ಪಿಜಿ ಬಗ್ಗೆ ಕೆಟ್ಟ ವಿಮರ್ಶೆ ಮಾಡಿದ್ದ ಯುವತಿಗೆ ಕಿರುಕುಳ: ಮಾಲೀಕನ ಬಂಧನ

By Kannadaprabha News  |  First Published Jul 8, 2024, 11:04 AM IST

ಪೇಯಿಂಗ್ ಗೆಸ್ಟ್‌(ಪಿ.ಜಿ) ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ವಿಮರ್ಶೆ ಮಾಡಿದ ಯುವತಿಯ ವೈಯಕ್ತಿಕ ಮಾಹಿತಿಯನ್ನು ಡೇಟಿಂಗ್ ಆ್ಯಪ್‌ನಲ್ಲಿ ಹಾಕಿ ಕಿರುಕುಳ ನೀಡಿದ ಆರೋಪದಡಿ ಪಿಜಿ ಮಾಲೀಕನನ್ನು ಪೂರ್ವ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಜು.08): ಪೇಯಿಂಗ್ ಗೆಸ್ಟ್‌(ಪಿ.ಜಿ) ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ವಿಮರ್ಶೆ ಮಾಡಿದ ಯುವತಿಯ ವೈಯಕ್ತಿಕ ಮಾಹಿತಿಯನ್ನು ಡೇಟಿಂಗ್ ಆ್ಯಪ್‌ನಲ್ಲಿ ಹಾಕಿ ಕಿರುಕುಳ ನೀಡಿದ ಆರೋಪದಡಿ ಪಿಜಿ ಮಾಲೀಕನನ್ನು ಪೂರ್ವ ವಿಭಾಗದ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ 24 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಶೇಷಾದ್ರಿಪುರದ ವಿ.ಸ್ಟೇಜ್‌ ಪಿ.ಜಿ. ಮಾಲೀಕ ಆನಂದ್ ಶರ್ಮಾ(32) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ ಮೊಬೈಲ್ ಹಾಗೂ ಇತರೆ ವಸ್ತುಗಳನನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?: ರಾಜಸ್ಥಾನ ಮೂಲದ ಸಂತ್ರಸ್ತೆಯು ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾರೆ. ಕೆಲ ತಿಂಗಳ ಹಿಂದೆ ಶೇಷಾದ್ರಿಪುರದ ವಿ-ಸ್ಟೇಜ್‌ ಎಂಬ ಪಿ.ಜಿ.ಯಲ್ಲಿ ಉಳಿದುಕೊಂಡಿದ್ದರು. ಆದರೆ, ಪಿ.ಜಿ.ಯಲ್ಲಿ ಸರಿಯಾದ ಸೌಲಭ್ಯಗಳು ಇಲ್ಲದಿದ್ದರಿಂದ ಸಂತ್ರಸ್ತೆ ಪಿ.ಜಿ.ತೊರೆದು ನಗರದ ಬೇರೆಡೆ ನೆಲೆಸಿದ್ದರು. ಅಂತೆಯೆ ಸಾಮಾಜಿಕ ಜಾಲತಾಣದಲ್ಲಿ ಹಳೇ ಪಿ.ಜಿ. ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡಿದ್ದರು. ಇದರಿಂದ ಪಿ.ಜಿ.ಬರುವ ಗ್ರಾಹಕರ ಸಂಖ್ಯೆ ಇಳಿಮುಖವಾಗಿತ್ತು. ಪಿ.ಜಿ.ಯಲ್ಲಿ ನೆಲೆಸಿದ್ದ ಹಲವರು ಪಿ.ಜಿ.ತೊರೆಯಲು ಮುಂದಾಗಿದ್ದರು.

Tap to resize

Latest Videos

ಡೇಟಿಂಗ್‌ ಆ್ಯಪ್‌ಗೆ ಸಂತ್ರಸ್ತೆಯ ಮಾಹಿತಿ ಹಾಕಿದ: ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆಯ ವಿಮರ್ಶೆ ಗಮನಿಸಿದ್ದ ಪಿ.ಜಿ.ಮಾಲೀಕ ಆನಂದ್‌ ಶರ್ಮಾ, ಆಕೆಗೆ ಪಾಠ ಕಲಿಸಲು ನಿರ್ಧರಿಸಿದ್ದ. ಅದರಂತೆ ಸಂತ್ರಸ್ತೆ ಪಿ.ಜಿ.ಸೇರುವಾಗ ನೀಡಿದ್ದ ವೈಯಕ್ತಿಕ ಮಾಹಿತಿಯನ್ನು ಲೊಕ್ಯಾಂಟೋ ಎಂಬ ಡೇಟಿಂಗ್‌ ಆ್ಯಪ್‌ಗೆ ಹಾಕಿದ್ದ.

ನಿಷೇಧವಿದ್ದರೂ ಫಾಲ್ಸ್‌ಗಳಲ್ಲಿ ಮೋಜು, ಮಸ್ತಿ: ಗೋಕಾಕ ಜಲಪಾತದಲ್ಲಿ ಪ್ರವಾಸಿಗರ ಹುಚ್ಚಾಟ

ಸಂತ್ರಸ್ತೆಯ ಫೋಟೋ ಹಾಗೂ ಮೊಬೈಲ್‌ ಸಂಖ್ಯೆಯನ್ನೂ ಹಾಕಿದ್ದ. ಈ ಆ್ಯಪ್‌ ಬಳಸುವ ಯುವಕರು ಸಂತ್ರಸ್ತೆ ಕಾಲ್‌ಗರ್ಲ್‌ ಎಂದು ಭಾವಿಸಿ ಹಲವು ಬಾರಿ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಸತತ ಕರೆಗಳಿಂದ ಆತಕಂಗೊಂಡ ಸಂತ್ರಸ್ತೆಯು ಪೂರ್ವ ವಿಭಾಗದ ಸೈಬರ್‌ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಡೇಟಿಂಗ್‌ ಅ್ಯಪ್‌ನಲ್ಲಿ ಸಂತ್ರಸ್ತೆಯ ಮಾಹಿತಿ ಹಾಕಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!