ವಿವಾಹ ವಿಚ್ಛೇದನ ಕೇಸ್: ಕೋರ್ಟ್‌ ಆವರಣದಲ್ಲೇ ಪತ್ನಿ ಕತ್ತು ಕೊಯ್ದು ಹತ್ಯೆಗೈದ ಪತಿ

By Suvarna News  |  First Published Aug 13, 2022, 9:03 PM IST

ಹಾಸನ ಜಿಲ್ಲೆಯ ಹೊಳೆನರಸೀಪುರ ದಲ್ಲಿ ಪಾಪಿ ಪತಿಯೊಬ್ಬ  ಕತ್ತು ಕೊಯ್ದು ಪತ್ನಿಯನ್ನು ಬರ್ಬರವಾಗಿ ಕೊಂದಿದ್ದಾನೆ. ಜೆಎಂಎಫ್ ಸಿ ಕೋರ್ಟ್ ಆವರಣದಲ್ಲಿಯೇ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಕೊಲೆಗೈದಿದ್ದಾನೆ.


ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ

ಹಾಸನ, (ಆಗಸ್ಟ್.13):
ವಿವಾಹ ವಿಚ್ಛೇದನ ಪ್ರಕರಣದ ಹಿನ್ನಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿಯೇ ಪತಿ ತನ್ನ ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ.

ಹೊಳೆನರಸೀಪುರ ಸಮೀಪದ ತಟ್ಟೆಕೆರೆ ಗ್ರಾಮದ ಶಿವಕುಮಾರ್ ಮತ್ತು ಚೈತ್ರಾ (33) ದಂಪತಿಯ ವಿಚ್ಛೇದನದ ಪ್ರಕರಣ ಹೊಳೆನರಸೀಪುರದ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಇಂದು (ಶನಿವಾರ) ವಿಚಾರಣೆ ಇದ್ದುದರಿಂದ ಚೈತ್ರಾ ತನ್ನ ಎರಡು ಹೆಣ್ಣು ಮಕ್ಕಳೊಂದಿಗೆ ನ್ಯಾಯಾಲಯಕ್ಕೆ ಬಂದಿದ್ದರು. ಶಿವಕುಮಾರನೂ ಬಂದಿದ್ದ.

Tap to resize

Latest Videos

ಆದ್ರೆ, ನ್ಯಾಯಾಲಯದ ವಿಚಾರಣೆ ಆರಂಭಕ್ಕೆ ಮುನ್ನವೇ ಚೈತ್ರಾ ಬಳಿ ಹೋದ ಶಿವಕುಮಾರ ಆಕೆಯನ್ನು ಎಳೆದುಕೊಂಡು ಚಾಕುವಿನಿಂದ ಕತ್ತು ಕೊಯ್ದಿದ್ದಾನೆ. ತಾಯಿಯ ಬಳಿ ಇದ್ದ ಮಕ್ಕಳು ಚೀರಾಡಿದಾಗ ಸಾರ್ವಜನಿಕರು ರಕ್ಷಣೆಗೆ ಬಂದಾಗ ಸಾರ್ವಜನಿಕರಿಗೂ ಚಾಕು ತೋರಿಸಿ ತಪ್ಪಿಸಿಕೊಳ್ಳಲು ಶಿವಕುಮಾರ ಯತ್ನಿಸಿದ್ದಾನೆ. ಆದರೂ ಜನರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಯ್‌ಫ್ರೆಂಡ್‌ಗಾಗಿ ಗಂಡನನ್ನೇ ಮುಗಿಸಿದ ಪಾಪಿ ಪತ್ನಿ! ಮಕ್ಕಳನ್ನು ಕೂಡಿ ಹಾಕಿ ಅಪ್ಪನ ಭೀಕರ ಹತ್ಯೆ!

ತೀವ್ರವಾಗಿ ಗಾಯಗೊಂಡಿದ್ದ ಚೈತ್ರಾಗೆ ಹೊಳೆನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದರು  ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ.

