣ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತ್ಯೆಯಾದ ಯಶೋಧಮ್ಮ ವಿನಾಯಕ, ನಗರ 5ನೇ ಅಡ್ಡ ರಸ್ತೆಯಲ್ಲಿ ಎರಡು ಅಂತಸ್ತಿನ ಸ್ವಂತ ಕಟ್ಟಡ ಹೊಂದಿದ್ದರು. ಒಂದನೇ ಮತ್ತು ಎರಡನೇ ಮಹಡಿಯನ್ನು ಬಾಡಿಗೆಗೆ ನೀಡಿದ್ದರು. ನೆಲಮಹಡಿಯ ಸಿಂಗಲ್‌ ರೂಮ್‌ನಲ್ಲಿ ಒಂಟಿಯಾಗಿ ನೆಲೆಸಿದ್ದರು. 

ಇವರ ಪುತ್ರ ರಾಜು ಪತ್ನಿ ಹಾಗೂ ಮಕ್ಕಳೊಂದಿಗೆ ಬನಶಂಕರಿಯ 3ನೇ ಹಂತದಲ್ಲಿ ನೆಲೆಸಿದ್ದರು. ಬಿಕಾಂ ಮುಗಿಸಿ ಖಾಸಗಿ ಕಂಪನಿಯಲ್ಲಿ ಸೇಲ್ಸ್‌ ಎಕ್ಸಿಕ್ಯೂಟಿವ್‌ ಆಗಿದ್ದ ಆರೋಪಿ ಜೈ ಕಿಶನ್‌, ಕಳೆದ ಆರು ವರ್ಷಗಳಿಂದ ತಾಯಿ ಜತೆಗೆ ಯಶೋಧಮ್ಮ ಅವರ ಮನೆಯ ಎರಡನೇ ಮಹಡಿಯಲ್ಲಿ ನೆಲೆಸಿದ್ದ.

Latest Videos

12 ಲಕ್ಷ ಕಳೆದುಕೊಂಡಿದ್ದ ಕಿಶನ್‌: ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಕಿಶನ್‌, ಹಣ ಹೂಡಿಕೆ ಮಾಡಿ ನಷ್ಟಅನುಭವಿಸಿದ್ದ. ಸ್ನೇಹಿತರು, ಪರಿಚಿತರು ಸೇರಿದಂತೆ ಹಲವರಿಂದ ಸುಮಾರು .12 ಲಕ್ಷ ಸಾಲ ಪಡೆದು ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಕಳೆದುಕೊಂಡಿದ್ದ. ಈ ನಡುವೆ ಸಾಲಗಾರರು ಹಣ ವಾಪಾಸ್‌ ಕೊಡುವಂತೆ ಒತ್ತಾಯಿಸುತ್ತಿದ್ದರು. ಇದಕ್ಕೂ ಮುನ್ನ ಮನೆ ಮಾಲಕಿ ಯಶೋಧಮ್ಮ ಬಳಿ .40 ಸಾವಿರ ಸಾಲ ಪಡೆದಿದ್ದ ಕಿಶನ್‌, ಆ ಹಣ ವಾಪಾಸ್‌ ನೀಡಿರಲಿಲ್ಲ. ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೆ ಯಶೋಧಮ್ಮನ ಬಳಿ ಸಾಲ ಕೇಳಿದ್ದ. ಈ ವೇಳೆ ಗರಂ ಆಗಿದ್ದ ಯಶೋಧಮ್ಮ, ಹಳೇ ಸಾಲ ನೀಡದೆ, ಹೊಸ ಸಾಲ ನೀಡುವುದಿಲ್ಲ ಎಂದು ನೇರವಾಗಿ ಹೇಳಿದ್ದರು. ಈ ವಿಚಾರವಾಗಿ ಇಬ್ಬರ ನಡುವೆ ಕೆಲ ಹೊತ್ತು ವಾಗ್ವಾದ ನಡೆದಿತ್ತು. ಹೀಗಾಗಿ ಆರೋಪಿ ಕಿಶನ್‌, ಯಶೋಧಮ್ಮನ ಮೇಲೆ ಕೋಪಗೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಡಹಗಲೇ ಭೀಕರ ಹತ್ಯೆ: ದಿನೇ ದಿನೇ ಸಾಲಗಾರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಆರೋಪಿ ಕಿಶನ್‌, ಮನೆ ಮಾಲೀಕಿ ಯಶೋಧಮ್ಮ ಅವರ ಹತ್ಯೆಗೈದು ಚಿನ್ನಾಭರಣ ದೋಚಲು ಯೋಜನೆ ರೂಪಿಸಿದ್ದ. ಅದರಂತೆ ಜುಲೈ 1ರಂದು ಬೆಳಗ್ಗೆ 8.30ಕ್ಕೆ ಯಶೋಧಮ್ಮ ಮನೆಗೆ ನುಗ್ಗಿರುವ ಆರೋಪಿ, ಚಾಕುವಿನಿಂದ ಹೊಟ್ಟೆಮತ್ತು ಕುತ್ತಿಗೆಗೆ 91 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ. ಬಳಿಕ ಯಶೋಧಮ್ಮ ಧರಿಸಿದ್ದ ಸುಮಾರು ನೂರು ಗ್ರಾಂ ಚಿನ್ನಾಭರಣ ದೋಚಿದ್ದ. ಬಳಿಕ ಮಧ್ಯಾಹ್ನ ಯಶೋಧಮ್ಮ ಅವರ ಪುತ್ರ ರಾಜು ಹಾಗೂ ಪೊಲೀಸರಿಗೆ ಕರೆ ಮಾಡಿ ತಾಯಿಯ ಹತ್ಯೆ ವಿಚಾರ ತಿಳಿಸಿದ್ದ. ರಾಜು ಮನೆ ಬಳಿ ಬರುವ ಹೊತ್ತಿಗೆ ಆರೋಪಿಯೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದ. ರಾಜು ಬಂದ ಕೂಡಲೇ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದ. ತಪಾಸಣೆ ಮಾಡಿದ ವೈದ್ಯರು ಯಶೋಧಮ್ಮ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು. ಬಳಿಕ ರಾಜು ಜತೆಗೆ ಇದ್ದು ಯಶೋಧಮ್ಮನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ಕ್ಯಾಮರಾ, ಮೊಬೈಲ್‌ ನೆಟ್‌ವರ್ಕ್ ಎಲ್ಲವನ್ನೂ ಪರಿಶೀಲಿಸಿದರೂ ಹಂತಕರ ಸುಳಿವು ಸಿಕ್ಕಿರಲಿಲ್ಲ. ಮೃತರ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರು ಹಾಗೂ ಸ್ಥಳೀಯರನ್ನು ಕರೆಸಿ ವಿಚಾರಣೆ ನಡೆಸಿದ್ದರು. ಆದರೂ ಹಂತಕರ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದೀಗ ಪೊಲೀಸರಿಗೆ ಹತ್ಯೆಯ ಮಾಹಿತಿ ನೀಡಿದವನೇ ಹಂತಕ ಎಂಬುದು ಬೆಳಕಿಗೆ ಬಂದಿದೆ.

