* ಉಡುಪಿಯಲ್ಲಿ ಕರ್ತವ್ಯನಿರತ ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ
* ಕರ್ತವ್ಯದಲ್ಲಿ ಇರುವಾಗಲೇ ರೈಫಲ್ ನಿಂದ ಗುಂಡಿಕ್ಕಿಕೊಂಡ ಕಾನ್ಸ್‌ಟೇಬಲ್
* SSLC ಉತ್ತರ ಪತ್ರಿಕೆ ಇಟ್ಟಿರುವ ಕೊಠಡಿ ಭದ್ರತೆಯಲ್ಲಿದ್ದ ವೇಳೆ ಘಟನೆ
ವರದಿ-ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಏ.29): ಹೆಡ್ ಕಾನ್ ಸ್ಟೇಬಲ್ ವೊಬ್ಬರು ಕರ್ತವ್ಯದಲ್ಲಿ ಇರುವಾಗಲೇ ರೈಫಲ್ ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಇವರ ಈ ತಕ್ಷಣದ ನಿರ್ಧಾರಕ್ಕೆ ಕಾರಣವೇನು ಅನ್ನೋದು ಇನ್ನೂ ಬಯಲಾಗಿಲ್ಲ. ಇಲಾಖೆಯ ಒತ್ತಡ ಹಾಗೂ ಮಾನಸಿಕ ಕಿರಿಕಿರಿಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಸಂಶಯ ದಟ್ಟವಾಗಿದೆ.
ಉಡುಪಿ (Udupi) ನಗರದ ಆದಿಉಡುಪಿ ಪ್ರೌಢಶಾಲೆಯಲ್ಲಿ ಪರೀಕ್ಷಾ ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರಾಜೇಶ್ ಕುಂದರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಎಸೆಸೆಲ್ಸಿ ಪರೀಕ್ಷೆ ಮೌಲ್ಯಮಾಪನ ಕೇಂದ್ರದ ಭದ್ರತೆಗೆ ಇವರನ್ನು ನಿಯೋಜಿಸಲಾಗಿತ್ತು. ರಾತ್ರಿಯಿಂದಲೇ ಕರ್ತವ್ಯನಿರತರಾಗಿದ್ದ ಇವರು ಬೆಳಗಿನಜಾವ ತನ್ನ ಕರ್ತವ್ಯ ಕ್ಜೆಂದು ನೀಡಿದ್ದ ರೈಫಲ್ನಿಂದ ಗುಂಡು ಹಾರಿಸಿಕೊಂಡು ಅಸುನೀಗಿದ್ದಾರೆ.
ತಿಂಗಳ ಹಿಂದೆ ಇವರು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಸಹೋದ್ಯೋಗಿಗಳೊಂದಿಗೆ ಜಗಳವಾಡಿದ್ದರು. ಮೂವರು ಪೊಲೀಸ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಇಲಾಖೆಯಲ್ಲಿನ ಡ್ಯೂಟಿ ಟೈಮ್ ಹಾಗೂ ಸೀನಿಯಾರಿಟಿ ಸಂಬಂಧ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಈ ಗಲಾಟೆಗೆ ಸಂಬಂಧಿಸಿದಂತೆ ರಾಜೇಶ್ ಸೇರಿದಂತೆ ಮೂವರನ್ನು ಅಮಾನತಿನಲ್ಲಿ ಇರಿಸಲಾಗಿತ್ತು.
ಜಮೀನು ಮಾರಿ ಸಾಲ ತೀರಿಸಿ ಎಂದು ಪಟ್ಟಿ ಮಾಡಿಟ್ಟು ಯುವಕ ಆತ್ಮಹತ್ಯೆ
ಅಮಾನತ್ತಿನ ಅವಧಿ ಪೂರೈಸಿಕೊಂಡು ಗುರುವಾರವಷ್ಟೇ ರಾಜೇಶ್ ಕುಂದರ್ ಕರ್ತವ್ಯಕ್ಕೆ ಹಾಜರಾಗಿದ್ದರು. ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಆಗಿರುವ ಇವರನ್ನು ಮಲ್ಪೆ ಠಾಣೆಯ ಮೂಲಕ ಆದಿಉಡುಪಿ ಶಾಲೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯದ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಉಡುಪಿ ಪೊಲೀಸ್ ಇಲಾಖೆಗೆ ದಿಗ್ಬ್ರಮೆಯಾಗಿದೆ.