ಘಟನೆ ಹಿನ್ನೆಲೆ
ಕಳೆದ ಒಂಬತ್ತು ವರ್ಷಗಳ ಹಿಂದೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ ಮೂಲದ ಚೈತ್ರಳನ್ನು  ಹೊಳೆನರಸೀಪುರ ತಾಲ್ಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್  ಮದುವೆಯಾಗಿದ್ದ. ಚೈತ್ರಾಳಿಗೆ ಮದುವೆ ಇಷ್ಟ ಇಲ್ಲ ಎಂದರೂ ಮದುವೆ ನಂತರವೂ ನಾನೇ ವಿದ್ಯಾಭ್ಯಾಸ ಮಾಡಿಸುತ್ತೇನೆ ಎಂದು ಚೈತ್ರ ಕುಟುಂಬಸ್ಥರ ಮನವೊಲಿಸಿ ಪುಸಲಾಯಿಸಿ ಮದುವೆಯಾಗಿದ್ದನು, ಎರಡು ಹೆಣ್ಣು ಮಕ್ಕಳಾದ ನಂತರ ಪತಿ ಶಿವಕುಮಾರ್ ತನ್ನ ವರಸೆ ಬದಲಿಸಿದ್ದನು. ನನಗೆ ಗಂಡು ಮಕ್ಕಳು ಬೇಕಿತ್ತು ಎಂದು ತಗಾದೆ ತೆಗಿದಿದ್ದ ಆತ ಪ್ರತಿನಿತ್ಯ ಹಿಂಸೆ ಕೊಡುತ್ತಿದ್ದನಂತೆ. 

ಈ ಹಿಂದೆ ಈ ಸಂಬಂಧ ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿಗಳು ನಡೆದರೂ‌ ಸಂಸಾರ ಸರಿಯಾಗದಿದ್ದಾಗ ಚೈತ್ರ ಹಾಸನದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ವಿಚಾರಣೆ ನಡೆದು ಪೊಲೀಸರು ಶಿವಕುಮಾರ್‌ನನ್ನು ಕರೆಸಿ ಬುದ್ದಿ ಹೇಳಿ ಕಳಿಸಿದ್ದರು. ಇಷ್ಟೆಲ್ಲಾ ಆದ್ರೂ ಶಿವಕುಮಾರ್ ತನ್ನ ವರಸೆ ಬದಲಾಯಿಸಿರಲಿಲ್ಲ.  ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದಳಲ್ಲಾ ಎಂದು ದ್ವೇಷದಿಂದ ವಿಚ್ಛೇದನಕ್ಕೆ ತಾನೇ ಅರ್ಜಿ ಸಲ್ಲಿಸಿದ್ದನು. 

ಇಷ್ಟೆಲ್ಲಾ ಆದ ಮೇಲೆ ಆತನ ಜೊತೆ ಬಾಳಲು ಸಾಧ್ಯವಿಲ್ಲ ಎಂದು ಅರಿತ ಚೈತ್ರಾ ತನ್ನೆರಡು ಮಕ್ಕಳನ್ನ ಕರೆದುಕೊಂಡು ಬೆಂಗಳೂರಿಗೆ ಹೋಗಿ ಅಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡಿಕೊಂಡು ತನ್ನ ಹಿರಿಯ ಮಗಳನ್ನ ಶಾಲೆಗೆ ಸೇರಿಸಿ ಜೀವನ ಮಾಡುತ್ತಿದ್ದಳು. ಇದೀಗ ವಿಚ್ಚೇದನ ಪ್ರಕರಣ ಅಂತ್ಯ ಕಾಣುವ ಹಂತ ತಲುಪಿತ್ತು.  ಕೋರ್ಟ್‌ ನ ಕಳೆದ ವಿಚಾರಣೆಯಲ್ಲಿ ನ್ಯಾಯಾಧೀಶರ ಬಳಿ ನನಗೆ ನನ್ನ ಗಂಡನಿಂದ ವಿಚ್ಛೇದನ ಬೇಡ ಎಂದು ಚೈತ್ರ ಮನವಿ ಮಾಡಿದ್ದಳಂತೆ. ಇದಕ್ಕೆ ಒಪ್ಪದ ಶಿವಕುಮಾರ್ ನನಗೆ ವಿಚ್ಛೇದನ ಬೇಕು ಎಂದು ಪಟ್ಟು ಹಿಡಿದಿದ್ದನಂತೆ. ಇನ್ನೇನು ಮಾಡಲು ಸಾಧ್ಯವಿಲ್ಲ ಎಂದಾಗ ಚೈತ್ರಾ ತನ್ನ ವಕೀಲರ ಮೂಲಕ ಜೀವನಾಂಶಕ್ಕೆ ಮನವಿ ಸಲ್ಲಿಸಿದ್ದಾಳೆ. ಇದರಿಂದ ಶಿವಕುಮಾರ್ ಕೋಪಗೊಂಡಿದ್ದನು. 

