ಮೋಸ ಮಾಡಿ ಮದುವೆ, ಗರ್ಭಪಾತ, ಕಿಡ್ನಾಪ್, ಹನಿಟ್ರ್ಯಾಪ್, ಮಾನಹಾನಿ ಆರೋಪ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಜು.24): ಚೆನ್ನಪಟ್ಟಣದ ಕಾಂಗ್ರೆಸ್ ಕಾರ್ಯಕರ್ತೆ ನವ್ಯಶ್ರೀ ಅಶ್ಲೀಲ ವಿಡಿಯೋ ವೈರಲ್ ಆದ ಬೆನ್ನಲ್ಲೇ ನವ್ಯಶ್ರೀ ವಿರುದ್ಧ ಬೆಳಗಾವಿಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ದೂರು ನೀಡಿದ್ರು. ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಸಿ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ನವ್ಯಶ್ರೀ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದಾದ ಬೆನ್ನಲ್ಲೇ ಬೆಳಗಾವಿಯಲ್ಲಿ ಪ್ರತ್ಯಕ್ಷ ಆಗಿದ್ದ ನವ್ಯಶ್ರೀ ರಾಜಕುಮಾರ ಟಾಕಳೆ ನನ್ನ ಗಂಡ, ಆತನೇ ವಿಡಿಯೋ ವೈರಲ್ ಮಾಡಿದ್ದಾನೆ ಎಂದಿದ್ದಳು. ಬಳಿಕ ಬೆಂಗಳೂರಿಗೆ ತೆರಳಿದ್ದ ನವ್ಯಶ್ರೀ ಮತ್ತೆ ಬೆಳಗಾವಿಗೆ ಆಗಮಿಸಿ ರಾಜಕುಮಾರ ಟಾಕಳೆ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಗೆ ಪ್ರತಿದೂರು ನೀಡಿದ್ದಾಳೆ.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ ಐಪಿಸಿ ಸೆಕ್ಷನ್ 1860 (U/s-342, 354, 366, 376(2)(n), 312, 201, 420, 504, 506, 509) ಐಟಿ ಆ್ಯಕ್ಟ್ 2000(U/s-66(E) 67, 67(ಎ) ರಡಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನನ್ನ ವಿರುದ್ಧದ ಷಡ್ಯಂತ್ರದ ಹಿಂದೆ ಚೆನ್ನಪಟ್ಟಣದ ಮಹಾನಾಯಕ ಇದ್ದಾನೆ: ನವ್ಯಶ್ರೀ ಬಾಂಬ್
ಅಷ್ಟಕ್ಕೂ ನವ್ಯಶ್ರೀ ನೀಡಿದ ದೂರಿನಲ್ಲಿ ಏನಿದೆ?
12 ಪುಟಗಳ ಸುದೀರ್ಘ ದೂರು ನೀಡಿರುವ ನವ್ಯಶ್ರೀ, 'ತನಗೆ ಮದುವೆಯಾಗಿದ್ದರೂ ಅದನ್ನು ಬಚ್ಚಿಟ್ಟು ಮೋಸ ಮಾಡಿ ಪುಸಲಾಯಿಸಿ ಮದುವೆಯಾಗಿದ್ದಾರೆ. ಬಲವಂತವಾಗಿ ಮೇಲಿಂದ ಮೇಲೆ ಲೈಂಗಿಕ ಕೃತ್ಯಕ್ಕೆ ಬಳಸಿಕೊಂಡು ಗರ್ಭಿಣಿ ಮಾಡಿ ಗರ್ಭಪಾತ ಮಾಡಿಸಿದ್ದಾರೆ.
ಮನೆಯಲ್ಲೇ ಕೂಡಿಹಾಕಿ ದೈಹಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಪಹರಣ ಮಾಡಿ ಚಾಕು ತೋರಿಸಿ ಹೆದರಿಸಿ ತಮಗೆ ಬೇಕಾದಂತೆ ವಿಡಿಯೋ ಹೇಳಿಕೆ ಮಾಡಿಸಿಕೊಂಡಿದ್ದಾರೆ.
ಖಾಲಿ ಪತ್ರಕ್ಕೆ ಸಹಿ ಹಾಗೂ ಬೆರಳಚ್ಚು ಪಡೆದಿದ್ದಾರೆ. ಆತನ ಜೊತೆ ಇರುವ ವಿಡಿಯೋ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮಾನ ಹಾನಿ ಮಾಡಿ ಅಪಮಾನ ಮಾಡಿದ್ದಲ್ಲದೇ ತನ್ನ ಮೊಬೈಲ್ ಕಸಿದುಕೊಂಡು ಮದುವೆ ಆಗಿದ್ದ ಫೋಟೋಗಳನ್ನು ನಾಶ ಪಡಿಸಿದ್ದಾರೆ' ಎಂದು ಆರೋಪಿಸಿದ್ದಾರೆ.