ವಿಚಾರಣೆ ತಪ್ಪಿಸಲು,  ಕ್ಯಾನ್ಸರ್‌ ನಾಟಕ: ಪ್ರಕರಣದ ತನಿಖೆ ವೇಳೆ ಪೊಲೀಸರು ಕಿಶನ್‌ನನ್ನು ಕರೆಸಿ ವಿಚಾರಣೆ ಮಾಡಿದ್ದರು. ಈ ವೇಳೆ ನನಗೆ ಕ್ಯಾನ್ಸರ್‌ ರೋಗವಿದೆ ಎಂದು ಹೇಳಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ನಾಟಕ ಮಾಡಿದ್ದ. ಆದರೂ ಸುಮ್ಮನಾಗದ ಪೊಲೀಸರು, ಆತನ ಹೇಳಿಕೆ ಪಡೆದಿದ್ದರು. ಹೇಳಿಕೆ ದಾಖಲು ವೇಳೆ ಆತನ ವರ್ತನೆ, ನೀಡಿದ ಮಾಹಿತಿ ಅನುಮಾನಾಸ್ಪದವಾಗಿತ್ತು. ಹೀಗಾಗಿ ಪೊಲೀಸರು, ಕಿಶನ್‌ ಮೇಲೆ ಕಣ್ಣಿಟ್ಟಿದ್ದರು. ಆತನ ಚಲನವಲನದ ಮೇಲೆ ನಿಗಾವಹಿಸಿದ್ದರು.

ಚಿನ್ನಾಭರಣ ಅಡವಿಟ್ಟು ಸಿಕ್ಕಿಬಿದ್ದ!: ಹಂತಕ ಯಶೋಧಮ್ಮನ ಹತ್ಯೆ ಮಾಡಿ ಮೈ ಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಹೀಗಾಗಿ ತನಿಖೆ ವೇಳೆ ಪೊಲೀಸರು ಚಿನ್ನಾಭರಣ ಅಂಗಡಿಗಳು, ಗಿರಿವಿ ಅಂಗಡಿಗಳಿಗೆ ಕಳವು ಮಾಲಿನ ಬಗ್ಗೆ ಮಾಹಿತಿ ನೀಡಿದ್ದರು. ಒಂದು ದಿನ ಕಿಶನ್‌ ಗಿರವಿ ಅಂಗಡಿಗೆ ತೆರಳಿ ಚಿನ್ನಾಭರಣ ಅಡವಿರಿಸಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ಗಿರವಿ ಅಂಗಡಿಗೆ ತೆರಳಿ ಚಿನ್ನಾಭರಣ ಪರಿಶೀಲಿಸಿದ್ದರು. ಯಶೋಧಮ್ಮನ ಮೈ ಮೇಲೆ ದೋಚಿದ್ದ ಚಿನ್ನಾಭರಣಕ್ಕೆ ಹೋಲಿಕೆಯಾದ ಹಿನ್ನೆಲೆಯಲ್ಲಿ ಕಿಶನ್‌ನನ್ನು ವಶಕ್ಕೆ ಪಡೆದು ಪೊಲೀಸ್‌ ಭಾಷೆಯಲ್ಲಿ ಕೇಳಿದಾಗ, ಯಶೋಧಮ್ಮನ ಹತ್ಯೆ ರಹಸ್ಯ ಬಯಲಾಗಿದೆ. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

click me!