ಸಹೋದ್ಯೋಗಿಗಳು ಹೇಳುವಂತೆ ಸೂಕ್ಷ್ಮ ಮನಸ್ಸಿನವರಾದ ರಾಜೇಶ್ ಕುಂದರ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ವೀಕ್ ಮೈಂಡೆಡ್ ಆಗಿರಲಿಲ್ಲ. ಇಷ್ಟಾಗಿಯೂ ತನ್ನದೇ ರೈಫಲ್ ನಲ್ಲಿ ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಇಲಾಖಾ ಸಿಬ್ಬಂದಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ರೈಫಲ್ ನ್ನು ತನ್ನ ಕುತ್ತಿಗೆಗೆ ಗುರಿಯಾಗಿರಿಸಿ, ಗುಂಡು ಹೊಡಿದುಕೊಂಡ ಕಾರಣ, ಮುಖ ಹಾಗೂ ತಲೆಯ ಒಂದು ಭಾಗ ಸಿಡಿದು ಗುಂಡು ಹೊರಬಂದಿದೆ. ತಲೆಯ ಭಾಗ ಛಿದ್ರವಾಗಿದ್ದು, ಮುಖದ ಗುರುತು ಪತ್ತೆಯಾಗದಷ್ಟು ಹಾನಿಯಾಗಿದೆ.
ಮೃತ ರಾಜೇಶ್ ಕುಂದರ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಿವಾಸಿಯಾಗಿದ್ದಾರೆ. ಇವರಿಗೆ ಒಂದು ಗಂಡು ಹಾಗೂ ಹೆಣ್ಣು ಜೋಡಿ ಮಕ್ಕಳಿದ್ದು, ಪತ್ನಿ ಹಾಗೂ ಕುಟುಂಬಿಕರನ್ನು ಅಗಲಿದ್ದಾರೆ.
ಪೊಲೀಸರ ಕಷ್ಟ ಕೇಳುವವರು ಯಾರು?
ಈ ಆಘಾತಕಾರಿ ಆತ್ಮಹತ್ಯೆಯನ್ನು ನಿವೃತ್ತ ಪೊಲೀಸ್ ಸಿಬ್ಬಂದಿಗಳು ಖಂಡಿಸಿದ್ದಾರೆ. ಇಲಾಖೆಯೊಳಗಿನ ಅವ್ಯವಸ್ಥೆಯಿಂದಲೇ ಈ ರೀತಿ ಆಗುತ್ತಿದೆ. ಮೇಲಧಿಕಾರಿಗಳಿಗೆ ತಮ್ಮ ಕೈಕೆಳಗೆ ಕೆಲಸ ಮಾಡುವ ಸಿಬ್ಬಂದಿಗಳ ಬಗ್ಗೆ ಸ್ವಲ್ಪವೂ ಕನಿಕರವಿಲ್ಲ. ಬ್ರಿಟಿಷರ ಕಾಲದ ಆರ್ಡರ್ಲಿ ಯಂತಹಾ ವ್ಯವಸ್ಥೆ ಇವತ್ತಿಗೂ ಜಾರಿಯಲ್ಲಿದೆ. ಕರ್ನಾಟಕದ ಪೊಲೀಸರು ಕನಿಷ್ಠ ಸಂಬಳಕ್ಕೆ ದುಡಿಯುತ್ತಿ ದ್ದಾರೆ. ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದೇ ಕಾರಣಕ್ಕೆ ಆತ್ಮಹತ್ಯೆಗಳು ಕೂಡ ಹೆಚ್ಚಿವೆ. ಇಲಾಖೆಯೊಳಗಿನ ಇಂತಹ ಸಮಸ್ಯೆಗಳಿಂದಲೇ ನೊಂದು ರಾಜೇಶ್ ಕುಂದರ್ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ನಿವೃತ್ತ ಪೊಲೀಸ್ ಸಿಬ್ಬಂದಿ ಸಂದೀಪ್ ಅಭಿಪ್ರಾಯಪಟ್ಟಿದ್ದಾರೆ.
ಕರ್ತವ್ಯನಿರತ ಪೊಲೀಸ್ ಆತ್ಮಹತ್ಯೆ ಮಾಡಿಕೊಂಡ ಕಾರಣ, ಕುಟುಂಬದವರು ಸ್ಥಳಕ್ಕೆ ಬಂದ ನಂತರವೇ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ, ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಮಣಿಪಾಲ ಹಾಗೂ ಮಂಗಳೂರಿನ FSL ತಂಡ ಬಂದು ಶವದ ಮಹಜರು ನಡೆಸಿದೆ.