ಶನಿವಾರ ವಿಚಾರಣೆಗೆ ದಂಪತಿಯನ್ನು ಕರೆಸಿದ್ದರು. ಆಕೆ ಕೋರ್ಟ್‌ಗೆ ಬಂದ ವೇಳೆ ಕೊಲೆ ಮಾಡುವ ಉದ್ದೇಶದಿಂದಲೇ ತಯಾರಾಗಿ ಬಂದಿದ್ದಾನೆ. ವಿಚಾರಣೆ ವೇಳೆ ಅಮಾಯಕನಂತೆ ಕುಳಿತಿದ್ದ ಶಿವಕುಮಾರ್, ನ್ಯಾಯಾಧೀಶರು ವಿಚಾರಣೆ ನಡೆಸಿದ ನಂತರ ಕೋರ್ಟ್ ಹಾಲ್ ನಿಂದ  ಎಲ್ಲರೂ ಹೊರಬಂದಿದ್ದಾರೆ. ಈ ವೇಳೆ ಪತ್ನಿ ಚೈತ್ರಾ ಶೌಚಾಲಯಕ್ಕೆ ಹೋಗುವದನ್ನ ಗಮನಿಸಿ ಹಿಂಬಾಲಿಸಿ ಹೋಗಿ ಶೌಚಾಲಯದಲ್ಲೇ ಚಾಕುವಿನಿಂದ ಭೀಕರವಾಗಿ ಕುತ್ತಿಗೆ ಕೊಯ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮತ್ತು ಕುತ್ತಿಗೆಗೆ ಆದ ಗಂಭೀರ ಗಾಯದಿಂದ ಚೈತ್ರ ಸ್ಥಳದಲ್ಲೇ  ಕುಸಿದು ಬಿದ್ದಿದ್ದಾಳೆ. 

 ಕಿರುಚಾಡಿದ್ದನ್ನ ಗಮನಿಸಿದ ಸ್ಥಳೀಯರು ಶಿವಕುಮಾರ್ ನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ರಕ್ತದ ಮಡುವಿನಲ್ಲಿದ್ದ ಚೈತ್ರಳನ್ನ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಕರಣ ಗಂಭೀರವಾದ್ದರಿಂದ ಪ್ರಥಮ ಚಿಕಿತ್ಸೆ ಮಾಡಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಆಕೆಯನ್ನ ಹಾಸನದ ಹಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಆದ್ರೆ ಬದುಕುಳಿಯುವ ಸ್ಥಿತಿಯಲ್ಲಿರದ ಚೈತ್ರ ಚಿಕಿತ್ಸೆ ಫಲಕಾರಿಯಾಗದೆ ಹಾಸದ ಹಿಮ್ಸ್‌ನಲ್ಲಿ ಸಾವನ್ನಪಿದ್ದಾಳೆ‌. ಹಾಸನ ಎಸ್ಪಿ ಹರಿರಾಂ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ,ಚೈತ್ರಾ ಸಂಬಂಧಿಕರಿಂದ ಚೈತ್ರಾ ಶಿವಕುಮಾರ್ ದಂಪತಿಯ  ಕೌಟುಂಬಿಕ ಕಲಹದ ಬಗ್ಗೆ ಮಾಹಿತಿ ಪಡೆದರು. ಕೋರ್ಟ್ ಆವರಣದಲ್ಲಿಯೇ ಪತ್ನಿ ಕೊಂದ ಪಾಪಿ ಶಿವಕುಮಾರ್ ಗೆ ಕಠಿಣ ಶಿಕ್ಷೆ ಕೊಡಿಸಿ ಎಂದು ಚೈತ್ರಾ ಸಂಬಂಧಿಕರು ಎಸ್ಪಿಯವರಿಗೆ ಮನವಿ ಮಾಡಿಕೊಂಡರು.

click me!